ಕನ್ನಡಪ್ರಭ ವಾರ್ತೆ ಬೆಂಗಳೂರು
ಶಿವಾಜಿನಗರದ ಬಿಬಿಎಂಪಿಯ ಶಿಶುವಿಹಾರದ ಕಟ್ಟಡ ಕುಸಿತ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿಯು ತನ್ನ ಎಲ್ಲಾ ಶಾಲೆ ಮತ್ತು ಆಸ್ಪತ್ರೆ ಕಟ್ಟಡಗಳ ಸದೃಢತೆ ಪರಿಶೀಲನೆ ನಡೆಸಲಾಗಿದ್ದು, 19 ಶಾಲಾ ಕಟ್ಟಡ ಮತ್ತು ಮೂರು ಆಸ್ಪತ್ರೆ ಕಟ್ಟಡ ಬಳಕೆಗೆ ಯೋಗ್ಯವಲ್ಲ ಎಂದು ತಿಳಿದು ಬಂದಿದೆ.ಬಿಬಿಎಂಪಿಯು ಶಿಶು ವಿಹಾರ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಸೇರಿದಂತೆ ಒಟ್ಟು 163 ಶಾಲೆ-ಕಾಲೇಜುಗಳನ್ನು ನಡೆಸುತ್ತಿದೆ. ಕಳೆದ ತಿಂಗಳು ಶಿವಾಜಿನಗರ ಭಾರತಿನಗರದ ಪಾಲಿಕೆಯ ಶಿಶುವಿಹಾರ ಕಟ್ಟಡ ರಾತ್ರೋರಾತ್ರಿ ಕುಸಿದು ಬಿದ್ದಿತ್ತು. ರಾತ್ರಿ ವೇಳೆ ಕಟ್ಟಡ ಕುಸಿತ ಪರಿಣಾಮ ಯಾವುದೇ ಅನಾಹುತ ಉಂಟಾಗಿರಲಿಲ್ಲ. ಈ ಘಟನೆಯಿಂದ ಎಚ್ಚೆತ್ತುಕೊಂಡ ಬಿಬಿಎಂಪಿಯು ತನ್ನ ಎಲ್ಲಾ ಶಾಲಾ ಕಾಲೇಜು ಕಟ್ಟಡಗಳ ಸದೃಢತೆ ಪರಿಶೀಲನೆಗೆ ವರದಿ ನೀಡುವಂತೆ ಎಂಜಿನಿಯರ್ ಗಳಿಗೆ ಸೂಚನೆ ನೀಡಲಾಗುತ್ತು.
ಇದೀಗ ಎಂಜಿನಿಯರ್‌ಗಳು ಎಲ್ಲಾ ಶಾಲೆ-ಕಾಲೇಜು ಕಟ್ಟಡಗಳ ಪರಿಶೀಲನೆ ನಡೆಸಿದ್ದಾರೆ. ಈ ಪೈಕಿ 73 ಶಾಲೆ, ಕಾಲೇಜು ಕಟ್ಟಡಗಳು ಸುರಕ್ಷಿತವಾಗಿವೆ. 67 ಶಾಲೆ-ಕಾಲೇಜು ಕಟ್ಟಡಗಳನ್ನು ದುರಸ್ಥಿಗೊಳಿಸಬೇಕಿದೆ. ಉಳಿದ 19 ಶಾಲೆಗಳ ಕಟ್ಟಡ ಸಂಪೂರ್ಣವಾಗಿ ನೆಲಸಮಗೊಳಿಸಿ ಮರು ನಿರ್ಮಾಣ ಮಾಡಬೇಕಿದೆ. ಈ ಪೈಕಿ ಕೆಲವು ಕಟ್ಟಡಗಳನ್ನು ಈಗಾಗಲೇ ತೆರವು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಪೂರ್ವ ವಲಯದ 12, ಪಶ್ಚಿಮ ವಲಯದ 6, ದಕ್ಷಿಣ ವಲಯದ 1 ಶಾಲೆಯ ಕಟ್ಟಡದ ಶಿಥಿಲಾವಸ್ಥೆಯಲ್ಲಿದ್ದು, ಹೊಸ ಕಟ್ಟಡಬೇಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಬಾಕ್ಸ್...
ಶಾಲಾ ಕಟ್ಟಡದ ಗೋಡೆ ಬಿರುಕುಪರಿಶೀಲನೆ ವರದಿಯಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ಪ್ರಮುಖ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಚಾವಣಿಯಲ್ಲಿ ಕಬ್ಬಿಣದ ಸರಳು ಹೊರ ಬಂದ ಸ್ಥಿತಿಯಲ್ಲಿವೆ. ಈ ಕಟ್ಟಡದಲ್ಲಿ ಶಾಲೆ ಮುಂದುವರೆಸುವುದು ಮಕ್ಕಳ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಸ್ಟಿನ್ ಟೌನ್‌ನ ಮಾಯಬಜಾರ್ ಸ್ಲಂನಲ್ಲಿರುವ ಶಿಶುವಿವಾಹ, ಪ್ರಾಥಮಿಕ, ಪ್ರೌಢ ಶಾಲೆಯ ಕಟ್ಟಡ, ಹಲಸೂರಿನ ಕೆಂಬ್ರಡ್ಜ್ ರಸ್ತೆಯ ಶಿಶು ವಿಹಾರ, ಅಶೋಕನಗರದ ಕಮಿಷನರೇಟ್ ರಸ್ತೆಯ ಶಿಶುವಿಹಾರ, ಪಾಪಯ್ಯ ಗಾರ್ಡನ್ ನ ಶಿಶುವಿಹಾರ, ವಸಂತ ನಗರದ ಶಿಶುವಿಹಾರ, ಬ್ರಾಡ್ ವೇ ರಸ್ತೆಯ ನರ್ಸರಿ ಶಾಲಾ ಕಟ್ಟಡ, ಭಾರತಿ ನಗರ, ಶಿಶುವಿಹಾರ, ಸ್ಲ್ಯಾಟರ್ ಹೌಸ್ ರಸ್ತೆಯ ಶಾಲಾ ಕಟ್ಟಡ, ನಾರಯಣಪಿಳೈ ರಸ್ತೆ ಶಿಶುವಿಹಾರ, ಶಿವಣ್ಣ ಚೆಟ್ಟಿ ಗಾರ್ಡನ್ ಶಿಶು ವಿಹಾರಕ್ಕೆ ಹೊಸ ಕಟ್ಟಡ ಬೇಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಶಾಲಾ ಕಟ್ಟಡಗಳ ಪರಿಶೀಲನೆಗೆ ಸೂಚನೆ ನೀಡಲಾಗಿತ್ತು. ಈ ಕುರಿತ ವರದಿ ಸಿದ್ಧಪಡಿಸಲಾಗಿದ್ದು, 19 ಹೊಸ ಶಾಲಾ ಕಟ್ಟಡ ನಿರ್ಮಾಣ ಮಾಡಬೇಕಿದೆ. ಜತೆಗೆ, ಮೂರು ಬಿಬಿಎಂಪಿ ಆಸ್ಪತ್ರೆಯ ಕಟ್ಟಡವೂ ಸುಸ್ಥಿತಿಯಲ್ಲ ಎಂದು ತಿಳಿದು ಬಂದಿದೆ. ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು.-ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ. ಬಿಬಿಎಂಪಿ.