ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬೀದಿನಾಯಿಗಳಿಗೆ ಚಿಕನ್ ರೈಸ್ ವಿತರಿಸಲು ಮುಂದಾಗಿದ್ದ ಬಿಬಿಎಂಪಿ ಈಗ ಮಕ್ಕಳು, ಮಹಿಳೆಯರು, ವೃದ್ಧರ ಮೇಲೆ ದಾಳಿ ಮಾಡುವ ಪ್ರವೃತ್ತಿ ಹೊಂದಿರುವ ಬೀದಿ ನಾಯಿಗಳಿಗೆ ಸೇನೆ ಮತ್ತು ಪೊಲೀಸ್ ಶ್ವಾನಗಳ ರೀತಿ ಚಿಕಿತ್ಸೆ ಮತ್ತು ತರಬೇತಿ ನೀಡುವುದಕ್ಕೆ ನಿರ್ಧರಿಸಿದೆ.
ಇತ್ತೀಚೆಗೆ ನಗರದಲ್ಲಿ ಬೀದಿ ನಾಯಿಗಳ ದಾಳಿಯಿಂದ ಸೀತಪ್ಪ ಎಂಬ ವೃದ್ಧ ಮೃತಪಟ್ಟಿದ್ದರು. ಈ ಕುರಿತು ಲೋಕಾಯುಕ್ತರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು ವಿಚಾರಣೆ ನಡೆಸಿ ನಗರದಲ್ಲಿ ದಾಳಿ ಪ್ರವೃತ್ತಿ ಹೊಂದಿರುವ ಬೀದಿ ನಾಯಿಗಳನ್ನು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡುವಂತೆ ತಾಕೀತು ಮಾಡಿದರು. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ಪಶುಪಾಲನೆ ವಿಭಾಗವೂ ದಾಳಿ ಪ್ರವೃತ್ತಿ ಹೊಂದಿರುವ ಬೀದಿ ನಾಯಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ತರಬೇತಿ ನೀಡುವುದಕ್ಕೆ ಶ್ವಾನತಜ್ಞರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಮುಂದಾಗಿದೆ.
ಬಿಬಿಎಂಪಿಯ ಎಲ್ಲಾ ವಲಯದಲ್ಲಿ ಬೀದಿ ನಾಯಿ ನಿಗಾ ಕೇಂದ್ರಗಳಿವೆ. ದಾಳಿ ಪ್ರವೃತ್ತಿ ಹೊಂದಿರುವ ಬೀದಿ ನಾಯಿಗಳನ್ನು ಹಿಡಿದು ನಿಗಾ ಕೇಂದ್ರಕ್ಕೆ ತಂದು ಅಲ್ಲಿ ಈ ಶ್ವಾನ ತಜ್ಞರ ಮೂಲಕ ಚಿಕಿತ್ಸೆ ಕೊಡಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ.
ಅದಕ್ಕಾಗಿ ಸಮಿತಿ ರಚನೆ ಮಾಡಲಾಗುತ್ತದೆ. ಸಮಿತಿಯು ನಾಯಿ ವರ್ತನೆಯಲ್ಲಿ ಬದಲಾವಣೆಗೊಂಡಿದೆ ಎಂಬುದು ದೃಢಪಡಿಸಿದರೆ ನಂತರ ಆ ಬೀದಿ ನಾಯಿಯನ್ನು ಸ್ವಸ್ಥಳಕ್ಕೆ ತೆಗೆದುಕೊಂಡು ಹೋಗಿ ಬಿಡುವ ಕೆಲಸ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೀದಿ ನಾಯಿ ದಾಳಿಯಿಂದಲೇ ಸೀತಪ್ಪ ಸಾವು:
ಕೊಡಿಗೇಹಳ್ಳಿಯ ಟೆಲಿಕಾಂ ಲೇಔಟ್‌ನಲ್ಲಿ ಕಳೆದ ಜುಲೈ 28 ರ ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳಿದ ವೇಳೆ ಸೀನಪ್ಪ (68) ಎಂಬುವರ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ್ದರು. ಆದರೆ, ಈ ಕುರಿತು ಯಾವುದೇ ಸಿಸಿ ಟಿವಿ ದೃಶ್ಯಗಳು ದೊರೆತಿರಲಿಲ್ಲ. ಹೀಗಾಗಿ, ಬಿಬಿಎಂಪಿಯು ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೃಢಪಟ್ಟರೆ ಪರಿಹಾರ ನೀಡುವುದಾಗಿ ಹೇಳಿತ್ತು. ಇದೀಗ ಮರೋತ್ತರ ಪರೀಕ್ಷೆ ವರದಿಯಲ್ಲಿ ಬೀದಿ ನಾಯಿಗಳ ದಾಳಿಯಿಂದ ಸೀತಪ್ಪ ಮೃತಪಟ್ಟಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಸೀತಪ್ಪ ಅವರ ಕುಟುಂಬಸ್ಥರಿಗೆ ಐದು ಲಕ್ಷ ರು. ಪರಿಹಾರ ನೀಡುವುದಕ್ಕೆ ಮುಂದಾಗಿದೆ.