ಕನ್ನಡಪ್ರಭ ವಾರ್ತೆ ತುರುವೇಕೆರೆ
ಭಾರತ ದೇಶದ ಪರಂಪರೆ, ನಮ್ಮ ಧರ್ಮದ ಆಚರಣೆಗಳನ್ನು ಯುವಕರು ಆಚರಿಸುವ ಮೂಲಕ ಸತ್ಕಾರ್ಯಗಳನ್ನು ಉಳಿಸಲು ಪಣ ತೊಡಬೇಕು ಎಂದು ಮಾಗಡಿ ತಾಲೂಕಿನ ಪಾಲನಹಳ್ಳಿ ಶ್ರೀ ಶನೈಶ್ವರ ಪುಣ್ಯ ಕ್ಷೇತ್ರ ಮಠದ ಡಾ. ಸಿದ್ದರಾಜು ಸ್ವಾಮಿಗಳು ಕರೆ ನೀಡಿದರು.ತಾಲೂಕಿನ ಅತ್ತಿಕುಳ್ಳೇಪಾಳ್ಯದ ಶನಿದೇವರ ದೇವಾಲಯದಲ್ಲಿ 24 ನೇ ವರ್ಷದ ಕಾರ್ತಿಕ ದೀಪೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಧಾರ್ಮಿಕವಾಗಿ ಹಲವು ರೀತಿಯ ಹಬ್ಬಗಳು, ಜಾತ್ರೆ, ಪೂಜೆಗಳನ್ನು ಆಚರಿಸುತ್ತಾ ಬಂದಿದ್ದೇವೆ. ಹಲವು ಧಾರ್ಮಿಕ ಕಾರ್ಯಗಳ ಆಚರಣೆ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದೇವೆ. ಇಂತಹ ಪುಣ್ಯ ಭೂಮಿಯಲ್ಲಿ ಜನಿಸಿದ ನಾವೇ ಪುಣ್ಯವಂತರು ಎಂಬ ಭಾವನೆ ಹೊಂದಬೇಕು. ದೇವರ ಪೂಜೆ, ಹೋಮ ಹವನಗಳು ಸನಾತನ ಧರ್ಮದ ಭಾಗವಾಗಿದೆ. ನಾವು ಭಾರತೀಯರು ನಮ್ಮ ಧರ್ಮ, ಪದ್ದತಿ, ಸಂಪ್ರದಾಯಗಳನ್ನು ಅಭಿಮಾನದಿಂದ ಆಚರಿಸಬೇಕು. ಇಂದಿನ ಯುವಕರು ಎಷ್ಟೇ ವಿದ್ಯಾವಂತರಾದರೂ ಸಹ ಹಿರಿಯರು ಹಾಕಿ ಕೊಟ್ಟ ಸಂಸ್ಕಾರಯುತ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು. ಸಾಹಿತಿ ತುರುವೇಕೆರೆ ಪ್ರಸಾದ್ ಮಾತನಾಡಿ, ಸಾರ್ವತಿಕ ಮೌಲ್ಯಗಳ ಆಚರಣೆ ಮಾಡುವುದೇ ಧರ್ಮ. ಎಲ್ಲರಿಗೂ ಒಳಿತಾಗಬೇಕು, ಎಲ್ಲರಿಗೂ ಒಳಿತನ್ನು ಭಯಸಬೇಕು. ಆಗ ಮಾತ್ರ ಧರ್ಮ ಸಾವರ್ತಿಕವಾಗಿರಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ವ್ಯವಸ್ಥೆ ನಿಯಮ, ಕಾನೂನುಗಳಿಗೆ ರಾಜಿ ಮಾಡಿಕೊಂಡು ಧರ್ಮವನ್ನು ಪಾಲನೆ ಮಾಡದೆ ಧರ್ಮ ಭ್ರಷ್ಟ, ವಚನ ಭ್ರಷ್ಟರಾಗುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಸೀತಾಲಕ್ಷ್ಮೀ ಕೃಷ್ಣಮೂರ್ತಿ ಸನಾತನ ಹಿಂದೂ ಧರ್ಮ ಬಗ್ಗೆ ಉಪನ್ಯಾಸ ನೀಡಿದರು. ತಾಲೂಕಿನ ಸಾಧಕರಾದ ರೂಪಶ್ರೀ, ಜಗರಾಮ್ ಪಟೇಲ್, ಕೃಷ್ಣಪ್ಪ, ಹೆಚ್.ಜಯರಾಮ್ ರವರನ್ನು ಸನ್ಮಾನಿಸಲಾಯಿತು. ರಾತ್ರಿ ಅತ್ತಿಕುಳ್ಳೆ ಪಾಳ್ಯದ ಶ್ರೀ ಶನೈಶ್ವರ ಕಲಾ ಸಂಘದಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ಮುಖಂಡರಾದ ಎಂ.ಡಿ.ಮೂರ್ತಿ, ದೊಡ್ಡಾಘಟ್ಟ ಚಂದ್ರೇಶ್, ಸುಬ್ರಮಣಿ ಶ್ರೀಕಂಠೇಗೌಡ, ಚಿಮ್ಮನಹಳ್ಳಿಯ ಶಿವಪ್ಪ, ಎಂ.ಆರ್.ರಾಮಚಂದ್ರಯ್ಯ, ಕೃಷ್ಣಮೂರ್ತಿ, ಇನ್ನರ್ ವೀಲ್ ಅಧ್ಯಕ್ಷೆ ಇಂದಿರಾ ಪ್ರಭಾಕರ್, ಸಮಾಜ ಸೇವಕರಾದ ಅಮಾನಿಕೆರೆ ಮಂಜುನಾಥ್, ಎನ್.ಆರ್.ಜಯರಾಮ್, ಬ್ಯಾಂಕ್ ಮೂಡಲಗಿರಿಯಪ್ಪ, ಗ್ರಾಮದ ಗುಡಿಗೌಡರು ಸೇರಿದಂತೆ ಅಪಾರ ಭಕ್ತರು ಪಾಲ್ಗೊಂಡಿದ್ದರು.