ಸೈಕಲ್ ಕಲಿಸುವ ಪಾಠಗಳು - ಸೈಕಲ್ ವಾಹನವಾಗಿ ಮಾತ್ರ ಇಲ್ಲ, ಹೊಡೆಯೋಕೆ ಒಳ್ಳೆಯ ಕೈಕಾಲ್ ಬೇಕು

Published : Apr 13, 2025, 12:43 PM IST
Bicycle Day 2024

ಸಾರಾಂಶ

ಕೆಲವು ದಿನಗಳ ಹಿಂದೆ ಬಸ್‌ನಲ್ಲಿ ಹೋಗುತ್ತಿದ್ದೆ. ವೇಗವಾಗಿ ಹೋಗುತ್ತಿದ್ದ ಬಸ್ ಕಿಟಕಿಯ ಹೊರಗೆ ಕಣ್ಣರಳಿಸಿ ನೋಡಿದೆ. ಒಂದಿಷ್ಟು ಯುವಕರ ತಂಡ ಸೈಕಲ್ ಏರಿ ಹೋಗುತ್ತಿತ್ತು. ಎಲ್ಲರೂ ಬಹಳ ಖುಷಿಯಿಂದ ಸಾಗುತ್ತಿದ್ದರು.

- ಲೋಹಿತ ಹೆಬ್ಬಾರ್, ಇಡುವಾಣಿ

ಕೆಲವು ದಿನಗಳ ಹಿಂದೆ ಬಸ್‌ನಲ್ಲಿ ಹೋಗುತ್ತಿದ್ದೆ. ವೇಗವಾಗಿ ಹೋಗುತ್ತಿದ್ದ ಬಸ್ ಕಿಟಕಿಯ ಹೊರಗೆ ಕಣ್ಣರಳಿಸಿ ನೋಡಿದೆ. ಒಂದಿಷ್ಟು ಯುವಕರ ತಂಡ ಸೈಕಲ್ ಏರಿ ಹೋಗುತ್ತಿತ್ತು. ಎಲ್ಲರೂ ಬಹಳ ಖುಷಿಯಿಂದ ಸಾಗುತ್ತಿದ್ದರು. ಒಮ್ಮೆ ಅವರನ್ನು ಬಸ್ ಹಿಂದಿಕ್ಕಿದರೆ, ಮತ್ತೊಮ್ಮೆ ಸೈಕಲ್ ಸವಾರರೇ ಬಸ್ಸನ್ನು ಹಿಂದೆ ಮಾಡುತ್ತಿದ್ದರು. ಅವರ ಪಯಣದ ಉದ್ದೇಶ ಏನೇ ಇರಬಹುದು. ಆದರೆ ನಾನು ಮಾತ್ರ ಬಸ್ ಒಳಗೇ ಕುಳಿತು ಸೈಕಲ್ ಏರಿ,‌ ಅದು ಕಲಿಸುವ ಪಾಠಗಳ ಮೆಲುಹಾಕಿದೆ. ಸೈಕಲ್ ಕೇವಲ ಪ್ರಯಾಣಕ್ಕೆ ಬೇಕಾದ ವಾಹನವಾಗಿ ಮಾತ್ರ ಇಲ್ಲ. ಇದರ ಮೂಲಕ ಬದುಕನ್ನೇ ಅರ್ಥಮಾಡಿಕೊಳ್ಳುವ ಸಂಗತಿ ಅರಿವಿಗೆ ಬಂದಿತು. ಅದರಲ್ಲಿ ಕೆಲವನ್ನು ಹಂಚಿಕೊಳ್ಳೋಣ ಎಂದು. ನಿಮಗೂ ಇನ್ನಷ್ಟು ಪಾಠಗಳನ್ನು ಸೈಕಲ್ ಕಲಿಸಬಹುದು.

ಸೈಕಲ್ ಚಲಿಸಬೇಕೆಂದರೆ ಸವಾರನೂ ಶ್ರಮ ಹಾಕಬೇಕು. ಆತ ಸುಮ್ಮನೆ ಬೈಕ್ ನಲ್ಲಿ ಕುಳಿತಂತೆ ಕುಳಿತರೆ ಆಗದು. ಸೈಕಲನ್ನು ಏರಬೇಕು. ಏರಿದ ಸೈಕಲ್ ಕಾಲು ಸಿಗುತ್ತದೆ ಎಂಬುದು ಖಾತ್ರಿ ಇಲ್ಲ. ಸಿಗದೇ ಹೋಗಬಹುದು. ಆದರೆ ಜಾಣ್ಮೆಯಿಂದ ನಡೆಸಬೇಕಾಗುತ್ತದೆ. ಬ್ಯಾಲೆನ್ಸ್ ಬಹಳ ಮುಖ್ಯ. ಪೆಟಲ್ ತುಳಿಯುವಾಗ ಒಂದು ಕಾಲು ಮೇಲೇರಿದರೆ ಇನ್ಮೊಂದು ಕೆಳಗೆ. ಎರಡೂ ಕಾಲು ಒಮ್ಮೆಲೆ‌ ಕೆಳಗೂ ಇರದು ಮೇಲೂ ಇರದು.

ಇನ್ನು ಇದರ ಸಂಚಾರ ಹೇಗಿದ ನೋಡಿ. ತಗ್ಗು ಪ್ರದೇಶದಲ್ಲಿ ತಾವು ಪೆಡಲ್ ತಿರುಗಿಸಬೇಕಿಲ್ಲ. ಸುಮ್ಮನೆ ಕುಳಿತರೆ ಸಾಕು ಅದಾಗಿಯೇ ಹೋಗುತ್ತದೆ, ಆದರೆ ನಿಯಂತ್ರಣ ಕೈಯ್ಯಲ್ಲಿರಬೇಕು. ಸವಾರನೂ ಅದನ್ನು ಇನ್ನಷ್ಟು ವೇಗವಾಗಿ ತಿರುಗಿಸಬಹುದು, ಇದರಿಂದ ಅಪಾಯವೇ ಹೆಚ್ಚು. ತಾನಾಗಿಯೇ ವೇಗ ಪಡೆದ ಸೈಕಲ್ ಮೇಲೆ ಕುಳಿತು ಆನಂದಿಸುವುದೇ ಸುಖ. ಹಾಗೆಯೇ ಎತ್ತರದ ಪ್ರದೇಶ ಬಂದಾಗ ಹೆಚ್ಚು ಶಕ್ತಿ ಅವಶ್ಯಕ. ಅದಿಲ್ಲದೇ ಮುಂದೆ ಹೋಗದು. ಮೈಯಿಂದ ಬೆವರು ಹನಿಯಾಗಿ ಅಲ್ಲ, ಧಾರೆಯಾಗಿಯೂ ಹರಿದುಹೋಗಬಹುದು. ಕೆಲವು ಬಾರಿ ಸವಾರಿ ಸಾಧ್ಯವಾಗದೇ ಸೈಕಲ್‌ನಿಂದ ಇಳಿದು ಅದನ್ನೇ ದೂಡುತ್ತ ಸಾಗಬೇಕಾಗಬಹುದು. ಸಮತಲದ ಪ್ರದೇಶದಲ್ಲಿ ಸವಾರನದೇ ಶಕ್ತಿ, ಅವನದೇ ಯುಕ್ತಿ. ವೇಗ, ನಿಧಾನಗಳು ಸವಾರನ ಸ್ವಂತದ್ದು.‌ ಶ್ರಮಕ್ಕೆ ತಕ್ಕಷ್ಟು ಫಲ ಸಿಗುತ್ತದೆ.

ಒಂದು ಸೈಕಲ್ ಶ್ರಮದ ಪಾಠವನ್ನು ಕೆಲವು ಕಿಲೋಮೀಟರ್ ಅಂತರದಲ್ಲಿ ಕಲಿಸುತ್ತದೆ. ಆ ತಂಡವನ್ನು ನೋಡುತ್ತಾ ಹೀಗೆಲ್ಲ ಅವರ ಜೊತೆ ಸುತ್ತಾಡಿ ಬಂದೆ.

ಈ ಸೈಕಲ್ ಎಂತಹ ಉಪಕಾರಿ. ಇದರಲ್ಲಿ ಪ್ರಯಾಣ ಮಾಡಬಹುದು, ಆದರೆ ದೂರಪ್ರಯಾಣ ಕಷ್ಟ. ಯಾವುದೇ ಆಡಂಬರವಿಲ್ಲ. ಸಾದಾಸೀದ ಮನುಷ್ಯನಂತೆ ಕಾಣುತ್ತದೆ. ಸುಲಭಕ್ಕೆ ಹಾಳಾಗದು ಮತ್ತು ಹಾಳಾದರೂ ಖರ್ಚು ಕಡಿಮೆ. ಬೈಕ್ ನಂತೆ ನೆಲಕ್ಕೆ ಕಾಲು ಸಿಗದೇ ಇದ್ದರೂ ಚಲಾಯಿಸುವ ಕಲೆ ಸುಲಭವಲ್ಲ. ಸಣ್ಣಗಿನ ಚಕ್ರ.

ಇದರ ಇನ್ನೊಂದು ವಿಶೇಷ ಇಷ್ಟೆಲ್ಲ ಇದ್ದರೂ ಹಿಮ್ಮುಖವಾಗಿ ಹೋಗಲು ಆಗದು. ಮುಂದೆ ಚಲಿಸಿದರೆ ಹಾಗೆ ಚಲಿಸಿಕೊಂಡು ಹೋಗಬಹುದು. ರಿವರ್ಸ್ ಗೇರ್ ಇಲ್ಲ. ಅದರ ಬೆಲ್ ಮತ್ತು ಲೈಟ್ ಗಲಕು ಸಮೀಪದಲ್ಲಿ ಇದ್ದವರಿಗೆ ಮಾತ್ರ ಗೊತ್ತಾಗುವುದು.

ಸೈಕಲ್ ದೈಹಿಕ ಆರೋಗ್ಯಕ್ಕೆ ಅತ್ಯುಪಕಾರಿ. ದೇಹದ ಎಲ್ಲ ಅಂಗಗಳಿಗೂ ಕೆಲಸವನ್ನು ಕೊಡುತ್ತದೆ. ತಿಂದ ಆಹಾರವೆಲ್ಲವೂ ಸುಸ್ಥಾನಕ್ಕೆ ಹೋಗಿ ಮಾಡಬೇಕಾದ ಕೆಲಸವನ್ನು ಮಾಡುತ್ತದೆ. ಮನಸ್ಸಿನಲ್ಲಿ ಇರುವ ಧಾವಂತವನ್ನು ಕಡಿಮೆ ಮಾಡುತ್ತದೆ. ಎಲ್ಲರಿಗೂ ಕೆಲವು ನಿಮಿಷಗಳಲ್ಲಿ ತಲುಪಬೇಕಾದ ಸ್ಥಳಕ್ಕೆ ಹೋಗಬೇಕು ಎಂದೆನಿಸುತ್ತದೆ. ಆದರೆ ಇದು ಸವಾರನ ಧಾವಂತವನ್ನು ಕಡಿಮೆ ಮಾಡುತ್ತದೆ. ಖರ್ಚು ಕಡಿಮೆ ಆರೋಗ್ಯಲಾಭ ಹೆಚ್ಚು. ಹೊಗೆಯನ್ನು ಉಗುಳದೇ ನಿಜವಾದ ಪರಿಸರ‌ಸ್ನೇಹಿಯಾದ ಸೈಕಲ್ ಎಲ್ಲರಿಗೂ ಪಾಠವೇ.

ಹೀಗೆ ಸರಳ ಸುಂದರ ಬದುಕಿಗೆ ಸೈಕಲ್‌ ಹೇಳುವ ಪಾಠವನ್ನು ಯಾರು ಹೇಳಿಯಾರು. ಸಾಗುತ್ತಲೇ ಬೋಧಿಸುವ, ಪ್ರಾಯೋಗಿಕವಾಗಿ ಪಾಠ‌ಮಾಡುವ ಏಕಮಾತ್ರ ವಾಹನ ಸೈಕಲ್.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?