ಗೊತ್ತಿದ್ದೋ ಗೊತ್ತಿಲ್ಲದೆಯೋ ಎಐ ನಮ್ಮ ಜೀವನದ ಭಾಗವಾಗಿದೆ. ಮೊಬೈಲ್ ಎತ್ತಿಕೊಂಡು ಫೋಟೋ ತೆಗೆದರೆ ಅದು ತನ್ನಿಂತಾನೇ ಎಐ ಮೂಲಕ ಫೋಟೋ ಎಡಿಟ್ ಮಾಡಿ ಕೊಡುತ್ತದೆ. ಫ್ರಿಜ್‌ನಲ್ಲಿ ಏನೇನು ಐಟಂ ಇದೆ ಎಂದು ನೋಡಿಕೊಂಡು ಅದೇ ರೆಸಿಪಿ ಸಜೆಸ್ಟ್ ಮಾಡುತ್ತದೆ. ವಾಶಿಂಗ್ ಮೆಶಿನ್‌ಗೆ ಬಟ್ಟೆ ಹಾಕಿದರೆ ಯಾವ ಮೋಡ್‌ನಲ್ಲಿ ಒಗೆಯಬೇಕು ಎಂದು ಅದೇ ನಿರ್ಧಾರ ಮಾಡುವಲ್ಲಿವರೆಗೆ ಎಐ ನಮ್ಮ ಜೀವನದ ಭಾಗವಾಗಿದೆ. ಇದರ ಜೊತೆಗೆ ಬಹಳಷ್ಟು ಎಐ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ಒಂದೊಂದು ಉತ್ಪನ್ನವೂ ಅಚ್ಚರಿಗೊಳಿಸುವಂತಿದೆ. ಇಂಥಾ ಅಚ್ಚರಿಗೊಳಿಸುವ ಉತ್ಪನ್ನಗಳ ಪಟ್ಟಿ ಇಲ್ಲಿದೆ.
1. ಹ್ಯೂಮೇನ್ ಎಐ ಪಿನ್: ನಮ್ಮ ವೇಗದ ಜಗತ್ತಲ್ಲಿ ಒಮ್ಮೊಮ್ಮೆ ಫೋನ್ ಎತ್ತಿ ನೋಟಿಫಿಕೇಷನ್ ನೋಡುವುದಕ್ಕೂ ಸಮಯ ಇರುವುದಿಲ್ಲ. ಅಂಥವರು ಈ ಹ್ಯೂಮೇನ್ ಎಐ ಪಿನ್ ಅನ್ನು ಧರಿಸಿದರೆ ಸಾಕು. ಏನಾದರೂ ನೋಟಿಫಿಕೇಷನ್ ಬಂದರೆ ಕೈ ಚಾಚಿದರೆ ಸಾಕು ಫೋನ್ ಮಾಹಿತಿ ನಿಮ್ಮ ಕೈಯ ಮೇಲೆ ಕಾಣಿಸಿಕೊಳ್ಳುತ್ತದೆ. ಫೋನ್ ಬಳಸುವ ಅಗತ್ಯವೇ ಇರುವುದಿಲ್ಲ. ಮಲ್ಟಿಟಾಸ್ಕಿಂಗ್ ಮಾಡುವವರಿಗೆ ಇದು ಉತ್ತಮ. ಅಲ್ಲದೇ ಪ್ರತಿಯೊಂದಕ್ಕೂ ಫೋನ್ ಎತ್ತಿಕೊಳ್ಳುವ ಅಗತ್ಯ ಬೀಳುವುದಿಲ್ಲ. ರೈಡಿಂಗ್ ಹೋಗುವವರಿಗಂತೂ ಬಹಳ ಒಳ್ಳೆಯದು.
2. ರಿವೈಂಡ್ ಪೆಂಡೆಂಟ್: ಬಹಳಷ್ಟು ಮಂದಿ ಮೀಟಿಂಗಿನಲ್ಲಿ ಕುಳಿತು ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳುವುದನ್ನು ನೀವು ನೋಡಿರಬಹುದು. ಅನಂತರ ಅದನ್ನು ಮತ್ತೆ ಕೇಳಿ ಬರೆದುಕೊಳ್ಳುವ ಅಗತ್ಯ ಅವರಿಗೆ ಬೀಳುತ್ತಿರುತ್ತದೆ. ಅಂಥವರಿಗೆಂದೇ ಇರುವ ಸಾಧನ ಇದು. ಇದೊಂದು ಕತ್ತಿಗೆ ಧರಿಸಬಹುದಾದ ಪೆಂಡೆಂಟ್‌ನಂತಹ ಸಾಧನ. ಎದುರಿಗೆ ಮಾತನಾಡುವವರ ಮಾತುಗಳನ್ನೆಲ್ಲಾ ಇದು ರೆಕಾರ್ಡ್ ಮಾಡುತ್ತದೆ. ನಂತರ ಆ ಆಡಿಯೋವನ್ನು ಸ್ಮಾರ್ಟ್‌ಫೋನ್‌ಗೆ ಕಳುಹಿಸಿಕೊಳ್ಳಬಹುದು. ಜೊತೆಗೆ ಎಐ ಮೂಲಕ ಪ್ರಮುಖ ಅಂಶಗಳನ್ನು ಸಣ್ಣ ಟಿಪ್ಪಣಿಗಳನ್ನಾಗಿ ಪರಿವರ್ತಿಸಬಹುದು. ಸಮಯದ ಉಳಿತಾಯ ಮತ್ತು ಮತ್ತೊಮ್ಮೆ ಮೀಟಿಂಗ್ ಕೇಳುವ ತಲೆನೋವು ಎರಡೂ ತಪ್ಪುತ್ತದೆ. ಅಲ್ಲದೇ ಜ್ಞಾಪಕ ಶಕ್ತಿ ಸಮಸ್ಯೆ ಇದ್ದು ಎಲ್ಲವನ್ನೂ ಬರೆದುಕೊಳ್ಳುವವರಿಗೆ ಇದು ಬಹಳ ಉಪಕಾರಿ. ಲಿಮಿಟ್‌ಲೆಸ್ ಪೆಂಡೆಂಟ್ ಎನ್ನುವ ಇದೇ ರೀತಿಯ ಮತ್ತೊಂದು ಉತ್ಪನ್ನವೂ ಇದೆ. ಇದನ್ನು ಅಂಗಿಗೆ ಸಿಕ್ಕಿಸಿಕೊಳ್ಳಬಹುದಾಗಿದೆ.
3. ಸಿಂಥೇಸಿಯಾ ಎಐ ವಿಡಿಯೋ ಜನರೇಟರ್: ಬಹಳಷ್ಟು ಮಂದಿಗೆ ವೀಡಿಯೋ ಮಾಡುವ ಆಸೆ ಇರುತ್ತದೆ. ಆದರೆ ವೀಡಿಯೋ ಮಾಡುವಷ್ಟು ತಾಳ್ಮೆ ಮತ್ತು ಅದಕ್ಕೆ ಸಂಬಂಧಿತ ತಂತ್ರಜ್ಞಾನ ಕಲಿಯುವ ಸಾಧ್ಯತೆ ಇರುವುದಿಲ್ಲ. ಅಂಥವರಿಗೆಗಾಗಿಯೇ ಇರುವ ವ್ಯವಸ್ಥೆ ಇದು. ಇಲ್ಲಿ ಟೆಕ್ಷ್ಟ್ ಕೊಟ್ಟರೆ ಎಐ ವೀಡಿಯೋ ಮಾಡಬಹುದು. ಶಿಕ್ಷಕರು, ಸಣ್ಣ ವ್ಯಾಪಾರಿಗಳು ಅಥವಾ ವೈಯಕ್ತಿಕ ಪ್ರಾಜೆಕ್ಟ್‌ಗಳಿಗೆ ತಕ್ಕಂತೆ ಇಲ್ಲಿ ಎಐ ವೀಡಿಯೋಗಳನ್ನು ರಚಿಸಬಹುದು. ವೀಡಿಯೋ ಮೂಲಕ ತಮ್ಮ ವಿಚಾರಗಳನ್ನು ಹೆಚ್ಚು ಅರ್ಥ ಮಾಡಿಸಲು ಬಯಸುವವರಿಗೆ ಈ ವೆಬ್‌ಸೈಟ್ ನೆರವಾಗುತ್ತದೆ.
4. ಸುನೋ ಎಐ ಮ್ಯೂಸಿಕ್ ಜನರೇಟರ್: ಇತ್ತೀಚೆಗೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಅವರು ತನಗೆ ಸಂಗೀತ ಕಂಪೋಸ್ ಮಾಡಲು ಐಡಿಯಾ ಸಿಗದೇ ಇದ್ದಾಗ ನಾನು ಎಐಗೆ ಐಡಿಯಾ ಕೊಡು ಎಂದು ಕೇಳಿದ್ದೂ ಇದೆ ಎಂದು ಬಹಿರಂಗವಾಗಿ ಹೇಳಿದ್ದರು. ಇದು ಅದೇ ರೀತಿಯ ಎಐ ಉತ್ಪನ್ನ. ಇಲ್ಲಿ ಸಂಗೀತ ಜ್ಞಾನ ಇಲ್ಲದಿದ್ದರೂ ಪ್ರಾಂಪ್ಟ್‌ಗಳ ಮೂಲಕ ಹಾಡು ಸೃಷ್ಟಿಸಬಹುದು. ಇದು ನಿಜವಾದ ಸಂಗೀತಕಾರರಿಗೆ ಮಾಡುವ ಅವಮಾನ ಎಂಬ ಮಾತೂ ಇದೆ. ಆದರೆ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಪಾಸಿಟಿವ್, ನೆಗೆಟಿವ್ ಎರಡೂ ಇರುತ್ತದೆ. ಅದನ್ನು ಯಾರಿಗೂ ಅಲ್ಲಗಳೆಯಲಂತೂ ಸಾಧ್ಯವಿಲ್ಲ.
5. ಲವೇಬಲ್ ಎಐ ಆ್ಯಪ್ ಬಿಲ್ಡರ್: ಈಗ ವೆಬ್‌ಸೈಟ್ ರೂಪಿಸುವುದಕ್ಕೆ ಕೋಡಿಂಗ್ ಜ್ಞಾನ ಇರಲೇಬೇಕು ಅಂತೇನಿಲ್ಲ, ಎಐ ಇದೆಯಲ್ಲ. ಲವೇಬಲ್ ಎಐ ಆ್ಯಪ್ ಕೋಡಿಂಗ್ ಜ್ಞಾನ ಇಲ್ಲದವರು ಕೂಡ ವೆಬ್‌ಸೈಟ್ ರೂಪಿಸಲು ಅನುವು ಮಾಡಿಕೊಡುತ್ತದೆ. ಕೆಲಸದ ವೆಬ್‌ಸೈಟ್ ಸಿದ್ಧಗೊಳಿಸುವ ಮನಸ್ಸು ನಿಮಗಿದ್ದರೆ ಇದನ್ನು ಬಳಸಿಕೊಂಡು ನೀವೇ ನಿಮ್ಮ ವೆಬ್‌ಸೈಟ್ ಅನ್ನು ಎಐ ಮೂಲಕ ರಚಿಸಬಹುದು.
6. ನೂರಾ ಚಾಟ್‌ಬಾಟ್ ಫಾರ್ ಆಟಿಸಂ ಸಪೋರ್ಟ್: ಆಟಿಸಂ ಸಮಸ್ಯೆ ಇರುವವರಿಗೆ ನೆರವಾಗಲೆಂದು ವಿನ್ಯಾಸಗೊಂಡಿರುವ ಎಐ ಚಾಟ್‌ಬಾಟ್ ಇದು. ಇದು ಆಟಿಸಂ ಇರುವವರಿಗೆ ಸಾಮಾಜಿಕ ಕೌಶಲ್ಯಗಳನ್ನು ಕಲಿಯಲು ನೆರವಾಗುತ್ತದೆ. ಆ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವಾಸ್ತವ ಜಗತ್ತನ್ನು ಎದುರಿಸಲು ಸೂಕ್ತವಾದ ಸರಳ ತರಬೇತಿಯನ್ನು ನೀಡುತ್ತದೆ. ಇದನ್ನು ಆಟಿಸಂ ಇರುವ ಮಕ್ಕಳ ಪೋಷಕರಿಗೆ ವರದಾನದಂತಿರುವ ಚಾಟ್‌ಬಾಟ್ ಎನ್ನಲಾಗುತ್ತದೆ.
7. ಈವೀ ರಿಂಗ್: ಇದೊಂದು ಧರಿಸಬಹುದಾದ ಸಾಧನವಾಗಿದ್ದು, ಮಹಿಳೆಯರಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಇದನ್ನು ಧರಿಸಿದರೆ ಅವರ ಋತುಚಕ್ರ ಮತ್ತು ಮೂಡ್ ಸ್ವಿಂಗ್‌ಗಳನ್ನು ತಿಳಿಯಬಹುದು ಎಂದು ವೈದ್ಯಕೀಯ ಸಂಶೋಧನೆಗಳು ಸಾಬೀತುಪಡಿಸಿವೆ. ಈ ಕುರಿತು ಇನ್ನೂ ಹೆಚ್ಚು ಅರಿಯುವ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿಯೇ ಒಂದೊಂದು ಕುತೂಹಲಕರ ಎಐ ಉತ್ಪನ್ನವಾಗಿದೆ.
8. ಬೀ ಎಐ ವೇರೇಬಲ್: ಇದು ರಿವೈಂಡ್ ಪೆಂಡೆಂಟ್ ಥರದ ಉತ್ಪನ್ನ. ಆದರೆ ಇದನ್ನು ಕತ್ತಿಗೆ ಹಾಕಿಕೊಳ್ಳಬೇಕಿಲ್ಲ. ಕೈಗೆ ವಾಚ್‌ನಂತೆ ಧರಿಸಿದರೆ ಸಾಕು. ಈ ಉತ್ಪನ್ನವು ಮಾತನ್ನು ಪಠ್ಯ ಮಾಡಬಲ್ಲದು, ಸಾರಾಂಶಗಳನ್ನು ಸಿದ್ಧಮಾಡಿಕೊಡುತ್ತದೆ. ಸ್ಮಾರ್ಟ್‌ವಾಚ್‌ನಂತೆ ಇರುವ ಈ ಉತ್ಪನ್ನ ಸ್ಮರಣ ಶಕ್ತಿ ಸಮಸ್ಯೆ ಇರುವವರಿಗೆ ಬೆಸ್ಟು.
9. ಸ್ಮಾರ್ಟ್ ಇನ್‌ಸೋಲ್: ಸಾಮಾನ್ಯವಾಗಿ ಬ್ಯಾಡ್ಮಿಂಟನ್ ಆಡುವವರು ತಮ್ಮ ಶೂ ಒಳಗೆ ಇನ್‌ಸೋಲ್ ಹಾಕುವುದನ್ನು ನೀವು ನೋಡಿರುತ್ತೀರಿ. ಇದೀಗ ಅಂಥದ್ದೇ ಎಐ ಇನ್‌ಸೋಲ್‌ಗಳು ಬಂದಿವೆ. ಇವುಗಳನ್ನು ಶೂ ಒಳಗೆ ಇಟ್ಟು ನಡೆದಾಡಿದರೆ ನೀವು ಎಷ್ಟು ನಡೆದಿದ್ದೀರಿ, ಹೇಗೆ ನಡೆದಿದ್ದೀರಿ, ಯಾವ ರೀತಿಯ ನಡಿಗೆ ಒಳ್ಳೆಯದು ಎಂಬೆಲ್ಲಾ ಮಾಹಿತಿ ಕೊಡುವಷ್ಟು ಸಶಕ್ತವಾಗಿದೆ. ಇದನ್ನು ಬಳಸಿದರೆ ನಿಮ್ಮ ನಡಿಗೆಯ ರೀತಿಯೇ ಬದಲಾಗಬಹುದು.
10. ಮೈಕ್ರೋಸಾಫ್ಟ್ ಎಐ ಬ್ಯಾಕ್‌ಪ್ಯಾಕ್: ಎಲ್ಲಕ್ಕೂ ಕಳಶಪ್ರಾಯವೆಂಬಂತೆ ಇದೀಗ ಮೈಕ್ರೋಸಾಫ್ಟ್ ಕಂಪನಿ ಎಐ ಬ್ಯಾಕ್‌ಪ್ಯಾಕ್ ಸಿದ್ಧಗೊಳಿಸುತ್ತಿದೆ ಎಂಬ ಸುದ್ದಿ ಬರುತ್ತಿದೆ. ಇದೊಂದು ಡಿಜಿಟಲ್ ಅಸಿಸ್ಟೆಂಟ್‌ನಂತೆ ಕಾರ್ಯ ನಿರ್ವಹಿಸಲಿದೆ ಎಂಬುದು ಸದ್ಯದ ಮಾಹಿತಿ. ಈ ಬ್ಯಾಕ್‌ಪ್ಯಾಕ್ ಧರಿಸಿಕೊಂಡರೆ ಆಯಾ ಕ್ಷಣದ ಮಾಹಿತಿಗಳು ಲಭ್ಯವಿದ್ದು, ಗಾಯಗಳಾಗುವುದನ್ನು ತಪ್ಪಿಸಬಹುದು ಎನ್ನಲಾಗಿದೆ. ಜಿಪಿಎಸ್, ಸೆನ್ಸರ್, ನ್ಯಾವಿಗೇಷನ್, ಕಂಪಾಸ್, ಬಯೋಮೆಟ್ರಿಕ್ ಸೆನ್ಸರ್, ಕ್ಯಾಮೆರಾ ಇತ್ಯಾದಿಗಳನ್ನು ಇದರಲ್ಲಿ ಅಳವಡಿಸುತ್ತಾರಂತೆ. ಆದರೆ ಇದುವರೆಗೆ ಅಧಿಕೃತ ಮಾಹಿತಿ ದೊರೆತಿಲ್ಲ.