-ಡಾ। ಎಂ.ಎ.ಸಲೀಂ, ರಾಜ್ಯ ಪೊಲೀಸ್ ಮಹಾನಿರ್ದೇಶಕ
ಗಿರೀಶ್ ಮಾದೇನಹಳ್ಳಿ
ಬೆಂಗಳೂರು
ಈಗಿನ ಸೋಶಿಯಲ್ ಮೀಡಿಯಾ ಜಮಾನಾದಲ್ಲಿ ಕೈಯಲ್ಲಿ ಮೊಬೈಲ್ ಇದ್ದವರೆಲ್ಲ ತನಿಖಾಧಿಕಾರಿಗಳು, ವರದಿಗಾರರು ಹಾಗೂ ಭಾಷಣಕಾರರೇ ಆಗಿದ್ದಾರೆ. ತಮ್ಮ ವಿರುದ್ಧ ಯಾರಾದರೂ ಮಾತನಾಡಿದರೆ ನಿಂದನೆ ಓತಪ್ರೋತವಾಗಿ ಹರಿಯ ಬಿಡುತ್ತಾರೆ. ಇಂಥ ಕಾಲಘಟ್ಟದಲ್ಲಿ ಈ ಸೋಶಿಯಲ್ ಮೀಡಿಯಾ ಹಾವಳಿಗೆ ಬ್ರೇಕ್ ಹೇಗೆ?, ನಿಂದಕರಿಗೆ ಹಾಗೂ ಶಾಂತಿಭಂಗ ಮಾಡುವವರಿಗೆ ಮೂಗುದಾರ ಹಾಕೋದು ಹೇಗೆ? ಎಂಬೆಲ್ಲ ವಿಚಾರ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು ‘ಕನ್ನಡಪ್ರಭ’ ಜತೆ ಮುಖಾಮುಖಿಯಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ಹೊಸ ತಲೆಮಾರಿನ ಹೊಸ ತಲೆನೋವು ಸೈಬರ್ ಅಪರಾಧ ಅಲ್ಲವೇ?
ಸೈಬರ್ ಅಪರಾಧವು ತಂತ್ರಜ್ಞಾನ ಯುಗದಲ್ಲಿ ಶುರುವಾದ ಹೊಸ ತಲೆಮಾರಿನ ಅಪರಾಧ. ದೇಶದಲ್ಲಿ ಕರ್ನಾಟಕವೇ ಮೊದಲು ಸೈಬರ್ ಅಪರಾಧಗಳ ದುಷ್ಪರಿಣಾಮಗಳನ್ನು ಗ್ರಹಿಸಿತು. 2001ರಲ್ಲೇ ದೇಶದ ಮೊದಲ ಸೈಬರ್ ಅಪರಾಧ ಠಾಣೆ ನಮ್ಮಲ್ಲಿ ಸ್ಥಾಪಿಸಲಾಯಿತು. ಸಿಐಡಿಯಲ್ಲಿ ಇದಕ್ಕಾಗಿ ಪ್ರತ್ಯೇಕ ವಿಭಾಗವನ್ನೂ ತೆರೆಯಲಾಯಿತು.
ತಂತ್ರಜ್ಞಾನ ಬೆಳೆದಂತೆ ಸೈಬರ್ ಅಪರಾಧ ಜಾಸ್ತಿಯಾಗುತ್ತಿದೆ. ಹಾಗಾದರೆ ತಂತ್ರಜ್ಞಾನ ವರವೇ ಅಥವಾ ಶಾಪವೇ?
ಯಾರೋ ಒಂದಿಬ್ಬರು ಕೆಟ್ಟ ದಾರಿ ಹಿಡಿಯುತ್ತಾರೆ. ನೋಡಿ ಟೆಕ್ನಾಲಜಿ ನಮ್ಮ ಲೈಫ್ ಅನ್ನು ಎಷ್ಟು ಸುಲಲಿತ ಮಾಡಿದೆ. ಪ್ರತಿಯೊಂದು ಕೆಲಸಗಳು ತ್ವರಿತಗತಿಯಲ್ಲಿ ಚೆನ್ನಾಗಿ ಮಾಡಲು ಸಾಧ್ಯವಾಗುತ್ತಿದೆ. ಆದ್ದರಿಂದ ಟೆಕ್ನಾಲಜಿ ನಮಗೆ ವರ. ಇದೇ ತಂತ್ರಜ್ಞಾನ ಬಳಸಿ ಅಲ್ಲವೇ ಸೈಬರ್ ಸೇರಿ ಇತರೆ ಅಪರಾಧ ಕೃತ್ಯಗಳ ಪತ್ತೆದಾರಿಕೆ ನಡೆಸುತ್ತಿರುವುದು. ಆದರೆ ಟೆಕ್ನಾಲಜಿ ಬಳಸುವಾಗ ಜಾಗ್ರತೆ ವಹಿಸಬೇಕು. ಅದಕ್ಕೆ ಜಾಗೃತಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ.
ಸೈಬರ್ ಅಪರಾಧಕ್ಕೆ ನಿಜಕ್ಕೂ ಕಡಿವಾಣ ಬೀಳುತ್ತಿದೆಯೇ?:
ಸೈಬರ್ ಅಪರಾಧದ ಬಗ್ಗೆ ನಾಗರಿಕರಲ್ಲಿ ಅರಿವು ಮೂಡುತ್ತಿದೆ. ನಾವು (ಪೊಲೀಸರು) ಶಾಲಾ-ಕಾಲೇಜು ಮಟ್ಟದಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಬಾನುಲಿ, ದೃಶ್ಯ ಮತ್ತು ಮುದ್ರಣ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮ ಹೀಗೆ ಎಲ್ಲ ಮಾದರಿಯ ಸಂವಹನಗಳ ಮೂಲಕ ಸೈಬರ್ ಸುರಕ್ಷತೆ ಬಗ್ಗೆ ಪ್ರಚುರಪಡಿಸಲಾಗುತ್ತಿದೆ. ಇದರ ಫಲವಾಗಿ ಸೈಬರ್ ಕ್ರೈಂ ಪ್ರಮಾಣ ಇಳಿಮುಖವಾಗಿದೆ. ಪ್ರಸಕ್ತ ವರ್ಷ ಶೇ.35 ರಷ್ಟು ಕೇಸ್‌ಗಳು ಕಡಿಮೆ ಆಗುವ ನಿರೀಕ್ಷೆ ಇದೆ.
ಡಿಜಿಟಲ್ ಅರೆಸ್ಟ್, ವಂಚನೆ ಕೃತ್ಯಗಳಿಗೆ ಹಿರಿಯ ನಾಗರಿಕರೇ ಬಲಿಯಾಗುತ್ತಿದ್ದಾರಲ್ಲ?
ಇತ್ತೀಚಿಗೆ ಡಿಜಿಟಲ್ ಅರೆಸ್ಟ್ ಕೃತ್ಯಗಳು ಹೆಚ್ಚಾಗಿದ್ದವು. ಆದರೆ ಈ ಅಪರಾಧದ ಕುರಿತು ಹೆಚ್ಚು ಒತ್ತು ಕೊಟ್ಟು ಜಾಗೃತಿ ಮೂಡಿಸಲಾಯಿತು. ಈಗ ಡಿಜಿಟಲ್ ಅರೆಸ್ಟ್ ಕೃತ್ಯಗಳ ವರದಿ ಬಹಳಷ್ಟು ಕಡಿಮೆಯಾಗಿದೆ. ಅದೇ ರೀತಿ ವಂಚನೆ ಕೃತ್ಯಗಳಿಗೂ ಲಗಾಮು ಬಿದ್ದಿದೆ. 2023ರಲ್ಲಿ 22,253 ಪ್ರಕರಣಗಳಲ್ಲಿ 1,287,50,89,854 ರು. ಮೊತ್ತ ವಂಚನೆಯಾಗಿತ್ತು. ಆದರೆ 2025ರಲ್ಲಿ (ಜುಲೈವರೆಗೆ) 8,620 ಪ್ರಕರಣಗಳು ವರದಿಯಾಗಿದ್ದು, 861,14,02,476 ರು. ಮೋಸವಾಗಿದೆ. ಈ ಅಂಕಿ-ಸಂಖ್ಯೆ ನೋಡಿದಾಗ ದಿನದಿಂದ ದಿನಕ್ಕೆ ವಂಚನೆ ಪ್ರಕರಣಗಳಲ್ಲಿ ಹಣ ಕಳೆದುಕೊಳ್ಳುವವರ ಸಂಖ್ಯೆ ಇಳಿಕೆ ಕಂಡಿದೆ.
ಸೈಬರ್ ಅಪರಾಧ ತಡೆಗೆ ರಾಜ್ಯ ಪೊಲೀಸರ ಕ್ರಮವೇನು?
ಆನ್‌ಲೈನ್ ದೂರು ನೋಂದಣಿ ವ್ಯವಸ್ಥೆ, ರಾಜ್ಯದಲ್ಲಿ ಡಿಜಿಪಿ ಸೈಬರ್ ಕಮಾಂಡ್ ಹುದ್ದೆ ಸೃಜನೆ, ಸೈಬರ್ ಕ್ರೈಂ ತನಿಖೆಗೆ 45 ಠಾಣೆಗಳ ಸ್ಥಾಪನೆ, ಆ ಠಾಣೆಗಳಿಗೆ ಡಿವೈಎಸ್ಪಿ ದರ್ಜೆ ಅಧಿಕಾರಿಯನ್ನು ಠಾಣಾಧಿಕಾರಿಗಳಾಗಿ ನೇಮಕ ಹೀಗೆ ಕೆಲವು ಕ್ರಮ ಕೈಗೊಳ್ಳಲಾಗಿದೆ. ಸಿಐಡಿಯಲ್ಲಿ ಸೈಬರ್ ಕ್ರೈಂ ವಿಭಾಗವು ಸೈಬರ್ ಅಪರಾಧ ತನಿಖೆಗೆ ರಾಜ್ಯದ ಕೇಂದ್ರ ಕಚೇರಿ ಆಗಿದೆ. ಡಿಜಿಟಲ್ ಫೋರೆನ್ಸಿಕ್ ಪ್ರಯೋಗಾಲಯಗಳನ್ನು ಸುಧಾರಿಸಲಾಗಿದೆ.
ಸೈಬರ್ ಅಪರಾಧದ ಬಗ್ಗೆ ಎಫ್‌ಐಆರ್ ವರದಿ ಆಗುತ್ತೆ. ಆದರೆ ತನಿಖೆ ಇಲ್ಲ ಅಂತಾರೆ?
ಸೈಬರ್ ಕ್ರೈಂಗಳ ತನಿಖೆ ಚುರುಕಾಗಿದೆ. ಸಿಐಡಿ ಸೈಬರ್ ವಿಭಾಗವು ಶಿಕ್ಷೆ ಪ್ರಮಾಣದಲ್ಲಿ ಶೇ.70 ರಷ್ಟು ಸಾಧನೆ ಮಾಡಿದೆ. ತ್ವರಿತವಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗುತ್ತಿದೆ. ಬಹಳಷ್ಟು ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿವೆ. ತನಿಖೆ ಗುಣಮಟ್ಟದಿಂದ ಕೂಡಿದೆ. ಇದರಲ್ಲಿ ಎರಡು ಮಾತಿಲ್ಲ.
ರಿಕವರಿ ರೇಟ್ (ಹಣ ಜಪ್ತಿ) ಹಾಗೂ ಕನ್‌ವಿಕ್ಷನ್ ರೇಟ್ ಭಾರೀ ಕಡಿಮೆ ಇದೆಯಲ್ಲ?
ನೋಡಿ ಹೊಸ ವಿಧಾನದ ಕೃತ್ಯಗಳ ಬಗ್ಗೆ ಹೊಸದಾಗಿ ತನಿಖೆ ನಡೆದಿದೆ. ನ್ಯಾಯಾಲಯದಲ್ಲಿ ಪ್ರಕರಣಗಳ ವಿಲೇವಾರಿಗೆ ಸಮಯ ಬೇಕಿದೆ. ಕೆಲ ಪ್ರಕರಣಗಳಲ್ಲಿ ಆರೋಪ ಪಟ್ಟಿ ಸಲ್ಲಿಕೆ ಹಂತದಲ್ಲಿವೆ. ಹಾಗಾಗಿ ಶಿಕ್ಷೆ ಹಾಗೂ ರಿಕವರಿ ಪ್ರಮಾಣ ಸಹ ಹೆಚ್ಚಾಗುತ್ತದೆ.
ಕೇಸ್ ಇರಲಿ ಪೊಲೀಸರು ದೂರೇ ತೆಗೆದುಕೊಳ್ಳುವುದಿಲ್ಲವಲ್ಲ?
ಸೈಬರ್ ಅಪರಾಧಗಳಿಗೆ ಸಂಬಂಧಿಸಿ ಕೇವಲ ಸೈಬರ್ ಠಾಣೆಗಳು ಮಾತ್ರವಲ್ಲ, ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳಲ್ಲಿ ಸಹ ದೂರು ಸ್ವೀಕರಿಸುವಂತೆ ಸೂಚಿಸಲಾಗಿದೆ. ಸ್ಥಳೀಯ ಠಾಣೆಗಳಲ್ಲೇ ಎಫ್‌ಐಆರ್ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ 3 ಕೋಟಿ ರು.ಗೆ ಮಿಗಿಲಾದ ವಂಚನೆ ಪ್ರಕರಣಗಳು ಮಾತ್ರ ಸಿಐಡಿಗೆ ವರ್ಗಾವಣೆಯಾಗುತ್ತವೆ ಅಷ್ಟೆ.
ಪೊಲೀಸರಿಗೆ ಸೈಬರ್ ಅಪರಾಧದ ಬಗ್ಗೆ ಸರಿಯಾದ ಜ್ಞಾನವೇ ಇಲ್ಲ ಅಂತಾರಲ್ವಾ?
ಹೊಸ ಬಗೆಯ ಅಪರಾಧಗಳು ವರದಿಯಾದಾಗ ತಕ್ಷಣವೇ ಮಾಹಿತಿ ಇರುವುದಿಲ್ಲ. ಆ ಬಗ್ಗೆ ಅರಿತುಕೊಂಡು ಚಾಲ್ತಿಯಲ್ಲಿರುವ ಕಾನೂನು ಕಾಯ್ದೆ ಬಳಸಿ ತನಿಖೆ ನಡೆಸಲು ಸಹಜವಾಗಿ ಸಮಯ ತೆಗೆದುಕೊಳ್ಳುತ್ತದೆ. ಈಗ ಪೊಲೀಸರಿಗೆ ಸೈಬರ್ ಬಗ್ಗೆ ನಾಲೆಡ್ಜೇ ಇಲ್ಲ ಅನ್ನುವುದು ತಪ್ಪು. ನುರಿತ ತಜ್ಞರು ನಮ್ಮಲ್ಲಿದ್ದಾರೆ.
ಪೊಲೀಸರಿಗೆ ಸೈಬರ್ ಪತ್ತೆದಾರಿಕೆ ತರಬೇತಿ ಕೊಟ್ಟಿದ್ದೀರಾ?
ಸಿಐಡಿ ಸೈಬರ್ ಅಪರಾಧ ವಿಭಾಗದಲ್ಲಿ ಪೊಲೀಸರಿಗೆ ಸೈಬರ್ ತನಿಖೆ ಹಾಗೂ ಸುರಕ್ಷತೆ ಬಗ್ಗೆ ನಿರಂತರವಾಗಿ ತರಬೇತಿ ನಡೆಸಲಾಗುತ್ತಿದೆ. ಎನ್ಐಎ ಅಧಿಕಾರಿಗಳಿಗೂ ಸಿಐಡಿಯಲ್ಲಿ ತರಬೇತಿ ನೀಡಲಾಗಿದೆ. ಹಾಗಾಗಿ ನಮ್ಮ ತರಬೇತಿ ಅತ್ಯುತ್ತಮವಾಗಿದೆ. ಪ್ರತೀಠಾಣೆಯ ಇಬ್ಬರು ಪೊಲೀಸರಿಗೆ ಸೈಬರ್ ಅಪರಾಧ ತನಿಖೆ ಬಗ್ಗೆ ತರಬೇತಿ ನೀಡಿ ಸಜ್ಜುಗೊಳಿಸಿದ್ದೇವೆ.
ಟ್ರೈನಿಂಗ್ ಕೊಡ್ತೀರಿ, ಆದ್ರೆ ತರಬೇತಿ ಪಡೆದವರಿಗೆ ಬೇರೆ ಕೆಲಸ ಕೊಡ್ತಾರೆ?
ಇಲ್ಲ.. ಇಲ್ಲ... ಸೈಬರ್ ಠಾಣೆಗಳ ಪೊಲೀಸರಿಗೆ ಸೈಬರ್ ಬಗ್ಗೆ ಮಾತ್ರವಷ್ಟೇ ಕೆಲಸ ಇರುತ್ತದೆ. ಅನ್ಯ ಕೆಲಸಗಳಿಗೆ ಅವರನ್ನು ಬಳಸುವುದಿಲ್ಲ. ಆದರೆ ಸೈಬರ್ ಅಪರಾಧ ತನಿಖೆಗೆ ಸಮಯ ತೆಗೆದುಕೊಳ್ಳುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಅಂಕೆ ಇಲ್ಲದೆ ವರ್ತಿಸುವವರಿಗೆ ಲಗಾಮು ಬೀಳುತ್ತಾ?
ಖಂಡಿತವಾಗಿಯೂ ಬೀಳುತ್ತೆ. ಸಮಾಜದ ಶಾಂತಿ ಕದಡಿದರೆ ಸಹಿಸುವುದಿಲ್ಲ. ಪ್ರಸುತ್ತ ಚಾಲ್ತಿಯಲ್ಲಿರುವ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್‌ಎಸ್ ಕಾಯ್ದೆ ಬಳಸಿಕೊಂಡು ಪ್ರಕರಣ ದಾಖಲಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮ ದುರ್ಬಳಕೆ ನಿಯಂತ್ರಣಕ್ಕೆ ಹೊಸ ಕಾಯ್ದೆ ರೂಪುರೇಷೆ ಸಿದ್ಧಗೊಳ್ಳುತ್ತಿದೆ. ಶೀಘ್ರದಲ್ಲೇ ಹೊಸ ಕಾಯ್ದೆ ಜಾರಿಗೆ ಬರಲಿದೆ.
ಇನ್ನು ಯೂಟ್ಯೂಬ್, ಸೋಷಿಯಲ್ ಮೀಡಿಯಾದಲ್ಲಿ ಕೆಲವರ ಹಾವಳಿ ತಡೆ ಸಾಧ್ಯವೇ?
ಸಾಮಾಜಿಕ ಮಾಧ್ಯಮಗಳಲ್ಲಿನ ವಿದ್ಯಮಾನಗಳ ಬಗ್ಗೆ ನಿರ್ಲಕ್ಷ್ಯತನ ತೋರಿಲ್ಲ. ತೋರಿಸುವುದೂ ಇಲ್ಲ. ಫೇಕ್ ಆ್ಯಂಡ್ ಹೇಟ್ ಸುದ್ದಿಗಳನ್ನು ಹರಡುವವರ ಮೇಲೆ ನಿಗಾವಹಿಸಲಾಗಿದೆ. ಪ್ರತಿ ಠಾಣಾ ಮಟ್ಟದಲ್ಲಿ ಸೋಶಿಯಲ್ ಮೀಡಿಯಾ ಸೆಲ್‌ಗಳು ಆ್ಯಕ್ಟಿವ್ ಆಗಿವೆ. ಸಮಾಜದ ಸ್ವಾಸ್ಥ್ಯ ಹಾಳುಗೆಡಹುವ ದುಷ್ಕರ್ಮಿಗಳ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ.
ಆದ್ರೂ ಕೆಲ ಯೂಟ್ಯೂಬರ್ಸ್ ಉಡಾಫೆ ವಿಪರೀತವಾಗಿದೆಯಲ್ಲ?
ಸಮಾಜದಲ್ಲಿ ಶಾಂತಿ ಭಂಗ ಹಾಗೂ ಸಮುದಾಯಗಳ ನಡುವೆ ಸಾಮರಸ್ಯಕ್ಕೆ ಧಕ್ಕೆ ತರುವವರ ಮೇಲೆ ಪೊಲೀಸರೇ ಸುಮೋಟೋ ಕೇಸ್ ದಾಖಲಿಸುತ್ತಿದ್ದಾರೆ. ಕಳೆದ ವರ್ಷ ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಸಂಬಂಧ 600 ಪ್ರಕರಣಗಳು ದಾಖಲಾಗಿವೆ. ಬಹುತೇಕ ಸುಮೋಟೋ ಕೇಸ್‌ಗಳು. ಹೀಗಾಗಿ ಸುಳ್ಳು ಸುದ್ದಿ ಹರಡುವವರು ಎಚ್ಚರಿಕೆಯಿಂದ ಇರಬೇಕು.
ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರ ಬಾಯಿಗಳಿಗೆ ನಿಯಂತ್ರಣ ಎನ್ನುವುದೇ ಇಲ್ಲವಲ್ಲ?
ಯಾರೇ ಆಗಲಿ ಯಾರ ವಿರುದ್ಧವೂ ನಿಂದನೆ ಹಾಗೂ ಅವಾಚ್ಯ ಶಬ್ಧಗಳ ಬಳಕೆ ತಪ್ಪು. ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸುವು ಸರಿಯಲ್ಲ. ಈ ರೀತಿಯ ಕೃತ್ಯಗಳ ಬಗ್ಗೆ ಯಾರೇ ದೂರು ನೀಡಿದರೂ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ರಿಯಾಯಿತಿ ನೀಡದೆ ಕಾನೂನು ಕ್ರಮ ಜರಗಿಸುತ್ತೇವೆ.
ಮುಖ್ಯಮಂತ್ರಿ, ಗೃಹ ಸಚಿವ ಹೀಗೆ ಯಾರನ್ನೂ ಬೇಕಾದರು ನಿಂದಿಸಬಹುದೇ?
ನಿಂದನೆಗೆ ಎಲ್ಲಿ ಅವಕಾಶವಿದೆ. ಯಾರ ಬಗ್ಗೆಯೂ ಹಗುರ ಮಾತುಗಳು ಶೋಭೆ ತರಲ್ಲ. ಅದು ಕಾನೂನು ಪ್ರಕಾರವೂ ತಪ್ಪು.
ನಿಂದಕರ ವಿರುದ್ಧ ಸುಮೋಟೋ ಕೇಸ್ ಯಾಕೆ ಹಾಕಲ್ಲ?
ಈ ರೀತಿಯ ಕೃತ್ಯಗಳಲ್ಲಿ ಸುಮೋಟೋ ಕೇಸ್ ಬರಲ್ಲ. ನಿಂದನೆಗೊಳಗಾದ ಸಂತ್ರಸ್ತರು ದೂರು ಕೊಡಬೇಕು. ಅವಾಚ್ಯ ಪದಗಳಿಂದ ನಿಂದನೆ ಬಗ್ಗೆ ಯಾರೇ ದೂರೂ ಕೊಟ್ಟರೂ ಎಫ್‌ಐಆರ್ ದಾಖಲಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿದೆ.
ಬರೀ ವಿಐಪಿಗಳು, ಸಿನಿಮಾ ಸ್ಟಾರ್‌ಗಳ ಕೇಸ್‌ಗಳಲ್ಲಷ್ಟೇ ಪೊಲೀಸರ ಕ್ರಮ ಅಂತಾರೆ?
ಖಂಡಿತಾ ಇಲ್ಲ. ಈ ಗ್ರಹಿಕೆ ಸುತಾರಾಂ ತಪ್ಪು. ಕಾನೂನು ಎಲ್ಲರಿಗೂ ಒಂದೇ. ಪೊಲೀಸ್ ಠಾಣೆಗಳಿಗೆ ನ್ಯಾಯ ಕೋರಿ ಬರುವ ನೊಂದವರಲ್ಲಿ ಭೇದ ಎಣಿಸುವುದಿಲ್ಲ. ಸಾಮಾನ್ಯರು ಅಸಾಮಾನ್ಯರೆಂದು ಪರಿಗಣಿಸುವುದಿಲ್ಲ. ಆ ರೀತಿ ಪರಿಗಣಿಸಲೂ ಬಾರದು.
ಸಾಮಾನ್ಯ ಜನರ ದೂರು ಗಂಭೀರವಾಗಿ ಪರಿಗಣಿಸುತ್ತೀರಾ?
ಮೊದಲು ದೂರು ಕೊಡಲಿ. ನಾವು ತನಿಖೆ ಮಾಡುತ್ತೇವೆ. ಅನುಮಾನವೇ ಬೇಡ.