ಹಾವೇರಿ: ಸ್ನೇಹಿತೆಯೊಂದಿಗೆ ಹೋಗಿದ್ದಕ್ಕೆ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ಗುರುವಾರ ನಡೆದಿದೆ.
ಚೇತನ್ ಅರಗೋಳ ಎಂಬಾತ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ ಆರೋಪದಡಿ ಹುಬ್ಬಳ್ಳಿಯ ಅರುಣ ಬಡ್ನಿ, ದೇವಿಹೊಸೂರಿನ ರಂಜಿತಾ ಹಳೇಮನಿ ಸೇರಿದಂತೆ ಏಳು ಜನರ ಮೇಲೆ ದೂರು ದಾಖಲಾಗಿದೆ.ಹಲ್ಲೆಗೊಳಗಾದ ಯುವಕ ಹಾಗೂ ಆರೋಪಿತರು ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಚೇತನ್ ಹಾಗೂ ಆತನ ಸ್ನೇಹಿತೆ ಜೊತೆಯಾಗಿ ಹೋಗುತ್ತಿರುವುದನ್ನು ಕಂಡು ಮತ್ತೊಂದು ಗುಂಪಿನ ಏಳು ಜನ ಆರೋಪಿತರು ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಜೀವ ಬೆದರಿಕೆಯನ್ನು ಹಾಕಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಿಷ ಸೇವಿಸಿ ರೈತ ಆತ್ಮಹತ್ಯೆ
ಹಾವೇರಿ: ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ರೈತರೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ತಾಲೂಕಿನ ಬಸಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.ಬಸಾಪುರ ಗ್ರಾಮದ ಜಗದೀಶ ನಿಂಗಪ್ಪ ಬಳ್ಳಾರಿ(37) ಮೃತ ದುರ್ದೈವಿ. ಇವರು ಐದು ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದರು. ಕೃಷಿ ಕೆಲಸಕ್ಕೆಂದು ಗುತ್ತಲದ ಕೆವಿಜಿ ಬ್ಯಾಂಕ್‌ನಲ್ಲಿ ₹3 ಲಕ್ಷ, ಕೈಗಡ ₹2 ಲಕ್ಷ ಸಾಲ ಮಾಡಿದ್ದರು. ಕಳೆದ ಎರಡು ವರ್ಷಗಳಿಂದ ಬರ, ಅತಿವೃಷ್ಟಿಯಿಂದಾಗಿ ಫಸಲು ಚೆನ್ನಾಗಿ ಬಂದಿರಲಿಲ್ಲ. ಹೀಗಾಗಿ ಸಾಲ ಹೇಗೆ ತೀರಿಸಬೇಕೆಂದು ಚಿಂತೆಗೀಡಾಗಿದ್ದರು. ಇದೇ ಚಿಂತೆಯನ್ನು ಮನಸ್ಸಿಗೆ ಹಚ್ಚಿಕೊಂಡು ಬುಧವಾರ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದರು. ಕೂಡಲೇ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಿದ್ದಾಗ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಮೃತರ ತಂದೆ ನಿಂಗಪ್ಪ ಬಳ್ಳಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.