ಬೆಂಗಳೂರು, ಹೈದರಾಬಾದ್‌ನಲ್ಲಿ ಜಲ ಸಂರಕ್ಷಣೆಗೆ ಕೈಜೋಡಿಸಿದ ಅಮೆಜಾನ್-ನೆಟಾಫಿಮ್

KannadaprabhaNewsNetwork |  
Published : Feb 27, 2026, 03:15 AM IST
Amazon

ಸಾರಾಂಶ

ತೀವ್ರ ಜಲಕ್ಷಾಮ ಎದುರಿಸುತ್ತಿರುವ ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಜಲ ಮೂಲಗಳ ಸಂರಕ್ಷಣೆಗಾಗಿ ಅಮೆಜಾನ್ ಇಂಡಿಯಾ ಸಂಸ್ಥೆಯು ಹನಿ ನೀರಾವರಿ ಕ್ಷೇತ್ರದ ದೈತ್ಯ ‘ನೆಟಾಫಿಮ್’ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.

ಬೆಂಗಳೂರು: ತೀವ್ರ ಜಲಕ್ಷಾಮ ಎದುರಿಸುತ್ತಿರುವ ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಜಲ ಮೂಲಗಳ ಸಂರಕ್ಷಣೆಗಾಗಿ ಅಮೆಜಾನ್ ಇಂಡಿಯಾ ಸಂಸ್ಥೆಯು ಹನಿ ನೀರಾವರಿ ಕ್ಷೇತ್ರದ ದೈತ್ಯ ‘ನೆಟಾಫಿಮ್’ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಈ ವಿನೂತನ ಯೋಜನೆಯ ಮೂಲಕ ವಾರ್ಷಿಕವಾಗಿ ಸುಮಾರು 325 ಮಿಲಿಯನ್ ಲೀಟರ್ ನೀರನ್ನು ಉಳಿಸುವ ಗುರಿ ಹೊಂದಲಾಗಿದೆ.

ಹೆಚ್ಚಿನ ನೀರು ವ್ಯರ್ಥವಾಗುವುದನ್ನು ತಡೆಯಲು, ಈ ಯೋಜನೆ

ಸಾಂಪ್ರದಾಯಿಕ ‘ಪ್ರವಾಹ ನೀರಾವರಿ’ ಪದ್ಧತಿಯಲ್ಲಿ ಹೆಚ್ಚಿನ ನೀರು ವ್ಯರ್ಥವಾಗುವುದನ್ನು ತಡೆಯಲು, ಈ ಯೋಜನೆಯಡಿ 120 ಹೆಕ್ಟೇರ್ ಪ್ರದೇಶದ ಸುಮಾರು 110 ಸ್ವತಂತ್ರ ರೈತರಿಗೆ ಹನಿ ನೀರಾವರಿ ತಂತ್ರಜ್ಞಾನವನ್ನು ಅಳವಡಿಸಿಕೊಡಲಾಗುತ್ತಿದೆ.ಬೆಂಗಳೂರು ನಗರದ ಪಶ್ಚಿಮ ಕೃಷಿ ವಲಯದ 80 ಹೆಕ್ಟೇರ್ ಪ್ರದೇಶದ ಸೋರೆಕಾಯಿ ಮತ್ತು ಟೊಮೆಟೋ ಬೆಳೆಯುವ 70 ರೈತರಿಗೆ ಈ ಸೌಲಭ್ಯ ಸಿಗಲಿದೆ. ಇದರಿಂದ ಟಿ.ಜಿ. ಹಳ್ಳಿ ಜಲಾಶಯದ ಮೇಲಿನ ಒತ್ತಡ ಕಡಿಮೆಯಾಗಿ, ವಾರ್ಷಿಕ 175 ಮಿಲಿಯನ್ ಲೀಟರ್ ನೀರು ಉಳಿತಾಯವಾಗಲಿದೆ.ಹೈದರಾಬಾದ್‌ನ ಉತ್ತರ ಕೃಷಿ ವಲಯದ 40 ಹೆಕ್ಟೇರ್ ಮೆಕ್ಕೆಜೋಳ ಮತ್ತು ತರಕಾರಿ ಫಾರ್ಮ್‌ಗಳಲ್ಲಿ ತಂತ್ರಜ್ಞಾನ ಅಳವಡಿಸುವ ಮೂಲಕ 150 ಮಿಲಿಯನ್ ಲೀಟರ್ ನೀರು ಉಳಿಸುವ ನಿರೀಕ್ಷೆಯಿದೆ. ಇದು ಕೊಂಡಪೋಚಮ್ಮ ಸಾಗರ್ ಜಲಾಶಯದ ವ್ಯಾಪ್ತಿಯ 40 ರೈತರಿಗೆ ನೆರವಾಗಲಿದೆ.

ಈ ಕುರಿತು ಮಾತನಾಡಿದ ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಅಭಿನವ್ ಸಿಂಗ್, ‘2027ರ ವೇಳೆಗೆ ಅಮೆಜಾನ್ ‘ವಾಟರ್ ಪಾಸಿಟಿವ್’ ಸಾಧಿಸುವ ಯೋಜನೆ ಹೊಂದಿದೆ. ಅಂದರೆ ನಮ್ಮ ಕಾರ್ಯಾಚರಣೆಗೆ ಬಳಸುವ ನೀರಿಗಿಂತ ಹೆಚ್ಚಿನ ನೀರನ್ನು ಸಮಾಜಕ್ಕೆ ಮರಳಿ ಸಮಾಜಕ್ಕೆ ನೀಡಲಿದ್ದೇವೆ’ ಎಂದರು.

ಈಗಾಗಲೇ ಕಂಪನಿಯು ಜಲ ಮರುಪೂರಣಕ್ಕಾಗಿ ಭಾರತದಲ್ಲಿ ₹42 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದ್ದು, ವಾರ್ಷಿಕ 3 ಬಿಲಿಯನ್ ಲೀಟರ್ ನೀರನ್ನು ಪುನಶ್ಚೇತನಗೊಳಿಸುವ ಗುರಿ ಹೊಂದಿದೆ.

ಹವಾಮಾನಕ್ಕೆ ಪೂರಕವಾದ ಕೃಷಿಯನ್ನು ಸಾಧ್ಯವಾಗಿಸುತ್ತದೆ

ಈ ಕುರಿತು ನೆಟಾಫಿಮ್‌ನ ಮ್ಯಾಕ್ಸ್ ಮೊಲ್ಡಾವ್ಸ್ಕಿ ಮಾತನಾಡಿ, ‘ನಿಖರ ನೀರಾವರಿಯು ರೈತರ ಜೀವನೋಪಾಯವನ್ನು ಬಲಪಡಿಸುವುದಲ್ಲದೆ, ಹವಾಮಾನಕ್ಕೆ ಪೂರಕವಾದ ಕೃಷಿಯನ್ನು ಸಾಧ್ಯವಾಗಿಸುತ್ತದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಅಮೆಜಾನ್ ಈಗಾಗಲೇ ಮಹಾರಾಷ್ಟ್ರದ ವೈತರ್ಣ ಪ್ರದೇಶದಲ್ಲಿ ₹10 ಕೋಟಿ ವೆಚ್ಚದ ಯೋಜನೆ, ಬೆಂಗಳೂರಿನ ಯಮರೆ ಮತ್ತು ಸಾಯಿ ರೆಡ್ಡಿ ಕೆರೆಗಳ ಪುನಶ್ಚೇತನ ಹಾಗೂ ದೆಹಲಿಯ ಯಮುನಾ ಜಲಾನಯನ ಪ್ರದೇಶಗಳಲ್ಲಿ ವಿವಿಧ ಸಂಸ್ಥೆಗಳೊಂದಿಗೆ ಸೇರಿ ಜಲ ಸಂರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಈ ಹೊಸ ಯೋಜನೆಯು ನಗರ ಪ್ರದೇಶಗಳ ಭವಿಷ್ಯದ ಜಲ ಸುರಕ್ಷತೆಗೆ ಭದ್ರ ಬುನಾದಿ ಹಾಕಲಿದೆ.

PREV
Read more Articles on

Recommended Stories

ಸಂವಿಧಾನದಿಂದ ಮಾತ್ರ ದೇಶದ ಉಳಿವು: ವೀರಪ್ಪ
15ರ ಹೊಸ್ತಿಲಲ್ಲಿ ಮೈಸೂರು ಬುಕ್ ಕ್ಲಬ್ ಚಾರಿಟಬಲ್ ಟ್ರಸ್ಟ್; ಕನ್ನಡ ಓದುಗರ ಒಕ್ಕೂಟ