ಧಾರವಾಡದಲ್ಲಿಂದು ಯುವ ಚಿಂತನಾ ಸಮಾವೇಶ

KannadaprabhaNewsNetwork | Published : Feb 15, 2025 12:33 AM

ಸಾರಾಂಶ

ಪರಿಸರವಾದಿ ಪಂಚಾಕ್ಷರಿ ಹಿರೇಮಠ ಸರ್ವಾಧ್ಯಕ್ಷತೆಯಲ್ಲಿ ಸಮಾವೇಶವು ಸಂಜೆ 4ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗ್ರಾಮವಿಕಾಸ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ನಾಯಕ ಅವರಿಂದ ಚಾಲನೆಗೊಳ್ಳಲಿದೆ.

ಧಾರವಾಡ:

ಇಲ್ಲಿಯ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ಯುವ ಕೃಷಿಕರು, ಯುವ ಬರಹಗಾರರ ಚಿಂತನೆ, ಮಹಿಳಾ ಸಬಲೀಕರಣ, ಸಾಂಸ್ಕೃತಿಕ ಕಲೆಗಳು ಹಾಗೂ ಪರಿಸರದ ಚಿಂತನ-ಮಂಥನ ಹೆಸರಿನಲ್ಲಿ ಫೆ. 15ರಂದು ಇಡೀ ದಿನ "ಯುವಚಿಂತನಾ ಸಮಾವೇಶ " ಹಮ್ಮಿಕೊಂಡಿದೆ.

ಪರಿಸರವಾದಿ ಪಂಚಾಕ್ಷರಿ ಹಿರೇಮಠ ಸರ್ವಾಧ್ಯಕ್ಷತೆಯಲ್ಲಿ ಸಮಾವೇಶವು ಸಂಜೆ 4ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗ್ರಾಮವಿಕಾಸ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ನಾಯಕ ಅವರಿಂದ ಚಾಲನೆಗೊಳ್ಳಲಿದೆ. ಅಧ್ಯಕ್ಷತೆಯನ್ನು ವಿಪ ಸದಸ್ಯ ಎಸ್.ವಿ. ಸಂಕನೂರ ವಹಿಸುವರು. ಸಾಧಕರಿಗೆ ಸನ್ಮಾನ, ಸುಗಮ ಸಂಗೀತ, ಜಾನಪದ ಸಂಗೀತ, ನೃತ್ಯ ಕಾರ್ಯಕ್ರಮಗಳಿವೆ.

ಯುವ ಸಮಾವೇಶದ ಭಾಗವಾಗಿ ಶನಿವಾರ ಬೆಳಗ್ಗೆ 10.30ಕ್ಕೆ ಕೆಇ ಬೋರ್ಡಿನ ಪ್ರಥಮ ದರ್ಜೆ ಕಾಲೇಜು, ಅಂಜುಮನ್ ಸಂಸ್ಥೆಯ ಪಿಯು ಕಾಲೇಜು ಸೇರಿದಂತೆ ನಗರದ ಇತರೆ 11 ಕಾಲೇಜುಗಳಲ್ಲಿ ಏಕಕಾಲದಲ್ಲಿ ಯುವಚಿಂತನೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳು ಪ್ರತ್ಯೇಕವಾಗಿ ಕಾಲೇಜುಗಳಲ್ಲಿ ಯುವಕರಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಪ್ರತಿಷ್ಠಾನ ಅಧ್ಯಕ್ಷ ಎಂ.ಎಸ್‌. ಪರಾಸ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ವಾಧ್ಯಕ್ಷರ ಕುರಿತು:

ತೋಟಗಾರಿಕೆ ಮತ್ತು ಹಸಿರು ಪರಿಸರದ ಬಗ್ಗೆ ಅದರಲ್ಲೂ ಲ್ಯಾಂಡ್‌ಸ್ಕೇಪ್ ಗಾರ್ಡನಿಂಗ್ ಕ್ಷೇತ್ರದಲ್ಲಿ ವಿಶೇಷ ಅನುಭವ ಹೊಂದಿರುವ ಪಂಚಾಕ್ಷರಿ ಹಿರೇಮಠ ಅವರು ಹಳ್ಳಿಗೇರಿ ನೇಚರ್‌ ಫಸ್ಟ್‌ ಇಕೋ ವಿಲೇಜ್‌ ಸಂಸ್ಥಾಪಕರು ಹೌದು. ಅವರ ಪರಿಸರ ಕಾಳಜಿ ಹಾಗೂ ಶಾಶ್ವತ ಜೀವನ ಶೈಲಿಯ ಅಭಿವೃದ್ಧಿಯ ಪ್ರಯತ್ನಗಳು ಯುವ ಸಮುದಾಯಕ್ಕೆ ಸ್ಫೂರ್ತಿದಾಯಕ. ಯುವ ಉದ್ಯಮಿಗಳಿಗೆ ಮಾರ್ಗದರ್ಶನ ಮಾಡುತ್ತಾ ಅವರ ಬದುಕಿಗೆ ಆಶಾದಾಯಕ ಯೋಜನೆ ರೂಪಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಯುವಕರಿಗೆ ಮತ್ತಷ್ಟು ಮಾದರಿಯಾಗಲಿ ಎಂಬ ಉದ್ದೇಶದಿಂದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಕೆಇ ಬೋರ್ಡ್‌:

ಸವದತ್ತಿ ರಸ್ತೆಯ ಕೆಇ ಬೋರ್ಡನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಚಿಂತನೆಯಲ್ಲಿ ಮುಖ್ಯ ಅತಿಥಿಗಳಾಗಿ ಕೆಎಂಎಫ್ ಅಧ್ಯಕ್ಷ ಶಂಕರಪ್ಪ ಮುಗದ, ಎಂಜಿನಿಯರ್‌ ಸಂಘದ ಅಧ್ಯಕ್ಷ ಸುನೀಲ ಬಾಗೇವಾಡಿ, ವೀರಣ್ಣ ವಡ್ಡೀನ, ನಾರಾಯಣ ಭಜಂತ್ರಿ, ಬಸವರಾಜ ಬಂಡಿವಡ್ಡರ, ಗುರು ತಿಗಡಿ, ರಾಮು ಮೂಲಗಿ, ಶಿವಾನಂದ ಕವಳಿ ಆಗಮಿಸುವರು.

ಅಣ್ಣಿಗೇರಿ:ವೈ.ಬಿ. ಅಣ್ಣಿಗೇರಿ ವಿಜ್ಞಾನ ಕಾಲೇಜಿನಲ್ಲಿ ನಡೆಯುವ ಚಿಂತನೆಯಲ್ಲಿ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ ಆಗಮಿಸುವರು. ಉದ್ಘಾಟನೆಯನ್ನು ಬಿಜೆಪಿ ಮುಖಂಡರಾದ ಸವಿತಾ ಅಮರಶೆಟ್ಟಿ ಮಾಡುವರು. ಅಧ್ಯಕ್ಷತೆಯನ್ನು ನಾಗೇಶ ಅಣ್ಣಿಗೇರಿ ವಹಿಸುವರು. ಅತಿಥಿಗಳಾಗಿ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಡಾ. ಬಿ.ಆರ್. ರಾಠೋಡ, ಜಯಶ್ರೀ ಪಾಟೀಲ, ಸಂಧ್ಯಾ ಅಂಬಡಗಟ್ಟಿ, ಡಾ. ಮಹೇಶ ಹೊರಕೇರಿ, ಡಾ. ಶಿವಾನಂದ ಶೆಟ್ಟರ, ಡಾ. ಶಂಭು ಹೆಗಡಾಳ, ಅರುಣ ಶೀಲವಂತ ಆಗಮಿಸುವರು.

ಅಂಜುಮನ್‌ ಕಾಲೇಜು:ಅಂಜುಮನ್ ಸಂಸ್ಥೆಯ ಪಿಯು ಕಾಲೇಜು ಸಭಾಭವನದಲ್ಲಿ ನಡೆಯುವ ಸಮಾವೇಶದಲ್ಲಿ ಶಂಕರ ಹಲಗತ್ತಿ ಉಪಸ್ಥಿತಿಯಲ್ಲಿ ಉದ್ಘಾಟನೆಯನ್ನು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮಾಡುವರು. ಉಪಾಧ್ಯಕ್ಷ ಬಸೀರ ಅಹ್ಮದ ಜಹಗೀರದಾರ ವಹಿಸುವರು. ಅತಿಥಿಗಳಾಗಿ ಬಸವರಾಜ ಮ್ಯಾಗೇರಿ, ಕಬೀರ ನದಾಫ್, ಸತೀಶ ತುರುಮರಿ, ಶರಣಮ್ಮ ಗೋರೆಬಾಳ, ರಾಜಶೇಖರ ಹೊನಪ್ಪನವರ, ಶಿವಶರಣ ಕಲ್ಲಪ್ಪಶೆಟ್ಟರ, ಐ.ಎ. ಮುಲ್ಲಾ, ನಂದೀಶ ಕಾಖಂಡಕಿ, ಎಸ್.ಎಲ್. ಶೇಖರಗೋಳ ಮತ್ತಿತರರು ಭಾಗವಹಿಸುತ್ತಾರೆ.

ಪ್ರಸ್ತುತ ಯುವ ಸಮುದಾಯ ಅಂತರ್ಜಾಲದ ದಾಸರಾಗುತ್ತಿದ್ದು, ಶಿಕ್ಷಣ ಹಾಗೂ ಜ್ಞಾನಕ್ಕೆ ಪೂರಕವಾಗಿ ಮಾತ್ರ ಅದರ ಬಳಕೆಯಾಗಬೇಕು. ಜತೆಗೆ ಯುವ ಸಮುದಾಯ ಹಿರಿಯರನ್ನು ಗೌರವಿಸಿ ಅವರನ್ನು ಮಾರ್ಗದರ್ಶನ ಪಡೆದು ಉತ್ತಮ ಸಮಾಜ ಕಟ್ಟಬೇಕು. ಈ ಹಿನ್ನೆಲೆಯಲ್ಲಿ ಸಮಾವೇಶ ದಾರಿ ತೋರಬೇಕಿದೆ ಎಂದು ಪರಿಸರವಾದಿ ಪಿ.ವಿ. ಹಿರೇಮಠ ಹೇಳಿದರು. ಇಂದಿನ ದಿನಮಾನಗಳಲ್ಲಿ ಸಮರ್ಥ ಯುವ ಸಂಘಟನೆಗಳ ಕೊರತೆ ಸಮಾಜಕ್ಕೆ ಎದ್ದು ಕಾಣುತ್ತಿದೆ. ಆದ್ದರಿಂದ ಯುವ ಚಿಂತನೆ, ಮಹಿಳಾ ಸಬಲೀಕರಣ, ಪರಿಸರ ರಕ್ಷಣೆಯಲ್ಲಿ ಯುವ ಸಮುದಾಯದ ಪಾತ್ರ, ಪರಿಸರಕ್ಕೆ ಪೂರಕವಾಗಿ ಜೀವನ ಮಾಡುವ ಕುರಿತು ಯುವಕರನ್ನು ಒಗ್ಗೂಡಿಸಿ ಅವರಲ್ಲಿ ಜಾಗೃತಿ ಮೂಡಿಸುವುದೇ ಈ ಸಮಾವೇಶದ ಉದ್ದೇಶ ಎಂದು ಯುವ ಸಂಘಟಕ ಮಾರ್ತಾಂಡಪ್ಪ ಕತ್ತಿ ತಿಳಿಸಿದರು.

Share this article