ಈ ಬಾರಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಶೇ. 30-35ರಷ್ಟು ಇಳಿಮುಖ

Published : Apr 21, 2026, 08:15 AM IST
  akshaya tritiya

ಸಾರಾಂಶ

ಯುದ್ಧದ ಪರಿಣಾಮವೋ ಅಥವಾ ಚಿನ್ನ ದುಬಾರಿಯಾಗಿದ್ದರ ಪರಿಣಾಮವೋ ಗೊತ್ತಿಲ್ಲ, ಆದರೆ, ಈ ಬಾರಿಯ ಅಕ್ಷಯ ತೃತೀಯದಂದು ರಾಜ್ಯದಲ್ಲಿ ಚಿನ್ನ ಹಾಗೂ ಬೆಳ್ಳಿ ಮಾರಾಟ ಪ್ರಮಾಣ ಕಳೆದ ವರ್ಷಕ್ಕಿಂತ ಈ ಬಾರಿ ಶೇ.30ರಿಂದ 35ರಷ್ಟು ಕಡಿಮೆಯಾಗಿದೆ.

  ಬೆಂಗಳೂರು :  ಯುದ್ಧದ ಪರಿಣಾಮವೋ ಅಥವಾ ಚಿನ್ನ ದುಬಾರಿಯಾಗಿದ್ದರ ಪರಿಣಾಮವೋ ಗೊತ್ತಿಲ್ಲ, ಆದರೆ, ಈ ಬಾರಿಯ ಅಕ್ಷಯ ತೃತೀಯದಂದು ರಾಜ್ಯದಲ್ಲಿ ಚಿನ್ನ ಹಾಗೂ ಬೆಳ್ಳಿ ಮಾರಾಟ ಪ್ರಮಾಣ ಕಳೆದ ವರ್ಷಕ್ಕಿಂತ ಈ ಬಾರಿ ಶೇ.30ರಿಂದ 35ರಷ್ಟು ಕಡಿಮೆಯಾಗಿದೆ.

ಭಾನುವಾರ (ಏಪ್ರಿಲ್ 19) ಮತ್ತು ಸೋಮವಾರ(ಏಪ್ರಿಲ್ 20)ಎರಡು ದಿನ ಬೆಂಗಳೂರು ನಗರ ಹಾಗೂ ರಾಜ್ಯದ ಇತರೆಡೆ ಒಟ್ಟು 1,250 ಕೆಜಿ (ಒಂದೂಕಾಲು ಟನ್) ಚಿನ್ನ ಮಾರಾಟವಾಗಿದ್ದರೆ, ಇದೇ ಸಮಯದಲ್ಲಿ 10 ಟನ್ ಬೆಳ್ಳಿ ಮಾರಾಟವಾಗಿದೆ. ಕಳೆದ ವರ್ಷ ಇದೇ ದಿನದಂದು ಸುಮಾರು 1600 ಕೆಜಿ (1.6 ಟನ್) ಚಿನ್ನ, 15 ಟನ್ ಬೆಳ್ಳಿ ಮಾರಾಟವಾಗಿತ್ತು.

ತೂಕದ ಪ್ರಮಾಣದಲ್ಲಿ ಚಿನ್ನ ಹಾಗೂ ಬೆಳ್ಳಿ ಖರೀದಿ ಕಡಿಮೆಯಾಗಿದ್ದರೂ ಇವುಗಳ ಬೆಲೆ ಕಳೆದ ಬಾರಿಗಿಂತ ದೊಡ್ಡ ಪ್ರಮಾಣದಲ್ಲಿ ಹೆಚ್ಚಿರುವ ಕಾರಣ ಹಣದ ವ್ಯವಹಾರ ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ ಎಂದು ಬೆಂಗಳೂರು ಆಭರಣ ಮಾರಾಟಗಾರರ ಸಂಘದ ಖಜಾಂಚಿ ಶ್ರೀನಿವಾಸ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಬೆಂಗಳೂರಲ್ಲಿ 800 ಕೋಟಿ ವ್ಯವಹಾರ?:

ಈ ಬಾರಿ ಎರಡು ದಿನಗಳ ಚಿನ್ನ ಖರೀದಿಯಿಂದ 1800 ಕೋಟಿಯಿಂದ 2 ಸಾವಿರ ಕೋಟಿ ರುಪಾಯಿ ವ್ಯವಹಾರ ನಡೆದಿದೆ. ಬೆಂಗಳೂರು ನಗರವೊಂದರಲ್ಲೇ ಸುಮಾರು 800 ಕೋಟಿ ರೂಪಾಯಿಗಳ ವ್ಯವಹಾರ ನಡೆದಿದೆ. 22 ಕ್ಯಾರೆಟ್ ನ ಒಂದು ಗ್ರಾಂ ಆಭರಣ ಚಿನ್ನಕ್ಕೆ ಇಂದು 14,800 ರುಪಾಯಿ ಇದ್ದು, ಬೆಳ್ಳಿ 1 ಕೆಜಿಗೆ 2,75,000 ರುಪಾಯಿ ಇತ್ತು.

ಬೆಳ್ಳಿ ಬೆಂಗಳೂರಿನಲ್ಲಿ 4 ಟನ್ ಮಾರಾಟ

ಬೆಳ್ಳಿ ಬೆಂಗಳೂರಿನಲ್ಲಿ 4 ಟನ್ ಮಾರಾಟವಾಗಿದೆ. ನಗರ ಹೊರತುಪಡಿಸಿ ರಾಜ್ಯದ ಇತೆರೆಡೆಗಳಲ್ಲಿ 6 ಟನ್ ಬೆಳ್ಳಿ ಮಾರಾಟವಾಗಿದೆ. ಅಕ್ಷಯ ತೃತೀಯ ದಿನದಂದೇ ಚಿನ್ನ ಖರೀದಿಸಬೇಕೆಂದು ಕಳೆದ 20 ದಿನಗಳಿಂದ ಮುಂಗಡ ಹಣ ನೀಡಿ ಚಿನ್ನ ಕಾಯ್ದಿರಿಸಿರುವ ಮಹಿಳೆಯರು ಆಭರಣಗಳ ಅಂಗಡಿಗಳಲ್ಲಿ ರಾತ್ರಿ 12 ಗಂಟೆಯವರೆಗೂ ಕಾದಿದ್ದರು ಎಂದು ಶ್ರೀನಿವಾಸ್ ತಿಳಿಸಿದರು.

ಚಿನ್ನದ ಆಭರಣದಲ್ಲಿ ಈ ಬಾರಿ ಕಡಿಮೆ ತೂಕದ ಆಭರಣಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿತ್ತು. ಚಿನ್ನದ ಬೆಲೆ ಹೆಚ್ಚಿದ್ದ ಕಾರಣ ಸಾಮಾನ್ಯವಾಗಿ 10 ಗ್ರಾಂ ಖರೀದಿಸುವ ಮಹಿಳೆಯರು ಕೇವಲ 1 ಗ್ರಾಂ ಚಿನ್ನ ಖರೀದಿಸಿ ಸಮಾಧಾನ ಪಟ್ಟುಕೊಂಡಿದ್ದರು ಎಂದು ಶ್ರೀನಿವಾಸ್ ತಿಳಿಸಿದರು. 

PREV
Read more Articles on

Recommended Stories

ಮೇಜರ್‌ ಆರ್ಟೀರಿಯಲ್‌ ರಸ್ತೆ ಮೇ ಅಂತ್ಯಕ್ಕೆ ಮುಕ್ತ?
ಸಮಾನತೆಯ ಹರಿಕಾರ ಬಸವಣ್ಣನ ಸ್ಮರಣೆ: ಬೆಂಗಳೂರಿನ ವಿವಿಧೆಡೆ ಬಸವ ಜಯಂತಿ ಆಚರಣೆ