ಯುವಕರು ಉದ್ಯೋಗ ಆಕಾಂಕ್ಷಿಗಳಾಗದೆ ಉದ್ದಿಮೆದಾರರಾಗಿ

KannadaprabhaNewsNetwork |  
Published : Feb 20, 2025, 12:51 AM IST
೧೯ಕೆಎಲ್‌ಆರ್-೩ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ಪ್ರಾಂಗಣದ ಹೋಟೆಲ್‌ನಲ್ಲಿ ಜರುಗಿದ ದಲಿತ ಉದ್ದಿಮೆದಾರರ ಸಮಾವೇಶದಲ್ಲಿ ಡಿಕ್ಕಿ ರಾಷ್ಟ್ರೀಯ ಉಪಾಧ್ಯಕ್ಷ ರಾಜಾನಾಯಕ್ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ದಲಿತ ಯುವಕರು ಉದ್ಯೋಗ ಆಕಾಂಕ್ಷಿಗಳಾಗದೆ ಉದ್ದಿಮೆದಾರರಾಗುವ ಮೂಲಕ ಉದ್ಯೋಗದಾತರಾಗಬೇಕೆಂದು ಡಿಕ್ಕಿ ರಾಷ್ಟ್ರೀಯ ಉಪಾಧ್ಯಕ್ಷ ರಾಜಾನಾಯಕ್ ಹೇಳಿದರು.

ಕನ್ನಡಪ್ರಭ ವಾರ್ತೆ ಕೋಲಾರದಲಿತ ಯುವಕರು ಉದ್ಯೋಗ ಆಕಾಂಕ್ಷಿಗಳಾಗದೆ ಉದ್ದಿಮೆದಾರರಾಗುವ ಮೂಲಕ ಉದ್ಯೋಗದಾತರಾಗಬೇಕೆಂದು ಡಿಕ್ಕಿ ರಾಷ್ಟ್ರೀಯ ಉಪಾಧ್ಯಕ್ಷ ರಾಜಾನಾಯಕ್ ಹೇಳಿದರು.ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ದಲಿತ ಉದ್ದಿಮೆದಾರರ ಸಮಾವೇಶದಲ್ಲಿ ಮಾತನಾಡಿದರು.ಉದ್ದಿಮೆದಾರರಾಗಲು ಸರ್ಕಾರ ಅನೇಕ ಅವಕಾಶ ಯೋಜನೆಗಳನ್ನು ದಲಿತ ಯುವಕ, ಯುವತಿಯರಿಗೆ ಕಲ್ಪಿಸಿದ್ದು, ಇವುಗಳನ್ನು ಮೊದಲು ಅರಿತುಕೊಂಡು ಸಕಾಲಿಕ ಯೋಜನಾ ವರದಿ ಸಿದ್ಧಪಡಿಸಿಕೊಂಡು ಉದ್ದಿಮೆದಾರರಾಗುವತ್ತ ಚಿತ್ತ ಹರಿಸಬೇಕೆಂದು ಸಲಹೆ ನೀಡಿದರು.ಡಿಕ್ಕಿ ಸಂಸ್ಥೆಯು ೨೦೦೫ ರಲ್ಲಿ ಪುಣೆಯಲ್ಲಿ ಆರಂಭವಾಗಿ, ೨೦೧೦ರಲ್ಲಿ ಕರ್ನಾಟಕವನ್ನು ಪ್ರವೇಶಿಸಿತು. ಇದೀಗ ದೇಶ ಮಾತ್ರವಲ್ಲದೆ ವಿಶ್ವದ ಏಳು ದೇಶಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಅಂತರಾಷ್ಟ್ರೀಯ ಸಂಸ್ಥೆಯಾಗಿ ಮಾರ್ಪಟ್ಟಿದೆ, ಕೋಲಾರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡಿಕ್ಕಿ ಕಾರ್ಯನಿರ್ವಹಿಸುತ್ತಿದ್ದು, ದಲಿತರು ಉದ್ದಿಮೆದಾರರಾಗುವ ನಿಟ್ಟಿನಲ್ಲಿ ಯಾವುದೇ ಸಲಹೆ ಮಾರ್ಗದರ್ಶನ, ಕುಂದುಕೊರತೆಗಳ ನಿವಾರಣೆಗೆ ಡಿಕ್ಕಿ ಸ್ಥಳೀಯ ಘಟಕವನ್ನು ಸಂಪರ್ಕಿಸಬಹುದು ಎಂದು ಕೋರಿದರು.ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರದ ಜಂಟಿ ನಿರ್ದೇಶಕ ಪಿ.ನಾಗೇಶ್ ಮಾತನಾಡಿ, ಉದ್ಯೋಗಸ್ಥರಾದರೆ ಸಂಬಳಕ್ಕೆ ದುಡಿಯಬೇಕು, ಯಶಸ್ವಿ ಕೈಗಾರಿಕೆಯ ಆದಾಯಕ್ಕೆ ಮಿತಿಯೇ ಇರುವುದಿಲ್ಲ. ಕೈಯಲ್ಲಿ ಬಂಡವಾಳ, ಉತ್ತಮ ಯೋಜನೆ, ಉತ್ಪನ್ನಗಳ ಆಯ್ಕೆಯಲ್ಲಿ ಜಾಗೃತವಹಿಸಿ ಮಾರುಕಟ್ಟೆಯ ನಿರೀಕ್ಷೆಯನ್ನು ನಿಬಾಯಿಸಿದರೆ ಉತ್ತಮ ಕೈಗಾರಿಕೋದ್ಯಮಿಗಳಾಗಬಹುದು ಎಂದರು.ಕೋಲಾರ ಜಿಲ್ಲೆಯಲ್ಲಿ ದಲಿತ ಉದ್ದಿಮೆದಾರರು ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತಿದ್ದು, ಈ ಬಾರಿ ಏಕಗವಾಕ್ಷಿ ಯೋಜನೆಯ ಸಭೆಯಲ್ಲಿ ದಲಿತ ಯುವ ಉದ್ದಿಮೆದಾರರ ಅರ್ಜಿಗಳನ್ನು ಅಗತ್ಯವಿದ್ದಷ್ಟು ಪರಿಗಣಿಸಿ, ಉಳಿದ ಅರ್ಜಿಗಳನ್ನು ತಿರಸ್ಕರಿಸದೆ ಮುಂದಿನ ಏಕಗವಾಕ್ಷಿ ಸಭೆಗೆ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಬ್ಬಾನಾಯಕ್ ಮಾತನಾಡಿ, ಕೈಗಾರಿಕೆ ಆರಂಭಿಸಲು ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಸಿಬಿಲ್ ಅಂಕ ಉತ್ತಮವಾಗಿರಬೇಕು. ಅನಾವಶ್ಯಕವಾಗಿ ಸಿಬಿಲ್ ಚೆಕ್ ಮಾಡಬೇಡಿ, ಕ್ರೆಡಿಟ್ ಕಾರ್ಡ್‌ಗಳನ್ನು ಅಗತ್ಯ ಇದ್ದರೆ ಮಾತ್ರವೇ ಪಡೆದುಕೊಳ್ಳಿರಿ. ಸಣ್ಣ ಪ್ರಮಾಣದ ಕೈಗಾರಿಕೆಗೆ ಪಿಎಂ ಇಜಿ ಯೋಜನೆಯಡಿ ಅರ್ಜಿ ಸಲ್ಲಿಸಿ, ಎಲ್ಲಾ ದಾಖಲೆಗಳಿದ್ದು ಬ್ಯಾಂಕ್‌ಗಳಿಂದ ಸಾಲ ಸಿಗದಿದ್ದರೆ ಲೀಡ್ ಬ್ಯಾಂಕ್ ಅನ್ನು ಸಂಪರ್ಕಿಸಿ ಎಂದರು.ಕೆಎಸ್‌ಎಫ್‌ಸಿ ಅಕಾರಿ ಶ್ರೀನಿವಾಸ್ ಮಾತನಾಡಿ, ಕೆಎಸ್‌ಎಫ್‌ಸಿ ಸರ್ಕಾರದ ನಿಯಮಾವಳಿಗಳ ಪ್ರಕಾರ ದಲಿತ ಉದ್ದಿಮೆದಾರರಿಗೆ ಶೇ.೪ ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು, ಆಯಾ ತಿಂಗಳು ೧೦ ರೊಳಗೆ ನಿಯಮಿತವಾಗಿ ಸಾಲದ ಕಂತು ಮರುಪಾವತಿ ಮಾಡಿದಾಗ ಮಾತ್ರವೇ ಈ ಸೌಲಭ್ಯ ಸಿಗಲಿದೆ ಎಂದು ವಿವರಿಸಿದರು.ದಲಿತ ಉದ್ದಿಮೆದಾರರ ಪರವಾಗಿ ಡಿಕ್ಕಿ ಕೋಲಾರ ಅಧ್ಯಕ್ಷ ಅಮ್ಮೇರಹಳ್ಳಿ ಚಲಪತಿ, ದಲಿತ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಮಾರ್ಜೇನಹಳ್ಳಿ ಬಾಬು, ಹೂಹಳ್ಳಿ ನಾಗರಾಜ್, ಕಿರಣ್‌ಕುಮಾರ್ ಇತರರು ಮಾತನಾಡಿ, ದಲಿತರು ಉದ್ದಿಮೆ ಆರಂಭಿಸಬೇಕಾದ ಹಾದಿಯಲ್ಲಿ ಎದುರಿಸುತ್ತಿರುವ ಸಮಸ್ಯೆ ಸವಾಲುಗಳನ್ನು ವಿವರಿಸಿ, ಅಧಇಕಾರಿಗಳು ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹುಡುಕಿ ಸಹಕರಿಸಬೇಕು, ಈ ಬಾರಿ ಏಕಗವಾಕ್ಷಿ ಸಭೆಗೆ ಬರುವ ದಲಿತ ಉದ್ದಿಮೆದಾರರ ಎಲ್ಲಾ ಅರ್ಜಿಗಳನ್ನು ಪರಿಗಣಿಸಬೇಕೆಂದು ಮನವಿ ಸಲ್ಲಿಸಿದರು.ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಮಂದಿ ದಲಿತ ಉದ್ದಿಮೆದಾರರು ಸಭೆಯಲ್ಲಿ ಭಾಗವಹಿಸಿ ಅಕಾರಿಗಳೊಂದಿಗೆ ಸಂವಾದ ನಡೆಸುವ ಮೂಲಕ ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡರು. ವೇದಿಕೆಯಲ್ಲಿ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಕೇಂದ್ರದ ಉಪ ನಿರ್ದೇಶಕ ರವಿಚಂದ್ರ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಾರಾಯಣಸ್ವಾಮಿ ಇದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌