ಸ್ವಾವಲಂಬಿ ಹಳ್ಳಿಯತ್ತ ನಾಗತಿಹಳ್ಳಿ : ಸಂಸ್ಕೃತಿ ಹಬ್ಬ ಮಾಡುತ್ತಿದ್ದಾರೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌

KannadaprabhaNewsNetwork | Updated : Mar 23 2025, 07:30 AM IST

ಸಾರಾಂಶ

ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ತಮ್ಮೂರಲ್ಲಿ ಸಂಸ್ಕೃತಿ ಹಬ್ಬ ಮಾಡುತ್ತಿದ್ದಾರೆ.

- ಪ್ರಿಯಾ ಕೆರ್ವಾಶೆ

ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ 119 ಕಿಮೀ ದೂರ ಬಂದಾಗ ‘ನಾಗತಿಹಳ್ಳಿ’ ಎಂಬ ಊರಿನ ಬೋರ್ಡ್‌ ಕಣ್ಣಿಗೆ ಬೀಳುತ್ತದೆ. ಥಟ್ಟನೆ ತಲೆಗೆ ಬರುವ ಪ್ರಶ್ನೆ, ‘ಇದು ನಾಗತಿಹಳ್ಳಿ ಚಂದ್ರಶೇಖರ್‌ ಅವರ ಊರಿರಬೇಕಲ್ವಾ’ ಅನ್ನೋದು.

ಅಷ್ಟರಮಟ್ಟಿಗೆ ನಮ್ಮ ಮನೋಕೋಶದಲ್ಲಿ ‘ನಾಗತಿಹಳ್ಳಿ’ ಎಂಬ ಊರು ‘ಚಂದ್ರಶೇಖರ್‌’ ಎಂಬ ಜನಪ್ರಿಯ ನಿರ್ದೇಶಕರ ಹೆಸರಿನೊಂದಿಗೇ ಮಿಳಿತವಾಗಿ ಕೂತುಬಿಟ್ಟಿದೆ.

ನಮಗೆ ಹಾಗಿದ್ದರೆ ‘ಚಂದ್ರಶೇಖರ್‌ ಅವರ ಪಾಲಿಗೆ ನಾಗತಿಹಳ್ಳಿ ಏನು?’

ಈ ಪ್ರಶ್ನೆಯನ್ನು ನೇರ ಅವರ ಮುಂದೆಯೇ ಇಟ್ಟಾಗ ತೆರೆದುಕೊಂಡಿದ್ದು ಊರಿನ ಪ್ರೀತಿ ಜೊತೆಗೆ ನಾಗತಿಹಳ್ಳಿ ಎಂಬ 2000 ಜನಸಂಖ್ಯೆಯ ಪುಟ್ಟ ಊರಿನ ಕಥನ ಹಾಗೂ ಕಳೆದ 21 ವರ್ಷಗಳಿಂದ ಇಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌ ಹಾಗೂ ಅವರ ಆತ್ಮೀಯರು ಮಾಡುತ್ತಿರುವ ಅರ್ಥಪೂರ್ಣ ಕೆಲಸಗಳು.

ನಾಗಮಂಗಲ ತಾಲೂಕಿನ ನಾಗತಿಹಳ್ಳಿ ಬರಪೀಡಿತ ಗ್ರಾಮ. ಆದರೆ ಇಲ್ಲಿನ ಸಾಂಸ್ಕೃತಿಕತೆ ಸದಾ ಹಸಿರು. ‘ಜನಪದ ಲೋಕ’ ನಿರ್ಮಾರ್ತೃ ಎಚ್‌.ಎಲ್‌. ನಾಗೇಗೌಡರು ಇದೇ ಊರಿನವರು. ಇಲ್ಲಿ ಮನೆಗೆ ಇಬ್ಬರೋ ಮೂವರೋ ಮೇಷ್ಟ್ರುಇದ್ದೇ ಇರುತ್ತಾರೆ. ಹೀಗಾಗಿ ಒಂದರ್ಥದಲ್ಲಿ ಇದು ಮೇಷ್ಟ್ರುಗಳ ಊರು.

ಜಗತ್ತೆಲ್ಲ ಸುತ್ತಾಡಿದ ಮೇಷ್ಟ್ರು ನಾಗತಿಹಳ್ಳಿ ಅವರಿಗೆ ಅವರ ಹುಟ್ಟೂರಿನ ಮೇಲೆ ಅಪರಿಮಿತ ಪ್ರೀತಿ. ಬೆಂಗಳೂರು ಮಹಾನಗರ ಹತ್ತಿರದಲ್ಲೇ ಇರುವ ಕಾರಣ ಎಲ್ಲಿ ನಗರೀಕರಣದ ಶಾಪ ತಟ್ಟುವುದೋ ಎಂಬ ಆತಂಕ. ತನ್ನ ಹಳ್ಳಿ ಸ್ವಾವಲಂಬಿಯಾಗಬೇಕು ಎಂಬ ಕಾಳಜಿ. ಈ ಎಲ್ಲದರ ಒಟ್ಟು ಫಲಿತಾಂಶವೇ ‘ಸಂಸ್ಕೃತಿ ಹಬ್ಬ’. ಕಳೆದ 21 ವರ್ಷಗಳಿಂದ ತನ್ನೂರಲ್ಲಿ ಇವರು ಸಂಸ್ಕೃತಿ ಹಬ್ಬ ಆಯೋಜಿಸುತ್ತಿದ್ದಾರೆ. ಈ ವರ್ಷ ಇವರ ಊರಿನ ಶಾಲೆಗೆ ನೂರು ವರ್ಷ ತುಂಬಿರುವ ಕಾರಣ ಈ ಹಬ್ಬದ ಕಳೆ ಮತ್ತಷ್ಟು ಹೆಚ್ಚಿದೆ.

ಈ ಬಾರಿ ಮಾ.26ರಿಂದ ಯುಗಾದಿ ಹಬ್ಬದ ಮಾ.30ರವರೆಗೆ ಇಲ್ಲಿ ಸಂಸ್ಕೃತಿ ಹಬ್ಬ ನಡೆಯಲಿದೆ.

ಮಾ.26ಕ್ಕೆ ಈ ಊರಿಗೆ ‘ವಿಜ್ಞಾನ ದಿನ’. ಆ ನೆವದಲ್ಲಿ ಊರಿನ ಮಕ್ಕಳೆಲ್ಲ ಬೆಂಗಳೂರಿನ ಜವಾಹರಲಾಲ್‌ ನೆಹರೂ ತಾರಾಲಯದಲ್ಲಿ ಆಕಾಶ ಕಾಯಗಳ ಪ್ರದರ್ಶನ ವೀಕ್ಷಿಸಿ, ನಂತರ ತಾರಾಲಯದ ನಿರ್ದೇಶಕರಾದ ಬಿ ಆರ್‌ ಗುರುಪ್ರಸಾದ್‌ ಜೊತೆ ಸಂವಾದ ನಡೆಸಲಿದ್ದಾರೆ.

ಮರುದಿನ ಮಾ.27ಕ್ಕೆ ಬೆಂಗಳೂರಿನ ಅಪೊಲೋ ಆಸ್ಪತ್ರೆ, ಮೈಸೂರಿನ ಅಖಿಲ ಭಾರತ ವಾಕ್‌ ಶ್ರವಣ ಸಂಸ್ಥೆ ಸೇರಿದಂತೆ ವಿವಿಧ ಪ್ರಸಿದ್ಧ ಆಸ್ಪತ್ರೆಗಳ ತಜ್ಞರು ಈ ಊರಿನ ಜೊತೆಗೆ ಸುತ್ತಮುತ್ತಲಿನ ಊರ ಜನರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಿ ಔಷಧ ನೀಡಲಿದ್ದಾರೆ. ಆ ದಿನವನ್ನು ‘ಆರೋಗ್ಯದಿನ’ ವಾಗಿ ಆಚರಣೆ ಮಾಡಲಾಗುತ್ತದೆ. ಮಾ.28ರ ಶುಕ್ರವಾರ ‘ಸಾಹಿತ್ಯ ದಿನ’. ಅಂದು ಸಾಹಿತ್ಯದ ಗೋಷ್ಠಿಗಳು ನಡೆಯಲಿದೆ. ಸಾಹಿತ್ಯ ಅಕಾಡೆಮಿ ಇದಕ್ಕೆ ಸಾಥ್‌ ನೀಡಲಿದೆ. ಸಂಜೆ ಖ್ಯಾತ ನಟ ಪ್ರಕಾಶ್‌ ರಾಜ್‌ ಅಧ್ಯಕ್ಷತೆಯಲ್ಲಿ ರಂಗಭೂಮಿಗೆ ಸಂಬಂಧಿಸಿದ ಸಭಾಕಾರ್ಯಕ್ರಮ, ಆ ಬಳಿಕ ಮಂಡ್ಯ ರಮೇಶ್‌ ಅವರ ‘ನಟನ’ ತಂಡದಿಂದ ‘ಮಕ್ಕಳ ಮಹಾಭಾರತ’ ನಾಟಕ ಪ್ರದರ್ಶನ.

ಮಾ. 29ರ ಶನಿವಾರ ‘ಕೃಷಿ ದಿನ’. ಅಂದು ಕೃಷಿಯಲ್ಲಿ ಸಾಧನೆ ಮಾಡಿದ ರೈತರ ಜೊತೆಗೆ ಈ ಊರ ರೈತರ ಮುಖಾಮುಖಿ ನಡೆಯಲಿದೆ. ಭಾನುವಾರ ಮಾ.30 ಯುಗಾದಿ ಹಬ್ಬ. ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮಗಳ ಜೊತೆಗೆ ಶಾಲೆಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸ್ಮರಣಸಂಚಿಕೆ ಬಿಡುಗಡೆಯಾಗಲಿದೆ. ಮೂಡಬಿದ್ರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಸುಮಾರು 200 ಮಂದಿ ಕಲಾವಿದರು ಪ್ರದರ್ಶಿಸುವ ‘ಆಳ್ವಾಸ್‌ ಸಾಂಸ್ಕೃತಿಕ ವೈಭವ’ ನಡೆಯಲಿದೆ. ಇದಲ್ಲದೇ ನಿತ್ಯವೂ ಊರ ಮಂದಿಯಿಂದ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

‘ಈ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು, ಸಂಘಟನೆಗಳು, ಎನ್‌ಜಿಓಗಳು ಭಾಗವಹಿಸುತ್ತಿಲ್ಲ. ನಾವು ಊರಿನ ಸಹೋದರ, ಸಹೋದರಿಯೇ ಇದನ್ನು ಆಯೋಜಿಸುತ್ತಿದ್ದೇವೆ’ ಎಂಬುದನ್ನು ನಾಗತಿಹಳ್ಳಿ ಚಂದ್ರಶೇಖರ್‌ ಎರಡೆರಡು ಬಾರಿ ಒತ್ತಿ ಹೇಳಿದರು. ಊರಿನ ಪ್ರೀತಿ ಕಾರ್ಯಕ್ರಮದಲ್ಲಿ ರಾಜಕೀಯ ನುಸುಳಲು ಬಿಡಲಾರೆ ಎಂಬ ಗಟ್ಟಿಧ್ವನಿ ಇದರ ಹಿಂದಿತ್ತು.

ಹಾಗಿದ್ದರೆ ಇಷ್ಟೆಲ್ಲ ಮಾಡುತ್ತಿರುವುದರ ಹಿಂದಿನ ಉದ್ದೇಶ ಏನು ಅಂದರೆ, ‘ನಮ್ಮ ಹಳ್ಳಿ ಸ್ವಾವಲಂಬಿಯಾಗಬೇಕು’ ಎನ್ನುತ್ತಾರೆ ನಾಗತಿಹಳ್ಳಿ ಅವರು. ‘ಈ ಕಾರಣಕ್ಕೆ ನನ್ನೂರಲ್ಲಿ ಕೆಲವು ವರ್ಷಗಳ ಹಿಂದೆ ಹಾಲಿನ ಡೈರಿ ತೆರೆದಿದ್ದೆ. ಆಗ ಜನ ನಕ್ಕರು. ಈಗ ನಿತ್ಯ ಸಾವಿರಾರು ಲೀಟರ್‌ ಹಾಲು ಪೂರೈಕೆಯಾಗುತ್ತದೆ. ಎಷ್ಟೋ ಜನ ಪ್ರಯೋಜನ ಪಡೆಯುತ್ತಿದ್ದಾರೆ. ಊರಲ್ಲಿ ರಂಗಮಂದಿರ, ಲೈಬ್ರೆರಿ ನಿರ್ಮಿಸಿದ್ದೇನೆ. ಬ್ಯಾಂಕ್‌ ಬರುವಂತೆ ಮಾಡಿದ್ದೇನೆ. ಊರಿನ ಯುವಕರು ಸಾಂಸ್ಕೃತಿಕ ಮುಂದಾಳತ್ವ ವಹಿಸುವಂತೆ ಉತ್ತೇಜನ ನೀಡುತ್ತಿದ್ದೇನೆ. ಹಾಗೆಂದು ನಾನೇನೋ ದೊಡ್ಡ ಸಾಹಸ ಮಾಡುತ್ತಿದ್ದೇನೆ ಎಂಬ ಭ್ರಮೆ ನನಗಿಲ್ಲ. ಆದರೆ ಹಳ್ಳಿಗಳ ಸ್ಥಿತಿ ಬದಲಾಗಬೇಕು. ನಗರದಲ್ಲಿ ಸಿಗುವುದೆಲ್ಲ ಹಳ್ಳಿಯಲ್ಲೂ ಸಿಕ್ಕಿ ಹಳ್ಳಿಯಲ್ಲೂ ಜನ ಸ್ವಾಭಿಮಾನದಿಂದ ಬದುಕುವಂತಾಗಬೇಕು ಎಂಬುದಷ್ಟೇ ಇದರ ಹಿಂದಿನ ಆಶಯ’ ಎನ್ನುತ್ತಾರವರು.

ಮೇಷ್ಟ್ರ ಒಟ್ಟಾರೆ ನಿಲುವಿನಲ್ಲಿ ಎದ್ದು ಕಾಣುವುದು ಹಳ್ಳಿಗಳು ನಗರೀಕರಣಕ್ಕೆ ಬಲಿಯಾಗದಿರಲಿ ಎಂಬ ಕಾಳಜಿ, ಹಳ್ಳಿತನ ಎಂಬುದು ಹೆಮ್ಮೆಯಾಗಬೇಕೇ ಹೊರತು ಕೀಳರಿಮೆಯಾಗಬಾರದು ಎಂಬ ಆಶಯ.

ಮೇಷ್ಟ್ರ ಈ ಕಾಳಜಿಯನ್ನು ನಿಜವಾಗಿಸಬೇಕಾದ್ದು ಇಂದಿನ ತುರ್ತು. ಇದಕ್ಕೆ ಜನಸ್ಪಂದನೆ ಸಿಗಬಹುದೇ!

Share this article