ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಾಲೂಕು ಆಡಳಿತ, ಪಂಚಾಯತ್ ರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಇತರೆ ಇಲಾಖೆಗಳ ಆಶ್ರಯದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಗುರುವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಿತು.ಪ್ರಾಂಶುಪಾಲ ಜಿ.ವಿ. ಶ್ರೀನಿವಾಸ್ ಮಾತನಾಡಿ, ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮತ್ತು ಯುವಕರು ಮುಂದಾಗಬೇಕು. ಕುತೂಹಲಕ್ಕಾಗಿ ಯಾರೊಬ್ಬರೂ ಮಾದಕ ದ್ರವ್ಯ ಸೇವಿಸಬಾರದು. ಜೀವನ ರೂಪಿಸುವಾಗ ಸೂಕ್ತ ಮಾರ್ಗದರ್ಶಕರ ಆಯ್ಕೆ ಅತ್ಯಂತ ಅವಶ್ಯಕ, ಆಧುನಿಕ ಜಗತ್ತಿನ ಸಾಮಾಜಿಕ ಪಿಡುಗುಗಳಿಂದ ಸೂಕ್ತ ಅಂತರ ಕಾಯ್ದುಕೊಂಡಲ್ಲಿ ಸ್ವಸ್ಥಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು. ವ್ಯಸನಗಳಿಗೆ ಬಲಿಯಾದವರು ಶಾರೀರಿಕ, ಮಾನಸಿಕ ನಿಯಂತ್ರಣ ಕಳೆದುಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ವಿದ್ಯಾರ್ಥಿಗಳು, ಯುವ ಪೀಳಿಗೆ ಮಾದಕ ಪದಾರ್ಥಗಳ ಗೀಳು ಅಂಟಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಮಾದಕ ವ್ಯಸನದ ಸುಳಿಗೆ ಸಿಲುಕಿದರೆ, ಸುಲಭದಲ್ಲಿ ಹೊರಬರಲು ಸಾಧ್ಯವಿಲ್ಲ. ವ್ಯಸನಿಗಳಿಂದ ಆತನ ಕುಟುಂಬ ಹಾಗೂ ಸಮಾಜ ಕೂಡ ಸಮಸ್ಯೆ ಎದುರಿಸಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ತಹಸೀಲ್ದಾರ್ ಮಹೇಶ್.ಎಸ್.ಪತ್ರಿ ಮಾತನಾಡಿ, ಭಾರತವು ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಬಹಳಷ್ಟು ಮುಂದುವರಿಯುತ್ತಿದೆ. ವಿದ್ಯಾರ್ಥಿಗಳು ದೇಶದ ಬಹುದೊಡ್ಡ ಶಕ್ತಿ. ದೇಶವನ್ನು ಇನ್ನಷ್ಟು ಬಲಿಷ್ಟಗೊಳಿಸಲು ವಿದ್ಯಾರ್ಥಿಗಳಿಂದ ಸಾಧ್ಯ. ಹೆತ್ತವರು, ಶಿಕ್ಷಕರು ಮಾತ್ರವಲ್ಲದೆ ಸಮಾಜ ಹಾಗೂ ದೇಶ ವಿದ್ಯಾರ್ಥಿಗಳಲ್ಲಿ ನಿರೀಕ್ಷೆ ಹಾಗೂ ಭರವಸೆ ಇರಿಸಿದೆ. ಯುವಶಕ್ತಿ ಗರಿಷ್ಠ ಸಂಖ್ಯೆಯಲ್ಲಿ ಮಾದಕ ವ್ಯಸನ ಮುಕ್ತ ಅಭಿಯಾನಕ್ಕೆ ಕೈ ಜೋಡಿಸಬೇಕು ಎಂದು ತಿಳಿಸಿದರು.ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ. ಲಾವಣ್ಯ ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಮೋಹನ್‌ರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಾಯಕರ್ ಚನ್ನಪ್ಪ, ಸೋಮಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.