ಧಾರವಾಡ ಘರಾನಾದ ಏಳನೇ ತಲೆಮಾರಿನ ಸಿತಾರ್‌ ವಾದಕ ಡಾ.ಮೊಹಸಿನ್ ಖಾನ್

KannadaprabhaNewsNetwork |  
Published : May 28, 2025, 11:46 PM ISTUpdated : May 29, 2025, 04:55 AM IST
35 | Kannada Prabha

ಸಾರಾಂಶ

ಡಾ. ಮೊಹಸಿನ್ ಖಾನ್‌ ಅವರು ಪ್ರಸಿದ್ದ ಧಾರವಾಡ ಘರಾನಾದ 7ನೇ ತಲೆಮಾರಿನ ಸಿತಾರ್ ವಾದಕರು. ಅವರ ಮುತ್ತಜ್ಜ, ‘ಸಿತಾರ್ ರತ್ನ’ ರಹಿಮತ್‌ ಖಾನ್ 

 ಮೈಸೂರು : ಡಾ. ಮೊಹಸಿನ್ ಖಾನ್‌ ಅವರು ಪ್ರಸಿದ್ದ ಧಾರವಾಡ ಘರಾನಾದ 7ನೇ ತಲೆಮಾರಿನ ಸಿತಾರ್ ವಾದಕರು. ಅವರ ಮುತ್ತಜ್ಜ, ‘ಸಿತಾರ್ ರತ್ನ’ ರಹಿಮತ್‌ ಖಾನ್ ಅವರು ಸಮಕಾಲೀನ ಸಿತಾರ್‌ನ ಆವಿಷ್ಕಾರ ಮಾಡಿದವರು.

ರಹಿಮತ್‌ ಖಾನ್‌ ಅವರ ವೀಣೆ ಶೇಷಣ್ಣ ಅವರ ಮೂಲಕ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಸಮ್ಮುಖದಲ್ಲಿ 1911ರಲ್ಲಿ ಸಿತಾರ್‌ ನುಡಿಸಿ, ಬಂಗಾರದ ಪದಕ ಪಡೆದಿದ್ದರು. ಅದನ್ನು ಅವರು ವಂಶಸ್ಥರು ಈಗಲೂ ಮನೆಯಲ್ಲಿ ಕಾಪಿಟ್ಟಿದ್ದಾರೆ. ಮೈಸೂರಿನ ರಾಜರ ಆಸ್ಥಾನದಲ್ಲಿ ಸಿತಾರ್‌ ವಾದಕರಾಗಿರಲು ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಪುಣೆ ತ್ಯಜಿಸಿ, ಧಾರವಾಡದಲ್ಲಿ ನೆಲೆಸುವ ಅವರ ನಿರ್ಧಾರದಿಂದಾಗಿ ಅದನ್ನು ನಯವಾಗಿ ನಿರಾಕರಿಸಿದ್ದರು. ಈ ಕುಟುಂಬಕ್ಕೆ ಸೇರಿದವರು ಡಾ.ಮೊಹಸಿನ್‌ ಖಾನ್‌.

5ನೇ ವಯಸ್ಸಿನಲ್ಲಿಯೇ ಮೊಹಸಿನ್ ಅವರಿಗೆ ಅವರ ಅಜ್ಜ ದಿ.ಉಸ್ತಾದ್‌ ಅಬ್ದುಲ್‌ ಕರೀಮ್‌ ಖಾನ್‌ ಅವರು ಸಿತಾರ್‌ನ ಕಲಿಕೆ ಆರಂಭಿಸಿದರು. ಬಳಿಕ ತಂದೆ ಪ್ರೊ. ಹಮೀದ್‌ ಖಾನ್‌ ಅವರಿಂದ ಮತ್ತಷ್ಟು ತರಬೇತಿ ಪಡೆದರು. ಈಗ ಮೊಹಸಿನ್ ಖಾನ್ ಪ್ರಬುದ್ಧ ಸಿತಾರ್ ವಾದಕರಾಗಿ ಬೆಳೆದಿದ್ದಾರೆ. ಅವರು ತಮ್ಮ 21ನೇ ವಯಸ್ಸಿನಲ್ಲಿ ಆಕಾಶವಾಣಿ ಮತ್ತು ದೂರದರ್ಶನದ ‘ಎ’ ಗ್ರೇಡ್ ಸಿತಾರ್ ವಾದಕರಾದರು. ರಾಷ್ಟ್ರೀಯ ಸಂಗೀತಕಾರ್ಯಕ್ರಮದಲ್ಲೂ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ದೂರದರ್ಶನದಲ್ಲಿ ಚಿರಪರಿಚಿತರಾಗಿರುವ ಅವರು ಲೋಕಸಭೆ ಮತ್ತುದೂರದರ್ಶನ ಚಾನೆಲ್ ಗಳಲ್ಲೂ ಹಲವು ಪ್ರದರ್ಶನ ನೀಡಿದ್ದಾರೆ.

ಮೊಹಸಿನ್ ಭಾರತದ ಪ್ರಮುಖ ನಗರಗಳಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಹೆಸರು ಮಾಡಿದ್ದು, ಜರ್ಮನಿ, ಇಟಲಿ, ಜಪಾನ್, ದಕ್ಷಿಣ ಕೋರಿಯಾ, ಫ್ರಾನ್ಸ್, ಕ್ರೋಯೇಶಿಯಾ, ನೆದರ್‌ ಲ್ಯಾಂಡ್ಸ್, ನೇಪಾಳ ಮತ್ತು ರಷ್ಯಾ ದೇಶಗಳಲ್ಲಿ ಸಂಗೀತ ಸಮ್ಮೇಳನಗಳು ಮತ್ತು ಉತ್ಸವಗಳಲ್ಲಿ ಸಿತಾರ್ ವಾದನ ಮಾಡಿದ್ದಾರೆ.

ಅಲ್ಲದೇ ಮೊಹಸಿನ್ ಖಾನ್‌ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಗೀತ ಕ್ಷೇತ್ರದಲ್ಲಿ ಪಿ.ಎಚ್‌.ಡಿ ಪದವಿ ಪಡೆದಿದ್ದಾರೆ. ಜೊತೆಗೆರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಸಂಗೀತದ ಬಗ್ಗೆ ವಿವಿಧ ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. ಸಂಗೀತ ಕುರಿತ ಕೃತಿಗಳನ್ನೂ ರಚಿಸಿದ್ದಾರೆ.

ಅವರು ವಿವಿಧ ಸಂಸ್ಥೆಗಳಿಂದ ಹಲವಾರು ವಿದ್ಯಾರ್ಥಿವೇತನಗಳು, ಫೆಲೋಷಿಪ್‌ಗಳು, ಅನೇಕ ಪ್ರಶಸ್ತಿಗಳು ಮತ್ತು ಪ್ರಶಂಸೆಗಳನ್ನೂ ಪಡೆದಿದ್ದಾರೆ.

ಉಸ್ತಾದ್ ಡಾ.ಮೊಹಸಿನ್ ಖಾನ್‌ ಅವರು ವಾರಾಂತ್ಯದಲ್ಲಿ ಮೈಸೂರಿನ ಕುವೆಂಪುನಗರದಲ್ಲಿ ಸಿತಾರ್ ತರಗತಿಗಳನ್ನು ನಡೆಸುತ್ತಾರೆ. ಯಾವುದೇ ವಯೋಮಿತಿಯ ನಿರ್ಬಂಧವಿಲ್ಲ. ಆಸಕ್ತರು ಮೊ: 90082 35695 ಸಂಪರ್ಕಿಸಬಹುದು.

31 ರಂದು ಕಾರ್ಯಕ್ರಮ:

31 ರಂದು ಸಂಜೆ 5.30ಕ್ಕೆ ರಾಮಕೃಷ್ಣ ನಗರದ ರಮಾಗೋವಿಂದ ರಂಗಮಂದಿರದಲ್ಲಿ ಕಲಾ ಸಂವಹನ ಟ್ರಸ್ಟ್ ಸಿತಾರ್‌ ಮಾಧುರ್ಯ- ಸಮೂಹ ಸಿತಾರ್‌ ವಾದನ, ರಾಗ್‌ ಚಿಕಿತ್ಸಾ ಪುಸ್ತಕ ಲೋಕಾರ್ಪಣೆ, ಸಿತಾರ್‌ ತರಗತಿಗಳ ಪ್ರಾರಂಭೋತ್ಸವ ಏರ್ಪಡಿಸಿದೆ.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಸಂಗೀತ ಕಟ್ಟಿ ಕುಲಕರ್ಣಿ, ಅಬ್ಕಾರಿ ಜಂಟಿ ಆಯುಕ್ತ ಬಸವರಾಜ್‌ ಹಡಪದ್‌, ಬಿಬಿಎಂಪಿ ವಿಭಾಗೀಯ ಆಯುಕ್ತ ಡಾ.ಬಿ.ಸಿ. ಸತೀಶ್‌ ಮುಖ್ಯ ಅತಿಥಿಗಳಾಗಿರುವರು. ಟ್ರಸ್ಟ್‌ ಅಧ್ಯಕ್ಷೆ ರಾಜೇಶ್ವರಿ ವಸ್ತ್ರದ್‌ ಅಧ್ಯಕ್ಷತೆ ವಹಿಸುವರು. ಡಾ.ಮೊಹಸಿನ್‌ ಖಾನ್‌ ಮತ್ತು ಶಿಷ್ಯರು ಸಮೂಹ ಸಿತಾರ್‌ ವಾದನ ನುಡಿಸುವರು. ನಿಸಾರ್‌ ಅಹ್ಮದ್‌, ಚಿನ್ಮಯ್‌ ನಾಮಣ್ಣವರ್‌, ಚಾರುದತ್‌ ಮಹಾರಾಜ್‌ ಸಹ ಕಲಾವಿದರು. ನಂತರ ಸಂಗೀತ ಕಟ್ಟಿ ಅವರು ಗಾಯನ ಪ್ರಸ್ತುತಪಡಿಸುವರು. ತಬಲದಲ್ಲಿ ಶ್ರೀಧರ್‌ ಮಾಂಡ್ರೆ, ಹಾರ್ಮೋನಿಯಂನಲ್ಲಿ ಸತೀಶ್‌ ಕೊಳ್ಳಿ ಸಾಥ್‌ ನೀಡುವರು.

PREV
Read more Articles on

Recommended Stories

ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
ವಸುಧೈವ ಕುಟುಂಬಕಂ’ ಆಶಯದ ಮೂರ್ತರೂಪ ಮೋಹನ್ ಭಾಗವತ್ ಜೀ