ಹೊಸಪೇಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿ ನಗರದ ತಹಸಿಲ್ ಕಚೇರಿ ಎದುರು ಸೋಮವಾರ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ನಗರದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಾಹಿತಿ ಪೀರ್ ಬಾಷಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವೇಕ ಮತ್ತು ನ್ಯಾಯಪ್ರಜ್ಞೆ ಇದ್ದರೆ ಕೂಡಲೇ ಯುವಕರ ಸಮಸ್ಯೆ ಅರ್ಥ ಮಾಡಿಕೊಂಡು ನೇಮಕಾತಿಗೆ ಮುಂದಾಗಬೇಕು. ಖಾಲಿ ಹುದ್ದೆಗಳನ್ನು ಭರ್ತಿಮಾಡಿಕೊಂಡರೆ ಮಾತ್ರ ಪಾರ್ಲಿಮೆಂಟ್, ವಿಧಾನಸೌಧಗಳಲ್ಲಿ ಹೇಳುವ ‘ಪ್ರಜಾಪ್ರಭುತ್ವ’ ಎನ್ನುವ ಪದಕ್ಕೆ ಅರ್ಥ ಬರುತ್ತದೆ. ಕೆಲಸ ಮಾಡುವುದನ್ನು ಬಿಟ್ಟು ಮಾತನಾಡಿದರೆ, ಬೊಗಳೆ ಮಾತಾಗುತ್ತದೆ. ಯುವಕರಿಗೆ ಈಗ ಬೊಗಳೆ ಮಾತು ಸಾಕಾಗಿದೆ ಎಂದು ಆಕ್ರೋಶವ್ಯಕ್ತ ಪಡಿಸಿದರು.ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಯರಿಸ್ವಾಮಿ ಮಾತನಾಡಿ, ರಾಜ್ಯದ 43 ಇಲಾಖೆಗಳಲ್ಲಿ 2,84,881 ಹುದ್ದೆಗಳು ಖಾಲಿ ಬಿದ್ದಿವೆ. ಈ ಹಿಂದೆ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಕೋವಿಡ್ ಕಾರಣ ಹೇಳಿ ಯಾವುದೇ ಪ್ರಯತ್ನ ಮಾಡಲಿಲ್ಲ. ಬಿಜೆಪಿ ಆಡಳಿತದ ವೈಫಲ್ಯಗಳನ್ನು ಎತ್ತಿ ತೋರಿಸುತ್ತಾ ಕಾಂಗ್ರೆಸ್ ಪಕ್ಷ; ತಾನು ಅಧಿಕಾರಕ್ಕೆ ಬಂದರೆ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ನೀಡಿತ್ತು. ಆದರೆ, ಅಧಿಕಾರಕ್ಕೆ ಬಂದು 2 ವರ್ಷ 4 ತಿಂಗಳು ಕಳೆದರೂ ಒಳಮೀಸಲಾತಿ ಹೆಸರಿನಲ್ಲಿ ಯಾವುದೇ ನೇಮಕಾತಿ ಮಾಡಿಲ್ಲ. ತಾನು ನೀಡಿದ ಉದ್ಯೋಗದ ಗ್ಯಾರಂಟಿಯನ್ನು ಅಧಿಕಾರಕ್ಕೆ ಬಂದ ನಂತರ ಕಾರ್ಯ ರೂಪಕ್ಕೆ ತರುವುದೆಂದು ಯುವಜನತೆ ನಿರೀಕ್ಷೆಯಲ್ಲಿದ್ದರು. ಆದರೆ, ಅವರ ನಿರೀಕ್ಷೆ ಹುಸಿಯಾಗಿದೆ. ಯುವಕರು ಬಲಿಷ್ಠ-ಪ್ರಜತಾಂತ್ರಿಕ ಹೋರಾಟಕ್ಕೆ ಮುಂದಾಗ ಬೇಕಾದ ಕಾಲ ಬಂದಿದೆ ಎಂದರು.
ಉದ್ಯೋಗ ನಮ್ಮ ಹಕ್ಕು, ಕೂಡಲೇ ನೇಮಕಾತಿ ನಡೆಸಲೇಬೇಕು, 5 ವರ್ಷಗಳ ವಯೋಮಿತಿ ಸಡಲಿಕೆ ನೀಡಲೇಬೇಕು ಎಂದು ಘೋಷಣೆಗಳನ್ನು ಕೂಗುತ್ತಾ ಉದ್ಯೋಗಾಕಾಂಕ್ಷಿಗಳು ಅಂಬೇಡ್ಕರ್ ವೃತ್ತದಿಂದ ಪುನೀತ್ ರಾಜ್‌ಕುಮಾರ ವೃತ್ತದವರೆಗೂ ಮೆರವಣಿಗೆಯಲ್ಲಿ ಸಾಗಿ ತಹಸಿಲ್ ಕಚೇರಿ ಎದುರು ಸಮಾವೇಶಗೊಂಡರು.ಪ್ರಕಾಶ್ ಬಸವನದುರ್ಗಾ, ಪಾಲಾಕ್ಷ ಹಡಗಲಿ, ಮಂಜು ಬದಾಮಿ, ಶ್ರೀನಿವಾಸ ಮರಬ್ಬಿಹಾಳ್, ಹರ್ಷಾ ಬಸವನದುರ್ಗಾ, ಅಭಿಷೇಕ್ ಕಾಳೆ, ಸೈಯದ್ ಸಮೀರ್, ವಿನಯ್ ಮತ್ತಿತರರಿದ್ದರು.