ಕನ್ನಡಪ್ರಭ ವಾರ್ತೆ ಮಂಡ್ಯ
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಎನ್.ಅಪ್ಪಾಜಿಗೌಡ, ಜಿಪಂ ಮಾಜಿ ಸದಸ್ಯ ಹಾಗೂ ಮಾಜಿ ಶಾಸಕ ಎಂ.ಶ್ರೀನಿವಾಸ್ ಅಳಿಯ ಎಚ್.ಎನ್.ಯೋಗೇಶ್ ಕಾಂಗ್ರೆಸ್ ಸೇರಿದ ಪ್ರಮುಖರಾಗಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವ ಎನ್.ಚಲುವರಾಯಸ್ವಾಮಿ, ಬಿ.ಕೆ.ಹರಿಪ್ರಸಾದ್ ಸಮ್ಮುಖದಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಪಕ್ಷ ಸೇರ್ಪಡೆಯಾದರು.ಮೂರು ಬಾರಿ ಜೆಡಿಎಸ್ ಪಕ್ಷದಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಮರಿತಿಬ್ಬೇಗೌಡ ಅವರು ಜೆಡಿಎಸ್ ವರಿಷ್ಠರ ನಡೆಯಿಂದ ಬೇಸತ್ತು ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಸಮಯದಲ್ಲಿ ತಮ್ಮ ಬೆಂಬಲಿಗ ಕೀಲಾರ ಜಯರಾಂ ಅವರಿಗೆ ಟಿಕೆಟ್ ನೀಡಲಿಲ್ಲವೆಂಬ ಕಾರಣಕ್ಕೆ ವರಿಷ್ಠರ ಬೇಸರಗೊಂಡಿದ್ದರು. ಆ ವೇಳೆ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡರ ಆಪ್ತ ಎಚ್.ಕೆ.ರಾಮು ಅವರಿಗೆ ಟಿಕೆಟ್ ನೀಡಿದ್ದರು. ದಳದೊಳಗಿನ ಒಡಕಿನಿಂದಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಧು ಜಿ.ಮಾದೇಗೌಡರು ವಿಜಯಿಯಾಗಿದ್ದರು. ಆ ಸಮಯದಿಂದಲೇ ಜೆಡಿಎಸ್ ಪಕ್ಷ ಹಾಗೂ ನಾಯಕರೊಂದಿಗಿನ ಒಡನಾಟದಿಂದ ಮರಿತಿಬ್ಬೇಗೌಡರು ದೂರ ಉಳಿದಿದ್ದರಲ್ಲದೇ, ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರದಿದ್ದರೂ ಆ ಪಕ್ಷದ ಸಭೆ-ಸಮಾರಂಭಗಳ ವೇದಿಕೆಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದರು.
ಜಿಪಂ ಮಾಜಿ ಸದಸ್ಯ ಹಾಗೂ ಮಾಜಿ ಶಾಸಕ ಎಂ.ಶ್ರೀನಿವಾಸ್ ಅಳಿಯ ಎಚ್.ಎನ್.ಯೋಗೇಶ್ ಕೂಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಶಾಸಕರಾಗಿದ್ದ ಎಂ.ಶ್ರೀನಿವಾಸ್ ಅವರಿಗೆ ದಳಪತಿಗಳು ಟಿಕೆಟ್ ಕೊಡಲಿಲ್ಲ. ಜೊತೆಗೆ ಶ್ರೀನಿವಾಸ್ ಶಿಫಾರಸು ಮಾಡಿದ್ದ ಅಳಿಯ ಎಚ್.ಎನ್.ಯೋಗೇಶ್ ಅವರಿಗೂ ಟಿಕೆಟ್ ನೀಡದೆ ನಿರಾಕರಿಸಿದ್ದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಗ್ಗಹಳ್ಳಿ ವೆಂಕಟೇಶ್ ಜೆಡಿಎಸ್‌ನಿಂದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದರು. ೨೦೧೮ರ ಚುನಾವಣಾ ಸಮಯದಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕೊತ್ತತ್ತಿ-೨ನೇ ಸರ್ಕಲ್‌ನಲ್ಲಿ ಪ್ರಭಾವಿ ಜೆಡಿಎಸ್ ನಾಯಕರೆಂದೇ ಗುರುತಿಸಿಕೊಂಡಿದ್ದ ತಗ್ಗಹಳ್ಳಿ ವೆಂಕಟೇಶ್, ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಸಚಿವ ಎನ್.ಚಲುವರಾಯಸ್ವಾಮಿ ಅವರು ಚುನಾವಣಾ ಸಮಯದಲ್ಲಿ ಜೆಡಿಎಸ್‌ನ ಪ್ರಮುಖರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದರೊಂದಿಗೆ ಜಿಲ್ಲೆಯೊಳಗೆ ಪಕ್ಷದ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಚುನಾವಣಾ ಸಂಗ್ರಾಮಕ್ಕೆ ಹೊಸ ಅಸ್ತ್ರಗಳನ್ನು ಬತ್ತಳಿಕೆಗೆ ಸೇರಿಸಿಕೊಂಡು ದಳಪತಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.