;Resize=(412,232))
- ಡಾ. ಗುರುಪ್ರಸಾದ್ ಕಾಗಿನೆಲೆ, ರಾಚೆಸ್ಟರ್, ಮಿನೆಸೊಟಾ
ಬೆಂಗಳೂರಿನಲ್ಲಿದ್ದಿದ್ದರೆ ನಾನೂ ಇವೆಲ್ಲ ಮಾಡಬಹುದಿತ್ತು ಎಂದೆನಿಸಿ..
ಬದುಕಲು ಬೇಕಾದ ಅಮೆರಿಕಾ ಸಾಯಲು ಬೇಡವಂತೆ- ಇದು ಬಹಳ ಜನ ಭಾರತೀಯ ಅಮೆರಿಕನ್ನರ ಮನಸ್ಥಿತಿ. ಬರೇ ಅಮೆರಿಕನ್ನರಲ್ಲ. ಬಹಳಷ್ಟು ಜನ ಊರುಬಿಟ್ಟು ಬೇರೊಂದು ಕಡೆ ನೆಲಸಿರುವವರ ಮನೋಭಾವ. ಊರು ಎನ್ನುವುದು ನಾವು ಹುಟ್ಟಿದ್ದೋ, ಇದ್ದದ್ದೋ ಅಥವಾ ಇರುವುದೋ. ಈ ಜಿಜ್ಞಾಸೆ ಮುಂಚಿನಿಂದ ಇದ್ದೇ ಇದೆ. ಹಾಗೇ ವಲಸೆ ಎನ್ನುವುದು ಕೂಡ.
ಕೆಲಸ, ಭವಿಷ್ಯ ಮುಂತಾದ ಕಾರಣಗಳಿಗಾಗಿ ಬೇರೆ ದೇಶಕ್ಕೆ ಹೋಗಿ ನೆಲಸಿ ವಿಶ್ರಾಂತ ಬದುಕಿಗೆ ಭಾರತಕ್ಕೆ ಬರುವುದರಲ್ಲಿ ಬೇರೆ ದೇಶದಲ್ಲಿರುವವರಿಗೆ ಹೇಗೋ ಗೊತ್ತಿಲ್ಲ, ಆದರೆ, ಅಮೆರಿಕಾದಲ್ಲಿರುವ ಭಾರತೀಯರಿಗೆ ಕೆಲ ಅನುಕೂಲಗಳಂತೂ ಇದ್ದೇ ಇವೆ. ಉದಾಹರಣೆಗೆ, ಅಮೆರಿಕಾದಂತ ದೇಶದಲ್ಲಿ ಹಿರಿಯ ನಾಗರಿಕರಿಗೆ ದೊರಕುವ ಆರೋಗ್ಯವಿಮೆ, ಪಿಂಚಣಿ ಮುಂತಾದ ಅನುಕೂಲಗಳು ಎಲ್ಲರಿಗೂ ಸರಿಸಮವಾಗಿ ಸಿಗುವುದಿಲ್ಲ. ಪಿಂಚಣಿಯೆಂಬುದಂತೂ ಕೆಲವೇ ಕೆಲವರಿಗೆ ಲಭ್ಯ ಎಂದು ನನ್ನ ಅನಿಸಿಕೆ. ವಯಸ್ಸಾದಂತೆ ಆರೋಗ್ಯದ ಏರುಪೇರಾದಾಗ ಉಳಿಸಿದ ಹಣದ ಹೆಚ್ಚುಪಾಲನ್ನು ಆಸ್ಪತ್ರೆಯ ಬಿಲ್ಲಿಗೆ ಕಟ್ಟುವ ಪರಿಸ್ಥಿತಿ ಬಂದಾಗ ಸರಿಯಾದ ಪ್ಲಾನಿಂಗ್ ಇಲ್ಲದಿದ್ದಲ್ಲಿ ಜೀವನ ನಿರ್ವಹಣೆಯೇ ಕಷ್ಟವಾಗುವ ಪ್ರಸಂಗ ಬರಬಹುದು. ಬಹಳಷ್ಟು ಜನಕ್ಕೆ ಇದು ಮುಂಚಿನಿಂದಲೇ ಅರಿವಿರುವುದರಿಂದ ಎಲ್ಲರೂ ಇದನ್ನು ನಿರೀಕ್ಷಿಸಿಯೇ ಇರುತ್ತಾರೆ. ಆರ್ಥಿಕ ಪ್ಲಾನಿಂಗ್ ಚೆನ್ನಾಗಿಯೇ ಇರುತ್ತದೆ. ಆದರೆ ಆರೋಗ್ಯವೆನ್ನುವುದು ಹೀಗೇ ಇರುತ್ತದೆ ಎಂದು ಯಾರೂ ನಿರೀಕ್ಷಿಸದೇ ಇರುವ ಕಾರಣ ಅವಘಡಗಳಿಗೆ ಅವಕಾಶ ಇದ್ದೇ ಇರುತ್ತದೆ. ಭಾರತದಲ್ಲಿ ಸುಧಾರಿಸಿರುವ ವೈದ್ಯ ವ್ಯವಸ್ಥೆ ಮತ್ತು ಮಧ್ಯಮ ಜೀವನ ಮಟ್ಟ ವಿಶ್ರಾಂತ ನಾಗರಿಕರಿಗೆ ಒಂದು ಮುಖ್ಯ ಆಕರ್ಷಣೆಯಾಗಿರಬಹುದು.
ಇನ್ನು ಒಂಟಿತನ. ಅಮೆರಿಕಾದ ಸಮಾಜದಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಪ್ರಾಮುಖ್ಯ ಜಾಸ್ತಿ. ‘ಮೈ, ಮೈನ್, ಐ ಡೋಂಟ್ ಕೇರ್, ಹೂ ಕೇರ್ಸ್’ ಗಳು ಮಕ್ಕಳ ಬಾಯಲ್ಲಿ ಪುಂಖಾನುಪುಂಖವಾಗಿ ಹೊರಡುವುದನ್ನು ಮೊದಲು ಕೇಳಿದಾಗ ನನಗೆ ಬಹಳವೇ ಕಸಿವಿಸಿಯಾಗುತ್ತಿತ್ತು. ಜನ ತಮ್ಮಒಂದು ಸ್ಪೇಸ್ ಒಳಗೆ ಯಾರನ್ನೂ ಬಿಟ್ಟುಕೊಳ್ಳುವುದಿಲ್ಲ. ನಾವೆಲ್ಲ ಬೆಳೆದಾಗ ಸಣ್ಣಸಣ್ಣ ಮನೆಗಳಲ್ಲಿ ಕೆಲವೊಮ್ಮೆ ಕೂಡುಕುಟುಂಬಗಳಲ್ಲಿ ಸ್ನೇಹಿತರ ನಡುವೆ ಬೆಳೆದದ್ದು. ಹಾಗಾಗಿ ಮನೆಯಲ್ಲಿ ಒಂಟಿತನವೆನ್ನುವುದು ಇರಲೇ ಇಲ್ಲ. ಆದರೆ, ಇಲ್ಲಿ ನಾವು ಬಂದ ತಕ್ಷಣ ಜನರಲ್ಲಿ ಕಾಣುವುದು ಈ ‘ಸ್ಪೇಸ್’ ಬಗ್ಗೆ ಇರುವ ವಿಪರೀತವಾದ ಕಾಳಜಿ. ಯಾರನ್ನೂ ಯಾರೂ ಮುಟ್ಟಬಾರದು, ಸರತಿಯ ಸಾಲಿನಲ್ಲಿ ನಿಂತಾಗಲೂ ಮುಂದಿನವರಿಗೆ ಹಿಂದಿನವರಿಗೆ ಜಾಗ ಬಿಟ್ಟು ನಿಲ್ಲಬೇಕು, ಪ್ರತ್ಯೇಕವಾದ ಕೋಣೆ, ಬಾತ್‍ರೂಮು, ಟಾಯ್‍ಲೆಟ್, ಫ್ಲಷ್ ಮಾಡಿದ್ದು ಲಿವಿಂಗ್ ರೂಮಿನಲ್ಲಿ ಕೂತವರಿಗೆ ಕೇಳಬಾರದ ಹಾಗೆ ಬಾತ್‍ರೂಮಿಗೆ ಸೌಂಡ್ ಬಫರ್, ಪ್ರತ್ಯೇಕ ಕಾರು- ಇವೆಲ್ಲವನ್ನೂ ಇಲ್ಲಿ ಬದುಕಬೇಕಾದರೆ ರೂಢಿಸಿಕೊಂಡೇ ಇರುತ್ತೇವೆ. ಒಂದು ಘಟ್ಟದಲ್ಲಿ ಇವೆಲ್ಲ ಇಷ್ಟವೂ ಆಗಿರುತ್ತದೆ. ಆದರೆ ನಮಗೆ ವಯಸ್ಸಾದಂತೆ ಯಾರನ್ನೂ ಹತ್ತಿರ ಬಿಟ್ಟುಕೊಳ್ಳದ ಈ ಸ್ಪೇಸ್ ಒಂಟಿತನವಾಗಿಬಿಡುತ್ತದೆ. ಆಗ ಅದನ್ನು ಅನುಭವಿಸುವುದು ಕಷ್ಟವಾಗುತ್ತದೆ.
ಈ ಒಂಟಿತನವನ್ನು ನೀಗಿಸುವುದಕ್ಕಾಗಿ ವಿಶ್ರಾಂತ ಎನ್ನಾರೈಗಳು ಏನೇನೋ ಮಾಡಬೇಕಾಗುತ್ತದೆ. ಪ್ರಪಂಚ ಪರ್ಯಟನೆ, ಯೋಗ, ಅಧ್ಯಾತ್ಮ, ಸಮಾಜಸೇವೆ-ಇತ್ಯಾದಿ, ಇತ್ಯಾದಿ. ಇದು ಭಾರತದ ಹಿರಿಯ ನಾಗರಿಕರಿಗಿಂತ ಭಿನ್ನವೇನಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ವಾರಕ್ಕೊಮ್ಮೆ ಅಪ್ಡೇಟಾಗುವ ಪುಸ್ತಕ ಬಿಡುಗಡೆ ಸಂಭ್ರಮದ ಚಿತ್ರಗಳು, ಸಾಹಿತ್ಯ ಸಮಾರಂಭಗಳು, ಯುಟ್ಯೂಬಿನ ಅಧ್ಯಾತ್ಮ ವಿಡಿಯೋಗಳು, ಪ್ರವಾಸದ ರೀಲುಗಳನ್ನು ಮನೆಯಲ್ಲಿ ಬೆಳಿಗ್ಗೆ ಕಾಫಿ ಕುಡಿಯುತ್ತಾ ಬ್ರೌಸು ಮಾಡುವ ಹಿರಿಯರಿಗೆ ಈ ಫೋಮೋ (FOMO- Fear of missing out) ಕಾಡುವುದು ಅಚ್ಚರಿಯ ಸಂಗತಿಯೇನಲ್ಲ. ಬೆಂಗಳೂರಿನಲ್ಲಿದ್ದಿದ್ದರೆ ನಾನೂ ಇವೆಲ್ಲ ಮಾಡಬಹುದಿತ್ತು ಎಂದೆನಿಸಿ ವರ್ಷಕ್ಕೆ ಒಂದೆರಡು ಬಾರಿಯಾದರೂ ಭಾರತದಲ್ಲಿ ಬಂದಿಳಿಯಲು ಒಂದು ಸಣ್ಣ ಅಪಾರ್ಟ್‌ಮೆಂಟನ್ನು ಕೊಂಡು ‘ಇಲ್ಲೊಂದಿಷ್ಟು ದಿನ, ಅಲ್ಲೊಂದಿಷ್ಟು ದಿನ’ ಮಾಡುತ್ತಾರೆ.
ಆದರೆ ವಾಸ್ತವ ಎಂದೂ ಎಲ್ಲರನ್ನೂ ಕಾಡುತ್ತದೆ (Reality is a bitch:) ಶಿಕಾಗೋದಲ್ಲಿಯೋ, ಸ್ಯಾನ್ ಹೋಸೆಯ ಮಗಳಿಗೆ ಮಗುವಾಗಿ ‘ಹೆಲ್ಪ್’ಗೆ (ಬಾಣಂತನಕ್ಕಲ್ಲ ಅಮ್ಮ ಬೇಕಾಗುತ್ತದೆ. ನೋಡನೋಡುತ್ತಿದ್ದಂತೆ, ಮಗುವಿಗೆ ಅನ್ನಪ್ರಾಶನ, ಉಪನಯನ, ಹೈಸ್ಕೂಲು ಗ್ರಾಜುಯೇಶನ್ ಎಂದೆಲ್ಲಾ ಮತ್ತೆ ಮತ್ತೆ ಮಕ್ಕಳು, ಮೊಮ್ಮಕ್ಕಳಿಗೆ ‘ಹೆಲ್ಪ್’ ಜಾಸ್ತಿಯೇ ಬೇಕಾಗುತ್ತಿದ್ದಾಗ ಬೆಂಗಳೂರಿನ ಅಪಾರ್ಟ್‍ಮೆಂಟೂ ಮಾರಿ ಟ್ಯಾಂಪಾದಲ್ಲಿ ಇರುವ ಶಾಂತಿನಿಕೇತನವೆಂಬ
ಇದು ಹೇಗಿರುತ್ತದೆ ಎಂದರೆ ಎಲ್ಲ ಅವರವರಿಗೇ ಬಿಟ್ಟಲ್ಲಿ ಭಾರತಕ್ಕೆ ಬಂದು ನೆಲಸಬೇಕು ಎಂದು ಇಷ್ಟವಿರುವವರೂ ತಮ್ಮ ಹಿಂದಿನ ದಿನಗಳನ್ನು ನೆನೆಸಿಕೊಂಡು ‘ನಮ್ಮ ಅಪ್ಪ, ಅಮ್ಮಂದಿರಿಗೆ ನಾವು ಬೇಕಾಗಿದ್ದಾಗ ಇಲ್ಲಿ ಬಂದೆವು. ಈಗ ನಮ್ಮ ಮಕ್ಕಳಿಗೆ ನಾವು ಬೇಕಾದಾಗ ಅಲ್ಲಿಗೆ ಹೋದರೆ ಎಂತ ಚೆನ್ನಾಗಿರುತ್ತೆ’ ಎನ್ನುವ ಮುಲಾಜಿನಲ್ಲಿ ಅಲ್ಲಿ, ಇಲ್ಲಿ ಇದ್ದುಕೊಂಡು ಬದುಕು ಸಾಗಿಸುತ್ತಾರೆ.
ಇದು ನನ್ನ ಅನುಭವ. ನಾನೊಬ್ಬ ಭಾರತದಲ್ಲಿ ಸಣ್ಣ ಊರಿನಲ್ಲಿ ಕೆಳ ಮಧ್ಯಮವರ್ಗದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿಕೊಂಡು ಬೆಳೆದವನು. ಹಾಗಾಗಿ ಇದು ಬಹಳ ಪೂರ್ವಗ್ರಹದಿಂದ ಕೂಡಿದೆ.
- ಶಾಂತಲಾ ಭಂಡಿ, ಕ್ಯಾಲಿಫೋರ್ನಿಯಾ
‘ಭಾರತ ಎನ್ನಾರೈಗಳಿಗೆ ರಿಟೈರ್‌ಮೆಂಟ್ ಹೋಮ್ ಆಗ್ತಿದೆ’ ಎನ್ನುವ ಮಾತನ್ನು ವೈಯಕ್ತಿಕವಾಗಿ ನಾನು ನಂಬುವುದಿಲ್ಲ. ಭಾವನಾತ್ಮಕ ಮತ್ತು ಆರ್ಥಿಕ ಅಂಶಗಳು, ಅಭಿವೃದ್ಧಿಗೊಳ್ಳುತ್ತಿರುವ ಜೀವನಶೈಲಿ, ಈ ಎಲ್ಲವುಗಳ ಕಾರಣದಿಂದಾಗಿ ಭವಿಷ್ಯದಲ್ಲಿ ಭಾರತವು ಕೆಲವು NRIಗಳಿಗೆ ನಿವೃತ್ತಿ ತಾಣವಾಗಬಹುದು. ನಾನು ಕಂಡಂತೆ ಅಮೇರಿಕಾವಾಸಿಗಳು ಭಾರತಕ್ಕೆ ಮರಳಿರುವುದು ನಿವೃತ್ತಿಯ ನಂತರವಲ್ಲ. ವೃದ್ಧ ತಂದೆತಾಯಿಯರ ಸಾಂಗತ್ಯ ಬಯಸಿ ಮತ್ತು ಕೆಲವರು ತಂದೆತಾಯಿಯರ ಅನಾರೋಗ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಮರಳಿದವರಲ್ಲಿ ಬೆರಳೆಣಿಕೆಯಷ್ಟು ಜನ ಅಮೇರಿಕಾಕ್ಕೆ ಹಿಂದಿರುಗಿಲ್ಲ. ತಮ್ಮ ವೃದ್ಧ ತಂದೆತಾಯಿಯರನ್ನು ನೋಡಿಕೊಳ್ಳುವ ಸಲುವಾಗಿ ಗಂಡ-ಹೆಂಡತಿ ಪಾಳಿಯ ಪ್ರಕಾರ ಮೂರು ತಿಂಗಳು ಭಾರತದಲ್ಲಿ, ಮೂರು ತಿಂಗಳು ಅಮೇರಿಕಾದಲ್ಲಿ ಕಳೆಯುತ್ತಿರುವುದನ್ನು ಕೂಡ ಇತ್ತೀಚೆಗೆ ಕಾಣುತ್ತಿದ್ದೇವೆ. ವೃದ್ಧ ತಂದೆತಾಯಿಯರನ್ನು ಅಮೇರಿಕಾಕ್ಕೆ ಕರೆತಂದು ಅವರಿಗೆ ಅಮೇರಿಕಾದ ನಾಗರಿಕತ್ವ ಕೊಡಿಸಿ ತಮ್ಮೊಂದಿಗೆ ಇರಿಸಿಕೊಂಡವರೂ ಇದ್ದಾರೆ.
ಅಮೇರಿಕಾದಲ್ಲಿ ಭಾರತೀಯ ಸಂಸ್ಕೃತಿಯು ಸಮುದಾಯಗಳಲ್ಲಿ, ಸಂಘಟನೆಗಳಲ್ಲಿ ವೃದ್ಧಿಯಾಗುತ್ತಲೇ ಇದೆಯಾದರೂ ಇಲ್ಲಿ ಸ್ನೇಹಿತರೇ ಕುಟುಂಬ, ಬಂಧುಗಳು. ಬಯಲಾಜಿಕಲ್ ಕುಟುಂಬದೊಂದಿಗೆ ಮರುಸಂಪರ್ಕ ಹೊಂದುವ ಬಯಕೆ ಕೂಡ ಭಾರತಕ್ಕೆ ಮರಳಲು ಕೆಲವರಿಗೆ ಕಾರಣವಾಗಬಹುದು. ವಯಸ್ಸಾದಂತೆ ನಮ್ಮ ನೆಲದ ಭಾಷೆ, ಜನ, ಸಂಪ್ರದಾಯದ ಪ್ರಮಾಣ ಹೆಚ್ಚಿರುವಲ್ಲಿ ಮನಸ್ಸು ಎಳೆಯುತ್ತದೆ. ಅದೇ ಸಂದರ್ಭದಲ್ಲಿ ಹಿರಿಯ ನಾಗರಿಕರ ಅವಶ್ಯಕತೆಗೆ, ಆರ್ಥಿಕತೆಗೆ ಅನುಗುಣವಾಗಿ ಸುರಕ್ಷಿತ ಮತ್ತು ಆರಾಮದಾಯಕ ಜೀವನ ಸೌಲಭ್ಯ ಭಾರತದಲ್ಲಿ ಅಭಿವೃದ್ಧಿಯಾಗುತ್ತಲಿದೆ. ಅಲ್ಲದೆಯೇ ಭಾರತದಲ್ಲಿ ಜೀವನಶೈಲಿ ಬದಲಾಗುತ್ತಲಿದೆ. ವೈದ್ಯಕೀಯ ಕ್ಷೇತ್ರ ಸಾಕಷ್ಟು ಅಭಿವೃದ್ಧಿಗೊಂಡಿದೆ. ಮನೆಕೆಲಸ, ಮತ್ತಿತರ ಸೇವೆಗಳಿಗೆ ಸೌಲಭ್ಯ ಯಾವತ್ತಿನಿಂದಲೂ ಇದೆ. ಕಡಿಮೆ ಜೀವನವೆಚ್ಚದಲ್ಲಿ ಉನ್ನತಮಟ್ಟದ ಜೀವನಶೈಲಿ ತಮ್ಮದೇ ನೆಲದಲ್ಲಿ ಲಭ್ಯವಾದಲ್ಲಿ ನಿವೃತ್ತರನ್ನು, ಹಿರಿಯ ನಾಗರಿಕರನ್ನು ಇದು ಖಂಡಿತ ಆಕರ್ಷಿಸಬಲ್ಲುದು.
ಭಾರತದಲ್ಲಿ ಮನೆಯೊಳಗೆ ಆರಾಮದಾಯಕ ಜೀವನ ದೊರೆತರೂ, ಹೆಚ್ಚಿನಪಾಲು ಜೀವನವನ್ನು ಅಮೇರಿಕೆಯಲ್ಲಿ ಕಳೆದವರಿಗೆ ಅಲ್ಲಿ ಹೊರಪ್ರಪಂಚದ ಎಲ್ಲ ವ್ಯವಸ್ಥೆಗಳೂ ಹಿತಕರವೆನ್ನಿಸಲಾರದು, ಇದು ಬಹುಪಾಲು ಜನರನ್ನು ಭಾರತಕ್ಕೆ ಮರಳಲು ಹಿಂಜರಿಯುವಂತೆ ಮಾಡುತ್ತಿದೆ ಎನ್ನುವುದೂ ಕೂಡ ಅಷ್ಟೇ ಸತ್ಯದ ಮಾತು. ನಿವೃತ್ತಿಯ ನಂತರ ಭಾರತದಲ್ಲಿ ನೆಲೆಯಾಗುವುದು ಸುಖ ಎನ್ನುವ ಚರ್ಚೆಯನ್ನು ಬಹಳಷ್ಟು ಸಲ ಕೇಳಿದ್ದೇನೆ. ಹಣವನ್ನು ಉಳಿತಾಯ ಮಾಡಬೇಕೆನ್ನುವ ನಿವೃತ್ತರು ಜೀವನವೆಚ್ಚ ಕಡಿಮೆ ಇರುವ ಅಮೇರಿಕಾದ ಊರುಗಳಿಗೆ ಹೋಗಿ ನೆಲೆಯಾಗಬಹುದು. ವೃತ್ತಿ ಜೀವನವನ್ನು ಅಮೆರಿಕಾದಲ್ಲಿ ಕಳೆದ ಭಾರತೀಯರು ಅಮೇರಿಕಾದಲ್ಲಿಯೇ ನೆಲೆಯಾಗಿರುವ ತಮ್ಮ ಮಕ್ಕಳು, ಮೊಮ್ಮಕ್ಕಳು, ಬೆಳೆಯುತ್ತಲಿರುವ ತಮ್ಮ ಇಲ್ಲಿನ ಬಯಲಾಜಿಕಲ್ ಕುಟುಂಬವನ್ನು ಬಿಟ್ಟು ಭಾರತಕ್ಕೆ ಮರಳಿ ನೆಲೆಸಿದ್ದನ್ನು ಸದ್ಯದವರೆಗೆ ನಾನು ಕಂಡಿಲ್ಲ ಮತ್ತು ಕೇಳಿಲ್ಲ.
NRIಗಳು ತಮ್ಮ ನಿವೃತ್ತಿ ಜೀವನವನ್ನು ಭಾರತದಲ್ಲಿ ಕಳೆಯಲು ಬಯಸಿದಲ್ಲಿ, ನಿರ್ಧರಿಸಿದಲ್ಲಿ ಇದು ಭಾರತದ ಚೆಲುವು, ಒಲವು ಮತ್ತು ಶಕ್ತಿ.
ಭಾರತ ಎನ್ನಾರೈಗಳ ರಿರ್ಟೈರ್ಡ್‌ಮೆಂಟ್ ಗೂಡು
ಶ್ರೀಕಲಾ ಬೊಳ್ಳಾಜೆ, ಟೋಕಿಯೋ, ಜಪಾನ್
ಬೇರೆ ದೇಶಗಳಲ್ಲಿ ಬದುಕು ಕಟ್ಟಿಕೊಂಡವರಿಗೆ ತಾಯ್ನಾಡಿನ ಮೇಲೆ ಇರುವ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ. ಅನಿವಾರ್ಯತೆಗಳು ನಮ್ಮನ್ನು ವಿದೇಶಕ್ಕೆ ಕರೆದೊಯ್ದರೂ, ನಮ್ಮ ಮನಸ್ಸು ದೇಹ ಯಾವಾಗಲು ತಾಯ್ನಾಡಿನ ಮಣ್ಣಿನಲ್ಲೇ ನಾಟಿಕೊಂದಿರುತ್ತದೆ. ತಾವು ಹುಟ್ಟಿ ಬೆಳೆದ ಮನೆ, ನೆಲ, ಮಣ್ಣು ಇವುಗಳನ್ನು ಯಾರು ಸಂಪೂರ್ಣವಾಗಿ ಮರೆತೇ ಬಿಡಲು ಸಾಧ್ಯವಿಲ್ಲ.
ಎನ್ನಾರೈ ಗಳಾಗಿ ವಿದೇಶದಲ್ಲಿ ವಾಸಿಸುತ್ತಿದ್ದರೂ, ಮಕ್ಕಳಿಗೆ ನಮ್ಮ ಅಚಾರ-ವಿಚಾರಗಳನ್ನು, ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನ ನಿರಂತರವಾಗಿಯೇ ನಡೆಯುತ್ತಿರುತ್ತದೆ. ಕೊನೆಯಲ್ಲಿ ನಾವು ಮಾಡುತ್ತಿರುವ ಸಂಪಾದನೆ ಮತ್ತು ಶ್ರಮದ ಫಲವು ತಾಯ್ನಡಿನತ್ತಲೇ ಹರಿಯಬೇಕು ಎಂಬ ಮನಸ್ಸು ಅನೇಕರಲ್ಲಿ ಗಾಢವಾಗಿದೆ. ಇದನ್ನು ಏನ್ ಅರ್ ಐಗಳ ಅಳಿಲು ಸೇವೆ ಎಂಡು ಕರೆದರೂ ತಪ್ಪಲ್ಲ. ಅಷ್ಟೇ ಅಲ್ಲದೆ, ಬೇರೂರಿದ ಜಾಗಕ್ಕೆ ಹಿಂತಿರುಗುವುದು ಸಹಜ ಪ್ರಕ್ರಿಯೆಯೂ ಕೂಡ. ದೀರ್ಘಕಾಲದ ಓಟದ ನಂತರ ನೆಮ್ಮದಿಯನ್ನು ಹುಡುಕುವ ಮನಸ್ಸಿಗೆ ಭಾರತಕ್ಕಿಂತ ಸೂಕ್ತವಾದ ಆಶ್ರಯ ಬೇರೆ ಎಲ್ಲಿದೆ? ಹೀಗಾಗಿ ಭಾರತ ಎನ್ನಾರೈಗಳ ರಿರ್ಟೈರ್ಡ್‌ಮೆಂಟ್ ಗೂಡು ಎನ್ನುವ ಮಾತಿಗೆ ನಾನು ಸಂಪೂರ್ಣವಾಗಿ ಸಹಮತ ವ್ಯಕ್ತಪಡಿಸುತ್ತೇನೆ.