ಮಹಾನ್ ಬಹುಭಾಷಾ ನಟಿ ಬಿ. ಸರೋಜಾದೇವಿ ನಿಧನರಾಗಿದ್ದಾರೆ, ದಕ್ಷಿಣ ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್ ಬಗ್ಗೆ ಇಲ್ಲಿವೆ ಇಂಟರೆಸ್ಟಿಂಗ್ ವಿಷಯಗಳು
ಪುನೀತ್ ಬಗ್ಗೆ ಅಪರಿಮಿತ ಪ್ರೀತಿ
ಸರೋಜಾದೇವಿ ಅವರಿಗೆ ಪುನೀತ್ ರಾಜ್‌ಕುಮಾರ್ ಕಂಡರೆ ಮಗನಂಥಾ ಭಾವ. ಸರೋಜಾದೇವಿ ಅಮ್ಮನಾಗಿ, ಪುನೀತ್ ಮಗನಾಗಿ ನಟಿಸಿದ್ದ ‘ಯಾರಿವನು’ ಸಿನಿಮಾದ ‘ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ’ ಹಾಡು ಜನಮನದಲ್ಲಿ ಇಂದಿಗೂ ಹಸಿರಾಗಿದೆ. ಆಗ ಬಾಲನಟನಾಗಿದ್ದ ಪುನೀತ್ ಈ ಹಾಡನ್ನು ಸ್ವತಃ ಹಾಡಿದ್ದರು. ಆಗಲೇ ಪುನೀತ್ ತನ್ನ ಮಗನಾಗಿದ್ದರೆ ಚೆನ್ನಾಗಿತ್ತು ಎಂದು ಸರೋಜಾದೇವಿ ಅಂದುಕೊಂಡಿದ್ದರಂತೆ. ಪುನೀತ್ ನಟನೆಯ ‘ನಟ ಸಾರ್ವಭೌಮ’ ಚಿತ್ರ ಸರೋಜಾದೇವಿ ಅವರ ಕೊನೆಯ ಸಿನಿಮಾ.
ಪಾರ್ವತಮ್ಮ ನವರಸ ನಾಯಕಿ ಎನ್ನುತ್ತಿದ್ದ ಸರೋಜಾದೇವಿ
ರಾಜ್ ಕುಮಾರ್ ಅವರ ಅನೇಕ ಚಿತ್ರಗಳಿಗೆ ನಾಯಕಿಯಾಗಿದ್ದ ಬಿ ಸರೋಜಾದೇವಿ ಅಣ್ಣಾವ್ರ ಕುಟುಂಬಕ್ಕೆ, ಪಾರ್ವತಮ್ಮ ಅವರಿಗೆ ಆಪ್ತರಾಗಿದ್ದರು. ಅವರು ಡಾ ರಾಜ್ ಮನೆಗೆ ಹೋದಾಗಲೆಲ್ಲ ಮಲ್ಲಿಗೆ ತೆಗೆದುಕೊಂಡು ಹೋಗಿ ಪಾರ್ವತಮ್ಮ ಅವರ ಮುಡಿಗೆ ಮುಡಿಸುತ್ತಿದ್ದರಂತೆ. ‘ನಮ್ ರಾಜ್‌ಕುಮಾರ್ ಬಹಳ ಸರಳಜೀವಿ. ಅವರಲ್ಲಿ ನನ್ನ ಕಷ್ಟಗಳನ್ನೆಲ್ಲಾ ಹೇಳಿಕೊಳ್ಳುತ್ತಿದ್ದೆ. ರಾಜ್ ಅವರು ಸಿನಿಮಾದಲ್ಲಿ ನವರಸ ನಾಯಕ. ಆದರೆ ಪಾರ್ವತಮ್ಮನವರು ನಿಜವಾದ ನವರಸ ನಾಯಕಿ. ಅವರು ಒಳ್ಳೆಯ ಮಗಳು, ಒಳ್ಳೆಯ ಹೆಂಡತಿ, ಒಳ್ಳೆಯ ಗೃಹಿಣಿ, ಒಳ್ಳೆಯ ತಾಯಿ, ಒಳ್ಳೆಯ ನಿರ್ಮಾಪಕಿ, ರಾಜ್‌ಕುಮಾರ್ ಅವರಿಗೆ ಪಿಆರ್‌ಓ, ಮ್ಯಾನೇಜರ್ ಎಲ್ಲವೂ ಆಗಿದ್ದರು. ಅವರ ಸಮಕ್ಕೆ ಬೇರೆ ಯಾರೂ ಇಲ್ಲ’ ಎಂದು ಸರೋಜಾದೇವಿ ಅಭಿಮಾನದಿಂದ ನುಡಿಯುತ್ತಿದ್ದರು. ಚೆನ್ನೈಯಲ್ಲಿದ್ದಾಗ ಪಾರ್ವತಮ್ಮ ಮಾಡುತ್ತಿದ್ದ ಬಿರಿಯಾನಿಯನ್ನು ಸರೋಜಾದೇವಿ ಬಹಳ ಇಷ್ಟಪಟ್ಟು ತಿನ್ನುತ್ತಿದ್ದರಂತೆ.
ಇದೂ ಹೆಣ್ಣುಮಗು, ಯಾರಿಗಾದರೂ ಕೊಟ್ಟುಬಿಡಿ!
ಸರೋಜಾದೇವಿ ಅವರು ಭೈರಪ್ಪ ಮತ್ತು ರುದ್ರಮ್ಮ ದಂಪತಿಗೆ ನಾಲ್ಕನೇ ಮಗಳು. ಇದಕ್ಕೂ ಮುನ್ನ ಜನಿಸಿದ್ದು ಮೂರು ಹೆಣ್ಣು ಮಕ್ಕಳೇ. ಹಾಗಾಗಿ, ನಾಲ್ಕನೇ ಮಗುವು ಕೂಡ ಹೆಣ್ಣಾಗಿದ್ದರಿಂದ ಸ್ವತಃ ಸರೋಜಾದೇವಿ ಅವರ ಅಜ್ಜನೇ, ‘ಹೆಣ್ಣು ಮಗು ಜನಿಸಿದೆ, ಯಾರಿಗಾದ್ರೂ ಕೊಟ್ಟುಬಿಡಿ’ ಎಂದಿದ್ದರಂತೆ. ಆದರೆ ಸರೋಜಾದೇವಿ ದೇಶವೇ ಮೆಚ್ಚುವಂತೆ ಬೆಳೆದರು.
ಬಿ. ಸರೋಜಾದೇವಿ ಸಿನಿಜೀವನದ 15 ಪ್ರಮುಖ ಸಿನಿಮಾಗಳು
1. ಮಹಾಕವಿ ಕಾಳಿದಾಸ- ಹೊನ್ನಪ್ಪ ಭಾಗವತರ್ ನಟನೆ, ನಿರ್ದೇಶನದ ಈ ಚಿತ್ರದಲ್ಲಿ ಮೊದಲಬಾರಿಗೆ ಬಣ್ಣ ಹಚ್ಚಿದ್ದರು. ಆಗ ಅವರ ವಯಸ್ಸು 17. 1955ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.
2. ನಾಡೋಡಿ ಮಣ್ಣನ್- ತಮಿಳುನಾಡಿಲ್ಲಿ ಅಪಾರ ಜನಪ್ರಿಯತೆಗಳಿಸಿದ ಚಿತ್ರ. ಬಿಡುಗಡೆಯಾಗಿದ್ದು 1958ರಲ್ಲಿ. ಎಂಜಿಆರ್ ಈ ಚಿತ್ರದ ನಾಯಕರಾಗಿದ್ದರು.
3. ಪಾಂಡುರಂಗ ಮಹಾತ್ಯಂ- ಎನ್‌ಟಿ ರಾಮರಾವ್ ನಾಯಕನಾಗಿ ನಟಿಸಿದ್ದ ಈ ಸಿನಿಮಾದಲ್ಲಿ ಮೊದಲ ಬಾರಿಗೆ ತೆಲುಗಿಗೆ ಪ್ರವೇಶಿಸಿದರು. ಈ ಸಿನಿಮಾ ಕೂಡ ಹಿಟ್ ಆಗಿತ್ತು. ಬಿಡುಗಡೆಯಾಗಿದ್ದು 1957ರಲ್ಲಿ.
4. ಕಿತ್ತೂರು ಚೆನ್ನಮ-್ಮ ‘ಕಪ್ಪ ಕೊಡಬೇಕೇ ಕಪ್ಪ’ ಎಂಬ ಸಂಭಾಷಣೆ ಬಹಳ ಜನಪ್ರಿಯವಾಗಿದ್ದ ಸಿನಿಮಾ ಇದು. ಅವರು ಕಿತ್ತೂರು ಚೆನ್ನಮ್ಮ ಪಾತ್ರವನ್ನು ಜೀವಿಸಿದ್ದ ಈ ಸಿನಿಮಾ 1961ರಲ್ಲಿ ಬಂದಿತ್ತು.
5. ತಂಗಮಲೈ ರಗಸಿಯಂ- 1957ರಲ್ಲಿಯೇ ಬಂದಿದ್ದ ಬಹಳ ಹಿಟ್ ಸಿನಿಮಾ ಇದು, ಅವರ ಪ್ರತಿಭಾ ವೈವಿಧ್ಯತೆಯನ್ನು ತಮಿಳು ಮಂದಿಗೆ ಪರಿಚಯಿಸಿತ್ತು.
6. ಪೈಗಂ- 1959ರಲ್ಲಿ ಬಂದ ಪೈಗಂ ಹಿಂದಿ ಚಿತ್ರದ ಮೂಲಕ ಅವರು ಹಿಂದಿಭಾಷೆಗೆ ಪ್ರವೇಶಿಸಿದರು. ದಿಲೀಪ್‌ಕುಮಾರ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು.
7. ಸಸುರಾಲ್- 1961ರಲ್ಲಿ ಬಂದ ಹಿಂದಿ ಸಿನಿಮಾ ಇದು. ರಾಜೇಂದ್ರಕುಮಾರ್ ಹೀರೋ ಆಗಿದ್ದರು.
8. ಪ್ಯಾರ್ ಕಿಯಾ ತೋ ಡರ್ನಾ ಕ್ಯಾ- ಶಮ್ಮಿ ಕಪೂರ್ ನಾಯಕನಾಗಿ ನಟಿಸಿದ್ದ ಸಿನಿಮಾ. ಸಂಗೀತಕ್ಕೆ ಹೆಸರಾದ ಈ ಚಿತ್ರ ರಿಲೀಸಾಗಿದ್ದು 1963ರಲ್ಲಿ.
9. ಬೇಟಿ ಬೇಟೆ- ಸುನೀಲ್ ದತ್ ನಟನೆಯ ಚಿತ್ರ 1964ರಲ್ಲಿ ಬಂದಿತ್ತು.
10. ಸ್ಕೂಲ್ ಮಾಸ್ಟರ್- 1958ರಲ್ಲಿ ಬಂದ ಈ ಚಿತ್ರದಲ್ಲಿನ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
11. ಜಗದೇಕ ವೀರುನಿ ಕಥಾ- ಎನ್‌ಟಿ ರಾಮರಾವ್ ನಟಿಸಿದ್ದ, 1961ರಲ್ಲಿ ತೆರೆಕಂಡ ಈ ಸಿನಿಮಾ ಅವರಿಗೆ ಮತ್ತಷ್ಟು ತೆಲುಗು ಜನರ ಪ್ರೀತಿ ಗಳಿಸಿಕೊಟ್ಟಿತ್ತು.
12. ಸೀತಾರಾಮ ಕಲ್ಯಾಣಂ- ಎನ್‌ಟಿ ರಾಮರಾವ್- ಸರೋಜಾದೇವಿ ಜೋಡಿಯ ಮತ್ತೊಂದು ಯಶಸ್ವೀ ಚಿತ್ರ. 1961ರಲ್ಲಿ ಬಿಡುಗಡೆ ಆಗಿತ್ತು.
13. ಪೆಳ್ಳಿ ಕಾನುಕಾ- 1960ರಲ್ಲಿ ಬಂದ ಸಿನಿಮಾ ಇದು. ಅಕ್ಕಿನೇನಿ ನಾಗೇಶ್ವರರಾವ್ ನಾಯಕನಾಗಿ ನಟಿಸಿದ್ದರು.
14. ಅಮರಶಿಲ್ಪಿ ಜಕಣಚಾರಿ- 1964ರಲ್ಲಿ ಬಂದ ಬಣ್ಣದ ಸಿನಿಮಾ. ವಿಮರ್ಶಕರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು.
15. ಬಬ್ರುವಾಹನ- 1977ರಲ್ಲಿ ಬಂದ ಈ ಸಿನಿಮಾದಲ್ಲಿನ ಭಾವುಕ ನಟನೆಗೆ ಅಪಾರ ಜನಪ್ರಿಯತೆ ದೊರಕಿತ್ತು.