ಹಾಲಿ ಬಿಬಿಎಂಪಿ ವ್ಯಾಪ್ತಿಗೆ 4 ತಿಂಗಳಲ್ಲಿ ಚುನಾವಣೆ: ಚುನಾವಣೆ ಘೋಷಣೆ ಬಳಿಕ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿ ನಿಗದಿ

KannadaprabhaNewsNetwork |  
Published : Jun 19, 2025, 01:19 AM IST
DCM Meeting | Kannada Prabha

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ ನಿಗದಿಗೂ ಮುನ್ನ ಹಾಲಿ ಇರುವ ಬಿಬಿಎಂಪಿ ವ್ಯಾಪ್ತಿಗೆ ಮುಂದಿನ ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿ ನಿಗದಿಗೂ ಮುನ್ನ ಹಾಲಿ ಇರುವ ಬಿಬಿಎಂಪಿ ವ್ಯಾಪ್ತಿಗೆ ಮುಂದಿನ ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಲಾಯಿತು.

ಕುಮಾರ ಪಾರ್ಕ್‌ನಲ್ಲಿನ ಸರ್ಕಾರಿ ನಿವಾಸದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಸಲಾಯಿತು. ಸಭೆಯಲ್ಲಿ ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿ ನಿಗದಿ, 5 ಪಾಲಿಕೆಗಳ ರಚನೆಯ ಜತೆಗೆ ಹಾಲಿ ಇರುವ ಬಿಬಿಎಂಪಿ ವ್ಯಾಪ್ತಿಗೆ ಚುನಾವಣೆ ಘೋಷಿಸುವ ಸಂಬಂಧ ಚರ್ಚೆ ನಡೆಸಲಾಯಿತು. ಈ ವೇಳೆ ಮುಂದಿನ 4 ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 5 ಪಾಲಿಕೆಗಳನ್ನು ರಚಿಸಿ, ಚುನಾವಣೆ ಘೋಷಿಸಿ, ಆನಂತರ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿ ವಿಸ್ತರಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ಮಾಹಿತಿ ನೀಡಿದರು.

ಸಚಿವರಾದ ಕೆ.ಜೆ. ಜಾರ್ಜ್‌, ಕೃಷ್ಣ ಬೈರೇಗೌಡ, ಜಮೀರ್‌ ಅಹಮದ್‌ ಖಾನ್‌, ಬಿ.ಎಸ್. ಸುರೇಶ್‌, ಶಾಸಕರಾದ ಎಂ. ಕೃಷ್ಣಪ್ಪ, ಎಸ್‌.ಟಿ. ಸೋಮಶೇಖರ್‌, ಪ್ರಿಯಕೃಷ್ಣ, ಎ.ಸಿ. ಶ್ರೀನಿವಾಸ್‌, ಶಿವಣ್ಣ, ರಿಜ್ವಾನ್‌ ಅರ್ಷದ್‌ ಸೇರಿದಂತೆ ಬಿಬಿಎಂಪಿ, ಬಿಡಿಎ, ಜಲಮಂಡಳಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

7 ಪಾಲಿಕೆ ರಚನೆ ಚರ್ಚೆ:

ಬಿಬಿಎಂಪಿಗೆ ಗ್ರೇಟರ್‌ ಬೆಂಗಳೂರು ಸ್ವರೂಪ ನೀಡಲಾಗಿದೆ. ಕಾಯ್ದೆಯಂತೆ 7 ಪಾಲಿಕೆಗಳನ್ನು ರಚಿಸಲು ಅವಕಾಶವಿದೆ. ಅದರಂತೆ ಬೆಂಗಳೂರಿನ ಕೇಂದ್ರ ಭಾಗದಲ್ಲಿ ಆಡಳಿತಕ್ಕಾಗಿ 5 ಪಾಲಿಕೆ ಹಾಗೂ ಹೊರಭಾಗಕ್ಕೆ 2 ಪಾಲಿಕೆ ರಚಿಸಬಹುದಾಗಿದೆ. ಅದಕ್ಕೂ ಮುನ್ನ ಬೆಂಗಳೂರಿನ ಕೇಂದ್ರ ಭಾಗದಲ್ಲಿ 5 ಪಾಲಿಕೆ ರಚಿಸಿ ಏಕಕಾಲಕ್ಕೆ ಚುನಾವಣೆ ನಡೆಸಬೇಕು. ಆನಂತರ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಜನಪ್ರತಿನಿಧಿಗಳ ಸಮಿತಿ ರಚಿಸಬೇಕು ಎಂದು ಚರ್ಚೆ ನಡೆಸಲಾಯಿತು.

ಚುನಾವಣೆ ಘೋಷಣೆಗೂ ಮುನ್ನ ರಸ್ತೆ, ನೀರು, ಕಸದ ಸಮಸ್ಯೆಗಳ ನಿವಾರಣೆಗೆ ಒತ್ತು ನೀಡಬೇಕು. ಅಲ್ಲದೆ, ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯ ಮಾಡಲು ಸೂಕ್ತ ಅನುದಾನ ದೊರೆಯುತ್ತಿಲ್ಲ. ಅದನ್ನು ದೊರಕಿಸುವಂತೆ ಶಾಸಕರು ಮನವಿ ಮಾಡಿದರು. ಕೆಲ ಶಾಸಕರು, ರಸ್ತೆ ಅಗಲೀಕರಣ ಸೇರಿದಂತೆ ಮತ್ತಿತರ ಕಾಮಗಾರಿಗಳಿಗೆ ಭೂಸ್ವಾಧೀನ ಮಾಡಿಕೊಳ್ಳಬೇಕಿದ್ದು, ಅದಕ್ಕೆ ಹೆಚ್ಚಿನ ಹಣ ಖರ್ಚು ಮಾಡಬೇಕಿದೆ. ಅದನ್ನು ತಪ್ಪಿಸಲು ಮೇಲ್ಸೇತುವೆ, ಕೆಳಸೇತುವೆ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ನಾಲ್ಕು ತಿಂಗಳಲ್ಲಿ ಪಾಲಿಕೆ ರಚನೆ; ಜನಪ್ರತಿನಿಧಿಗಳೊಂದಿಗಿನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಬೆಂಗಳೂರಿನ ಸಮಸ್ಯೆ ನಿವಾರಣೆಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ನಮ್ಮ ಪಕ್ಷದ ಜನಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಲಾಗಿದೆ. ಪಾಲಿಕೆಗೆ ಯಾವಾಗ ಚುನಾವಣೆ ನಡೆಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸುತ್ತಿದ್ದು, ನಾಲ್ಕು ತಿಂಗಳಲ್ಲಿ ಹೊಸ ಪಾಲಿಕೆಗಳನ್ನು ರಚಿಸಿ ಚುನಾವಣೆ ನಡೆಸಬೇಕಿದೆ. ಆದರೆ, ಎಷ್ಟು ಪಾಲಿಕೆ ರಚಿಸಬೇಕು ಎಂಬುದು ನಿರ್ಧಾರವಾಗಬೇಕಿದೆ. ವಿರೋಧ ಪಕ್ಷದ ಶಾಸಕರೊಂದಿಗೂ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ