ರೈತರು ಸಾವಯವ ಕೃಷಿಗೆ ಆದ್ಯತೆ ನೀಡಿ: ರಾಜ್ಯಪಾಲ

KannadaprabhaNewsNetwork | Updated : May 16 2025, 06:33 AM IST
Follow Us

ಸಾರಾಂಶ

ರಾಸಾಯನಿಕ ಗೊಬ್ಬರ, ಕೀಟನಾಶಕ ಹೆಚ್ಚಿನ ಸಿಂಪಡಣೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುವುದರಿಂದ ರೈತರು ಸಾಂಪ್ರದಾಯಿಕ ನೈಸರ್ಗಿಕ ಮತ್ತು ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಸಲಹೆ ನೀಡಿದರು.

  ಬೆಂಗಳೂರು :  ರಾಸಾಯನಿಕ ಗೊಬ್ಬರ, ಕೀಟನಾಶಕ ಹೆಚ್ಚಿನ ಸಿಂಪಡಣೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುವುದರಿಂದ ರೈತರು ಸಾಂಪ್ರದಾಯಿಕ ನೈಸರ್ಗಿಕ ಮತ್ತು ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಸಲಹೆ ನೀಡಿದರು.

ಗುರುವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ(ಜಿಕೆವಿಕೆ) ಆಯೋಜಿಸಿದ್ದ 59ನೇ ಘಟಿಕೋತ್ಸವದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ವಿ.ಬಾಲಸುಬ್ರಮಣ್ಯನ್‌, ಇಫ್ಕೊ ಮಾರ್ಕೆಟಿಂಗ್‌ ನಿದೇರ್ಶಕ ಯೋಗೇಂದ್ರಕುಮಾರ್‌ ಅವರಿಗೆ ಗೌರವ ಡಾಕ್ಟರೇಟ್‌ ಮತ್ತು ಕೃಷಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಸ್ಮಾರ್ಟ್‌ ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ಲಾಭದಾಯಕ ಕೃಷಿಗೆ ರೈತರು ಹೆಚ್ಚು ಆದ್ಯತೆ ನೀಡಬೇಕು. 

ಸಾಂಪ್ರದಾಯಿಕ ಕೃಷಿ ಪದ್ಧತಿಗಳು ತಲೆಮಾರುಗಳ ಬುದ್ಧಿವಂತಿಕೆ ಮತ್ತು ಪರಿಸರ ಸಮತೋಲನದ ಮೇಲೆ ನಿರ್ಮಿಸಲ್ಪಟ್ಟಿವೆ. ಆದರೂ ಅವುಗಳನ್ನು 21ನೇ ಶತಮಾನದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯೊಂದಿಗೆ ಸಮನ್ವಯಗೊಳಿಸಬೇಕು. ನಿಖರ ಕೃಷಿಗಾಗಿ ಉಪಗ್ರಹ ಚಿತ್ರಣ ಮತ್ತು ಡ್ರೋನ್‌ಗಳನ್ನು ಬಳಕೆ, ನೀರಿನ ಸಂರಕ್ಷಣೆಗಾಗಿ ನಿಖರ ನೀರಾವರಿ ಪದ್ಧತಿ ಅಳವಡಿಕೆ, ನೈಜ ಸಮಯದ ಬೆಳೆ ನಿರ್ವಹಣೆಗಾಗಿ ಮೊಬೈಲ್‌ ಆಧಾರಿತ ಸಲಹಾ ಸೇವೆಗಳನ್ನು ನಿಯೋಜಿಸುವುದು ಕೃಷಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಎಐ ಮತ್ತು ಯಂತ್ರ ಕಲಿಕೆ ಈಗಾಗಲೇ ಬೆಳೆ ಮುನ್ಸೂಚನೆ, ಕೀಟ ಮತ್ತು ರೋಗ ಪತ್ತೆ, ಮಾರುಕಟ್ಟೆ ನಿಪುಣತೆ ಕ್ಷೇತ್ರಗಳಲ್ಲಿ ಕ್ರಾಂತಿಯನ್ನು ಉಂಟು ಮಾಡುತ್ತಿವೆ. ಈ ಶಕ್ತಿಶಾಲಿ ಸಾಧನಗಳನ್ನು ಬಳಸಿಕೊಳ್ಳಲು ಡಿಜಿಟಲ್‌ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಬೇಕೆಂದು ತಿಳಿಸಿದರು.

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿ, ಬೆಂಗಳೂರು ಕೃಷಿ ವಿವಿ ರಾಜ್ಯದ ಕೃಷಿ ಕ್ಷೇತ್ರದ ಬೆಳವಣಿಗೆಗೆ ಅನೇಕ ಕೊಡುಗೆ ನೀಡಿದೆ. ಸುಧಾರಿತ ಸಮಗ್ರ ಕೃಷಿ ಪದ್ಧತಿಗಳು, ಉತ್ತಮ ತಳಿಗಳು, ಒಣಬೇಸಾಯ ತಾಂತ್ರಿಕತೆಗಳು, ಸುಸ್ಥಿರ ನೀರು, ಪೋಷಕಾಂಶ, ಕಳೆ, ರೋಗ ಹಾಗೂ ಕೀಟ ನಿರ್ವಹಣಾ ಪದ್ಧತಿಗಳು ಸೇರಿದಂತೆ ಹಲವು ಕೃಷಿ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗಿದೆ ಎಂದರು.

ಕೃಷಿ ವಿವಿ ಕುಲಪತಿ ಡಾ.ಎಸ್.ವಿ.ಸುರೇಶ್, ಕುಲಸಚಿವ ಡಾ.ಕೆ.ಸಿ.ನಾರಾಯಣಸ್ವಾಮಿ, ಇಫ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಎಸ್.ಅವಸ್ಥಿ ಇದ್ದರು.

1271 ಮಂದಿಗೆ ಪದವಿ ಪ್ರದಾನ

ಘಟಿಕೋತ್ಸವದಲ್ಲಿ ಒಟ್ಟು 1271 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ 871 ವಿವಿಧ ಸ್ನಾತಕ ಪದವಿ, 311 ಸ್ನಾತಕೋತ್ತರ ಪದವಿ ಹಾಗೂ 89 ಡಾಕ್ಟೊರಲ್ ಪದವಿ ಮತ್ತು 63 ವಿದ್ಯಾರ್ಥಿಗಳಿಗೆ ಒಟ್ಟು 150 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.