ಯುವ ಜನತೆ ರೇಷ್ಮೆ ಕೃಷಿಯಲ್ಲಿ ತೊಡಗಿಕೊಳ್ಳಿ: ಸಿಎಂ

KannadaprabhaNewsNetwork |  
Published : May 03, 2026, 01:45 AM IST
CM 2 | Kannada Prabha

ಸಾರಾಂಶ

ಇದೀಗ ರೇಷ್ಮೆಗೆ ಒಳ್ಳೆಯ ಬೇಡಿಕೆ ಇದ್ದು ಯುವಜನರು ಈ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇದೀಗ ರೇಷ್ಮೆಗೆ ಒಳ್ಳೆಯ ಬೇಡಿಕೆ ಇದ್ದು ಯುವಜನರು ಈ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಬೆಂಗಳೂರಿನ ಒಕಳಿಪುರಂನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರೇಷ್ಮೆ ಮತ್ತು ಖನಿಜ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಇ-ರೇಷ್ಮೆ ಪೋರ್ಟಲ್‌ ಬಿಡುಗಡೆ ಮಾಡಿ ಮಾತನಾಡಿದರು.

ಕರ್ನಾಟಕವು ಕಚ್ಚಾ ರೇಷ್ಮೆ ಉತ್ಪಾದನೆ, ಕಾಫಿ ಬೆಳೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ರಾಜ್ಯದ 1.22 ಲಕ್ಷ ಹೆಕ್ಟೇರ್‌ನಲ್ಲಿ ರೇಷ್ಮೆ ಉತ್ಪಾದಿಸುತ್ತಿದ್ದು 1.51 ಲಕ್ಷ ಕುಟುಂಬಗಳು ಜೀವನಕ್ಕೆ ರೇಷ್ಮೆಯನ್ನು ಅವಲಂಬಿಸಿವೆ. ಇದು ಲಾಭದಾಯಕ ಕಸುಬಾಗಿದ್ದು ವ್ಯವಸಾಯದ ಜೊತೆಗೆ ರೇಷ್ಮೆ ಕೃಷಿಯನ್ನೂ ಕೈಗೊಳ್ಳಿ. ರೇಷ್ಮೆ ಕೃಷಿ ಜೊತೆಗೆ ತೋಟಗಾರಿಕೆ, ಪಶುಸಂಗೋಪನೆಯಲ್ಲೂ ತೊಡಗಿದರೆ ಹೆಚ್ಚು ಆದಾಯ ಗಳಿಸಬಹುದು ಎಂದರು.

ಅನುಪಯುಕ್ತ ಜಾಗ ಬಳಸಿಕೊಳ್ಳಿ:

ರೇಷ್ಮೆ ಇಲಾಖೆಗೆ ಸೇರಿದ ಬಹಳಷ್ಟು ಅನುಪಯುಕ್ತ ಜಾಗಗಳಿದ್ದು ಅವುಗಳನ್ನು ಆದಾಯದ ಮೂಲವಾಗಿ ಬಳಸಿಕೊಳ್ಳಬೇಕು. ಇಲ್ಲಿನ ರೇಷ್ಮೆ ಇಲಾಖೆಯ 4.25 ಎಕರೆ ಜಮೀನಿನಲ್ಲಿ ₹665 ಕೋಟಿ ವೆಚ್ಚದಲ್ಲಿ 17 ಮಹಡಿಯ ಸುಸಜ್ಜಿತ ಕಟ್ಟಡ ಮೂರು ವರ್ಷದಲ್ಲಿ ನಿರ್ಮಾಣವಾಗಲಿದೆ. ಖನಿಜ ನಿಗಮ ಹಣಕಾಸು ಒದಗಿಸಲಿದ್ದು, 40 ಸಾವಿರ ಚದರ ಅಡಿ ಕಟ್ಟಡವನ್ನು ಜಿಬಿಎಗೆ, 16,505 ಚದರ ಅಡಿಯನ್ನು ಕೇಂದ್ರ ರೇಷ್ಮೆ ಮಂಡಳಿಗೆ ನೀಡಲಿದ್ದು ಉಳಿದಿದ್ದನ್ನು 50:50 ಅನುಪಾತದಲ್ಲಿ ರೇಷ್ಮೆ ಇಲಾಖೆ ಮತ್ತು ಖನಿಜ ನಿಗಮ ಇಟ್ಟುಕೊಳ್ಳಲಿವೆ ಎಂದು ವಿವರಿಸಿದರು.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಖನಿಜ ನಿಗಮದ ಉಪಾಧ್ಯಕ್ಷ ಎಚ್‌.ಲಕ್ಷ್ಮಣ, ವಾಣಿಜ್ಯ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಉಪಸ್ಥಿತರಿದ್ದರು.ಸಿಬ್ಬಂದಿ ನೇಮಕಕ್ಕೆ ಮನವಿ:

ರೇಷ್ಮೆ ಇಲಾಖೆ ಹಾಗೂ ಖನಿಜ ನಿಗಮದಲ್ಲಿ ಸಿಬ್ಬಂದಿ ಕೊರತೆ ಇದ್ದು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೇಷ್ಮೆ ಸಚಿವ ಕೆ.ವೆಂಕಟೇಶ್‌ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಇಲಾಖೆಯಲ್ಲಿ ನೌಕರರು ಇಲ್ಲದಂತಾಗಿದೆ. 56 ಸಾವಿರ ಹುದ್ದೆ ನೇಮಕಾತಿ ಸಂದರ್ಭದಲ್ಲಿ ರೇಷ್ಮೆ ಇಲಾಖೆಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಖನಿಜ ನಿಗಮದ ಅಧ್ಯಕ್ಷ ಜಿ.ಎಸ್‌.ಪಾಟೀಲ್‌ ಮಾತನಾಡಿ, ನಿಗಮದಲ್ಲಿ 1800 ಸಿಬ್ಬಂದಿ ಇದ್ದರು. ಈಗ 350 ಸಿಬ್ಬಂದಿ ಮಾತ್ರ ಇದ್ದಾರೆ. ಸಿಬ್ಬಂದಿ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.ರಾಜಕೀಯ ಮಾತಾಡಲು ವೇದಿಕೆ ತಯಾರಿಸಿ:

ಈ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡುವುದು ಬೇಡ ಎಂದುಕೊಂಡಿದ್ದೇನೆ. ರಾಜಕೀಯ ಮಾತನಾಡಲು ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ವೇದಿಕೆ ತಯಾರು ಮಾಡಲು ಹೇಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಮಿಕವಾಗಿ ನುಡಿದರು.

ಇಲ್ಲಿ ರಾಜಕೀಯ ಮಾತನಾಡುವುದು ಬೇಡ. ದಿನೇಶ್‌ ಗುಂಡೂರಾವ್‌ ವೇದಿಕೆ ತಯಾರು ಮಾಡಲಿ. ಅಲ್ಲಿ ರಾಜಕೀಯದ ಬಗ್ಗೆ ಮಾತನಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದು ವಿಶೇಷವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

...ಚೇಳೂರಿಗೆ ಡಿಸಿ ದಿಢೀರ್‌ ಭೇಟಿ: ಅಧಿಕಾರಿಗಳಿಗೆ ತರಾಟೆ
ರಾಗಿ ಖರೀದಿ: ಮೇ 5 ರವರೆಗೆ ಮಾರಾಟಕ್ಕೆ ಅಂತಿಮ ಅವಕಾಶ