;Resize=(412,232))
ಯಡಿಯೂರಪ್ಪನವರು, ಪುರಂದರ ದಾಸರು ಹಾಡಿ ಕರೆದ ‘ಭಾಗ್ಯದ ಲಕ್ಷ್ಮಿಯೇ ನಿಮ್ಮ ಮನೆಗೆ ಬರುವವಳು’ ಎಂಬುದನ್ನು ನಿರೂಪಿಸಲು ‘ಭಾಗ್ಯ ಲಕ್ಷ್ಮೀ’ ಯೋಜನೆಯ ಮೂಲಕ ಜನ್ಮದಾತೆಯರ ಮಡಿಲಲ್ಲಿ ಹೆಣ್ಣು ಶಿಶು ನಗುವಂತೆ ಕಾವಲು ಕಾಯ್ದವರು.
ಈ ದಿನ 84ನೇ ಜನುಮ ದಿನ (ಸೀಲ್ ಮಾಡಿ)
ಹೋರಾಟದ ರಾಜಕಾರಣದಲ್ಲಿ ಪುರಸಭೆಯಿಂದ ಮುಖ್ಯಮಂತ್ರಿ ಪದವಿಯವರೆಗೂ ತಲುಪಿದ ಉದಾಹರಣೆಯನ್ನು ದೇಶದಲ್ಲಿ ಉಲ್ಲೇಖಿಸಬಹುದಾದರೆ ಅದರಲ್ಲಿ ಬಿ.ಎಸ್.ಯಡಿಯೂರಪ್ಪನವರ ಹೆಸರು ನಿಸ್ಸಂದೇಹವಾಗಿ ಮುಂಚೂಣಿಯಲ್ಲಿರುತ್ತದೆ. ಕರ್ನಾಟಕದ ರಾಜಕಾರಣದಲ್ಲಿ ಪರಿಶ್ರಮದ ಬೆವರು ಸುರಿಸಿ ಮೇಲೆದ್ದು ಬಂದ ‘ಬಂಗಾರದ ಮನುಷ್ಯ’ ಎಂದು ಹೇಳುವ ವ್ಯಕ್ತಿತ್ವ ಅವರದ್ದು.
ಇಟ್ಟ ಹೆಜ್ಜೆ-ಕೊಟ್ಟ ಮಾತು ಎಂದೂ ಸರಿಸದ ಗಟ್ಟಿ ನಿಲುವು, ಹೃದಯವಂತಿಕೆ, ಮಾತೃತ್ವದ ಸ್ಪಂದನೆ ಅವರ ವ್ಯಕ್ತಿತ್ವದ ವಿಶೇಷ ಎನ್ನುವುದು ಅವರನ್ನು ಬಲ್ಲ ಎಲ್ಲರೂ ಹೇಳುವ ಮಾತು. ಆಡಳಿತದಲ್ಲಿ, ಹೋರಾಟದಲ್ಲಿ ಈ ರಾಜ್ಯದ ಜನತೆ ಕಣ್ಣಾರೆ ಕಂಡ ಧೀಮಂತಿಕೆಯ ನಡೆ, ದೂರದೃಷ್ಟಿತ್ವದ ಕೊಡುಗೆ ಅವರ ರಾಜಕಾರಣದ ಮೈಲಿಗಲ್ಲುಗಳು. ಸಮಾಜದ ಕಟ್ಟಕಡೆಯ ಪ್ರಜೆಯ ನೋವು, ತುಡಿತ ಹಾಗೂ ಭಾವನೆಗಳನ್ನು ಕ್ಷಣಮಾತ್ರದಲ್ಲಿ ಅರ್ಥಮಾಡಿಕೊಳ್ಳುವ ವ್ಯಕ್ತಿತ್ವ ಬಿಎಸ್‌ವೈ ಅವರದ್ದು. ಏಕೆಂದರೆ ಅವರು ನೆಲಮಟ್ಟದಿಂದ ಬೆಳೆದು ಬಂದವರು, ಸಾಮಾನ್ಯನ ಪರಿಸ್ಥಿತಿಯನ್ನು ಅನುಭವಿಸಿ ಸಮಾಜಮುಖಿ ಹೋರಾಟಗಳಿಗೆ ತಮ್ಮನ್ನು ತೊಡಗಿಸಿಕೊಂಡವರು.
ಜನ್ಮ ಕೊಟ್ಟ ಭೂಮಿ ಬೂಕನಕೆರೆಯಾದರೆ, ಶಿಕಾರಿಪುರವನ್ನು ಕರ್ಮಭೂಮಿಯನ್ನಾಗಿಸಿಕೊಂಡು ಸಾರ್ವಜನಿಕ ಬದುಕಿಗೆ ತಮ್ಮನ್ನು ಸಮರ್ಪಿಸಿಕೊಂಡವರು. ಸಂಘ ಸಾಂಗತ್ಯ, ಸಂಸ್ಕಾರವಂತಿಕೆಯ ನಡೆ, ಸಂಘಟನೆಯ ಸಂಕಲ್ಪ, ಅವರ ವ್ಯಕ್ತಿತ್ವವನ್ನು ಪರಿಪಕ್ವವಾಗಿಸಿತು. ಇದರ ಪರಿಣಾಮದ ಫಲ ಅವರೊಳಗಿನ ಒಬ್ಬ ನೈಜ ನಾಯಕ ಹೊರಹೊಮ್ಮಲು ಕಾರಣವಾಯಿತು.
ತಂತ್ರ-ಕುತಂತ್ರಗಳ ವ್ಯೂಹವನ್ನು ಭೇದಿಸಿ, ವ್ಯಕ್ತಿಗತ ಕಷ್ಟನಷ್ಟಗಳನ್ನು ಲೆಕ್ಕಿಸದೇ ಕೌಟುಂಬಿಕ ಸೌಖ್ಯವನ್ನೂ ಬದಿಗೊತ್ತಿ ಪಕ್ಷ ಕಟ್ಟುವ ಕಾಯಕದಲ್ಲಿ ತಪಸ್ವಿಯಂತೆ ತಮ್ಮನ್ನು ತೊಡಗಿಸಿಕೊಂಡು ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಾರ್ಟಿಗೆ ಹೆಬ್ಬಾಗಿಲು ತೆರೆದು ಭದ್ರ ಬುನಾದಿ ಹಾಕಿದ ಜನಪ್ರಿಯ ನಾಯಕತ್ವದ ಕೀರ್ತಿ ಯಡಿಯೂರಪ್ಪನವರ ಹೆಸರಿನಲ್ಲಿ ಶಾಶ್ವತವಾಗಿ ಉಳಿದಿದೆ.
ಬಿಜೆಪಿಗೆ ಅಧಿಕಾರ:
ವಿಧಾನ ಸಭೆಯಲ್ಲಿ ಕೇವಲ ಇಬ್ಬರು ಸದಸ್ಯರ ಖಾತೆ ತೆರೆದ ಪಕ್ಷವೊಂದು ಶರವೇಗದಲ್ಲಿ ಬೆಳೆದು, ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವ ಹಂತ ತಲುಪಿತು ಎಂದರೆ ಅಂದು ಜನಸಂಘದ ಮೂಲದಿಂದ ಆರಂಭವಾದ ಸಂಘಟನೆಯನ್ನು ಯಡಿಯೂರಪ್ಪನವರು ವಿಸ್ತರಿಸಿದ ರೀತಿ, ಕಾರ್ಯಕರ್ತರನ್ನು ಸಜ್ಜುಗೊಳಸಿದ ಪರಿ, ಜನರ ಭಾವನೆಗಳನ್ನು ಸ್ಪರ್ಷಿಸಿದ ಮಾಂತ್ರಿಕ ಶಕ್ತಿಯಿಂದ ಮಾತ್ರ ಸಾಧ್ಯ ಎಂಬುದನ್ನು ಭಾರತೀಯ ಜನತಾ ಪಾರ್ಟಿ ಕರ್ನಾಟಕದಲ್ಲಿ ಸಾಕ್ಷೀಕರಿಸಿತು.
ಭೂಮಿಯನ್ನು ಮಾತೆ ಎಂದು ಪೂಜಿಸುವ ಈ ನೆಲದಲ್ಲಿ ಸ್ತ್ರೀ ಶಕ್ತಿಯನ್ನು ಭ್ರೂಣ ಹಂತದಲ್ಲಿಯೇ ಹೊಸಕಿ ಹಾಕುವ ನಿರ್ದಯತೆಯ ವ್ಯವಸ್ಥೆಯಿಂದ ಮಮ್ಮಲ ಮರುಗಿದ ಯಡಿಯೂರಪ್ಪನವರು, ಪುರಂದರ ದಾಸರು ಹಾಡಿ ಕರೆದ ‘ಭಾಗ್ಯದ ಲಕ್ಷ್ಮಿಯೇ ನಿಮ್ಮ ಮನೆಗೆ ಬರುವವಳು’ ಎಂಬುದನ್ನು ನಿರೂಪಿಸಲು ‘ಭಾಗ್ಯ ಲಕ್ಷ್ಮೀ’ ಯೋಜನೆಯ ಮೂಲಕ ಜನ್ಮದಾತೆಯರ ಮಡಿಲಲ್ಲಿ ಹೆಣ್ಣು ಶಿಶು ನಗುವಂತೆ ಕಾವಲು ಕಾಯ್ದವರು.
ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಆತ್ಮವಿಶ್ವಾಸ ತುಂಬಲು, ಅವರ ಶಿಕ್ಷಣ ಮುಂದುವರಿಕೆಗೆ ಬೆನ್ನೆಲುಬಾಗಿ ನಿಲ್ಲಲು, ಬೈಸಿಕಲ್ ಯೋಜನೆಯನ್ನು ತಂದು ವಿದ್ಯಾಸಾರಥಿಯಾದವರು. ಮಣ್ಣಿನ ಮಕ್ಕಳ ಬದುಕು ಹಸನಾಗಿಸುವ ಕೈಂಕರ್ಯ ತೊಟ್ಟು, ಅವರಿಗಾಗಿಯೇ ದಶಕಗಳ ಕಾಲ ಹೋರಾಟವನ್ನು ಕೈಗೆತ್ತಿಕೊಂಡ ಯಡಿಯೂರಪ್ಪನವರು ಕರುನಾಡಿನಲ್ಲಿ ಹಸಿರು ಕ್ರಾಂತಿಯನ್ನು ಚಿಮ್ಮಿಸಲು ದೇಶದಲ್ಲೇ ಪ್ರಥಮಬಾರಿಗೆ ‘ಕೃಷಿ ಬಜೆಟ್’ ಮಂಡಿಸಿ ವ್ಯವಸಾಯ ವಲಯಕ್ಕೆ ಭರವಸೆಯ ಸಂದೇಶ ರವಾನಿಸಿದರು.
ಬಾಳ ಮುಸ್ಸಂಜೆಯಲ್ಲಿ, ಅಭಯವನ್ನರಸಿ ನಿರೀಕ್ಷೆಗಳ ಹಾದಿಯಲ್ಲಿದ್ದ ಹಿರಿಯ ನಾಗರಿಕರಿಗೆ ಭರವಸೆಯ ಬೆಳಕು ಚೆಲ್ಲಲು ‘ಸಂಧ್ಯಾ ಸುರಕ್ಷೆ’! ಯೋಜನೆಯನ್ನು ಜಾರಿಗೆ ತಂದವರು. ಕಟ್ಟಕಡೆಯ ಪ್ರಜೆಯೂ ಸಕಾಲಿಕ ಆರೋಗ್ಯ ಸೇವೆ ಪಡೆಯುವುದು ಅವನ ಹಕ್ಕಾಗಬೇಕೆಂದು ಧೃಡ ನಿಲುವು ತಾಳಿದವರು ಯಡಿಯೂರಪ್ಪನವರು, ಈ ಕಾರಣಕ್ಕಾಗಿ ‘ದೇವ ಧನ್ವಂತರಿಯ ರಾಯಭಾರಿ’ಯಂತೆ ‘ಆರೋಗ್ಯ ಕವಚ’ ಯೋಜನೆ ಜಾರಿಗೆ ತಂದು 24 ಗಂಟೆಯೂ ಕಾರ್ಯ ನಿರ್ವಹಿಸುವ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸಿ, ಉಚಿತ ತುರ್ತು ವೈದ್ಯಕೀಯ ನೆರವು ದೊರಕಲು ಮಾನವೀಯ ಸ್ಪಂದನೆಯ ಹೆಜ್ಜೆ ಇಟ್ಟರು.
ಗೋಪಾಲಕ ರೈತರಿಗೆ ನೆರವಾಗಲು ಹಾಲಿಗೆ ಪ್ರೋತ್ಸಾಹ ಧನ ನೀಡಿ, ನೇಕಾರರು ಹಾಗೂ ಮೀನುಗಾರರಿಗೆ ಆರ್ಥಿಕ ಚೈತನ್ಯ ತುಂಬುವ ಮೂಲಕ ಅನೇಕ ಕಾಯಕ ಸಮುದಾಯಗಳಿಗೆ ವಿಶೇಷ ಅನುದಾನ ಯೋಜನೆಗಳನ್ನು ಯಡಿಯೂರಪ್ಪನವರು ತಮ್ಮ ಅವಧಿಯಲ್ಲಿ ಜಾರಿಗೆ ತಂದರು. ಒಣಗಿ ಬರಡಾದ ಕೆರೆ-ಕಟ್ಟೆಗಳನ್ನು ಕಂಡೊಡನೆ ಚಲಿಸುತ್ತಿದ್ದ ತಮ್ಮ ವಾಹನವನ್ನು ನಿಲ್ಲಿಸಿ ಆ ಕೆರೆ-ಕಟ್ಟೆಗಳನ್ನು ತುಂಬಿಸುವುದು ಹೇಗೆ ಎಂದು ಚಿಂತಿಸುತ್ತಿದ್ದರು, ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ಚರ್ಚಿಸುತ್ತಿದ್ದರು. ಕೆರೆ ಕಟ್ಟೆಗಳನ್ನು ತುಂಬಿಸಲು ತಪಸ್ವೀ ಯೋಜನೆಗಳನ್ನು ರೂಪಿಸಿ ಆಧುನಿಕ ಭಗೀರಥನಾಗಿ ಗ್ರಾಮೀಣ ಪ್ರದೇಶದ ಜನರ ಅಭಿಮಾನದ ಹೊಳೆಯಲ್ಲಿ ತೇಲಿದರು.
ಕಷ್ಟ ಕಾಲದಲ್ಲಿ ಏಕಾಂಗಿ ಹೋರಾಟ:
ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡ ನಾಲ್ಕು ಅವಧಿಯಲ್ಲಿಯೂ ಒಂದಲ್ಲಾ ಒಂದು ಕಷ್ಟ, ಸವಾಲುಗಳನ್ನು ಎದುರಿಸಿದರು. ಬಹುಮತ ಸಾಬೀತು ಪಡಿಸುವ ಪರೀಕ್ಷೆ ಒಂದೆಡೆಯಾದರೆ, ನೆರೆ ಹಾವಳಿ, ಕೊರೋನಾದಂತಹ ಸಾವಿನ ಸುನಾಮಿಯ ರೋಗ ಬಾಧೆಗಳು ಎಂದೂ ಕಂಡು ಕೇಳರಿಯದ ರೀತಿಯಲ್ಲಿ ಜನರನ್ನು ಆವರಿಸಿಕೊಂಡಿದ್ದು ಒಂದು ಕರಾಳ ಇತಿಹಾಸ. ಇಂತಹ ಸಂದರ್ಭವನ್ನು ಎದೆಗುಂದದೇ ಎದುರಿಸಿ ಅದರಲ್ಲೂ ನೆರೆಹಾವಳಿ ಸಂದರ್ಭದಲ್ಲಿ ಏಕಾಂಗಿಯಾಗಿ ರಾಜ್ಯ ಸುತ್ತಿ ಅನಾಥ ಪ್ರಜ್ಞೆ ಎದುರಿಸುತ್ತಿದ್ದ ಲಕ್ಷಾಂತರ ಕುಟುಂಬಗಳ ಬದುಕಲ್ಲಿ ಆತ್ಮವಿಶ್ವಾಸ ತುಂಬಿ ‘ಆಶ್ರಯ ದೀಪ’ ಬೆಳಗಿಸಿ ನೊಂದವರ ಪಾಲಿಗೆ ಆಪತ್ಬಾಂಧವನಾದರು.
ಹೀಗೆ ಯಡಿಯೂರಪ್ಪನವರ ಸಾರ್ವಜನಿಕ ಜೀವನದ ಹಾದಿ ಹಾಗೂ ಮುಖ್ಯಮಂತ್ರಿಯಾಗಿ ಅಧಿಕಾರ ಸವೆಸಿದ ಅವಧಿಯಲ್ಲಿ ಎಂದೂ ಹೂವ ರಾಶಿ ಚೆಲ್ಲಲಿಲ್ಲ, ಎದುರಾದದ್ದೆಲ್ಲಾ ಬಹುತೇಕವಾಗಿ ಕಲ್ಲು-ಮುಳ್ಳುಗಳೇ, ಅವನ್ನೆಲ್ಲಾ ಮೆಟ್ಟಿ ನಿಂತು ಆಡಳಿತ ನಡೆಸಿ ಧನ್ಯತೆ ಭಾವ ಹೊಂದಿದ ಬಿಎಸ್‌ವೈ ಅಧಿಕಾರದ ಸುತ್ತ ಎಂದೂ ಗಿರಿಕಿ ಹೊಡೆಯಲಿಲ್ಲ, ಹಪಾಪಿತನ ಹತ್ತಿರ ಸುಳಿಯಗೊಡಲಿಲ್ಲ.
ಬದ್ಧತೆಯಿಲ್ಲದ ಸಿದ್ಧತೆ, ಅಶಿಸ್ತು, ಸಮಯಪ್ರಜ್ಞೆಯ ಕೊರತೆ ಕಂಡಾಗ ಮಾತ್ರ ಅವರು ತೋರಗೊಡುತ್ತಿದ್ದ ಕೋಪ, ಸಿಡುಕುಗಳ ಹಿಂದಿದ್ದುದು ಸಾತ್ವಿಕತೆ, ಅದಮ್ಯ ಪ್ರೀತಿ ಹಾಗೂ ತನ್ನ ಜನ ವೈಫಲ್ಯದ ಮುಖ ಕಾಣಬಾರದೆಂಬ ಕಾಳಜಿ ಮಾತ್ರ. ಯಡಿಯೂರಪ್ಪನವರು ಅವರ ಸುದೀರ್ಘ ರಾಜಕೀಯ ಜೀವನದಲ್ಲಿ ಕುಟುಂಬ ರಾಜಕಾರಣವನ್ನು ಎಂದೂ ಪ್ರೋತ್ಸಾಹಿಸಲಿಲ್ಲ. ಆದರೆ ಅನಿರೀಕ್ಷಿತ ರಾಜಕೀಯ ತಿರುವಿನಲ್ಲಿ ಈಗಿನ ಸಂಸದರಾಗಿರುವ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರು ಜನರ ಒತ್ತಡಕ್ಕೆ ಮಣಿದು ಚುನಾವಣಾ ರಾಜಕೀಯಕ್ಕೆ ಅಡಿಯಿಡಬೇಕಾಯಿತು. ಅದೇರೀತಿಯಲ್ಲಿ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಸೆಣಸಲು ವಿಜಯೇಂದ್ರರೇ ಬೇಕೆಂದು ಸ್ಥಳೀಯರು ಪಟ್ಟುಹಿಡಿದು ಅವರನ್ನು ಬಲವಂತದಿಂದ ಕರೆತರಲಾಗಿ ಅವರು ರಾಜಕಾರಣ ಪ್ರವೇಶಿಸಬೇಕಾಯಿತು. ಇಬ್ಬರೂ ಸಹೋದರರು ನಿಜವಾದ ಜೋಡೆತ್ತುಗಳಂತೆ ಯಡಿಯೂರಪ್ಪನವರ ಆದರ್ಶದ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ.
ಅಪ್ಪನ ಹಾದಿಯಲ್ಲಿ ಪುತ್ರರು:
ರಾಘವೇಂದ್ರರು ಶಿವಮೊಗ್ಗವನ್ನು ಅಭಿವೃದ್ಧಿಯ ನಂದನವನವನ್ನಾಗಿ ನಿರ್ಮಿಸಿ ಶತಮಾನಗಳು ಕಳೆದರೂ ನೆನಪಿನಲ್ಲುಳಿಯುವ ಯೋಜನೆಗಳನ್ನು ಕಾರ್ಯಗತಗೊಳಿಸಿ ಮುನ್ನಡೆದಿದ್ದಾರೆ. ಬಿ.ವೈ.ವಿಜಯೇಂದ್ರ ಅವರು ಯಡಿಯೂರಪ್ಪನವರ ಸಂಘಟನಾ ಚತುರತೆಯ ತಂತ್ರವನ್ನು ಅನುಸರಿಸಿ, ಪಕ್ಷ ಸಂಘಟನೆಗೆ ತಮ್ಮನ್ನು ಸಮರ್ಪಿಸಿಕೊಂಡು, ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗಿ ಮುನ್ನಡೆದಿದ್ದಾರೆ. ಯಡಿಯೂರಪ್ಪ ಅವರು ಕುಟುಂಬ ‘ರಾಜಕಾರಣದ ಬೇರು’ ಗಟ್ಟಿಗೊಳಿಸಬೇಕೆಂಬ ಉದ್ದೇಶವಿದ್ದಿದ್ದರೆ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ಸಂದರ್ಭದಲ್ಲಿ ಪುತ್ರರನ್ನು ಸಚಿವರನ್ನಾಗಿಸುವ ಬೇಡಿಕೆ ಇಡುತ್ತಿದ್ದರು. ಆದರೆ ಅಂತಹ ಯಾವ ಚಿಂತನೆಯನ್ನೂ ತಲೆಗೇರಿಸಿಕೊಳ್ಳದ ಅವರು ಕುಟುಂಬದ ಸದಸ್ಯರೂ ಕೂಡ ಸಾಮಾನ್ಯ ಕಾರ್ಯಕರ್ತರಂತೆ ನಡೆದುಕೊಳ್ಳಬೇಕು, ಬೆಳೆಯಬೇಕು ಎಂಬ ಮನೋಭಾವವನ್ನು ಪ್ರದರ್ಶಿಸಿದ್ದಾರೆ.
ತಮ್ಮ ಸುಧೀರ್ಘ 50 ವರ್ಷಗಳ ಸಾರ್ವಜನಿಕ ಜೀವನದ ಹಾದಿಯಲ್ಲಿ ಅವರು ಜನರಿಗಾಗಿ, ನಾಡಿಗಾಗಿ ಕೊಟ್ಟ ಕೊಡುಗೆಗಳೆಲ್ಲಾ ಮರೆಯಲಾಗದ ಸಿಹಿಯ ಬುತ್ತಿಗಳೇ, ಪರಿಶುಭ್ರ ಕಮಲ ನೆನಪಿಸುವ ಅರಳಿ ನಿಂತ ಶಾಶ್ವತ ಯೋಜನೆಗಳು.
‘ಬೆಂಕಿಯಲ್ಲೂ ಅರಳಿದ ಹೂವು -- ಬೆವರ ಹೊದ್ದು ಮೇಲೆದ್ದು ಬಂದ ಬಂಗಾರದ ಮನುಷ್ಯ’ ಯಡಿಯೂರಪ್ಪ ಎಂದು ಹೇಳಲು ಕಾರಣಗಳು ನೂರು, ಉದಾಹರಣೆಗಳು ಲೆಕ್ಕವಿಡದಷ್ಟು. ಇದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ ಎಂಬುದನ್ನು ಅವರನ್ನು ಬಲ್ಲವರೆಲ್ಲರೂ ಒಪ್ಪುತ್ತಾರೆ, ನಿಷ್ಕಲ್ಮಶ ಪ್ರೀತಿಯ ಅಸಂಖ್ಯಾತ ಅಭಿಮಾನಿ ಜನರು ಅವರನ್ನು ‘ಭೂಮಾತೆಯ ಮಡಿಲ ಬಂಗಾರ’ ಎಂದು ಇಂದಿನ ಅವರ ಜನ್ಮದಿನವನ್ನು ಸಂಭ್ರಮಿಸುತ್ತಾರೆ.