ಶಿರಸಿ: ಸಾಹಿತ್ಯ ಕ್ಷೇತ್ರವನ್ನು ಬೆಳೆಸುವ ಜವಾಬ್ದಾರಿ ಯುವ ಬರಹಗಾರರ ಮೇಲಿದೆ ಎಂದು ಹೆಸರಾಂತ ಕವಿ ಭಾಗೀರಥಿ ಹೆಗಡೆ ತಿಳಿಸಿದರು.
ಸಾಹಿತ್ಯ ಕ್ಷೇತ್ರಕ್ಕೆ ಅಂಬೆಗಾಲು ಇಡುತ್ತಿರುವವರನ್ನು ಪ್ರೋತ್ಸಾಹಿಸುತ್ತಿರುವ ಸಾಹಿತ್ಯ ಸಿಂಚನ ಬಳಗದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಸಾಹಿತ್ಯ ಸಿಂಚನ ಬಳಗ ಕೊಡಮಾಡುವ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿಯನ್ನು ಸಾಹಿತಿ ಹಾಗೂ ಪ್ರಗತಿಪರ ಕೃಷಿಕ ದತ್ತಗುರು ಕಂಠಿ ಪ್ರಶಸ್ತಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಸಾಹಿತ್ಯ ಸಿಂಚನ ಪ್ರಶಸ್ತಿಯನ್ನು ಸಾಹಿತ್ಯ ಸಿಂಚನ ವೇದಿಕೆ ನನಗೆ ನೀಡಿರುವು ಸಂತಸ ತಂದಿದೆ. ಇವೆಲ್ಲವೂ ನನ್ನ ಜತೆ ಇರುವ ಸಾಹಿತ್ಯಾಸಕ್ತರಿಂದ ಕಾರಣವಾಗಿದೆ. ಅವರೇ ನನ್ನನ್ನು ಬೆಳೆಸಿ ಇಲ್ಲಿಯವರೆಗೆ ತಂದು ನಿಲ್ಲಿಸಿದ್ದಾರೆ. ಕೃಷಿ ಹೈನುಗಾರಿಕೆ ನನ್ನ ಮೂಲ ಉದ್ಯೋಗ. ಅದರ ಜತೆ ಸಾಹಿತ್ಯ ವನ್ನು ಮುಂದುವರಿಸಿಕೊಂಡು ಬಂದಿದ್ದೇನೆ ಎಂದರು.ನಗರ ಠಾಣೆ ಪಿಎಸ್ಐ ನಾಗಪ್ಪ ಬಿ. ಮಾತನಾಡಿ, ಸಾಹಿತ್ಯ ಮಜಲುಗಳಲ್ಲಿ ಬದಲಾವಣೆಯಾಗಿ ಹೆಮ್ಮೆರವಾಗಿ ನಿಂತಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಲೇಖಕರ ಕೊಡುಗೆ ಅಪಾರವಾಗಿದೆ. ಕನ್ನಡದಲ್ಲಿ ಸೃಷ್ಟಿಯಾದಷ್ಟು ಕೃತಿಗಳು ಬೆರೆ ಯಾವ ಭಾಷೆಯಲ್ಲೂ ಇಲ್ಲ. ಇಂದು ಸಾಹಿತ್ಯ ಕ್ಷೇತ್ರ ಸೋರಗುತ್ತಿದೆ ಎಂಬ ಕೊರಗು ನಮ್ಮಲ್ಲಿದೆ. ನಮ್ಮ ಸಮಾಜ ಮತ್ತು ನಮ್ಮ ಬದುಕನ್ನು ಸಾಹಿತ್ಯ ಕಟ್ಟಿಕೊಡುತ್ತಿದೆ. ಯುವ ಸಮಾಜ ಸಾಹಿತ್ಯ ಕ್ಷೇತ್ರದತ್ತ ಮುಖ ಮಾಡಬೇಕು ಎಂದ ಅವರು, ದತ್ತಗುರು ಕಂಠಿಯವರಂಥ ಶ್ರೇಷ್ಠ ಸಹೃದಯಿಗಳಿಗೆ ಪ್ರಶಸ್ತಿ ಲಭಿಸಿರುವುದು ಸಂತಸದ ಸಂಗತಿ ಎಂದರು.
ಕಸಾಪ ತಾಲೂಕಾಧ್ಯಕ್ಷ ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸಿ, ಸಾಹಿತ್ಯದ ಚಟುವಟಿಕೆಯಲ್ಲಿ ತೆರೆಮರೆಯಲ್ಲೇ ಕೆಲಸ ಮಾಡಿದವರು ಕಂಠಿ. ಅವರ ಕಾರ್ಯದ ಅಚ್ಚುಕಟ್ಟುತನ ನೋಡಿ ಕಲಿಯಬೇಕು ಎಂದರು.ಡಾ. ಜಿ.ಎ. ಹೆಗಡೆ ಸೊಂದಾ ಅಭಿನಂದನಾ ನುಡಿಗಳನ್ನಾಡಿದರು. ಹಿರಿಯ ಪತ್ರಕರ್ತ ಜಯರಾಮ ಹೆಗಡೆ, ಸಾಹಿತಿ ಮಂಜುನಾಥ ಹೆಗಡೆ ಹೂಡ್ಲಮನೆ ಸೇರಿ ಹಲವು ಕವಿಗಳು ಕವನ ವಾಚನ ಮಾಡಿದರು. ಸಾಹಿತ್ಯ ಸಿಂಚನ ಸಂಸ್ಥಾಪಕ ಶಿವಪ್ರಸಾದ ಹಿರೇಕೈ ಇದ್ದರು.
ನಿಶ್ಚಿತ ಹೆಗಡೆ ಪ್ರಾರ್ಥಿಸಿದರು. ಭವ್ಯಾ ಹಳೇಯೂರು ಸ್ವಾಗತಿಸಿದರು. ಡಾ. ದಿವ್ಯ ಹೆಗಡೆ ನಿರೂಪಿಸಿದರು. ರಾಘವೇಂದ್ರ ಬೆಟ್ಕೋಪ್ಪ ವಂದಿಸಿದರು.