ಕೇರಳ ರೀತಿ ಮನೆಯಲ್ಲೇ ರೋಗಿಗಳಿಗೆ ಆರೈಕೆ

Published : Mar 07, 2026, 12:45 PM IST
 doctor

ಸಾರಾಂಶ

‘ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಕೇರಳ ಮಾದರಿಯಲ್ಲಿ ಮನೆಯಲ್ಲೇ ಉಪಶಮನ ಆರೈಕೆ, ಆರೋಗ್ಯ ಇಲಾಖೆಯ ಸೇವೆಗಳಿಗೆ ಸಂಪೂರ್ಣ ಡಿಜಿಟಲ್‌ ಸ್ಪರ್ಶ, ಸರ್ಕಾರಿ ಆಸ್ಪತ್ರೆಗಳಲ್ಲೂ ಯುಪಿಐ ಪಾವತಿಗೆ ಅವಕಾಶ

 ‘ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಕೇರಳ ಮಾದರಿಯಲ್ಲಿ ಮನೆಯಲ್ಲೇ ಉಪಶಮನ ಆರೈಕೆ, ಆರೋಗ್ಯ ಇಲಾಖೆಯ ಸೇವೆಗಳಿಗೆ ಸಂಪೂರ್ಣ ಡಿಜಿಟಲ್‌ ಸ್ಪರ್ಶ, ಸರ್ಕಾರಿ ಆಸ್ಪತ್ರೆಗಳಲ್ಲೂ ಯುಪಿಐ ಪಾವತಿಗೆ ಅವಕಾಶ, ಎಬಿ-ಎಆರ್‌ಕೆ ಚಿಕಿತ್ಸೆಗಳ ದರ ಪರಿಷ್ಕರ, ಆಸ್ಪತ್ರೆಗಳ ಮೂಲಸೌಕರ್ಯಕ್ಕೆ ₹900 ಕೋಟಿ,’ ಹೀಗೆ ಆರೋಗ್ಯ ಇಲಾಖೆಗೆ ಹಲವು ಬಂಪರ್‌ ಘೋಷಣೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಮಾಡಿದ್ದಾರೆ.

ಅಲ್ಲದೆ, ಮಾ.11ರಿಂದ ಮುಷ್ಕರಕ್ಕೆ ಕರೆ ನೀಡಿರುವ ವೈದ್ಯರ ಮನವೊಲಿಕೆಗೂ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ವೃಂದ ಮತ್ತು ನೇಮಕಾತಿ ನಿಯಮ ರಚನೆ ಹಾಗೂ ಖಾಲಿ ಹುದ್ದೆ ಭರ್ತಿ ಬೇಡಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಆರೋಗ್ಯ ಅಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರಂತಹ ಆಡಳಿತಾತ್ಮಕ ಹುದ್ದೆಗಳಿಗೆ ಅಧಿಕಾರಿಗಳ ನೇಮಕಾತಿ ವಸ್ತುನಿಷ್ಠತೆ ತರಲು ಹಂತ-ಹಂತವಾಗಿ ಸಾರ್ವಜನಿಕ ಆರೋಗ್ಯ ವೃಂದ ಅನುಷ್ಠಾನಗೊಳಿಸುವುದಾಗಿ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಜತೆಗೆ, ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಿಸಲಾಗಿದೆ.

ಮಾರಣಾಂತಿಕ ಕಾಯಿಲೆಗೆ ಮನೆ ಆರೈಕೆ:

ಕೇರಳ ರಾಜ್ಯದ ಮಾದರಿಯಲ್ಲಿ ದೀರ್ಘಕಾಲೀನ, ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಗೃಹಾಧಾರಿತ ಆರೈಕೆ ಉಪಶಮನ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಪಾಲಿಯಂ ಇಂಡಿಯಾ ಸಂಸ್ಥೆ ಸಹಯೋಗದ ಮೂಲಕ ಸೇವೆ ನೀಡುವುದಾಗಿ ಪ್ರಕಟಿಸಿದೆ.

ಆರೋಗ್ಯ ಸೇವೆಗೆ ಡಿಜಿಟಲ್ ಸ್ಪರ್ಶ:

ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ‌ ಎಲ್ಲಾ ರೋಗಿಗಳ ನೋಂದಣಿ ಹಾಗೂ ಆರೋಗ್ಯ ದಾಖಲೆಗಳ ನಿರ್ವಹಣೆ ಡಿಜಟಲೀಕರಣ. ಜತೆಗೆ ನಗದು ಪಾವತಿಗೆ ಪರದಾಟ ತಪ್ಪಿಸಲು ಯುಪಿಐ ಆಧಾರಿತ ಶುಲ್ಕ ಪಾವತಿ ವ್ಯವಸ್ಥೆ ಜಾರಿ ಮಾಡಲಾಗುತ್ತದೆ.

ಜತೆಗೆ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಟೆಲಿ-ರೇಡಿಯಾಲಜಿ ಸ್ಕ್ಯಾನಿಂಗ್‌ ಮತ್ತು ಟೆಲಿ-ಲೇಬರ್ ರೂಮ್‌ಗಳ ಅಳವಡಿಕೆ ಮಾಲಾಗುತ್ತದೆ. ʻಸಮಸ್ತʼ ಮೊಬೈಲ್‌ ಆ್ಯಪ್‌ ಮೂಲಕ ಎಲ್ಲಾ ಕ್ಷೇತ್ರ ಸಿಬ್ಬಂದಿ ನಿರ್ವಹಿಸುತ್ತಿರುವ ವಹಿಗಳನ್ನು ಡಿಜಟಲೀಕರಣ ಮಾಡುವುದಾಗಿ ಹೇಳಲಾಗಿದೆ.

ನವಜಾತ ಶಿಶು ಆರೈಕೆಗೆ ₹10 ಕೋಟಿ:ಟೈಪ್‌ -1 ಮಧುಮೇಹದಿಂದ ಬಳಲುತ್ತಿರುವ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ಇನ್ಸುಲಿನ್‌ ಪೆನ್ಸಿಲ್‌ ವಿತರಣೆ, ತಾಯಂದಿರ ಮರಣ ಪ್ರಮಾಣ ಶೂನ್ಯಕ್ಕೆ ತರಲು ಕ್ರಮ, ಸಮಗ್ರ ನವಜಾತ ಶಿಶು ಆರೈಕೆಗೆ ₹10 ಕೋಟಿ ಒದಗಿಸಲಾಗಿದೆ.

ಆಯುಷ್ಮಾನ್‌ ಭಾರತ್ ಪ್ಯಾಕೇಜ್‌ ಪರಿಷ್ಕರಣೆ:

ಆಯುಷ್ಮಾನ್‌ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಹಾಲಿ ಚಾಲ್ತಿಯಲ್ಲಿರುವ ಚಿಕಿತ್ಸಾ ಪ್ಯಾಕೇಜ್‌ ದರಗಳನ್ನು ಪರಿಷ್ಕರಿಸಿ ಪರಿಷ್ಕೃತ ಪ್ಯಾಕೇಜ್ ದರ ಜಾರಿಗೆ ಮಾಡಲಾಗುತ್ತದೆ. ಇದಕ್ಕಾಗಿ ₹400 ಕೋಟಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ.

ತೀವ್ರ ಅಪೌಷ್ಠಿಕತೆ ಹೊಂದಿರುವ ಮಕ್ಕಳಿಗೆ ಪೌಷ್ಠಿಕ ಪುನಃಶ್ಚೇತನ ಕೇಂದ್ರಗಳನ್ನು ಇನ್ನೂ 63 ತಾಲೂಕುಗಳಲ್ಲಿ ಸ್ಥಾಪಿಸಲು ₹6 ಕೋಟಿ ಒದಗಿಸಲಾಗಿದೆ.

ಆಸ್ಪತ್ರೆಗೆ ಇಸ್ಕಾನ್‌ ಊಟ:

ಇಸ್ಕಾನ್‌ ಮೂಲಕ ರೋಗಿಗಳಿಗೆ ಆಹಾರ ಪೂರೈಕೆಯ ಯಶಸ್ವಿ ಮಾದರಿಯನ್ನು ರಾಜ್ಯದ ಆಯ್ದ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ವಿಸ್ತರಣೆ, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಆಯ್ದ ಆಯುಷ್‌ ಆಸ್ಪತ್ರೆಗಳಲ್ಲಿ ಪಂಚಕರ್ಮ ಘಟಕ ಸ್ಥಾಪನೆ ಘೋಷಿಸಲಾಗಿದೆ.

ಜತೆಗೆ ಗಣಿಬಾಧಿತ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರಿನ ಎಲ್ಲಾ ತಾಲೂಕುಗಳಲ್ಲಿ ಕೆಎಂಇಅರ್‌ಸಿ ಅನುದಾನದಲ್ಲಿ ಸಮಗ್ರ ಆರೋಗ್ಯ ಸೇವೆ ವಿಸ್ತರಣೆ ಮಾಡುವುದಾಗಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಕಾರವಾರ, ಯಾದಗಿರಿಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ:

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲೂ ಪ್ರಮುಖ ಯೋಜನೆಗಳನ್ನು ನೀಡಿದ್ದು, ಕಾರವಾರ ಮತ್ತು ಯಾದಗಿರಿಯಲ್ಲಿ ತಲಾ 100 ಕೋಟಿ ರು. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆ ಮತ್ತು ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಐ.ವಿ.ಎಫ್ ಕೇಂದ್ರ ಸ್ಥಾಪನೆ ಘೋಷಿಸಲಾಗಿದೆ.

ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ ಅಜೀಂ ಪ್ರೇಮ್‌ಜಿ ಫೌಂಡೇಶನ್ ವತಿಯಿಂದ 1,000 ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಸಂಕೀರ್ಣ ರೋಗಗಳ ಆರೈಕೆ ಮತ್ತು ಕಸಿ ಆಸ್ಪತ್ರೆಗೆ ಒಡಂಬಡಿಕೆ ಮಾಡಿಕೊಳ್ಳಲಘಿದೆ.

ಮೈಸೂರಿನ 400 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆಯನ್ನು 600 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ₹180 ಕೋಟಿ ಒದಗಿಸಲಾಗಿದೆ.

ವೈದ್ಯಕೀಯ ಕಾಲೇಜು, ಆಸ್ಪತ್ರೆ, ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಗೆ ₹620 ಕೋಟಿ ಹಾಗೂ ಉಪಕರಣ ಖರೀದಿಗೆ ₹220 ಕೋಟಿ ಅನುದಾನ ಮೀಸಲಿಡಲಾಗಿದೆ.

ಕೋಲಾರ, ವಿಜಯಪುರದಲ್ಲಿ ವೈದ್ಯಕೀಯ ಕಾಲೇಜು:

ಜಯಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ವಿಸ್ತೃತ ಯೋಜನಾ ವರದಿ ತಯಾರಿಸಲಾಗುವುದು.

ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತೃತೀಯ ಹಂತದ ಕ್ಯಾನ್ಸರ್ ಆರೈಕೆ ಒದಗಿಸಲು ಮುನಿರಾಬಾದ್-ಟಿ.ಬಿ.ಡ್ಯಾಂನಲ್ಲಿ ಕ್ಯಾನ್ಸರ್‌ ಆಸ್ಪತ್ರೆ, ಬೆಂಗಳೂರಿನ ಗೋವಿಂದರಾಜನಗರದ ಬಿಬಿಎಂಪಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಕೇಂದ್ರ ಸ್ಥಾಪನೆ ಘೋಷಿಸಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆ ಹೆಸರು ಬದಲು : ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯನ್ನು ʻಶಾಂತವೇರಿ ಗೋಪಾಲಗೌಡ ಆಸ್ಪತ್ರೆʼ ಎಂದು ಮರುನಾಮಕರಣ ಮಾಡಲಾಗುವುದು. ಜತೆಗೆ ಬೆಂಗಳೂರು ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ಮತ್ತು ಬಿಡಿಎಸ್‌ ವಿದ್ಯಾರ್ಥಿಗಳ ಬಾಲಕರ ಹಾಸ್ಟೆಲ್ ನಿರ್ಮಾಣಕ್ಕಾಗಿ ₹10 ಕೋಟಿ ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಉತ್ತರ ಕರ್ನಾಟಕ ಆರ್ಥಿಕಾಭಿವೃದ್ಧಿಗೆ ಸಿದ್ದು ಆದ್ಯತೆ
ಮೈಸೂರು ಫಿಲಂ ಸಿಟಿಗೆ ಹೈಟೆಕ್‌ ಸ್ಪರ್ಶ