ಎಚ್‌ಡಿಕೆಗೆ ಮಂಡ್ಯದಲ್ಲಿ ಅದ್ಧೂರಿ ಸನ್ಮಾನ, ಮೆರವಣಿಗೆ

KannadaprabhaNewsNetwork | Updated : Jul 15 2024, 04:32 AM IST

ಸಾರಾಂಶ

ಪಾಂಡವ ಕ್ರೀಡಾಂಗಣದಲ್ಲಿ ಭಾನುವಾರ ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅದ್ಧೂರಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರನ್ನು ಪಟ್ಟಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

 ಪಾಂಡವಪುರ :  ಇಲ್ಲಿನ ಪಾಂಡವ ಕ್ರೀಡಾಂಗಣದಲ್ಲಿ ಭಾನುವಾರ ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅದ್ಧೂರಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರನ್ನು ಪಟ್ಟಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.

ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಬೃಹತ್ ಸೇಬಿನ ಹಾರಹಾಕಿ ಬೆಂಬಲಿಗರು ಸ್ವಾಗತಿಸಿದರು. ನಂತರ ತೆರದ ವಾಹನದಲ್ಲಿ ಮೆರವಣಿಗೆಯಲ್ಲಿ ಕುಮಾರಸ್ವಾಮಿ ಅವರನ್ನು ಜಾನಪದ ಕಲಾ ತಂಡಗಳು, ಪೂಜಾ ಕುಣಿತದೊಂದಿಗೆ ವೇದಿಕೆಗೆ ಕರೆತರಲಾಯಿತು. ನಂತರ ಮಂಡ್ಯ ಸಂಸದರು ಆದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶ್ರೀಕೃಷ್ಣನ ವಿಗ್ರಹ ನೀಡಿ ಸನ್ಮಾನಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದವರೆಲ್ಲರಿಗೂ ಬೆಳಗ್ಗೆ 11.30ರಿಂದ ಸಂಜೆವರೆಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 35 ರಿಂದ 40 ಸಾವಿರಕ್ಕೂ ಅಧಿಕ ಮಂದಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆಯ ಜನರಿಂದ ಜೆಡಿಎಸ್‌ಗೆ ಪುನರ್ಜನ್ಮ: ಜಿಲ್ಲೆಯ ಜನ ಜೆಡಿಎಸ್‌ಗೆ ಪುನರ್ಜನ್ಮ ನೀಡುವ ಮೂಲಕ ಈ ಪಕ್ಷದ ಕಥೆ ಮುಗಿದೇ ಹೋಯಿತು ಎಂದುಕೊಂಡಿದ್ದವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. ಅತಿ ಹೆಚ್ಚು ಮತಗಳ ಅಂತರದಿಂದ ಕುಮಾರಸ್ವಾಮಿ ಅವರನ್ನು ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಕೇಂದ್ರ ಸಚಿವರಾಗುವುದಕ್ಕೂ ಜಿಲ್ಲೆಯ ತಂದೆ-ತಾಯಂದಿರೇ ಕಾರಣ. 

ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ಅವರ ಹೃದಯ ಇಲ್ಲಿನ ಜನರು ಮತ್ತು ರೈತರಿಗಾಗಿ ಸದಾ ಮಿಡಿಯುತ್ತಿರುತ್ತದೆ ಎಂದರು.ಕುಮಾರಸ್ವಾಮಿ ಅವರ ಜನತಾದರ್ಶನಕ್ಕೆ ರಾಜ್ಯ ಸರ್ಕಾರ ತಡೆವೊಡ್ಡುವ ಪ್ರಯತ್ನ ಮಾಡಿತು. ಅಧಿಕಾರಿಗಳನ್ನ ಕಳುಹಿಸದೆ ಅಸಡ್ಡೆ ತೋರಿತು. ಮಂಡ್ಯದ ಅಭಿವೃದ್ಧಿ ಹಲವು ವರ್ಷಗಳಿಂದ ಕುಂಠಿತಗೊಂಡಿದೆ. ಅಭಿವೃದ್ಧಿಗೆ ಈಗ ಕುಮಾರಸ್ವಾಮಿ ಅವರು ತೀರ್ಮಾನ ಮಾಡಿದ್ದಾರೆ. ಮಳೆರಾಯ ಆಶೀರ್ವಾದ ಮಾಡಿದ್ದಾನೆ. ಇದು ನಮಗೆ ಶುಭ ಸೂಚನೆ ಎಂದರು.

ಕೈ ಸರ್ಕಾರ ತೆಗೆವ ಕೆಲಸ ಶೀಘ್ರ:  ಕುಮಾರಣ್ಣ ಮಂಡ್ಯ ಜಿಲ್ಲೆಗೆ ದೊಡ್ಡ ಶಕ್ತಿ. ಇನ್ನು ಜೆಡಿಎಸ್-ಬಿಜೆಪಿ ಸೇರಿ ಕಾಂಗ್ರೆಸ್ ಸರ್ಕಾರ ತೆಗೆಯುವ ಕೆಲಸ ಶೀಘ್ರವಾಗಿ ಆಗಲಿದೆ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು. 

ಮುಖ್ಯಮಂತ್ರಿ ತಮ್ಮನ್ನು ತಾವು ಸತ್ಯ ಹರಿಶ್ಚಂದ್ರ ಎಂದು ಹೇಳಿಕೊಳ್ಳುತ್ತಾರೆ. ಹಾಗಿದ್ದರೆ ಮೈಸೂರು ಮುಡಾದ ೧೫ ಸೈಟ್ ಯಾರದ್ದು ಸ್ವಾಮಿ? ನಿಮ್ಮ ಸರ್ಕಾರದ ಹಗರಣಗಳು ಬಹಳಷ್ಟಿದೆ. ಪರಿಶಿಷ್ಟ ಜಾತಿ, ಪಂಗಡದವರ ೧೮೭ ಕೋಟಿ ಹಣವನ್ನು ಲೂಟಿ ಮಾಡಿದ್ದೀರಿ. ಆಗ ಹಣಕಾಸು ಮಂತ್ರಿಯಾಗಿ ಕಣ್ಣು ಮುಚ್ಚಿ ಕೂತಿದ್ದಿರಾ? ಮುಖ್ಯಮಂತ್ರಿಗೆ ನಾಚಿಕೆಯಾಗಬೇಕು ಎಂದರು. ಜತೆಗೆ, ಕೆಲವೇ ದಿನದಲ್ಲಿ ಈ ಸರ್ಕಾರ ಉರುಳಲಿದೆ ಎಂದು ಭವಿಷ್ಯ ನುಡಿದರು.

Share this article