ಯುವಕರು ಮಾದಕ ವ್ಯಸನದಿಂದ ದೂರವಿರಿ

KannadaprabhaNewsNetwork |  
Published : Nov 24, 2025, 02:00 AM IST
23ಕೆಜಿಎಫ್‌1 | Kannada Prabha

ಸಾರಾಂಶ

ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಕುರಿತು ಅರಿವು ಮೂಡಿಸುತ್ತಿರುವ ಎಸ್ಪಿ ಶಿವಾಂಶು ರಜಪೂತ್.

ಕನ್ನಡಪ್ರಭ ವಾರ್ತೆ ಕೆಜಿಎಫ್

ಯುವ ಸಮುದಾಯ ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದಾಗ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ ಎಂದು ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅಭಿಪ್ರಾಯಪಟ್ಟರು.

ನಗರದಲ್ಲಿ ರೋಟರಿ ಕ್ಲಬ್ ವತಿಯಿಂದ ಮಾದಕ ವಸ್ತು ಮುಕ್ತ ಕೆಜಿಎಫ್ ನಗರ ನಿರ್ಮಾಣಕ್ಕೆ ಹಮ್ಮಿಕೊಳ್ಳಲಾಗಿದ್ದ ೧೦ ಕಿಮೀ ಮ್ಯಾರಥಾನ್‌ ನಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿದಿನ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಜೀವನ ಶೈಲಿ ರೂಪಿಸಿಕೊಂಡು ಆರೋಗ್ಯಯುತ ಬದುಕನ್ನು ನಡೆಸಿಕೊಂಡು ಹೋಗಬೇಕು. ಅಲ್ಲದೇ ಪೌಷ್ಠಿಕಾಂಶಯುಕ್ತ ಆಹಾರ ಸೇವನೆ ಮಾಡುವುದನ್ನು ರೂಢಿಸಿಕೊಳ್ಳಬೇಕಿದೆ ಎಂದರು.

ಯುವಕರು ಮಾದಕ ವಸ್ತುಗಳಿಂದ ದೂರವಿರಿ:

ಮಾದಕ ವಸ್ತುಗಳ ಉಪಯೋಗ ಸಾಮಾನ್ಯವಾಗಿ ಪ್ರಪಂಚದಾದ್ಯಂತ ಕಂಡು ಬರುವ ಒಂದು ದೊಡ್ಡ ಪಿಡುಗು, ಇದು ಗಂಡು, ಹೆಣ್ಣು, ಬಡವ, ಶ್ರೀಮಂತ ಎನ್ನುವ ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ಪೀಡಿಸುತ್ತದೆ, ಮದ್ಯ, ತಂಬಾಕು, ಗಾಂಜಾ, ಕೊಕೇನ್, ಓಪಿಯಮ್, ಹೆರಾಯನ್, ಪಿಸಿಪಿ, ನಿದ್ದೆ ಮಾತ್ರೆಗಳು ಸೇರಿ ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘ ಕಾಲದ ಮತ್ತು ಪ್ರಭಾವಿ ಪರಿಣಾಮ ಬೀರುವುದಾಗಿ ತಿಳಿಸಿ, ಯುವಕರು ಇಂತಹ ಮಾದಕ ವಸ್ತುಗಳಿಂದ ದೂರವಿರಬೇಕೆಂದು ಕರೆ ನೀಡಿದರು.ಡಾ.ರಾಜೇಂದ್ರ ಕುಮಾರ್ ಮಾತನಾಡಿ, ಕೆಲವರು ಮದ್ಯ, ತಂಬಾಕು, ಗಾಂಜಾ, ಕೊಕೇನ್, ಓಪಿಯಮ್, ಹಿರಾಯಿನ್, ನಿದ್ದೆ ಮಾತ್ರಗಳು, ವೈಟನರ್, ಪೆಟ್ರೋಲಿಯಂ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವ ಮೂಲಕ ಮಾದಕ ವಸ್ತುಗಳ ದಾಸರಾಗಿರುತ್ತಾರೆ. ಒಮ್ಮೆ ಮಾದಕ ವಸ್ತುಗಳ ಚಟಕ್ಕೆ ದಾಸರಾದರೆ, ಅವುಗಳಿಂದ ಹೊರಬರುವುದು ತುಂಬಾ ಕಷ್ಟದ ಕೆಲಸವಾಗಿದ್ದು, ‘ಪ್ರಿವೆನ್ಷನ್ ಈಸ್ ಬೆಟರ್ ದೆನ್ ಕ್ಯೂರ್’ ಎಂಬ ಇಂಗ್ಲಿಷ್ ಗಾದೆಯಂತೆ ಚಟಕ್ಕೆ ದಾಸರಾಗುವ ಮುನ್ನವೇ ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದರು. ಕೆಜಿಎಫ್ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನರಸಿಂಹಮೂರ್ತಿ ಮಾತನಾಡಿ, ಸಂಕಷ್ಟದ ಸಮಯದಲ್ಲಿ ದುರ್ಬಲ ಮಕ್ಕಳ ಹಿತಾಸಕ್ತಿಯನ್ನು ರಕ್ಷಿಸಲು ಮತ್ತು ಅವರ ಸುರಕ್ಷತೆಗೆ ಪೋಕ್ಸೊ ಮಸೂದೆ ಕಾರ್ಯನಿರ್ವಹಿಸಲಿದೆ, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಲ್ಲಿ ತೊಡಗುವವರಿಗೆ ಕಠಿಣ ಶಿಕ್ಷೆಯಾಗಲಿದ್ದು, ಅಂತಹ ಪ್ರಕರಣಗಳು ಕಂಡು ಬಂದಲ್ಲಿ ನೇರವಾಗಿ ಸಹಾಯವಾಣಿ ಸಂಖ್ಯೆ ೧೦೯೦ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದೆಂದು ತಿಳಿಸಿದರು.

ಸಮಾಜ ಸೇವಕ ಸಿ.ಎಂ.ಆರ್ ಶ್ರೀನಾಥ್ ಮಾತನಾಡಿ, ಮೋಜಿಗಾಗಿ ಮಾದಕ ವಸ್ತುಗಳ ಸೇವನೆಯನ್ನು ಆರಂಭಿಸಿದ ವ್ಯಕ್ತಿ ಅವನಿಗೆ ಅರಿವಿಲ್ಲದಂತೆ ಪದೇ ಪದೇ ಅದನ್ನು ಬಳಸಲು ಪ್ರಾರಂಭಿಸುತ್ತಾನೆ. ಏಕೆಂದರೆ ಅದು ಅವನಿಗೆ ಸಂತೋಷವನ್ನುಂಟುಮಾಡುತ್ತದೆ. ಅಲ್ಲದೇ ಅಹಿತಕರ ಅನುಭವಗಳನ್ನುಂಟುಮಾಡುತ್ತದೆ. ಆದರೆ ಇದು ಕೇವಲ ತಾತ್ಕಾಲಿಕ ಅನುಭವ ಮಾತ್ರವಾಗಿದ್ದು, ಸಮಯ ಕಳೆದಂತೆ ಇವುಗಳ ಉಪಯೋಗ ಚಟಕ್ಕೆ ತಿರುಗಿ ಬಿಡುತ್ತದೆ. ಆದರೆ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತಿರುವ ವ್ಯಕ್ತಿಗೆ ಇದರ ಅರಿವಿರುವುದಿಲ್ಲ. ಆದ್ದರಿಂದ ಈ ಪರಿವರ್ತನೆಯ ಕೆಲವು ಸೂಚನೆಗಳನ್ನು ಮೊದಲೇ ಅರಿತುಕೊಂಡಲ್ಲಿ ಯಾವುದೇ ಒಬ್ಬ ವ್ಯಕ್ತಿ ಮಾದಕ ವಸ್ತುಗಳ ದಾಸನಾಗುವುದನ್ನು ತಡೆಗಟ್ಟಬಹುದಾಗಿದೆ ಎಂದರು.

ರೋಟರಿ ಜಿಲ್ಲಾ ಗೌರ್ವನರ್ ಶ್ರೀಧರ್ ಮಾತನಾಡಿದರು.

ನಗರಸಭಾ ಮೈದಾನದಿಂದ ಬೆಳಗ್ಗೆ ೬ ಗಂಟೆಗೆ ಪ್ರಾರಂಭವಾದ ಮ್ಯಾರಥಾನ್‌ನಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಸುಮಾರು ೩ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕೆಜಿಎಫ್ ರೋಟರಿ ಕ್ಲಬ್ ಅಧ್ಯಕ್ಷರಾದ ಕೆ.ಬಾಬು ಅವರ ನೇತೃತ್ವದಲ್ಲಿ ಮ್ಯಾರಥಾನ್ ಕಾರ‍್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಖಜಾಂಚಿ ಆರ್.ಮಂಜುನಾಥಪ್ಪ, ಮಂಜುನಾಥ್, ಕಾರ್ಯದರ್ಶಿ ಉಮೇಶ್, ಎನ್.ರಾಮಕೃಷ್ಣ, ಎಪಿಎಂಸಿ ನಿರ್ದೇಶಕರು ದಶರಥರೆಡ್ಡಿ, ಗೋಪಿ, ಪ್ರವೀಣ್, ಶ್ರೀನಿವಾಸ್‌ರೆಡ್ಡಿ, ಪೂರ್ವನಿಯೋಜಿತ ರೋಟರಿ ಜಿಲ್ಲಾ ಗೌರ್ನರ್ ಅನಿಲ್‌ಗುಪ್ತ, ರವೀಂದ್ರನಾಥ್, ಸುಧಾಕರ್, ಕಲ್ಲೂಂಡರು ನಾರಾಯಣಸ್ವಾಮಿ, ಸಹಾಯಕ ಗೌವರ್ನರ್ ದೇವರಾಜ್, ವೈದ್ಯರಾದ ಡಾ.ಸುರೇಶ್, ಡಾ.ಹರೀಶ್, ಡಾ.ಸೆಂಥಿಲ್, ಡಾ.ಮುರಳಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ