ಯುವಕರು ಡ್ರಗ್ಸ್ ಮಾಫಿಯಾಕ್ಕೆ ಬಲಿಯಾಗಬೇಡಿ: ಎಸ್ಪಿ ಅಮರನಾಥ ರೆಡ್ಡಿ

KannadaprabhaNewsNetwork | Published : Jun 28, 2024 12:57 AM

ಸಾರಾಂಶ

ಬ.ವಿ.ವಿ. ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪೊಲೀಸ್ ಶರಹ ಪೊಲೀಸ್ ಠಾಣೆಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತು ಹಾಗೂ ಕಳ್ಳಸಾಗಾಣಿಕೆ ವಿರೋಧ ಅಂತಾರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಪಿ ಅಮರನಾಥ ರೆಡ್ಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಾರತ ದೇಶದ ಗಡಿ ಪ್ರದೇಶಕ್ಕೆ ಅಂಟಿಕೊಂಡ ವಿದೇಶಗಳು ನಮ್ಮ ದೇಶದ ಯುವಕರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಡ್ರಗ್ಸ್‌ ಮಾರುಕಟ್ಟೆ ಹೆಚ್ಚಿಸಿಕೊಳ್ಳುವ ಹುನ್ನಾರ ನಡೆಸಿವೆ. ಹೀಗಾಗಿ ಯುವಕರು ಡ್ರಗ್ಸ್ ಮಾಫಿಯಾಕ್ಕೆ ಒಳಗಾಗಿ ಬದುಕು ಹಾಳು ಮಾಡಿಕೊಳ್ಳದೆ ಜಾಗೃತಿ ವಹಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಯುವಕರಿಗೆ ಕರೆ ನೀಡಿದರು.

ನಗರದ ಬ.ವಿ.ವಿ. ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪೊಲೀಸ್ ಶರಹ ಪೊಲೀಸ್ ಠಾಣೆಯಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶಾದ್ಯಂತ ಯುವಕರು ಸುಂದರ ಬದುಕು ರೂಪಿಸಿಕೊಳ್ಳುವತ್ತ ಯೋಚಿಸಬೇಕು. ಓದು ನಮ್ಮ ನಿತ್ಯದ ಚಟವಾಗಬೇಕೇ ಹೊರತು ನಾವು ದುಶ್ಚಟಗಳ ದಾಸರಾಗಬಾರದು. ವಿದ್ಯಾರ್ಥಿ ದೆಸೆಯಲ್ಲಿ ಅನುಭವಸ್ಥರು ಹಾಗೂ ಗುರುಗಳು ಹೇಳಿದ ಮಾರ್ಗಗಳನ್ನು ಅನುಸರಿಸುವ ಗುಣ ಬೆಳೆಸಿಕೊಳ್ಳಬೇಕು. ದುಶ್ಚಟಕ್ಕೆ ಒಳಗಾದ ಯುವಕರು ಕುಟುಂಬ, ಸಮಾಜ, ಔದ್ಯೋಗಿಕ ಕ್ಷೇತ್ರಗಳಲ್ಲಿ ತೀರ ಅವಮಾನ ಅನುಭವಿಸುತ್ತಾರಲ್ಲದೆ, ಆರ್ಥಿಕವಾಗಿಯೂ ದಿವಾಳಿಯಾಗಿ ಸಾವಿನ ಮನೆಯತ್ತ ಪಯಣ ಬೆಳೆಸುತ್ತಾರೆ, ಯುವಕರು ಈ ಡ್ರಗ್ಸ್‌ ನಂತಹ ದುಶ್ಚಟಗಳಿಂದ ದೂರವಿದ್ದು, ಉತ್ತಮ ನಾಗರಿಕರಾಗಿ ಬಾಳಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಸ್.ಎಂ. ಗಾಂವಕರ್ ಮಾತನಾಡಿ, ಮಾದಕ ವ್ಯಸನಕ್ಕೆ ದೇಶದ ಅನೇಕ ಗಡಿರಾಜ್ಯಗಳು ಒಳಗಾಗುತ್ತಿರುವುದು ಖೇದದ ಸಂಗತಿ. ಇಂಥ ಮಾದಕ ವಸ್ತುಗಳ ಮಾರಕ ರೋಗಕ್ಕೆ ನಮ್ಮ ವಿದ್ಯಾರ್ಥಿಗಳು ಒಳಗಾಗದಂತೆ ಪೊಲೀಸ್ ಇಲಾಖೆ ದೇಶಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಸಿಪಿಐ ಗುರುನಾಥ ಚವಾಣ್‌ ದುಶ್ಚಟದಿಂದ ದೂರವಿರುವಂತೆ ಪ್ರತಿಜ್ಞಾವಿಧಿ ಬೋಧಿಸಿದರು. ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಎನ್.ಎಚ್. ಬೇವಿನಹಳ್ಳಿ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಎಸ್.ಜಿ. ಹುನಸಿಕಾಯಿ ವೇದಿಕೆ ಮೇಲಿದ್ದರು. ಐಕ್ಯುಎಸಿ ಸಂಯೋಜಕ ಡಾ.ಡಿ.ಎಸ್. ಲಮಾಣಿ ಸ್ವಾಗತಿಸಿದರು. ಶಿಲ್ಪಾ ವೈದ್ಯಾ ಮತ್ತು ಗೀತಾ ಯಡಹಳ್ಳಿ ಪ್ರಾರ್ಥಿಸಿ, ಸವಿತಾ ದಾದನಟ್ಟಿ ನಿರೂಪಿಸಿದರು. ಶಿವಾನಂದ ಶಿವನಗುತ್ತಿ ವಂದಿಸಿದರು.

Share this article