ಯುವ ಸಮೂಹ ಭಾರತದ ಭವಿಷ್ಯ: ಸೀಮಾ ಲಾಟ್ಕರ್

KannadaprabhaNewsNetwork |  
Published : Jun 27, 2025, 12:49 AM IST
1 | Kannada Prabha

ಸಾರಾಂಶ

ಮಾದಕ ವ್ಯಸನ ಜೀವನದ ಖುಷಿಯನ್ನು ಕಸಿಯುತ್ತದೆ. ಅದಕ್ಕೆ ಪರ್ಯಾಯವಾಗಿ ಜೀವನದ ಖುಷಿ ಹೆಚ್ಚಿಸುವ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಕುತೂಹಲಕ್ಕಾಗಿ ಸೇವಿಸಿ, ನಂತರ ನಿಲ್ಲಿಸುತ್ತೇನೆ ಎಂಬ ಕೆಟ್ಟ ನಿರ್ಧಾರ ಸಲ್ಲ. ಅದು ಮುಂದೆ ಚಟವಾಗಿ ಜೀವನದುದ್ದಕ್ಕೂ ಪರಿತಪಿಸುವಂತೆ ಮಾಡುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರ ಪೊಲೀಸ್ ಘಟಕವು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರ್ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಜಾಗೃತಿ ಅಭಿಯಾನವನ್ನು ಗುರುವಾರ ಆಯೋಜಿಸಿತ್ತು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ಯುವ ಸಮೂಹ ಭಾರತದ ಭವಿಷ್ಯವಾಗಿದ್ದು, ಅವರೇ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗಿರುವುದು ಆತಂಕಕಾರಿ. ಇದನ್ನು ತಡೆಗಟ್ಟುಲು ಜವಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ ಎಂದರು.

ಜಿಲ್ಲಾಸ್ಪತ್ರೆಯ ಮನೋರೋಗ ತಜ್ಞೆ ಡಾ. ಮಾಲಿನಿ ಗೋವಿಂದನ್ ಮಾತನಾಡಿ, ಮಾದಕ ವ್ಯಸನ ಜೀವನದ ಖುಷಿಯನ್ನು ಕಸಿಯುತ್ತದೆ. ಅದಕ್ಕೆ ಪರ್ಯಾಯವಾಗಿ ಜೀವನದ ಖುಷಿ ಹೆಚ್ಚಿಸುವ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಕುತೂಹಲಕ್ಕಾಗಿ ಸೇವಿಸಿ, ನಂತರ ನಿಲ್ಲಿಸುತ್ತೇನೆ ಎಂಬ ಕೆಟ್ಟ ನಿರ್ಧಾರ ಸಲ್ಲ. ಅದು ಮುಂದೆ ಚಟವಾಗಿ ಜೀವನದುದ್ದಕ್ಕೂ ಪರಿತಪಿಸುವಂತೆ ಮಾಡುತ್ತದೆ ಎಂದು ಎಚ್ಚರಿಸಿದರು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮುಂಭಾಗದಿಂದ ಹೊರಟ ಜಾಗೃತಿ ಜಾಥಾವು ಕೆ.ಆರ್‌. ವೃತ್ತ, ಸಯ್ಯಾಜಿರಾವ್ ರಸ್ತೆ, ಗನ್‌ ಹೌಸ್‌, ಹಾರ್ಡಿಂಜ್‌ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ ಮೂಲಕ ಮತ್ತೆ ಕೋಟೆ ಆಂಜನೇಯ ದೇವಾಲಯದ ಆವರಣದಲ್ಲಿ ಮುಕ್ತಾಯವಾಯಿತು.

ಪೊಲೀಸರು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಳಕೆಯಿಂದ ದೂರವಿರಿ, ಮಾದಕ ವಸ್ತುಗಳಿಗೆ ದಾಸರಾಗಬೇಡಿ, ಮಾದಕ ವಸ್ತುಗಳನ್ನು ದೂರವಾಗಿಸೋಣ, ಮಾದಕ ವ್ಯಸನ ಭವಿಷ್ಯಕ್ಕೆ ಮಾರಕ, ಡ್ರಗ್ಸ್‌ ನೊಂದಿಗಿನ ಸಹವಾಸ, ಸೆರೆಮನೆಯಲ್ಲಿ ಮುಂದಿನ ವಾಸ, ಗುಟ್ಕಾ ತಿಂದ ಗೊಟಕ್ ಆದ.... ಮೊದಲಾದ ಫಲಕಗಳನ್ನು ಪ್ರದರ್ಶಿಸುವ ಮೂಲಕ ಅರಿವು ಮೂಡಿಸಿದರು.

ಡಿಸಿಪಿಗಳಾದ ಎಂ. ಮುತ್ತುರಾಜು, ಸುಂದರ್‌ ರಾಜ್‌, ಎಸಿಪಿಗಳಾದ ಕೆ. ರಾಜೇಂದ್ರ, ಎಂ. ಶಿವಶಂಕರ್‌, ಮೋಹನ್‌ ಕುಮಾರ್‌, ಮೊಹಮ್ಮದ್‌ ಶರೀಫ್‌ ರಾವುತರ್‌, ರವಿಶಂಕರ್, ಅಶ್ವತ್ಥನಾರಾಯಣ ಮೊದಲಾದವರು ಇದ್ದರು.

ಬಾಲಕಿಯರ ಪಿಯು ಕಾಲೇಜಿನಲ್ಲಿ ಮಾದಕ ವಸ್ತು ವಿರೋಧಿ ಜಾಥಾ

ಕನ್ನಡಪ್ರಭ ವಾರ್ತೆ ನಂಜನಗೂಡು

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಮಾದಕ ವಸ್ತುಗಳ ವ್ಯಸನದ ಕುರಿತು ಜಾಗೃತಿ ಜಾಥಾ ನಡೆಸಿದರು.

ಜಿಲ್ಲಾ ಪೊಲೀಸ್, ನಂಜನಗೂಡು ಪೊಲೀಸ್ ಠಾಣೆ ಹಾಗೂ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ವತಿಯಿಂದ 1500 ವಿದ್ಯಾರ್ಥಿನಿಯರಿಂದ ಮಹಾತ್ಮ ಗಾಂಧಿ ರಸ್ತೆ, ರಾಷ್ಟ್ರಪತಿ ರಸ್ತೆಗಳಲ್ಲಿ ಸಂಚರಿಸಿ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಜಾಥಾ ಮೂಲಕ ಅರಿವು ಮೂಡಿಸಿದರು.

ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಕಾಲೇಜಿನ ವಿದ್ಯಾರ್ಥಿನಿಯರು ಜೊತೆಗೂಡಿ ಜಾಥಾ ನಡೆಸಲಾಗುತ್ತಿದ್ದು, ಇಂದಿನ ಯುವ ಜನತೆ ಮಾನಸಿಕ ಒತ್ತಡ, ವ್ಯಾಮೋಹ, ಸ್ನೇಹಿತರೊಂದಿಗೆ ಗುಂಪುಗೂಡಿಕೊಂಡು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಬೇರೆ ಬೇರೆ ವಿಧಾನಗಳಿವೆ. ಅವುಗಳನ್ನು ಅಳವಡಿಸಿಕೊಂಡು ಮಾದಕ ವಸ್ತುಗಳನ್ನು ತ್ಯಜಿಸಬೇಕು ಎಂದರು.

ಈ ವೇಳೆ ಇನ್ ಸ್ಪೆಕ್ಟರ್ ರವೀಂದ್ರ, ತಿಮ್ಮಯ್ಯ, ಕೃಷ್ಣ, ನಗರಸಭಾ ಸದಸ್ಯ ಮಹೇಶ್ ಅತ್ತಿಖಾನೆ ಮೊದಲಾದವರು ಇದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ