1947-48ರ ಭಾರತ-ಪಾಕಿಸ್ತಾನ ಯುದ್ಧದ ವೇಳೆ ಯೋಧರನ್ನು ಶ್ರೀನಗರಕ್ಕೆ ರವಾನಿಸುವಲ್ಲಿ ಪ್ರಮುಖ್ಯ ಪಾತ್ರ ವಹಿಸಿದ್ದ ಡಕೋಟಾ ಡಿಸಿ-3 ಯುದ್ಧ ವಿಮಾನ ‘ಪರಶುರಾಮ’ ಭಾರತೀಯ ವಾಯುಪಡೆಯ ಮೊದಲ ಪ್ರಮುಖ ಸಾರಿಗೆ ವಿಮಾನಗಳಲ್ಲಿ ಒಂದು. ಸಂಸದ ರಾಜೀವ್ ಚಂದ್ರಶೇಖರ್ ಅವರ ತಂದೆ, ಏರ್ ಕಮೋಡೋರ್ (ನಿವೃತ್ತ) ಎಂ.ಕೆ. ಚಂದ್ರಶೇಖರ್ ಅವರು 1962ರ ಚೀನಾ ಜತೆಗಿನ ಸಂಘರ್ಷದ ಸಮಯದಲ್ಲಿ ಡಕೋಟಾ ಏರಿ ಸೈನಿಕರನ್ನು ಏರ್‌ಲಿಫ್ಟ್ ಮಾಡಿದ್ದರು. 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲೂ ಡಕೋಟಾ ಸೇವೆ ಸಲ್ಲಿಸಿತ್ತು.
ಈ ನಡುವೆ, ಬಳಿಕ ಈ ವಿಮಾನ ಗುಜರಿಗೆ ಹೋಗಿತ್ತು. ಆಗ ತಂದೆಯವರ ಒತ್ತಾಸೆ ಮೇರೆಗೆ ರಾಜೀವ್ ಚಂದ್ರಶೇಖರ್ ಅವರು ಐರ್ಲೆಂಡ್‌ನಲ್ಲಿ ಮಾರಾಟಕ್ಕಿಡಲಾಗಿದ್ದ ಡಕೋಟಾ ಡಿಸಿ-3 ಅನ್ನು ಖರೀದಿಸಿದ್ದರು. ಅಲ್ಲದೆ, ತಮ್ಮ ತಂದೆ ಎಂ.ಕೆ.ಚಂದ್ರಶೇಖರ್ ಅವರು ಸೇನೆಯಲ್ಲಿ ಸಲ್ಲಿಸಿದ ಅಭೂತಪೂರ್ವ ಸೇವೆಯ ಗೌರವಾರ್ಥ ಈ ಯುದ್ಧ ವಿಮಾನವನ್ನು ಐಎಎಫ್‌ಗೆ ಉಡುಗೊರೆಯಾಗಿ ನೀಡುವ ಪತ್ರಕ್ಕೆ 2018 ಫೆಬ್ರವರಿ 13ರಂದು ಸಹಿ ಹಾಕಿದ್ದರು. ಅಂತೆಯೇ 2018 ಅಕ್ಟೋಬರ್ 8ರಂದು ವಿಮಾನದ ಕೀಯನ್ನು ವಾಯುಸೇನೆಯ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಅವರಿಗೆ ಹಸ್ತಾಂತರಿಸಿದ್ದರು. ಚಂದ್ರಶೇಖರ್ ಅವರ ಗೌರವಾರ್ಥ ಈ ವಿಮಾನಕ್ಕೆ ‘ಪರಶುರಾಮ್’ ಎಂದು ಹೆಸರಿಡಲಾಗಿದ್ದು ವಿಶೇಷ
ಚಂದ್ರಶೇಖರ್ ಆಶಯದಂತೆ ಬೆಂಗಳೂರಲ್ಲಿ ವೀರಗಲ್ಲು
ಕಾರ್ಗಿಲ್ ವಿಜಯ ದಿವಸ್ ಸಂದರ್ಭದಲ್ಲಿ ನಗರದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಸ್ಥಾಪಿಸಲಾಗಿದ್ದ 75 ಅಡಿ ಎತ್ತರದ 700 ಟನ್ ತೂಕದ ಏಕಶಿಲ ‘ವೀರಗಲ್ಲು’ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣಗೊಳಿಸಿದರು. ಆದರೆ 16 ವರ್ಷಗಳ ಹಿಂದೆ ಆರಂಭವಾದ ಈ ವೀರಗಲ್ಲು ಪ್ರತಿಷ್ಠಾಪನೆ ಯೋಜನೆ ಅನೇಕ ಅಡೆ-ತಡೆಗಳು, ಅಡ್ಡಿ, ಆತಂಕಗಳ ನಡುವೆಯೂ ಪೂರ್ಣಗೊಳಿಸುವಲ್ಲಿ ಶ್ರಮಿಸಿದ್ದು, ನಿವೃತ್ತ ಏರ್ ಕಮೋಡರ್ ಎಂ.ಕೆ.ಚಂದ್ರಶೇಖರ್ ಎಂದರೆ ಅತಿಶಯೋಕ್ತಿಯಾಗಲಾರದು. ನಮ್ಮ ಸೇನಾಪಡೆಗಳ ಯೋಧರ ತ್ಯಾಗ, ಬಲಿದಾನ, ಶೌರ್ಯ, ಧೈರ್ಯ ಸಾಹಸದ ಪ್ರತೀಕವಾಗಿ ವೀರಗಲ್ಲು ಅನಾವರಣಗೊಳ್ಳುವಲ್ಲಿ ಚಂದ್ರಶೇಖರ್ ತೋರಿದ ಆಸಕ್ತಿ, ಶ್ರಮ ಹೊಸ ತಲೆಮಾರಿಗೆ ಸ್ಫೂರ್ತಿ ಮತ್ತು ಅನುಕರಣನೀಯ.
ಯೋಧರ ಸ್ಮರಣೆ ಪ್ರತೀಕ
ಸ್ಮಾರಕದಲ್ಲಿನ ಶಿಲೆಗಳ ಮೇಲೆ ಕೆತ್ತಿರುವ ಹೆಸರುಗಳು, ಭಾರತದ ಅತಿದೊಡ್ಡ ರಾಷ್ಟ್ರಧ್ವಜ ಸ್ತಂಭ, ವೀರಗಲ್ಲು, ಅಂಡರ್‌ಗ್ರೌಂಡ್ ಮ್ಯೂಸಿಯಂ ಒಳಗೊಂಡಂತೆ ಸ್ಮಾರಕದ ಪ್ರತಿಯೊಂದು ವಿನ್ಯಾಸವೂ ಯೋಧರ ಸ್ಮರಣೆ ಮತ್ತು ಯುವ ಸಮುದಾಯಕ್ಕೆ ಕಲಿಕೆಯ ಕೇಂದ್ರವಾಗಬೇಕು ಎಂಬುದು ನಿವೃತ್ತ ಏರ್ ಕಮೋಡರ್ ಎಂ.ಕೆ. ಚಂದ್ರಶೇಖರ್ ಅವರ ಆಶಯವಾಗಿತ್ತು. ಈ ವಿಶಿಷ್ಟ ಸ್ಮಾರಕವು ನಮ್ಮ ಸೇನಾಪಡೆಗಳ ಕುರಿತು ಸ್ಫೂರ್ತಿ ನೀಡುವ ಜೀವಂತ ತಾಣವಾಗಿರುವಂತೆ ನೋಡಿಕೊಳ್ಳುವ ಬದ್ಧತೆ ನಾಗರಿಕರಾದ ನಮ್ಮೆಲ್ಲರಿಗೂ ಇರಬೇಕು. ಹುತಾತ್ಮರಿಗೆ ಗೌರವ, ಅವರ ಕುಟುಂಬಗಳಿಗೆ ಸ್ಮರಣೆಯ ಪವಿತ್ರ ತಾಣವಾಗಿರಬೇಕು. ಸೈನಿಕರ ಸ್ಮರಣೆಯ ಕಾರ್ಯಕ್ರಮಗಳು ಜರುಗುತ್ತಿರಬೇಕು. ಯುವ ಭಾರತೀಯರಿಗೆ ಸ್ಫೂರ್ತಿ ನೀಡುತ್ತಿರಬೇಕು. ಸ್ವಾತಂತ್ರ್ಯದ ನಿಜವಾದ ಮೌಲ್ಯ ನೆನಪಿಸುತ್ತಿರಬೇಕು. ಸ್ಮಾರಕ, ವೀರಗಲ್ಲು ಯೋಜನೆ ಅನುಷ್ಠಾನಕ್ಕೆ ಕೊಡುಗೆ ನೀಡಿ, ಜತೆಯಾಗಿ ದೃಢವಾಗಿ ನಿಂತವರಲ್ಲಿ ಎಂ.ಕೆ.ಚಂದ್ರಶೇಖರ್ ಪ್ರಮುಖರು.
* ರಾಜೇಶ್ ಪೈಲಟ್‌ಗೆ ತರಬೇತಿ ನೀಡಿದ್ದ ಚಂದ್ರಶೇಖರ್
ಪ್ರಸ್ತುತ ರಾಜಸ್ಥಾನ ವಿಧಾನಸಭೆಯ ಸದಸ್ಯರಾಗಿರುವ ಸಚಿನ್ ಪೈಲಟ್ ಅವರ ತಂದೆ, ಭಾರತೀಯ ವಾಯುಪಡೆಯ ನಿವೃತ್ತ ಆಫಿಸರ್ ಆಗಿದ್ದ ರಾಜೇಶ್ ಪೈಲಟ್ ಅವರಿಗೆ ವಿಮಾನ ಚಾಲನೆ ತರಬೇತಿಯನ್ನು ನೀಡಿದ್ದು ನಿವೃತ್ತ ಏರ್ ಕಮಾಂಡರ್ ಎಂ.ಕೆ. ಚಂದ್ರಶೇಖರ್. 1966ರ ಅ.29ರಂದು ವಾಯುಪಡೆಗೆ ಸೇರ್ಪಡೆಗೊಂಡಿದ್ದ ರಾಜೇಶ್, 1979ರಲ್ಲಿ ತಾವೇ ಯೋಧವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಧುಮುಕಿದರು.
* ಎಂ.ಕೆ. ಚಂದ್ರಶೇಖರ್
ಹುಟ್ಟೂರು: ದೇಶಮಂಗಲಂ (ತ್ರಿಶೂರು, ಕೇರಳ)
ಸೇನೆಗೆ ನಿಯೋಜನೆ 1954ರ ಜು.17
ನಿವೃತ್ತಿ 1986ರ ಡಿ.25 (ಸ್ವಯಂ)
ಇನ್ಸ್‌ಟ್ರಕ್ಟರ್ ರೇಟಿಂಗ್ ಎ1
ಸೇನೆಯಲ್ಲಿ ಅಲಂಕರಿಸಿದ್ದ ಹುದ್ದೆಗಳು
ಫ್ಲೈಯಿಂಗ್ ಆಫಿಸರ್ 1955 ಜು.17
ಫ್ಲೈಟ್ ಲೆಫ್ಟಿನೆಂಟ್ 1959 ಜು.17
ಸ್ಕ್ವಾಡ್ರನ್ ಲೀಡರ್ 1965 ಜು.17
ವಿಂಗ್ ಕಮಾಂಡರ್ 1974 ಏ.1
ಆ್ಯಕ್ಟಿಂಗ್ ಗ್ರೂಪ್ ಕ್ಯಾಪ್ಟನ್ 1977 ಜೂ.20
ಗ್ರೂಪ್ ಕ್ಯಾಪ್ಟನ್ 1978 ಏ.1
ಆ್ಯಕ್ಟಿಂಗ್ ಏರ್ ಕಮೋಡೋರ್ 1981 ಜ.5
ಏರ್ ಕಮೋಡೋರ್ 1982 ಜು.1
ಪದಕಗಳು
ವಿಶಿಷ್ಟ ಸೇವಾ ಪದಕ 1964 ಜ.26
ವಾಯು ಸೇನಾ ಪದಕ 1970 ಜ.26