ದೇವೇಗೌಡರ ಪ್ರಧಾನಿ ಹುದ್ದೆ ಹೋಗಿದ್ದಕ್ಕೆ ಅವರ ಈ ಕೆಲಸವೇ ಕಾರಣ : ಸಿದ್ದರಾಮಯ್ಯ

Published : Mar 04, 2026, 03:04 AM IST
CM Siddaramaiah

ಸಾರಾಂಶ

‘ಎಚ್.ಡಿ.ಕುಮಾರಸ್ವಾಮಿ ಅವರು ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್‌ ಕದ್ದಾಲಿಕೆ ಮಾಡಿದ್ದರೆಂದು ಬಿ.ವೈ.ವಿಜಯೇಂದ್ರ ಅವರೇ ಆರೋಪಿಸಿದ್ದರು. ಸಿಬಿಐ ತನಿಖೆಯಲ್ಲಿ ಒಬ್ಬರಲ್ಲ ಏಳು ಸ್ವಾಮೀಜಿಗಳ ಫೋನ್‌ ಕದ್ದಾಲಿಕೆ ಸಾಬೀತಾಗಿತ್ತು.

 ಬೆಂಗಳೂರು :  ‘ಎಚ್.ಡಿ.ಕುಮಾರಸ್ವಾಮಿ ಅವರು ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್‌ ಕದ್ದಾಲಿಕೆ ಮಾಡಿದ್ದರೆಂದು ಬಿ.ವೈ.ವಿಜಯೇಂದ್ರ ಅವರೇ ಆರೋಪಿಸಿದ್ದರು. ಸಿಬಿಐ ತನಿಖೆಯಲ್ಲಿ ಒಬ್ಬರಲ್ಲ ಏಳು ಸ್ವಾಮೀಜಿಗಳ ಫೋನ್‌ ಕದ್ದಾಲಿಕೆ ಸಾಬೀತಾಗಿತ್ತು. ಅವರ ತಂದೆ ದೇವೇಗೌಡರು ಸಹ ಗೂಢಚರ್ಯೆ, ಸಣ್ಣತನದಿಂದಲೇ ಪ್ರಧಾನಿ ಹುದ್ದೆ ಕಳೆದುಕೊಂಡರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಪ್ರಹಾರ ನಡೆಸಿದ್ದಾರೆ.

ತಮ್ಮ ವಿರುದ್ಧ ಫೋನ್ ಕದ್ದಾಲಿಕೆ ಆರೋಪ ಮಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿಯವರು ‘ಡಿ.ಕೆ.ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ‘ತಾ ಕಳ್ಳ ಇತರರ ನಂಬ’ ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ. ತಮ್ಮ ಅವಧಿಯ ಅನುಭವ ಬಲದಿಂದ ಆರೋಪ ಮಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದ್ದಾರೆ.

2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನನ್ನೇ ಕದ್ದಾಲಿಸಿದ್ದಾರೆ ಎಂದು ಈಗಿನ ಅವರ ರಾಜಕೀಯ ಸಂಗಾತಿ ಬಿ.ವೈ ವಿಜಯೇಂದ್ರ ಅವರೇ ಆರೋಪ ಮಾಡಿದ್ದರು.

ಇದರ ಬಗ್ಗೆ ತನಿಖೆ ಮಾಡಿದ್ದ ಸಿಬಿಐ, ಒಬ್ಬ ಸ್ವಾಮೀಜಿಗಳದ್ದಷ್ಟೇ ಅಲ್ಲ, ಬದಲಿಗೆ ಏಳು ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ತಿಳಿಸಿತ್ತು. ನಂಬಿಕೆಗೆ ತಾನು ಅರ್ಹ ಅಲ್ಲ ಎಂದು ಸಾಬೀತು ಮಾಡಿರುವ ಕುಮಾರಸ್ವಾಮಿವರನ್ನು ಬಿಜೆಪಿಯವರು ಸುಮ್ಮನೆ ಬಿಟ್ಟಾರೆಯೇ? ಅವರ ವಿರುದ್ಧವೂ ಗೂಢಚಾರರನ್ನು ಬಿಟ್ಟಿರಬಹುದು. ಇಂತಹ ದುರ್ಬುದ್ಧಿಗಾಗಿಯೇ ರಾಜ್ಯದ ಜನತೆ ಈ ಎರಡೂ ಪಕ್ಷಗಳನ್ನು ತಿರಸ್ಕರಿಸಿರುವುದು ಎನ್ನುವುದು ನೆನಪಿರಲಿ ಎಂದು ತಿರುಗೇಟು ನೀಡಿದ್ದಾರೆ.

ಗೂಢಚರ್ಚೆಯಿಂದ ಗೌಡರ ಪಟ್ಟ ಹೋಯಿತು:

ಕುಮಾರಸ್ವಾಮಿಯವರಿಗೆ ಈ ಗೂಢಚರ್ಯೆಯ ಪಾಠವನ್ನು ಅವರ ಪೂಜ್ಯ ತಂದೆಯವರೇ ಹೇಳಿಕೊಟ್ಟಿರಬಹುದು. ತನ್ನನ್ನು ಪ್ರಧಾನಿ ಮಾಡಿದ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿಯವರ ವಿರುದ್ಧವೇ ಗೂಢಚರ್ಯೆ ಮಾಡಿದ್ದ ಕಾರಣಕ್ಕೆ ಕಾಂಗ್ರೆಸ್ ಪಕ್ಷ ತನ್ನ ಬೆಂಬಲ ಹಿಂತೆಗೆದುಕೊಂಡಿತು. ಈ ಅಪನಂಬಿಕೆ ಮತ್ತು ಸಣ್ಣತನಗಳಿಂದಾಗಿ ಕನ್ನಡಿಗರೊಬ್ಬರು ಇನ್ನಷ್ಟು ಕಾಲ ಪ್ರಧಾನಿಯಾಗುವ ಅವಕಾಶ ತಪ್ಪಿಹೋಯಿತು ಎಂದು ಹೆಸರು ಪ್ರಸ್ತಾಪಿಸದೆ ಎಚ್.ಡಿ. ದೇವೇಗೌಡರ ವಿರುದ್ಧವೂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ನಂಬಿಕೆಗೆ ತಾನು ಅರ್ಹ ಅಲ್ಲ ಎಂದು ಸಾಬೀತು ಮಾಡಿರುವ ಕುಮಾರಸ್ವಾಮಿ ಅವರನ್ನು ಬಿಜೆಪಿಯವರು ಸುಮ್ಮನೆ ಬಿಟ್ಟಾರೆಯೇ? ಅವರ ವಿರುದ್ಧವೂ ಗೂಢಚಾರರನ್ನು ಬಿಟ್ಟಿರಬಹುದು. ಇಂತಹ ದುರ್ಬುದ್ದಿಗಾಗಿಯೇ ರಾಜ್ಯದ ಜನತೆ ಈ ಎರಡೂ ಪಕ್ಷಗಳನ್ನು ತಿರಸ್ಕರಿಸಿರುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಶಾಸಕರಿಗೆ ಊಟ-ತಿಂಡಿ ಮಾಡುವ ಸ್ವಾತಂತ್ರ್ಯವಿದೆ:

ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ಪಕ್ಷದ ಶಿಸ್ತಿನ ಚೌಕಟ್ಟಿನೊಳಗೆ ವೈಯಕ್ತಿಕವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ, ಜೊತೆಯಲ್ಲಿ ಊಟ-ತಿಂಡಿ ಮಾಡುವ ಎಲ್ಲ ಸ್ವಾತಂತ್ರ್ಯ ನಮ್ಮ ಶಾಸಕರಿಗಿದೆ. ಯಾವ ಶಾಸಕರು ಏನೇ ಹೇಳಿದರೂ ನಾನು, ಡಿ.ಕೆ. ಶಿವಕುಮಾರ್‌ ಹೈಕಮಾಂಡ್‌ ಆದೇಶಕ್ಕೆ ತಲೆಬಾಗುವವರು. ಇದೇ ಅಂತಿಮ ಸತ್ಯ ಎಂದಿದ್ದಾರೆ.

ಕಾಂಗ್ರೆಸ್‌ ಅವಧಿ ಪೂರೈಸಲಿದೆ:

ರಾಜ್ಯದ ಪ್ರಜ್ಞಾವಂತ ಮತದಾರರು ಐದು ವರ್ಷಗಳ ಕಾಲ ಸರ್ಕಾರ ನಡೆಸಲು ನಮಗೆ ಜನಾದೇಶ ನೀಡಿದ್ದಾರೆ. ವಿರೋಧ ಪಕ್ಷಗಳ ಎಲ್ಲ ಕುತಂತ್ರ-ಕುಚೇಷ್ಟೆಗಳ ನಡುವೆಯೂ ಈ ಅವಧಿಯನ್ನು ಕಾಂಗ್ರೆಸ್ ಪೂರ್ಣಗೊಳಿಸಲಿದೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯೇ ಇರುತ್ತಾರೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

 ನನ್ನ-ಡಿಕೆಶಿ ಸಂಬಂಧ ಹಾಲು, ಜೇನಿನಂಥದ್ದು

ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ನನ್ನ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಲೇ ಇದ್ದಾರೆ. ಇದರಿಂದ ಅವರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುವುದು ಇಬ್ಬರಿಗೂ ತಿಳಿದಿರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸುಳ್ಳು ಸುದ್ದಿ ಹರಡಿ ನಮ್ಮಿಬ್ಬರ ಸಂಬಂಧ ಕೆಡಿಸಿ ಡಿ.ಕೆ.ಶಿವಕುಮಾರ್ ಅವರನ್ನು ಒಲಿಸಿಕೊಳ್ಳುವ ದುರಾಲೋಚನೆ ಏನಾದರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಇದ್ದರೆ, ಅವರ ಹಗಲು ಕನಸುಗಳಿಗೆ ಶುಭ ಹಾರೈಸುತ್ತೇನೆ.

ಶಿವಕುಮಾರ್ ಒಬ್ಬ ಕಟ್ಟಾ ಕಾಂಗ್ರೆಸಿಗ, ಸುಳ್ಳು ಕೇಸ್‌ಗಳನ್ನು ಹಾಕಿ, ಜೈಲಿಗೆ ಕಳಿಸಿ ಅವರನ್ನು ಮಣಿಸುವ ಎಲ್ಲ ಪ್ರಯತ್ನಗಳನ್ನು ಬಿಜೆಪಿ ಮಾಡಿಯಾಗಿದೆ. ಇದಕ್ಕೆಲ್ಲ ಮಣಿಯದೆ ಅವರು ಪಕ್ಷಕ್ಕೆ ನಿಷ್ಠರಾಗಿ ಉಳಿದವರು ಎನ್ನುವುದು ಈ ಕುತಂತ್ರಿ ನಾಯಕರಿಗೆ ತಿಳಿದಿರಲಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜ್ಯ ರಾಜಕೀಯ ವಿಚಾರ : ಹೊಸ ಬಾಂಬ್ ಸಿಡಿಸಿದ ಎಚ್.ಡಿ.ಕುಮಾರಸ್ವಾಮಿ
ಶ್ರೀಮಂತರು ಗ್ಯಾರಂಟಿ ಸೌಲಭ್ಯ ಕೈಬಿಡಿ: ಎಂಬಿಪಾ - ಮಾತು ತಪ್ಪಿದ ಸರ್ಕಾರ: ಅಶೋಕ್‌ ಕಿಡಿ