ಯುವಜನತೆ ಮೊಬೈಲ್‌ ಜಗತ್ತಿನಿಂದ ಹೊರಬನ್ನಿ

KannadaprabhaNewsNetwork | Published : Mar 25, 2025 12:47 AM

ಸಾರಾಂಶ

ಕನಕಪುರ: ಸಮಯ ನಿರ್ವಹಣೆಯನ್ನು ಪ್ರತಿಯೊಬ್ಬರು ಕಲಿಯಬೇಕಿದೆ, ಸಮಯಕ್ಕೆ ಯಾವುದು ಪ್ರಮುಖ ಯಾವುದು ಅಪ್ರಮುಖ ಎಂದು ತಿಳಿಯುವ ಪ್ರಬುದ್ಧತೆ ಪಡೆಯಬೇಕು ಎಂದು ಆಧ್ಯಾತ್ಮ ಸಂಚಾಲಕ ಸುಂದರ್ ಅನಂತ ರಾಮನ್ ಹೇಳಿದರು.

ಕನಕಪುರ: ಸಮಯ ನಿರ್ವಹಣೆಯನ್ನು ಪ್ರತಿಯೊಬ್ಬರು ಕಲಿಯಬೇಕಿದೆ, ಸಮಯಕ್ಕೆ ಯಾವುದು ಪ್ರಮುಖ ಯಾವುದು ಅಪ್ರಮುಖ ಎಂದು ತಿಳಿಯುವ ಪ್ರಬುದ್ಧತೆ ಪಡೆಯಬೇಕು ಎಂದು ಆಧ್ಯಾತ್ಮ ಸಂಚಾಲಕ ಸುಂದರ್ ಅನಂತ ರಾಮನ್ ಹೇಳಿದರು.

ನಗರದ ರೂರಲ್ ಪದವಿ ಕಾಲೇಜಿನಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಜನತೆ ಇತ್ತೀಚೆಗೆ ಫೋನ್ ಚಟಕ್ಕೆ ಬಿದ್ದು ತಮ್ಮ ಜೀವನದ ಅಮೂಲ್ಯ ಸಮಯ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ವಿದ್ಯಾರ್ಥಿಗಳು ಮೊಬೈಲ್‌ ಜಗತ್ತಿನಿಂದ ಹೊರಬಂದು ಪುಸ್ತಕ ಓದುವ, ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಮಾನಸಿಕ ಹಾಗೂ ದೈಹಿಕ ಆರೋಗ್ಯವೂ ಲವಲವಿಕೆಯಿಂದ ಕೂಡಿರುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಬೇಕು. ಮೊದಲನೇ ಹಂತದಲ್ಲಿ ಆಹಾರ ಕ್ರಮಗಳ ಕಡೆ ಹೆಚ್ಚಿನ ಒಲವು ತೋರಬೇಕು, ವಿದ್ಯಾರ್ಥಿ ಬದುಕಿನಲ್ಲಿ ಬೆಳಗಿನ ಉಪಹಾರ ಸೇವಿಸದೆ ತರಗತಿಗೆ ಬಂದರೆ ಮನಸ್ಸು ಚಂಚಲವಾಗಿ ಏನನ್ನೂ ಗ್ರಹಿಸಲಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ತರಾತುರಿ ಅಥವಾ ಅಶಿಸ್ತಿನ ಜೀವನ ಸಣ್ಣ ಮಕ್ಕಳ ಮತ್ತು ಯುವಕರ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಹೇಳಿದರು. ನಾಲಿಗೆ ರುಚಿಗೆ ಮನಸೋತು ಶುಚಿತ್ವ ಮತ್ತು ಪೌಷ್ಟಿಕತೆಯಿಂದ ದೂರ ಸರಿದು ಕಾಯಿಲೆಗಳಿಗೆ ತುತ್ತಾಗುವ ಪರಿಸ್ಥಿತಿ ಬಂದಿದೆ. ಆರೋಗ್ಯಕರ ಜೀವನದತ್ತ ನಾವೆಲ್ಲ ಗಮನಹರಿಸಬೇಕಿದೆ. ನಾವು ಸೇವಿಸುವ ಆಹಾರ ಸಮರ್ಪಕವಾಗಿದ್ದರೆ ಮನಸ್ಸು ಸಕ್ರಿಯಗೊಳ್ಳುತ್ತದೆ. ಆಗ ಸಾಧನೆಯ ಹಾದಿಯನ್ನು ಬಹುಬೇಗ ತಲುಪಬಹುದು. ಇತ್ತೀಚಿನ ದಿನಗಳಲ್ಲಿ ದೈಹಿಕ ವ್ಯಾಯಾಮದ ಕೊರತೆ, ಹೊರಾಂಗಣ ಕ್ರೀಡೆಗಳಲ್ಲಿ ಕುಗ್ಗುತ್ತಿರುವ ಆಸಕ್ತಿ ಹಾಗೂ ನಕಾರಾತ್ಮಕ ಹವ್ಯಾಸಗಳಿಗೆ ಬಲಿಯಾಗುತ್ತಿರುವ ಯುವ ಜನತೆಯ ಜೀವನ ಶೈಲಿ ಮನುಷ್ಯನ ಆಯುಷ್ಯದ ನಿರ್ದಿಷ್ಟತೆ ಅಳಿಸಿ ಹಾಕುತ್ತಿದೆ. ಯೋಗ, ಧ್ಯಾನಗಳಿಂದ ಮನಸ್ಸು ಮತ್ತು ದೇಹವನ್ನ ಹತೋಟಿಯಲ್ಲಿಡುವ ಒಂದು ಸಾಧನವಾಗಿರುವುದರಿಂದ ಇಂತಹ ಚಟುವಟಿಕೆಗಳ ಬಗ್ಗೆ ಗಮನಹರಿಸಿ ಉತ್ಸಾಹ, ಧೈರ್ಯ, ಬುದ್ದಿಶಕ್ತಿಗಳನ್ನು ಸಮರ್ಪಕವಾಗಿ ಬಳಸಿ ಗುರಿ ತಲುಪುವಂತೆ ಸಲಹೆ ನೀಡಿದರು. ಪ್ರಾಂಶುಪಾಲ ಎಂ.ಟಿ.ಬಾಲಕೃಷ್ಣ, ಉಪ ಪ್ರಾಂಶುಪಾಲ ದೇವರಾಜು, ಉಪನ್ಯಾಸಕರಾದ ವಿಜಯೇಂದ್ರ, ಮೋಹನ್ ಕುಮಾರ್, ಶ್ರೀ ಸತ್ಯ ಸಾಯಿ ಸಮಿತಿ ಜಿಲ್ಲಾಧ್ಯಕ್ಷ ಮಹೇಂದ್ರ ಕುಮಾರ್, ಸಂಚಾಲಕ ಸುಭಾಷ್ ಚಂದ್ರ, ನಟರಾಜಬಾಬು ಇತರರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:

ಕನಕಪುರದ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ರೂರಲ್ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಸಿತು.

Share this article