- ಚಿತ್ರದುರ್ಗ ಶಾಸಕನ ಜತೆ ಸಂಪರ್ಕ ಹೊಂದಿದ್ದ ರಾಜ್ಯದ ಎಂಎಲ್‌ಎ
- ದೆಹಲಿಯಲ್ಲಿ ಹಿರಿಯ ನಾಯಕನನ್ನು ಭೇಟಿಯಾಗಿದ್ದೇ ಪಪ್ಪಿಗೆ ಮುಳುವು
---ಗಿರೀಶ್ ಮಾದೇನಹಳ್ಳಿಕನ್ನಡಪ್ರಭ ವಾರ್ತೆ ಬೆಂಗಳೂರು
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ.) ಬಲೆಗೆ ಬಿದ್ದ, ಬೆಟ್ಟಿಂಗ್ ಆ್ಯಪ್ ಹಾಗೂ ಕ್ಯಾಸಿನೋಗಳನ್ನು ಹೊಂದಿರುವ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಅಲಿಯಾಸ್ ಪಪ್ಪಿ ಅವರಿಗೆ ತಾವು ಇತ್ತೀಚೆಗೆ ನಡೆಸಿದ ‘ದೆಹಲಿ ಯಾತ್ರೆ’ಯೇ ಮುಳುವಾಯಿತು ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.ವೀರೇಂದ್ರ ಬಂಧನ ಬೆನ್ನಲ್ಲೇ ಅವರೊಂದಿಗೆ ಸಂಪರ್ಕದಲ್ಲಿದ್ದ ಹಾಗೂ ವಿದೇಶದಲ್ಲಿ ಕ್ಯಾಸಿನೋ ಹೊಂದಿದ ಆರೋಪ ಹೊತ್ತಿರುವ ಕಾಂಗ್ರೆಸ್‌ನ ಮತ್ತೊಬ್ಬ ಶಾಸಕನಿಗೂ ಇ.ಡಿ. ತನಿಖೆ ಬಿಸಿ ತಟ್ಟುವ ಮಾತು ಕೇಳಿಬರುತ್ತಿದೆ.
ಬಿಹಾರ ವಿಧಾನಸಭಾ ಚುನಾವಣೆಗೆ ದೆಹಲಿ ರಾಜಕೀಯ ವಲಯದಲ್ಲಿ ಭರದ ಸಿದ್ಧತೆ ನಡೆದಿವೆ. ಈ ಬೆಳವಣಿಗೆ ಮಧ್ಯೆ ಮೂರು ಬಾರಿ ದೆಹಲಿ ಮೂಲದ ಹಿರಿಯ ನಾಯಕರೊಬ್ಬರನ್ನು ಶಾಸಕ ವೀರೇಂದ್ರ ಭೇಟಿಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದು ಜಾಗೃತರಾದ ಇ.ಡಿ. ಅಧಿಕಾರಿಗಳು ಶಾಸಕರ ಹಣಕಾಸು ಜಾಲ ಶೋಧಿಸಿದಾಗ ಬೆಟ್ಟಿಂಗ್ ಹಣದ ಹರಿವಿನ ಸುಳಿವು ಸಿಕ್ಕಿದೆ. ಅಂತೆಯೇ ಕಾರ್ಯಾಚರಣೆ ನಡೆಸಿ ಚಿನ್ನ ಹಾಗೂ ಅಪಾರ ಹಣದ ಸಮೇತ ಶಾಸಕರನ್ನು ಬಂಧಿಸಿತು ಎನ್ನಲಾಗಿದೆ.ಬಿಹಾರ ಚುನಾವಣಾ ಅಖಾಡ ರಂಗೇರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತಾರೂಢ ಪಕ್ಷದ ಸಚಿವರು, ಶಾಸಕರು ಹಾಗೂ ಆ ಪಕ್ಷದ ಜತೆ ನಿಕಟ ಸಂಪರ್ಕ ಹೊಂದಿರುವ ಉದ್ಯಮಿಗಳು ಮತ್ತು ಗುತ್ತಿಗೆದಾರರ ಆರ್ಥಿಕ ವ್ಯವಹಾರದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ಆದಾಯ ತೆರಿಗೆ (ಐಟಿ) ನಿಗಾ ವಹಿಸಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ವಿದೇಶದ ಹಣಕಾಸು ನಂಟು:ಚಿತ್ರದುರ್ಗದ ಶಾಸಕ ವೀರೇಂದ್ರ ಅವರು ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಹಾಗೂ ಗೋವಾದಲ್ಲಿ ಕ್ಯಾಸಿನೋ ಹೊಂದಿರುವ ಬಗ್ಗೆ ಇ.ಡಿ ಮಾಹಿತಿ ಕಲೆ ಹಾಕಿತ್ತು. ಕೇಂದ್ರ ಸರ್ಕಾರ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ನಿಷೇಧಿಸಿದ ಬಳಿಕವೂ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ವಹಿವಾಟನ್ನು ಶಾಸಕರು ಮುಂದುವರೆಸಿದ್ದರು. ಅಲ್ಲದೆ, ದೆಹಲಿ ನಾಯಕರ ಪದೇಪದೇ ಭೇಟಿ ಬಗ್ಗೆ ಇ.ಡಿಗೆ ಶಂಕೆ ಮೂಡಿತ್ತು. ಅಷ್ಟರಲ್ಲಿ ಸಿಕ್ಕಿಂನಲ್ಲಿ ಹಣಕಾಸು ವ್ಯವಹಾರಕ್ಕೆ ಶಾಸಕರು ತೆರಳಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿತು ಎಂದು ಮೂಲಗಳು ಹೇಳಿವೆ.
ಮತ್ತೊಬ್ಬ ಶಾಸಕನಿಗೆ ಕ್ಯಾಸಿನೋ ಸಂಕಷ್ಟ?:ಚಿತ್ರದುರ್ಗ ಶಾಸಕರ ಬಂಧನ ಬೆನ್ನಲ್ಲೇ ವಿದೇಶದಲ್ಲಿ ಕ್ಯಾಸಿನೋ ಹೊಂದಿರುವ ಆರೋಪ ಹೊತ್ತಿರುವ ಮತ್ತೊಬ್ಬ ಶಾಸಕರಿಗೂ ಇ.ಡಿ ತನಿಖೆ ಬಿಸಿ ತಟ್ಟುವ ಮಾತುಗಳು ಕೇಳಿ ಬಂದಿವೆ. ವೀರೇಂದ್ರ ಜತೆ ಆ ಶಾಸಕರಿಗೆ ಸಹ ನಂಟಿದೆ. ಅಲ್ಲದೆ, ವಿದೇಶದಲ್ಲಿರುವ ಶಾಸಕರ ಕ್ಯಾಸಿನೋಗೆ ರಾಜ್ಯದ ಹಲವು ಜನ ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಅಕ್ರಮ ಹಣ ವರ್ಗಾವಣೆ ಬಗ್ಗೆ ಆ ಶಾಸಕರ ಬಗ್ಗೆ ಇ.ಡಿ. ಮಾಹಿತಿ ಕಲೆ ಹಾಕುತ್ತಿದೆ ಎಂದು ತಿಳಿದು ಬಂದಿದೆ.
ಹಾಗೆಯೇ ಬೃಹತ್ ಮೊತ್ತದ ಯೋಜನೆಗಳ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಹಾಗೂ ಉದ್ಯಮಿಗಳ ಬಗ್ಗೆ ಸಹ ಕೇಂದ್ರ ತನಿಖಾ ಸಂಸ್ಥೆಗಳು ಕಣ್ಣಿಟ್ಟಿವೆ ಎನ್ನಲಾಗಿದೆ.