ಉತ್ತರ ಕರ್ನಾಟಕ ಆರ್ಥಿಕಾಭಿವೃದ್ಧಿಗೆ ಸಿದ್ದು ಆದ್ಯತೆ

Published : Mar 07, 2026, 12:10 PM IST
CM Siddaramaiah

ಸಾರಾಂಶ

ಉತ್ತರ ಕರ್ನಾಟಕದ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಬೆಳಗಾವಿಯಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್‌ ಅಭಿವೃದ್ಧಿ, ಮಂಡ್ಯದಲ್ಲಿ ಅತ್ಯಾಧುನಿಕ ನಿರ್ಮಾಣ ಮತ್ತು ಮೂಲಸೌಕರ್ಯ ಸಲಕರಣೆ ಪರೀಕ್ಷಾ ಘಟಕ ಸ್ಥಾಪನೆ ಯೋಜನೆಗಳನ್ನು ಘೋಷಿಸಲಾಗಿದೆ.

 ಉತ್ತರ ಕರ್ನಾಟಕದ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಬೆಳಗಾವಿಯಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್‌ ಅಭಿವೃದ್ಧಿ, ಮಂಡ್ಯದಲ್ಲಿ ಅತ್ಯಾಧುನಿಕ ನಿರ್ಮಾಣ ಮತ್ತು ಮೂಲಸೌಕರ್ಯ ಸಲಕರಣೆ ಪರೀಕ್ಷಾ ಘಟಕ ಸ್ಥಾಪನೆ, ಮೈಸೂರಿನಲ್ಲಿ ಏರೋಸ್ಪೇಸ್‌ ಪಾರ್ಕ್‌ ಸ್ಥಾಪನೆ ಸೇರಿ ರಾಜ್ಯದ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.

ಮಂಡ್ಯದಲ್ಲಿ ಕೈಗಾರಿಕಾ ಘಟಕ ಸ್ಥಾಪನೆ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಜಟಾಪಟಿಗೆ ಬಜೆಟ್‌ನಲ್ಲಿ ಅಂತ್ಯ ಹಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಟೋಮೇಟಿವ್‌ ರಿಸರ್ಚ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದಿಂದ 500 ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕ ನಿರ್ಮಾಣ ಮತ್ತು ಮೂಲಸೌಕರ್ಯ ಸಲಕರಣೆ ಪರೀಕ್ಷಾ ಘಟಕ ಸ್ಥಾಪಿಸಲಾಗುವುದು ಮತ್ತು ಅದಕ್ಕಾಗಿ ರಾಜ್ಯ ಸರ್ಕಾರ ಮಂಡ್ಯದಲ್ಲಿ 100 ಎಕರೆ ಭೂಮಿ ನೀಡಲಿದೆ ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಅಭಿವೃದ್ಧಿಗೆ ಒತ್ತು:

ಈ ಬಾರಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಆರ್ಥಿಕ ಬೆಳವಣಿಗೆ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಬೆಳಗಾವಿ ಜಿಲ್ಲೆಯಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್‌ ಅಭಿವೃದ್ಧಿಪಡಿಸುವ ಘೋಷಣೆ ಮಾಡಲಾಗಿದೆ.

ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್‌ ಯೋಜನೆ ಅಡಿ 30,000 ಕೋಟಿ ರು. ಹೂಡಿಕೆ ಆಕರ್ಷಿಸಿ, 75 ಸಾವಿರ ಉದ್ಯೋಗ ಸೃಷ್ಟಿಸಲು ಧಾರವಾಡ ಕೈಗಾರಿಕಾ ನೋಡ್‌ಗಾಗಿ 1 ಸಾವಿರ ಎಕರೆ ಭೂಸ್ವಾಧೀನಕ್ಕಾಗಿ 600 ಕೋಟಿ ರು. ಅನುದಾನ ಒದಗಿಸಲಾಗುವುದು ಮತ್ತು 2026-27ನೇ ಸಾಲಿನಲ್ಲಿ 200 ಕೋಟಿ ರು. ಮೀಸಲಿಡಲು ನಿರ್ಧರಿಸಲಾಗಿದೆ.

ಎಂಎಸ್‌ಎಂಇಗಳಿಗೆ ಪ್ರೋತ್ಸಾಹ:

ಮಧ್ಯಮ, ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವುದು ಮತ್ತು ಉದ್ಯೋಗ ಸೃಷ್ಟಿಸಲು ಎಂಎಸ್ಇ-ಸಿಡಿಪಿ ಯೋಜನೆ ಅಡಿ 2026-27ನೇ ಸಾಲಿಗೆ 15 ಕೋಟಿ ರು. ವೆಚ್ಚದಲ್ಲಿ 10 ಕ್ಲಸ್ಟರ್ಸ್‌ಗಳನ್ನು ಸ್ಥಾಪಿಸುವುದು, ಕೆಎಸ್‌ಎಸ್‌ಐಡಿಸಿ ಮೂಲಕ ವಿವಿಧ ಜಿಲ್ಲೆಗಳಲ್ಲಿ ಎಂಟು ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿಪಡಿಸಲು ಕ್ರಮ, ಇದರ ಭಾಗವಾಗಿ 2026-27ನೇ ಸಾಲಿನಲ್ಲಿ ವಿಜಯಪುರದ ಮುದ್ದೇಬಿಹಾಳ ಮತ್ತು ಬಳ್ಳಾರಿಯ ಕಂಪ್ಲಿಯಲ್ಲಿ ಎರಡು ವಸಾಹತುಗಳ ಆರಂಭ ಮತ್ತು 10 ಕೈಗಾರಿಕಾ ವಸಾಹತುಗಳಲ್ಲಿ 1,500 ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನ ಮಾಡಲಾಗಿದೆ.

ನೇಕಾರರು, ಕಬ್ಬು ಬೆಳೆಗಾರರಿಗೆ ನೆರವು:

ನೇಕಾರರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಈಗಾಗಲೇ ನೇಕಾರ ಸಮ್ಮಾನ್‌ ಯೋಜನೆ ಅಡಿ 1.30 ಲಕ್ಷ ನೇಕಾರರಿಗೆ ವಾರ್ಷಿಕ 5 ಸಾವಿರ ರು. ಆರ್ಥಿಕ ನೆರವು, ವಿದ್ಯುತ್‌ ಸಹಾಯಧನ ಸೇರಿ ಹಲವು ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ ನೇಕಾರರ ಏಳಿಗೆಗೆ 225 ಕೋಟಿ ರು. ಅನುದಾನ ಒದಗಿಸಲಾಗಿದೆ. ಅದರಲ್ಲಿ ಸಹಕಾರಿ ನೂಲಿನ ಗಿರಣಿಗಳನ್ನು ಪ್ರೋತ್ಸಾಹಿಸಲು ಪ್ರತಿ ಯುನಿಟ್‌ಗೆ 3 ರು.ನಂತೆ ವಿದ್ಯುತ್‌ ಸಹಾಯಧನ ನೀಡಲಾಗುವುದು. ಹಾಗೆಯೇ, ಕಲಬುರಗಿಯಲ್ಲಿನ ಮೆಗಾ ಜವಳಿ ಪಾರ್ಕ್‌ನಲ್ಲಿ ಮೂಲಸೌಕರ್ಯ ಒದಗಿಸಲು 2026-27ನೇ ಸಾಲಿಗೆ 75 ಕೋಟಿ ರು. ನೀಡಲು ಉದ್ದೇಶಿಸಲಾಗಿದೆ.

ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ ಈಗಾಗಲೇ ಪ್ರತಿ ಮೆಟ್ರಿಕ್‌ ಟನ್‌ ಕಬ್ಬಿಗೆ ಹೆಚ್ಚುವರಿಯಾಗಿ 50 ರು. ಪಾವತಿಸಲು 300 ಕೋಟಿ ರು. ಒದಗಿಸಲಾಗಿದೆ. ಅದರ ಜತೆಗೆ ತೈಲ ಮಾರುಕಟ್ಟೆ ಕಂಪನಿಗಳಿಗೆ ನಿಗದಿ ಮಾಡಲಾಗಿರುವ ಎಥೆನಾಲ್‌ ಖರೀದಿ ಪ್ರಮಾಣದ ರಾಜ್ಯದ ಕೋಟಾ ಹೆಚ್ಚಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಲಾಗಿದೆ.

ಇತರ ಅಭಿವೃದ್ಧಿ ಕ್ರಮಗಳು:

ನೂತನ ಕೈಗಾರಿಕಾ ನೀತಿ 2025-30ರ ಅಡಿ ಅತಿ ಹಿಂದುಳಿದ ಪ್ರದೇಶಗಳಿಗೆ ಶೇ.5ರಷ್ಟು ಹಾಗೂ ಹಿಂದುಳಿದ ಪ್ರದೇಶಗಳಿಗೆ ಶೇ.3ರಷ್ಟು ಹೆಚ್ಚುವರಿ ಪ್ರೋತ್ಸಾಹ ನೀಡುವ ಮೂಲಕ ಬೆಂಗಳೂರಿನಿಂದಾಚೆ ಕೈಗಾರಿಕಾಭಿವೃದ್ಧಿಗೆ ಉತ್ತೇಜಿಸುವ ಗುರಿ ಹೊಂದಲಾಗಿದೆ. ಉನ್ನತ ಮಟ್ಟದ ಜಾಗತಿಕ ಸಮ್ಮೇಳನಗಳು, ಶೃಂಗಸಭೆಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲು ಮೈಸೂರು ಲ್ಯಾಂಪ್‌ವರ್ಕ್ಸ್‌ ಲಿ. ಆವರಣದಲ್ಲಿ ಪಿಪಿಪಿ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ಕೇಂದ್ರ ಅಭಿವೃದ್ಧಿ, ಜೀವಿತಾವಧಿ ಮುಗಿದ ವಾಹನಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಕೆಐಎಡಿಬಿ ಮೂಲಕ ಚಿಕ್ಕಬಳ್ಳಾಪುರದಲ್ಲಿ 100 ಎಕರೆ ವಿಸ್ತೀರ್ಣದಲ್ಲಿ ವಾಹನ ಸ್ಕ್ರ್ಯಾಪಿಂಗ್‌ ಸೌಲಭ್ಯ ಘಟಕ ಸ್ಥಾಪಿಸಲಾಗುತ್ತದೆ.

30 ಕೋಟಿ ವೆಚ್ಚದಲ್ಲಿ ಏರೋಸ್ಪೇಸ್‌ ಫೆಸಿಲಿಟಿ ಕೇಂದ್ರ

ಏರೋಸ್ಪೇಸ್‌ ಕ್ಷೇತ್ರದ ಅಭಿವೃದ್ಧಿಗಾಗಿ ಕೆಐಎಡಿಬಿ ಏರೋಸ್ಪೇಸ್‌ ಪಾರ್ಕ್‌ನಲ್ಲಿ 30 ಕೋಟಿ ರು. ವೆಚ್ಚದಲ್ಲಿ ಏರೋಸ್ಪೇಸ್‌ ಕಾಮನ್‌ ಫೆಸಿಲಿಟಿ ಕೇಂದ್ರ ಸ್ಥಾಪಿಸಲಾಗುವುದು ಮತ್ತು ಅದಕ್ಕಾಗಿ 2026-27ನೇ ಸಾಲಿಗೆ 10 ಕೋಟಿ ರು. ಅನುದಾನ ಘೋಷಿಸಲಾಗಿದೆ. ಹಾಗೆಯೇ, ಮೈಸೂರು ವಿಮಾನನಿಲ್ದಾಣದ ಬಳಿ ಕೆಐಎಡಿಬಿಯಿಂದ ಏರೋಸ್ಪೇಸ್‌ ಪಾರ್ಕ್‌ ಅಭಿವೃದ್ಧಿಗೆ ನಿರ್ಧರಿಸಲಾಗಿದೆ.

ಪಾಯಿಂಟರ್ಸ್‌

- ಬೆಳಗಾವಿಯಲ್ಲಿ 1 ಸಾವಿರ ಎಕ್ರೆ ಪ್ರದೇಶದಲ್ಲಿ ತಲೆಎತ್ತಲಿದೆ ಕೈಗಾರಿಕಾಪಾರ್ಕ್‌

- ಧಾರವಾಡ ಕೈಗಾರಿಕಾ ನೋಡ್‌ಗಾಗಿ ಒಂದು ಸಾವಿರ ಎಕರೆ ಭೂಸ್ವಾಧೀನ

- ಮೈಸೂರು ಲ್ಯಾಂಪ್‌ವರ್ಕ್ಸ್‌ ಆವರಣದಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ

- ಕಲಬುರಗಿ ಮೆಗಾ ಜವಳಿ ಪಾರ್ಕ್‌ ಮೂಲಸೌಕರ್ಯಕ್ಕೆ 75 ಕೋಟಿ ರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮೈಸೂರು ಫಿಲಂ ಸಿಟಿಗೆ ಹೈಟೆಕ್‌ ಸ್ಪರ್ಶ
ಕ್ರೀಡೆ ಉತ್ತೇಜನಕ್ಕೆ ಸಶಕ್ತ ಕರ್ನಾಟಕ ಯೋಜನೆ