ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಯುವ ಶಿಕ್ಷಕರು ಕೈಜೋಡಿಸಿ: ಕುಲಪತಿ ಪ್ರೊ.ಬಿ.ಡಿ.ಕುಂಬಾರ

KannadaprabhaNewsNetwork | Published : Mar 1, 2024 2:23 AM

ಸಾರಾಂಶ

ತಂಬಾಕು ಉತ್ಪನ್ನ ತಯಾರಿಸುವ ಕಂಪನಿಯ ಮಾಲೀಕರು ಆಕಾಶದಲ್ಲಿ ಹಾರಾಡುತ್ತಿದ್ದು, ತಂಬಾಕು ಉತ್ಪನ್ನಗಳ ಬಳಸುತ್ತಿರುವವರು ರೋಗ-ರುಜಿನೆಗಳಿಂದ ಬಳಲಿ ಆರ್ಥಿಕ ತೊಂದರೆಗಳಿಂದ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಆದ್ದರಿಂದ ಪ್ರತಿ ಒಬ್ಬ ನಾಗರಿಕರು ಇಂತಹ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯುವಶಿಕ್ಷಕರ ಜವಾಬ್ದಾರಿ ಹೆಚ್ಚಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಂದಿನ ದಿನಗಳಲ್ಲಿ ಶಿಕ್ಷಕ ವೃತ್ತಿ ಆರಂಭಿಸುವ ನೀವು ತಂಬಾಕಿನ ದುಷ್ಪರಿಣಾಗಳ ಬಗ್ಗೆ ಅರಿತು ಈ ಬಗ್ಗೆ ಸಮುದಾಯಕ್ಕೆ ತಲುಪಿಸುವ ಜವಾಬ್ದಾರಿ ನಿಮ್ಮದು. ನಿಮ್ಮಿಂದ ಜನರಲ್ಲಿ ಪ್ರಜ್ಞೆ ಉಂಟಾಗಿ ಸ್ವಾಸ್ಥ್ಯ ಸಮಾಜ ನಿರ್ಮಿಸಬಹುದು ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಹೇಳಿದರು.

ನಗರದ ಎಂ.ಬಿ.ಎ. ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ದಾವಣಗೆರೆ ವಿಶ್ವವಿದ್ಯಾನಿಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರ ಸಹಯೋಗದೊಂದಿಗೆ ಎಂ.ಪಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ತಂಬಾಕಿನಿಂದ ಆಗುವ ದುಷ್ಪರಿಣಾಮಗಳು ಹಾಗೂ ಕೋಟ್ಪಾ-2003 ರ ಕಾಯ್ದೆಯ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ತಂಬಾಕು ಉತ್ಪನ್ನ ತಯಾರಿಸುವ ಕಂಪನಿಯ ಮಾಲೀಕರು ಆಕಾಶದಲ್ಲಿ ಹಾರಾಡುತ್ತಿದ್ದು, ತಂಬಾಕು ಉತ್ಪನ್ನಗಳ ಬಳಸುತ್ತಿರುವವರು ರೋಗ-ರುಜಿನೆಗಳಿಂದ ಬಳಲಿ ಆರ್ಥಿಕ ತೊಂದರೆಗಳಿಂದ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಆದ್ದರಿಂದ ಪ್ರತಿ ಒಬ್ಬ ನಾಗರಿಕರು ಇಂತಹ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯುವಶಿಕ್ಷಕರ ಜವಾಬ್ದಾರಿ ಹೆಚ್ಚಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಷಣ್ಮುಖಪ್ಪ ಮಾತನಾಡಿ, ಯುವಕರು ಕುತೂಹಲದಿಂದ ದುಶ್ಚಟಗಳಿಗೆ ಬಲಿಯಾಗಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವವರನ್ನು ರಸ್ತೆ ಬದಿಯಲ್ಲಿ ಅಂಟಿಸುವ ಪೋಸ್ಟರ್‌ಗಳಲ್ಲಿ ನೋಡುತ್ತಿದ್ದೇವೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ದುಶ್ಚಟಗಳಿಂದ ದೂರವಿರಿ. ತಂಬಾಕು ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗೆ ಸಿಮೀತವಾಗದೆ, ದೇಹದ ಪ್ರತಿ ಒಂದು ಅಂಗಾಂಗಕ್ಕೂ ಕ್ಯಾನ್ಸರ್‌ನ್ನು ತರಿಸುತ್ತದೆ. ಆದ್ದರಿಂದ ಪ್ರಾರಂಭಿಕ ಹಂತದಿಂದಲೇ ದುಶ್ಚಟಗಳಿಂದ ದೂರವಿರಬೇಕೆಂದು ತಿಳಿಸಿದರು.

ಈ ಕಾರ್ಯಾಗಾರದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಜಿ.ಡಿ.ರಾಘವನ್, ಆರ್ಥಿಕಾಧಿಕಾರಿ ದ್ಯಾಮನಗೌಡ ಮುದ್ದನಗೌಡ್ರು, ದಾವಿವಿ ಸಿಂಡಿಕೇಟ್ ಸದಸ್ಯ ಡಾ.ದಿವಾಕರ್ ನಾಯ್ಕ, ಕ್ರೀಡಾ ವಿಭಾಗದ ದೈಹಿಕ ಶಿಕ್ಷಣದ ಮುಖ್ಯಸ್ಥ ಡಾ.ಕೆ.ವೆಂಕಟೇಶ, ಸಮಾಜಕಾರ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಎಸ್. ಪ್ರದೀಪ್, ಕ್ರೀಡಾಧಿಕಾರಿಗಳಾದ ಡಾ.ಬಿ.ಎಚ್.ವೀರಪ್ಪ, ಸಂಪನ್ಮೂಲ ವ್ಯಕ್ತ ಡಾ.ಪಿ.ಎಂ.ತಿಪ್ಪೇಸ್ವಾಮಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತ ಕೆ.ಪಿ.ದೇವರಾಜ್ ಹಾಜರಿದ್ದರು.

Share this article