ಡಿಕೆಶಿ ಸಿಎಂ ಪಟ್ಟ ಒಕ್ಕಲಿಗರ ಆಶಯ : ನಿರ್ಮಲಾನಂದ ಶ್ರೀ

KannadaprabhaNewsNetwork |  
Published : Nov 27, 2025, 04:15 AM ISTUpdated : Nov 27, 2025, 04:55 AM IST
Nirmalananda seer

ಸಾರಾಂಶ

  ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಒಪ್ಪಂದ ಆಗಿದ್ದರೆ ಅದನ್ನು ಸೂಕ್ತ ರೀತಿಯಲ್ಲಿ ಪಕ್ಷದವರು ಬಗೆಹರಿಸಲಿ’ ಎಂದು ಒಕ್ಕಲಿಗ ಸಮಾಜದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

 ಚನ್ನರಾಯಪಟ್ಟಣ :  ‘ನಮ್ಮ ಮಠದ ಸದ್ಭಕ್ತರಾದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಸಿಎಂ ಮಾಡಬೇಕು ಎಂಬುದು ಸಮುದಾಯದ ಅಭಿಲಾಷೆ ಆಗಿದ್ದು, ಅವರಿಗೆ ತಾವು ಆಶೀರ್ವಾದ ಮಾಡಬೇಕೆಂದು ಸಾವಿರಾರು ಭಕ್ತರು ನಮಗೆ ಕರೆ ಮಾಡುತ್ತಿದ್ದಾರೆ. ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಒಪ್ಪಂದ ಆಗಿದ್ದರೆ ಅದನ್ನು ಸೂಕ್ತ ರೀತಿಯಲ್ಲಿ ಪಕ್ಷದವರು ಬಗೆಹರಿಸಲಿ’ ಎಂದು ಒಕ್ಕಲಿಗ ಸಮಾಜದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

ಸಿಎಂ ಆಗುತ್ತಾರೆಂದು ಅಂದುಕೊಂಡಿದ್ದೇವೆ

ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಹಂಚಿಕೆ ಕುರಿತು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಬುಧವಾರ ಹಾಸನ ಜಿಲ್ಲೆಯ ಕುಂದೂರು ಬಿಜಿಎಸ್ ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದ ಸದ್ಯದ ರಾಜಕೀಯ ಬೆಳವಣಿಗೆಯನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಪ್ರಸ್ತುತ ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಕಾಂಕ್ಷಿಯಾಗಿದ್ದು, ಎರಡೂವರೆ ವರ್ಷ ಆದ ಮೇಲೆ ನಮ್ಮ ಸಮುದಾಯದವರು (ಒಕ್ಕಲಿಗ ಸಮುದಾಯ) ಸಿಎಂ ಆಗುತ್ತಾರೆಂದು ಅಂದುಕೊಂಡಿದ್ದೇವೆ. ಡಿಕೆಶಿ ಶಿಸ್ತಿನ ಸಿಪಾಯಿ ಹಾಗೂ ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ. ಹೀಗಾಗಿ ಅವರು ಸಿಎಂ ಆಗಬೇಕು. ಅವರಿಗೆ ತಾವು ಆಶೀರ್ವಾದ ಮಾಡಬೇಕು ಎಂದು ಸಾವಿರಾರು ಭಕ್ತರು ಮಠಕ್ಕೆ ಕರೆ ಮಾಡಿ ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ. ಆದರೆ, ಶಿವಕುಮಾರ್ ಅವರು ಈ ಬಗ್ಗೆ ನಮ್ಮ ಜೊತೆ ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಮಠಕ್ಕೆ ಬರಬಹುದು’ ಎಂದು ತಿಳಿಸಿದರು.

ಹೈಕಮಾಂಡ್ ಶೀಘ್ರ ಬಿಕ್ಕಟ್ಟು ಬಗೆಹರಿಸಲಿ:

ಎರಡೂವರೆ ವರ್ಷದ ಬಳಿಕ ಡಿಕೆಶಿ ಸಿಎಂ ಆಗುತ್ತಾರೆ ಅಂದುಕೊಂಡಿದ್ದೆವು. ಆದರೆ, ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಸ್ವಲ್ಪ ವ್ಯತ್ಯಾಸವಾದಂತಿದೆ. ಡಿಕೆಶಿ ಅವರಿಗೆ ನಮ್ಮ ಆಶೀರ್ವಾದ ಇದೆ. ಅವರ ಅಧ್ಯಕ್ಷತೆಯಲ್ಲಿ ಚುನಾವಣೆ ಮಾಡಿದ್ದು, ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ರಾಜಕೀಯ ಅಸ್ಥಿರತೆ ಆದ್ರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಹೀಗಾಗಿ ರಾಜ್ಯದ ಹಿತದೃಷ್ಟಿಯಿಂದ ಕಾಂಗ್ರೆಸ್‌ ಹೈಕಮಾಂಡ್ ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕು. ಅಲ್ಲದೆ, ಬಿಕ್ಕಟ್ಟು ಮುಂದುವರೆದರೆ, ಶ್ರೀಮಠದ ಸದ್ಭಕ್ತರಾಗಿರುವ ಶಿವಕುಮಾರ್ ಅವರು ನಮ್ಮೊಂದಿಗೆ ಚರ್ಚಿಸುತ್ತಾರೆ’ ಎಂದು ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದರು.

PREV
Read more Articles on

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ