ಬೈಕ್‌ ಸಮೇತ ಪ್ರವಾಹದಲ್ಲಿ ಕೊಚ್ಚಿ ಹೋದ ಯುವಕರು ಪಾರು!

KannadaprabhaNewsNetwork |  
Published : Jun 18, 2025, 03:01 AM ISTUpdated : Jun 18, 2025, 03:02 AM IST
ಬೈಕ್ | Kannada Prabha

ಸಾರಾಂಶ

ಸವಣಾಲು ಗ್ರಾಮದ ಹಿತ್ತಿಲಪೇಲ ಕೂಡುಜಾಲು ಸಮೀಪದ ನದಿಯಲ್ಲಿ ಯುವಕರೀರ್ವರು ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ ಸಿನಿಮೀಯ ರೀತಿಯಲ್ಲಿ ಬದುಕಿ ಉಳಿದ ಘಟನೆ ಭಾನುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿಸವಣಾಲು ಗ್ರಾಮದ ಹಿತ್ತಿಲಪೇಲ ಕೂಡುಜಾಲು ಸಮೀಪದ ನದಿಯಲ್ಲಿ ಯುವಕರೀರ್ವರು ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ ಸಿನಿಮೀಯ ರೀತಿಯಲ್ಲಿ ಬದುಕಿ ಉಳಿದ ಘಟನೆ ಭಾನುವಾರ ನಡೆದಿದೆ.ಸವಣಾಲು ಗ್ರಾಮದ ಮಂಜದಬೆಟ್ಟುವಿನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಪ್ರದೇಶ ಸಂಪರ್ಕಿಸುವ ಕೂಡುಜಾಲು ಎಂಬಲ್ಲಿ ಹರಿಯುತ್ತಿರುವ ಹಿತ್ತಿಲಪೇಲ ಪ್ರದೇಶದ ಕೆಳಗಿನ ಪೇಲ ಎಂಬಲ್ಲಿನ ನಿವಾಸಿ ಕರಿಯ ಮಲೆಕುಡಿಯ ಎಂಬವರ ಮಗ ಸತೀಶ್ ಮತ್ತು ಸಹ ಸವಾರ ಸುಳ್ಯೋಡಿ ನಿವಾಸಿ ಸಂಜೀವ ಪೂಜಾರಿ ಎಂಬವರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಈ ನದಿಯನ್ನು ಬೈಕ್ ಸಮೇತ ದಾಟಲು ಯತ್ನಿಸಿದ್ದಾರೆ. ಈ ಸಂದರ್ಭ ನದಿ ನೀರಿನಲ್ಲಿ ಕೊಚ್ಚಿ ಹೋಗಿರುತ್ತಾರೆ. ಅದೃಷ್ಟವಶಾತ್ ಬೈಕ್ ನದಿ ಬದಿಯಲ್ಲಿ ಸಿಲುಕಿದ್ದು , ಯುವಕರಿಬ್ಬರು ಯಾವುದೋ ಬಳ್ಳಿಯ ಸಹಾಯದಿಂದ ಸಿನಿಮೀಯ ರೀತಿಯಲ್ಲಿ ಬದುಕುಳಿದಿದ್ದಾರೆ.ಈ ಪ್ರದೇಶ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿದ್ದು , ಈ ನದಿ ಮಳೆಗಾಲದಲ್ಲಿ ಅಪಾಯಕಾರಿಯಾಗಿ ಹರಿಯುತ್ತದೆ. ಈ ನದಿಗೆ ಸೇತುವೆ ನಿರ್ಮಿಸಲು ವನ್ಯಜೀವಿ ಅರಣ್ಯ ಇಲಾಖೆಯ ಕಾನೂನು ಅಡ್ಡಿ ಪಡಿಸುತ್ತದೆ. ಈ ಕಾರಣಕ್ಕಾಗಿ ಸೇತುವೆ ನಿರ್ಮಾಣ ಅಸಾಧ್ಯವಾಗಿದೆ. ಈ ಪ್ರದೇಶದಲ್ಲಿ ಸುಮಾರು 9 ಕುಟುಂಬಗಳು ವಾಸಿಸುತ್ತಿದ್ದು , ಇಲ್ಲಿ ಸುಮಾರು 60 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಈ ಪ್ರದೇಶಕ್ಕೆ ಸಂವಿಧಾನಬದ್ದ ಮೂಲಭೂತ ಸೌಕರ್ಯಗಳಾದ ವಿದ್ಯುತ್ , ರಸ್ತೆ ಸಂಪರ್ಕವಿಲ್ಲದೆ ಒಂದುವರೆ ಶತಮಾನಗಳೇ ಕಳೆದಿದೆ. ಈ ಪ್ರದೇಶಕ್ಕೆ ಇರುವ ಏಕೈಕ ರಸ್ತೆ ಇದಾಗಿದ್ದು , ಮಳೆಗಾಲದಲ್ಲಿ ಜೀವದ ಹಂಗು ತೊರೆದು ಈ ನದಿಯನ್ನು ದಾಟಿ ಹೋಗುವ ಪರಿಸ್ಥಿತಿ ಈ ಕುಟುಂಬದ್ದಾಗಿದೆ. ಸರ್ಕಾರ ಆದಿವಾಸಿಗಳ ಬಗ್ಗೆ ಒಂದೊಮ್ಮೆ ಮೇಲಿಂದಮೇಲೆ ಸಭೆ ನಡೆಸಿದರೂ ಅಭಿವೃದ್ಧಿ ಕೇವಲ ಮರಿಚೀಕೆಯಾಗಿದೆ. ಸೇತುವೆ ನಿರ್ಮಾಣವಾಗುವ ತನಕ ತಾತ್ಕಾಲಿಕ ಕಾಲುಸಂಕ ನಿರ್ಮಾಣಕ್ಕೆ ಅರಣ್ಯ ಇಲಾಖೆ ಒಪ್ಪಿಗೆ ನೀಡಬೇಕು. ಈ ಹಿಂದೆ ತಾತ್ಕಾಲಿಕ ಕಾಲುಸಂಕ ನಿರ್ಮಾಣದ ಸಂದರ್ಭದಲ್ಲಿ ಕೇಸ್ ಹಾಕಲಾಗಿದೆ ಎಂಬುದು ಸಾರ್ವಜನಿಕರ ಆರೋಪ. ಅರಣ್ಯ ಇಲಾಖೆ ಒಂದೋ ಸೇತುವೆ ನಿರ್ಮಾಣ ಮಾಡಬೇಕು ಅಥವಾ ಕಾಲುಸಂಕ ನಿರ್ಮಾಣ ಮಾಡಲು ಅವಕಾಶ ನೀಡಬೇಕು ಇಲ್ಲದಿದ್ದರೆ ಜನರು ಜೀವನ ಮಾಡುವುದು ಹೇಗೆ ಪ್ರಶ್ನೆಗೆ ಉತ್ತರ ನೀಡಬೇಕು ಎಂಬುದು ಜನರ ಒತ್ತಾಯ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ