ಕನ್ನಡಪ್ರಭ ವಾರ್ತೆ ಮೈಸೂರುಸರ್ಕಾರದ ಯೋಜನೆಗಳು ವಿಪಕ್ಷಗಳ ನಿದ್ದೆಗೆಡಿಸಿರುವುದರಿಂದ ಹೊಟ್ಟೆ ಕಿಚ್ಚಿನಿಂದ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್ ಟೀಕಿಸಿದರು.ಜಿಪಂ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಅನುಷ್ಠಾನ ಮತ್ತು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮೇಲ್ವಿಚಾರಣೆ ಸಮಿತಿ ಮೇಲಿದೆ. ಆದರೆ ಇದು ವಿಪಕ್ಷಗಳ ನಿದ್ದೆಗೆಡಿಸಿದ್ದು, ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಆದರೂ ಸರ್ಕಾರ ಸಮಿತಿ ರದ್ದುಪಡಿಸುವುದಿಲ್ಲ. ಗ್ಯಾರಂಟಿ ಯೋಜನೆಯೂ ನಿಲ್ಲುವುದಿಲ್ಲ ಎಂದರು.ಅರ್ಹರು ಈ ಯೋಜನೆಯ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಸಮಿತಿ ರಚಿಸಲಾಗಿದೆ. ಸುಮಾರು 51 ಸಾವಿರ ಕೋಟಿ ಮೊತ್ತದ ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಿದೆ ಎಂದು ಅವರು ಹೇಳಿದರು.ಗ್ಯಾರಂಟಿ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷ, ಸದಸ್ಯರಿಗೆ ಐಷರಾಮಿ ಸೌಲಭ್ಯ ನೀಡಿಲ್ಲ. ನಿಗದಿಪಡಿಸಿರುವ ಗೌರವ ಧನ ನಿರ್ವಹಣೆಗೂ ಸಾಕಾಗುವುದಿಲ್ಲ. ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂಬ ವಿಪಕ್ಷ ನಾಯಕರ ಮಾತಿನಲ್ಲಿ ಸತ್ಯವಿಲ್ಲ. ಜಿಪಂ, ತಾಪಂ ಚುನಾಯಿತ ಪ್ರತಿನಿಧಿಗಳಿಲ್ಲದೇ ಜನರ ಕಷ್ಟ ಕೇಳುವವರು ಇಲ್ಲ. ಗ್ಯಾರಂಟಿ ಸಮಿತಿ ಸದಸ್ಯರು ಯಾವುದೇ ಆಸೆ, ಆಮಿಷ ಇಲ್ಲದೆ ಜನರ ಸಮಸ್ಯೆ ಆಲಿಸುತ್ತಿದ್ದಾರೆ ಎಂದರು.ಕೇಂದ್ರದ ಬಿಜೆಪಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಬಡವರ ಪರವಾದ ಒಂದು ಕಾರ್ಯಕ್ರಮವನ್ನೂ ರೂಪಿಸಿಲ್ಲ. ದೇಶದ ಜನತೆಯಲ್ಲಿ 60 ದಿನಗಳ ಕಾಲಾವಕಾಶ ಕೇಳಿದ ಮೋದಿಯವರು ಏನು ಮಾಡಿದರು? ಗ್ರಾಮ 1 ಕೇಂದ್ರಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ನೇಮಿಸಿಲ್ಲವೇ ಎಂದು ಅವರು ಪ್ರಶ್ನಿಸಿದರು.ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಪ್ರೊ. ಶಿವಕುಮಾರ್, ಚಂದ್ರಶೇಖರ್, ಬಸವಣ್ಣ, ಲತಾ ಇದ್ದರು.