ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್‌ ಪ್ರತಿಭಟನೆ

KannadaprabhaNewsNetwork |  
Published : May 14, 2026, 01:00 AM IST
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹುಬ್ಬಳ್ಳಿಯಲ್ಲಿ ಯುವಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ಶೀಘ್ರ ನ್ಯಾಯ ಒದಗಿಸಲು ಆಗ್ರಹಿಸಿ ಬುಧವಾರ ಹು-ಧಾ ಮಹಾನಗರ ಯುವ ಕಾಂಗ್ರೆಸ್‌ನಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಹುಬ್ಬಳ್ಳಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ಶೀಘ್ರ ನ್ಯಾಯ ಒದಗಿಸಲು ಆಗ್ರಹಿಸಿ ಬುಧವಾರ ಹು-ಧಾ ಮಹಾನಗರ ಯುವ ಕಾಂಗ್ರೆಸ್‌ನಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಇಲ್ಲಿನ ರಮೇಶ ಭವನದಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿವಾಸದ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ, ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಮಾರ್ಗ ಮಧ್ಯೆಯೇ ಬಂಧಿಸಿದರು.

ಈ ವೇಳೆ ಕಾರ್ಯಕರ್ತರು, ವಿದ್ಯಾರ್ಥಿಗಳ ಭವಿಷ್ಯವನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದೆ. ಇದು ದೇಶದಲ್ಲಿ ನಡೆದ ಬೃಹತ್ ಹಗರಣವಾಗಿದೆ ಎಂದು ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಹು- ಧಾ ಯುವ ಕಾಂಗ್ರೆಸ್ ಅಧ್ಯಕ್ಷ ಅರ್ಜುನ ಪಾಟೀಲ ಮಾತನಾಡಿ, ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಸಚಿವರಾದ ಬಳಿಕ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಎರಡನೆಯದ್ದಾಗಿದೆ. ದೇಶಾದ್ಯಂತ ಪರೀಕ್ಷೆ ನಡೆಸಿ ಈಗ ಅದನ್ನು ರದ್ದುಗೊಳಿಸಿರುವುದು ಲಕ್ಷಾಂತರ ವಿದ್ಯಾರ್ಥಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಇದೀಗ ಮತ್ತೊಮ್ಮೆ ಮರು ಪರೀಕ್ಷೆ ಕರೆಯಲಾಗುವುದು ಎಂದು ಹೇಳಿದೆ. ವಿದ್ಯಾರ್ಥಿಗಳು ವರ್ಷಪೂರ್ತಿ ಶ್ರಮವಹಿಸಿ ಅಭ್ಯಾಸಿಸಿ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಬರಲಿದೆ ಎಂದು ನಿರಾಳರಾಗಿದ್ದರು. ಇದೀಗ ಧಿಡೀರ್‌ ರದ್ದುಗೊಳಿಸಿರುವುದು ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಹಲವು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವುದು ಜಗಜ್ಜಾಹೀರಾಗಿದೆ. ಈ ಕೂಡಲೇ ಕೇಂದ್ರದ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು. ದೇಶಾದ್ಯಂತ ನೀಟ್‌ ಪರೀಕ್ಷೆ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಪೊಲೀಸರೊಂದಿಗೆ ವಾಗ್ವಾದ

ಕೇಂದ್ರ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ಯುವ ಕಾಂಗ್ರೆಸ್‌ ಕಾರ್ಯಕರ್ತರು ಇಲ್ಲಿನ ರಮೇಶ ಭವನದಿಂದ ಸಚಿವರ ನಿವಾಸದ ವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು. ರಮೇಶ ಭವನದಿಂದ ಕೆಲ ದೂರದಲ್ಲಿಯೇ ಪೊಲೀಸರು ಮಾರ್ಗಮಧ್ಯೆ ಬ್ಯಾರಿಕೇಡ್‌ ಹಾಕಿ ಪ್ರತಿಭಟನಾಕಾರರನ್ನು ತಡೆಯಲು ಮುಂದಾದರು. ನಮಗೆ ಪ್ರತಿಭಟನೆಗೆ ಅವಕಾಶ ನೀಡುವಂತೆ ಪೊಲೀಸರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು. ಇದರಿಂದಾಗಿ ಕೆಲಕಾಲ ಮಾರ್ಗಮಧ್ಯದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದು ಗೊತ್ತಾಗುತ್ತಿದಂತೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಘಟನೆ ನಡೆಯಿತು.

ಈ ಸಂದರ್ಭದಲ್ಲಿ ನಾಗರಾಜ ಕೊಟಗಿ, ನಾಗರಾಜ ನೂಲ್ವಿ, ಸಂತೋಷ ನಾಯಕ, ಅಕ್ಷಯ, ಮಂಜುನಾಥ ಉಪ್ಪಾರ, ಸತೀಶ ಬಡಿಗೇರ ಸೇರಿದಂತೆ ಹಲವರಿದ್ದರು.ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ

ಧಾರವಾಡ: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದನ್ನು ಖಂಡಿಸಿ ಎಐಡಿಎಸ್‌ಒ ಧಾರವಾಡ ಜಿಲ್ಲಾ ಸಮಿತಿಯು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಮಾತನಾಡಿ, ಪದೇ ಪದೇ ಮರುಕಳುಹಿಸುತ್ತಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕೇವಲ ಒಂದು ಪರೀಕ್ಷಾ ಸಂಸ್ಥೆಯ ವೈಫಲ್ಯವಲ್ಲ. ಇದು ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಬೆವರು ಮತ್ತು ಕನಸುಗಳ ಮೇಲೆ ಎಸಗುತ್ತಿರುವ ಘೋರ ದೌರ್ಜನ್ಯವಾಗಿದೆ. ಮೂರು ವರ್ಷಗಳಲ್ಲಿ ಎರಡನೆಯ ಬಾರಿಗೆ, ವೈದ್ಯಕೀಯ ಶಿಕ್ಷಣದ ಕನಸು ಹೊತ್ತವರ ಆಶೋತ್ತರಗಳನ್ನು ಅತಿ ಹೆಚ್ಚು ಹಣ ನೀಡುವವರಿಗೆ ಹರಾಜು ಹಾಕಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣವಾಗಿರುವವರನ್ನು ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾಗಿರುವವರಿಗೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆ ವಿಧಿಸಬೇಕು. ಎನ್‌ಟಿಎ ಸಂಸ್ಥೆಯನ್ನು ತಕ್ಷಣವೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಎಐಡಿಎಸ್‌ಒ ಜಿಲ್ಲಾ ಕಾರ್ಯಕರ್ತ ಸಿದ್ದಲಿಂಗ ಚಿಪ್ಪಲಕಟ್ಟಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ನೀಟ್ ಹಗರಣಕ್ಕೆ ಕೇಂದ್ರ ಸರ್ಕಾರ ಕಾರಣ: ಸಚಿವ ಲಾಡ್‌

ಧಾರವಾಡ: ನೀಟ್ ಪರೀಕ್ಷೆ ರದ್ದು ಮತ್ತು ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರು ಮೌನವಾಗಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ವರ್ಷಗಳಿಂದ ನೀಟ್‌ ಪರೀಕ್ಷೆಯಲ್ಲಿ ಅಕ್ರಮಗಳು, ಗೊಂದಲಗಳಿಗೆ ಕೇಂದ್ರದ ಬಿಜೆಪಿ ಸರ್ಕಾರವೇ ನೇರ ಹೊಣೆಯಾಗಿದೆ. ಈ ಕುರಿತು ಸ್ಪಷ್ಟನೆ ನೀಡಬೇಕೆಂದರು.

ದೇಶಾದ್ಯಂತ ಪರೀಕ್ಷೆ ರದ್ಧತಿಯಿಂದಾಗಿ ಭವಿಷ್ಯದ ಕನಸು ಹೊತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ನೀಟ್ ಪರೀಕ್ಷೆಗಳಲ್ಲಿನ ಹಗರಣಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು, ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

''ವ್ಯಾಪಂ'' ಹಗರಣ ಕುರಿತು ಚಿತ್ರ ಮಾಡಲಿಪ್ರಸಿದ್ಧ ''ಧುರಂಧರ್'' ಚಿತ್ರದ ನಿರ್ದೇಶಕ ಆದಿತ್ಯ ಧರ್ ''ವ್ಯಾಪಂ'' ಹಗರಣದ ಕುರಿತು ಚಲನಚಿತ್ರ ನಿರ್ದೇಶನ ಮಾಡಲಿ. ಮಧ್ಯಪ್ರದೇಶದಲ್ಲಿ ಪ್ರವೇಶ ಪರೀಕ್ಷೆ ಹಾಗೂ ನೇಮಕ ಪರೀಕ್ಷೆಗಳಲ್ಲಿ ನಡೆದ ಅವ್ಯವಹಾರ ಇದಾಗಿದೆ. ಇದರಲ್ಲಿ ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಶಾಮೀಲಾಗಿದ್ದಾರೆ. ಇದರ ಆರೋಪಿಗಳು ಈಗ ಕೇಂದ್ರ ಸಚಿವರಾಗಿ ಅಧಿಕಾರ ಅನುಭವಿಸುತ್ತಿದ್ದಾರೆ. ದೇಶದ ಅತಿ ದೊಡ್ಡ ಹಗರಣಗಳಲ್ಲೊಂದಾದ ವ್ಯಾಪಂ ಕುರಿತು ಆದಿತ್ಯ ಧರ್ ಚಿತ್ರ ಮಾಡಲಿ ಎಂದರು.ಸಿಇಟಿ ಮೇಲೆ ವೈದ್ಯಕೀಯಕ್ಕೆ ಪ್ರವೇಶ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿಇಟಿ ಆಧಾರದ ಮೇಲೆ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಕೊಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಸಚಿವರು ಹಾಗೂ ಮುಖ್ಯಮಂತ್ರಿಗಳು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಅಭಿಪ್ರಾಯಪಟ್ಟರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಲ್ತಾಫ ಹಳ್ಳೂರ, ಅನಿಲಕುಮಾರ ಪಾಟೀಲ, ಗೌರಮ್ಮ ಬಲೋಗಿ, ಅರವಿಂದ ಏಗನಗೌಡರ, ಎಸ್.ಆರ್. ಪಾಟೀಲ ಮೊದಲಾದವರಿದ್ದರು.

ಮೋದಿ ರೋಡ್ ಶೋದಲ್ಲಿ ಆ್ಯಂಬುಲೆನ್ಸ್ ಫಿಕ್ಸ್!!

ಪ್ರಧಾನಿ ಮೋದಿ ರೋಡ್ ಶೋ ನಡೆದಲ್ಲೆಲ್ಲ ಆ್ಯಂಬುಲೆನ್ಸ್ ಬರುವುದು ಸಾಮಾನ್ಯ. ಪ್ರಧಾನಿ ಬರುತ್ತಾರೆಂದರೆ ಝೀರೋ ಟ್ರಾಫಿಕ್ ಇರುತ್ತದೆ. ಆದರೂ ಪ್ರಧಾನಿ ಹೋಗುವ ಮಾರ್ಗದಲ್ಲಿ ಆ್ಯಂಬುಲೆನ್ಸ್ ಬರುತ್ತದೆ. ಆ್ಯಂಬುಲೆನ್ಸ್ ಸಾಗಲು ಮೋದಿ ಅನುವು ಮಾಡಿಕೊಡುತ್ತಾರೆ. ಇದನ್ನು ಮಾಧ್ಯಮಗಳು ಅತಿ ರಂಜಿತವಾಗಿ ಪ್ರಸಾರ ಮಾಡುತ್ತವೆ. ದೇಶದ ಅಭಿವೃದ್ಧಿ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಮೋದಿಯನ್ನು ಚುನಾವಣೆ ಗೆಲ್ಲಲು ಮಾತ್ರ ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಲಾಡ್ ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಐಡಿ ಇಲ್ಲದೇ ರೈತರಿಗೆ ಗೊಬ್ಬರ, ಬಿತ್ತನೆ ಬೀಜ ಪೂರೈಸಲು ರೈತರ ಆಗ್ರಹ
ನೀಟ್ ಪರೀಕ್ಷೆ ರದ್ದುಪಡಿಸಲು ಆಗ್ರಹ, ಎಸ್‌ಎಫ್‌ಐ ಪ್ರತಿಭಟನೆ