ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಗರ್ಭಿಣಿ ಮಹಿಳೆಯರು ಹಾಗೂ ನವಜಾತ ಶಿಶುಗಳ ನಿರಂತರ ಕಾಳಜಿಯನ್ನು ವೈದ್ಯರು ಹಾಗೂ ಸಿಬ್ಬಂದಿ ಮಾಡಿದ್ದಲ್ಲಿ ಮಾತ್ರ ತಾಯಿ ಮರಣ ಪ್ರಮಾಣವನ್ನು ತಡೆಗಟ್ಟಿ, ಶೂನ್ಯಗೊಳಿಸಲು ಸಾಧ್ಯ. ಇದಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾ ಕುಮಾರಿ ಹೇಳಿದರು.ಅವರು ಶುಕ್ರವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಭ್ರೂಣ ಹತ್ಯೆ ಮತ್ತು ಲಿಂಗ ಪತ್ತೆಯಂತಹ ಚಟುವಟಿಕೆಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾಯ್ದೆಯನ್ವಯ ಕ್ರಮ ಕೈಗೊಳ್ಳಬೇಕು. ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಸಮಿತಿಯ ಸದಸ್ಯರು ಅನಿರೀಕ್ಷಿತವಾಗಿ ನಿರಂತರ ಭೇಟಿ ಮಾಡುವುದು, ಪರಿಶೀಲನೆ ಮಾಡಬೇಕು ಎಂದ ಅವರು ಪ್ರಸ್ತುತ ಸಾಲಿನ ಕಳೆದ 5 ತಿಂಗಳಲ್ಲಿ ಲಿಂಗಾನುಪಾತ 1000 ಗಂಡು ಮಕ್ಕಳಿಗೆ 1015 ಹೆಣ್ಣು ಮಕ್ಕಳ ಜನನವಾಗಿದೆ ಎಂದರು.ಕೆ.ಪಿ.ಎಂ.ಇ. ಅಡಿಯಲ್ಲಿ ಅನುಮತಿ ಪಡೆದ ಕ್ಲಿನಿಕ್‌ಗಳು ಹಾಗೂ ಆರೋಗ್ಯ ಸಂಸ್ಥೆಗಳು ವೈದ್ಯಕೀಯ ವೆಚ್ಚದ ದರಪಟ್ಟಿಯನ್ನು ಹಾಗೂ ವೈದ್ಯರ ಮೇಲಿನ ಹಲ್ಲೆ ಕುರಿತು ಜಾರಿಗೆ ತಂದಿರುವ ಕಾನೂನು ಬಗ್ಗೆ ಎದ್ದು ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು ಎಂದ ಅವರು, ವೈದ್ಯಾಧಿಕಾರಿಗಳು ಆಗಿಂದಾಗ್ಗೆ ಅನಿರೀಕ್ಷಿತ ಭೇಟಿಗಳನ್ನು ಮಾಡಬೇಕು ಎಂದು ಸೂಚನೆ ನೀಡಿದರು.ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯಲು ಹೆಚ್ಚು ಜನ ರೋಗಿಗಳು ಬರುತ್ತಿದ್ದಾರೆ. ಎಲ್ಲರಿಗೂ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಹೊಸದಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆಯುಷ್ಮಾನ್ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆಯುವಂತೆ ನಾಮ ನಿರ್ದೇಶನಗೊಳಿಸಲು ಸರಕಾರಕ್ಕೆ ಅನುಮೋದನೆಯನ್ನು ಸಲ್ಲಿಸಬೇಕು ಎಂದು ಹೇಳಿದರು.ಎಚ್‌ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳಿಗೆ ಸರ್ಕಾರದಿಂದ ನೀಡುತ್ತಿರುವ ವಿಶೇಷ ಪಾಲನಾ ಯೋಜನೆಯನ್ನು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ವಸತಿ ಯೋಜನೆಗಳನ್ನು ಸ್ಥಳೀಯ ಸಂಸ್ಥೆಗಳು ಆದ್ಯತೆ ಮೇಲೆ ನೀಡಬೇಕು ಎಂದ ಅವರು, ಅವರುಗಳಿಗೆ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ, ಔಷಧೋಪಚಾರಗಳನ್ನು ಉಚಿತವಾಗಿ ಎ.ಆರ್.ಟಿ ಸೆಂಟರ್‌ಗಳಲ್ಲಿ ನೀಡಿ ಕಾಳಜಿ ವಹಿಸಬೇಕು. ಯುವಜನರಿಗೆ ಏಡ್ಸ್ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದರು.ಸಮಾಜದಲ್ಲಿ ಕ್ಷಯ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಕಾರ್ಯಸನ್ನದ್ಧರಾಗಬೇಕು. ಬಿ.ಸಿ.ಜಿ ಲಸಿಕೆ ಹಾಕಿಸಿಕೊಳ್ಳಲು ಜಿಲ್ಲೆಯಲ್ಲಿ ಒಟ್ಟು 45,857 ನೋಂದಣಿ ಮಾಡಿಸಿದ್ದು, ಬಿ.ಸಿ.ಜಿ ಲಸಿಕೆ ಜಿಲ್ಲೆಗೆ ಸರಬರಾಜು ಆದ ತಕ್ಷಣ, ಲಸಿಕೆ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ. ಗಡಾದ್, ಜಿಲ್ಲಾ ಸರ್ಜನ್ ಡಾ.ಅಶೋಕ್, ನಗರಸಭೆ ಪೌರಾಯುಕ್ತ ರಾಯಪ್ಪ, ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮರಾವ್, ಜಿಲ್ಲಾ ಕುಷ್ಠರೋಗ ನಿವಾರಣಾ ಅಧಿಕಾರಿ ಡಾ. ಲತಾ ನಾಯಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜೋತ್ಸ್ನಾ ಬಿ.ಕೆ., ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.