ಖಾಲಿ ಉಳಿದ 2 ಸಚಿವ ಸ್ಥಾನಗಳ ಭರ್ತಿ ಹೈಕಮಾಂಡ್‌ಗೆ ಯಕ್ಷಪ್ರಶ್ನೆ

Published : Aug 04, 2026, 09:34 AM IST
DK SHivakumar

ಸಾರಾಂಶ

ಬರೊಬ್ಬರಿ ಎರಡು ತಿಂಗಳ ತಿಕ್ಕಾಟದ ಬಳಿಕ ನಡೆದಿರುವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೊನೇ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಕೈಬಿಟ್ಟಿದ್ದು, ಇದರಿಂದ ಖಾಲಿ ಉಳಿಯಲಿರುವ ಒಂದು ಸ್ಥಾನ ತುಂಬುವುದು ಹೇಗೆ ಎಂಬುದು ಹೈಕಮಾಂಡ್‌ ಅನ್ನು ಯಕ್ಷಪ್ರಶ್ನೆಯಾಗಿ ಕಾಡುವ ಸಾಧ್ಯತೆಯಿದೆ.

 ಬೆಂಗಳೂರು :  ಬರೊಬ್ಬರಿ ಎರಡು ತಿಂಗಳ ತಿಕ್ಕಾಟದ ಬಳಿಕ ನಡೆದಿರುವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೊನೇ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಕೈಬಿಟ್ಟಿದ್ದು, ಇದರಿಂದ ಖಾಲಿ ಉಳಿಯಲಿರುವ ಒಂದು ಸ್ಥಾನ ತುಂಬುವುದು ಹೇಗೆ ಎಂಬುದು ಹೈಕಮಾಂಡ್‌ ಅನ್ನು ಯಕ್ಷಪ್ರಶ್ನೆಯಾಗಿ ಕಾಡುವ ಸಾಧ್ಯತೆಯಿದೆ.

ಸೋಮವಾರ ಮಧ್ಯಾಹ್ನ ಹೈಕಮಾಂಡ್‌ 20 ಮಂದಿ ಸಚಿವರ ಪಟ್ಟಿ ರವಾನಿಸಿದ್ದು, ಈ ಪೈಕಿ ಕುರುಬ ಸಮುದಾಯದ ಪರಿಷತ್‌ ಸದಸ್ಯೆ ಗಾಯತ್ರಿ ಶಾಂತಗೌಡ ಅವರಿಗೆ ಅವಕಾಶ ನೀಡಲಾಗಿತ್ತು. ಇತ್ತೀಚೆಗಷ್ಟೇ ಸುದೀರ್ಘ ನ್ಯಾಯಾಲಯ ಹೋರಾಟದ ನಂತರ ಪರಿಷತ್‌ ಸದಸ್ಯ ಸ್ಥಾನ ಗಳಿಸಿಕೊಂಡ ಗಾಯತ್ರಿ ಅವರಿಗೆ ಸಚಿವ ಸ್ಥಾನ ಅನಿರೀಕ್ಷಿತ ಉಡುಗೊರೆಯಂತೆ ಕಂಡಿತ್ತು.

ಸಂಪುಟ ವಿಸ್ತರಣೆ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಬದಲಿಗೆ ಪಕ್ಷ ಸಂಘಟನೆಗೆ ಅನುಕೂಲವಾಗುವ ಹಿರಿಯ ಮಹಿಳೆಗೆ ಅವಕಾಶ ನೀಡಬೇಕು ಎಂಬ ನಿಲುವಿನ ಪರಿಣಾಮವಾಗಿ ಹುದ್ದೆಗಾಗಿ ಲಾಬಿ, ಪೈಪೋಟಿ ನಡೆಸದಿದ್ದರೂ ಗಾಯತ್ರಿ ಅವರನ್ನು ಹೈಕಮಾಂಡ್‌ ಸಚಿವ ಸ್ಥಾನಕ್ಕೆ ಪರಿಗಣಿಸಿತ್ತು.

ಉ.ಕರ್ನಾಟಕದ ಕುರುಬ ಮತದ ಮೇಲೆ ಕಣ್ಣು:

ಆದರೆ, ಸಿದ್ದರಾಮಯ್ಯ ಅವರು ಕುರುಬರ ಕೋಟಾದ ಉಳಿಕೆ ಒಂದು ಸ್ಥಾನಕ್ಕೆ ಬಸವರಾಜ ಶಿವಣ್ಣನವರ್‌ ಅವರನ್ನು ಸೂಚಿಸಿದ್ದರು. ಮೈಸೂರಿನಿಂದ ತಮ್ಮ ಪುತ್ರ ಯತೀಂದ್ರ, ಬೆಂಗಳೂರು ಭಾಗದಿಂದ ಬೈರತಿ ಸುರೇಶ್ ಸಚಿವರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಪ್ರಬಲ ಕುರುಬ ಮತ ಬ್ಯಾಂಕ್‌ ಇದೆ. ಹೀಗಾಗಿ ಹಾವೇರಿ ಜಿಲ್ಲೆಯ ಬ್ಯಾಡಗಿ ಶಾಸಕ ಶಿವಣ್ಣವರ್‌ಗೆ ಅವಕಾಶ ನೀಡಬೇಕು ಎಂಬುದು ಸಿದ್ದರಾಮಯ್ಯ ಅವರ ನಿಲುವಾಗಿತ್ತು. ಅಲ್ಲದೆ, ತಮ್ಮ ಪುತ್ರ ಯತೀಂದ್ರ ಹಾಗೂ ಗಾಯತ್ರಿ ಸೇರಿ ಇಬ್ಬರೂ ಕುರುಬ ಸಚಿವರು ಪರಿಷತ್‌ನಿಂದ ಬರುವುದು ಜಾತಿ ಸಮೀಕರಣದ ದೃಷ್ಟಿಯಿಂದ ಸರಿಯಲ್ಲ ಎಂಬುದು ಅವರ ಭಾವನೆ ಎನ್ನಲಾಗಿದೆ.

ಸಿದ್ದರಾಮಯ್ಯರಿಂದ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾದ ನಂತರ ಗಾಯತ್ರಿ ಅವರ ಹೆಸರಿಗೆ ತಡೆ ಬಿದ್ದಿದೆ. ಇದೀಗ ಒಂದೇ ಸ್ಥಾನ ಖಾಲಿಯಿದ್ದು ಒಂದೇ ಸ್ಥಾನದಲ್ಲಿ ಕುರುಬರು ಹಾಗೂ ಮಹಿಳೆಯರು ಇಬ್ಬರಿಗೂ ಅವಕಾಶ ಮಾಡಿಕೊಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಸಿದ್ದರಾಮಯ್ಯ ಬಸವರಾಜ ಶಿವಣ್ಣನವರ್ ಅವರಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದ್ದು, ಅವರಿಗೆ ಅವಕಾಶ ನೀಡಿದರೆ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶವೇ ಇಲ್ಲದಂತಾಗಲಿದೆ. ಗಾಯತ್ರಿ ಶಾಂತೇಗೌಡ ಬದಲಿಗೆ ಕನಿಜ್‌ ಫಾತಿಮಾ, ನಯನಾ ಮೋಟಮ್ಮ ಸೇರಿ ಯಾರಿಗೆ ಅವಕಾಶ ನೀಡಿದರೂ ಮೊದಲ ಬಾರಿಗೆ ಶಾಸಕರಾಗಿರುವುದರಿಂದ ಗಾಯತ್ರಿ ಅವರಂತೆ ಪಕ್ಷ ಸಂಘಟನೆಗೆ ಬಲ ತುಂಬುವ ಸಾಧ್ಯತೆಯಿಲ್ಲ ಎಂಬುದು ಹೈಕಮಾಂಡ್ ಭಾವನೆ. ಒಂದು ವೇಳೆ ಅವರಿಗೆ ನೀಡಿದರೂ ಕುರುಬ ಸಮುದಾಯಕ್ಕೆ ಒಂದು ಸ್ಥಾನ ವಂಚಿಸಿದಂತಾಗುತ್ತದೆ.

ಹೀಗಾಗಿ ಕೊನೆಗೆ ಉಳಿದಿರುವ ಒಂದು ಸ್ಥಾನ ತುಂಬುದು ಹೈಕಮಾಂಡ್‌ಗೆ ಸವಾಲಾಗಲಿದೆ.

- ಗಾಯತ್ರಿ ಶಾಂತೇಗೌಡರಿಗೆ ಒಲಿದಿದ್ದ ಸ್ಥಾನ

- ಅಂತಿಮ ಕ್ಷಣದಲ್ಲಿ ಗಾಯತ್ರಿ ಹೆಸರಿಗೆ ತಡೆ

- ಪರಿಷತ್ತಿಂದ ಇಬ್ಬರು ಕುರುಬರಿಗೆ ಸ್ಥಾನ ಬೇಡ

- ಆ ಸ್ಥಾನ ಶಿವಣ್ಣನವರ್‌ಗೆ ನೀಡಲು ಸಿದ್ದು ಪಟ್ಟು

- ಮಹಿಳಾ ಕೋಟಾ ಕೈಬಿಡಬೇಕಾಗುವ ಆತಂಕ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

7 ಮಂದಿಗೆ ಮೊದಲ ಬಾರಿ ಸಚಿವ ಸ್ಥಾನ
ರಾಷ್ಟ್ರಾಧ್ಯಕ್ಷರ ಸ್ವಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿಗೆ ಸೋಲು!