ಕಿಡಲ್ಟ್‌ ಟಾಯ್‌ ಸ್ಟೋರೀಸ್‌ : ಇದು ದೊಡ್ಡೋರ ಮಕ್ಕಳಾಟ

Published : Sep 21, 2025, 12:00 PM IST
Wooden Railway Toy Set

ಸಾರಾಂಶ

ಮಕ್ಕಳಾಗಿದ್ದಾಗ, ‘ದೊಡ್ಡೋನಾದ್ಮೇಲೆ ಏನ್‌ ಮಾಡ್ತಿ?’ ಅಂತ ಪ್ರಶ್ನೆ. ದೊಡ್ಡವರಾದ ಮೇಲೆ, ‘ಆ ಕಾಲವೊಂದಿತ್ತು’ ಅಂತ ಬಾಲ್ಯದ ಕನವರಿಕೆ. ಅಂಥಾದ್ದೊಂದು ಕನವರಿಕೆಯಲ್ಲಿ ಹುಟ್ಟಿದ್ದೇ ಕಿಡಾಲ್ಟ್‌ ಟಾಯ್‌ ಸ್ಟೋರೀಸ್‌ ಟ್ರೆಂಡ್‌. ಇದು ದೊಡ್ಡವರ ಮಗು ಮನಸ್ಸಿನ ಆಟದ ಬಯಲು.

- ಪ್ರಿಯಾ ಕೆರ್ವಾಶೆ

ಅಲೀಶ ಐಟಿ ಕಂಪನಿ ಉದ್ಯೋಗಿ. ಫ್ರೆಂಡ್‌ ತನಯ್‌ ಮನೆಗೆ ಆಕಸ್ಮಿಕವಾಗಿ ಅವಳು ಬರಬೇಕಾಯ್ತು. ಒಳಗಿಂದೊಳಗೇ ತನಯ್‌ ಬಗ್ಗೆ ಕ್ರಶ್‌ ಇಟ್ಕೊಂಡಿದ್ದ ಅಲೀಶಗೆ ಆತನ ಮನೆ, ಫ್ಯಾಮಿಲಿ ಬಗ್ಗೆ ಸಹಜ ಕುತೂಹಲ ಇತ್ತು. ಖುಷಿಯಿಂದ ಮನೆಗೆ ಬಂದವಳು ಹೋಗುವಾಗ ಡಲ್‌ ಆಗಿದ್ದಳು. ಬಳಿಕ ಅವಳ ನಡವಳಿಕೆಯೇ ಬದಲಾಯ್ತು. ತನಯ್‌ ಜೊತೆ ಹರಟೆ, ಔಟಿಂಗ್‌ ಎಲ್ಲ ಬಂದ್‌. ಎಷ್ಟು ಬೇಕೋ ಅಷ್ಟೇ ಮಾತು.

ತನಯ್‌ಗೆ ತಲೆಕೆಟ್ಟು ಹೋಯ್ತು. ಏನೇನೋ ಸರ್ಕಸ್‌ ಮಾಡಿ ಆಕೆ ಯಾಕೆ ಹಾಗಾಡ್ತಿದ್ದಾಳೆ ಅಂತ ಪತ್ತೆ ಮಾಡಿದ. ವಿಷಯ ತಿಳಿದ ಮೇಲೆ ಅವನಿಗೆ ಅಳಬೇಕೋ ನಗಬೇಕೋ ತಿಳಿಯಲಿಲ್ಲ.

ತನಯ್‌ನ ಹವ್ಯಾಸವೊಂದನ್ನು ತಪ್ಪಾಗಿ ಅರ್ಥೈಸಿದ್ದೇ ಅವಳ ಆ ವರ್ತನೆಗೆ ಕಾರಣವಾಗಿತ್ತು.

ಅಲೀಶ ತನ್ನ ಕ್ರಶ್‌ ತನಯ್‌ ಮನೆಗೆ ಬಂದಾಗ ಅವಳನ್ನಲ್ಲಿ ಸ್ವಾಗತಿಸಿದ್ದು ಹೊಚ್ಚ ಹೊಸ ಆಟಿಕೆಗಳು. ತನಯ್‌ ಜೊತೆ ಜೀವನ ಕಟ್ಟಿಕೊಳ್ಳುವ ಕನಸಿನಲ್ಲಿದ್ದ ಹುಡುಗಿ ಆತನ ಹೊಸ ಬಗೆಯ ಆಟಿಕೆ ಕಲೆಕ್ಷನ್‌ ನೋಡಿ ಈತನಿಗೆ ಮದುವೆಯಾಗಿ ಮಗುವಿದೆ ಅಂತಲೇ ಭಾವಿಸಿದ್ದಳು. ಇದನ್ನು ತನಯ್‌ ತನ್ನಿಂದ ಮುಚ್ಚಿಟ್ಟಿದ್ದಾನೆ ಎಂದು ತಿಳಿಯುತ್ತಲೇ ಆಘಾತವಾಗಿತ್ತು.

ವಾಸ್ತವದಲ್ಲಿ ತನಯ್‌ ಅವಿವಾಹಿತನಾಗಿದ್ದ. ಅವನ ಕಿಡಾಲ್ಟ್‌ ಹವ್ಯಾಸ ಅಲೀಶಳ ದಿಕ್ಕುತಪ್ಪಿಸಿತು.

ವೆಲ್‌ಕಂ ಟು ಕಿಡಲ್ಟ್‌ ವರ್ಲ್ಡ್‌. ಇದೊಂದು ರಹಸ್ಯಮಯ ಚಿಕ್ಕ ಜಗತ್ತು. ಹಗಲಿಡೀ ಐಟಿಯೋ, ಬ್ರಾಂಡಿಂಗೋ ಇನ್ಯಾವುದೋ ಕೆಲಸದಲ್ಲಿ ಮುಳುಗಿಹೋಗುವ ಜೆನ್ ಜೀ ಸಮುದಾಯ ಮಧ್ಯರಾತ್ರಿಗಳಲ್ಲಿ ಆಟಿಕೆಗಳ ಜಗತ್ತಿನಲ್ಲಿ ಮುಳುಗಿ ಹೋಗಿರುತ್ತದೆ. ಈ ವೇಳೆಗೆ ರೂಮ್‌ ಹೊಕ್ಕರೆ ಆಟಿಕೆಗಳನ್ನು ಹೊಸ ವಿನ್ಯಾಸದಲ್ಲಿ ಜೋಡಿಸಿಡುತ್ತಲೋ, ಅವುಗಳ ಜೊತೆ ಪಟ್ಟಾಂಗ ಹೊಡೆಯುತ್ತಲೋ, ಕಥೆ ಹೇಳುತ್ತಲೋ ಅಥವಾ ಆಟ ಆಡುತ್ತಲೋ ಇರುವ ತರುಣ, ತರುಣಿಯರನ್ನು ಕಾಣಬಹುದು. ಮಹಾನಗರಗಳಲ್ಲಿ ಒಂಟಿ ಬದುಕು ಸಾಗಿಸುವವರಿಗಂತೂ ಈ ಆಟಿಕೆಗಳೇ ಎಲ್ಲವೂ ಆಗಿವೆ.

ಹಲವರ ಬಾಲ್ಯಕಾಲದ ರೋಚಕತೆ ಹ್ಯಾರಿಪಾಟರ್‌, ಮಾರ್ವಲ್ಸ್‌, ಹುಡುಗರ ಎವರ್‌ಗ್ರೀನ್‌ ಹಾಟ್‌ವೀಲ್ಸ್‌, ಹುಡುಗೀರ ಟೆಡಿಬೇರ್‌, ಬಾರ್ಬಿ ಮೊದಲಾದ ಸಾಫ್ಟ್‌ ಟಾಯ್ಸ್‌ ಹೀಗೆ ಥರಾವರಿ ಆಟಿಕೆಗಳು ಆಧುನಿಕ ಜಗತ್ತಿನ ಅಪಾರ್ಟ್‌ಮೆಂಟ್‌ಗಳ ಕ್ಯಾಬಿನ್‌ ಭರ್ತಿ ಮಾಡಿವೆ. ಒಂದೇ ಬೇಜಾರು ಅಂದರೆ ವರ್ಷಾನುಗಟ್ಟಲೆ ಕಳೆದರೂ ಇವುಗಳ ಕಾಲು ಮುರಿಯುವುದೋ, ಚಕ್ರ ಕದಲುವುದೋ, ಫ್ರಂಟ್‌ ಲೈಟ್‌ ಮುರಿಯುವುದೋ ಆಗೋದಿಲ್ಲ. ಏಕೆಂದರೆ ದೊಡ್ಡೋರು ಬಾಲ್ಯ ಕಾಲಕ್ಕೆ ರೀವಿಸಿಟ್‌ ಮಾಡಿದರೂ ಆಟಿಕೆ ಮುರಿಯುವಂತೆ ಆಡುವ ಚೈತನ್ಯ ಎಲ್ಲಿಂದ ಬರಬೇಕು!

ಡಿಪ್ರೆಶನ್ನು, ಸ್ಟ್ರೆಸ್‌, ಉದ್ವೇಗ ಇತ್ಯಾದಿ ಸಮಸ್ಯೆಗಳಿಂದ ಬಳಲುವವರಿಗೆ ಮನೋರೋಗ ತಜ್ಞರು ಕಿಡಲ್ಟ್‌ ಹವ್ಯಾಸ ಹಚ್ಚುವುದೂ ಇದೆ. ಈ ಆಟಿಕೆಗಳ ಮೈದಡುವುತ್ತಲೋ, ಅವುಗಳಲ್ಲಿ ಆಟ ಆಡುತ್ತಲೋ ಇದ್ದರೆ ಆಫೀಸಿನ ಕಿರಿಕಿರಿ, ಬ್ರೇಕಪ್‌ ನೋವು ಇತ್ಯಾದಿಗಳೆಲ್ಲ ಮರೆತುಹೋಗುತ್ತದೆಯಂತೆ.

ಮಾರ್ಕೆಟ್‌ ಟ್ರೆಂಡ್‌

ಜಗತ್ತಿನಾದ್ಯಂತ ಫೇಮಸ್‌ ಆಗ್ತಿರೋ ಕಿಡಲ್ಟ್‌ ಎಂಬ ನಾಸ್ತಾಲ್ಜಿಯಾ ಟ್ರೆಂಡಿನಿಂದ ಚೆನ್ನಾಗಿ ದುಡ್ಡು ಮಾಡ್ಕೊಳ್ತಿರೋದು ಆಟಿಕೆ ಅಂಗಡಿಯವರು. ಅದರಲ್ಲೂ ಬ್ರಾಂಡೆಡ್‌ ಟಾಯ್‌ ಇಂಡಸ್ಟ್ರಿಗೆ ಇದರಿಂದ ಹಣದ ಹೊಳೆಯೇ ಹರಿದುಬಂದಿದೆ. ಈಗ ಯಾವುದೇ ಬ್ರಾಂಡೆಡ್‌ ಆಟಿಕೆ ಶಾಪ್‌ ಹೊಕ್ಕರೆ ಅಲ್ಲಿ ಮಕ್ಕಳಿಗಿಂತ ಯುವಕ, ಯುವತಿಯರ ಸಂಖ್ಯೆಯೇ ಹೆಚ್ಚಿರುತ್ತದೆ.

ಬೆಂಗಳೂರಿನ ಒರಾಯನ್‌ ಮಾಲ್‌ನಲ್ಲಿರುವ ಒಂದು ಬ್ರಾಂಡೆಡ್‌ ಆಟಿಕೆ ಶಾಪ್‌ ಮಾರಾಟಗಾರ ಹೇಳುವ ಪ್ರಕಾರ, ತಿಂಗಳಿಗೆ ಕಡಿಮೆ ಎಂದರೂ ಒಂದು ಲಕ್ಷದಷ್ಟು ತರುಣ ತರುಣಿಯರು ಅವರ ಮಳಿಗೆಯಲ್ಲಿ ಆಟಿಕೆ ಖರೀದಿಸುತ್ತಾರಂತೆ. ಆನ್‌ಲೈನ್‌ನಲ್ಲಂತೂ ಲಬೂಬು ಎಂಬ ಹಾಂಗ್‌ಕಾಂಗ್‌ನ ದೆವ್ವದ ಬೊಂಬೆಗಳಿಗೆ ಬೇಡಿಕೆಯೋ ಬೇಡಿಕೆ. ಅಮೆಜಾನ್‌ ಸೇರಿದಂತೆ ಹೆಚ್ಚಿನೆಲ್ಲ ಆನ್‌ಲೈನ್‌ ಶಾಪಿಂಗ್‌ ಪ್ಲಾಟ್‌ಪಾರ್ಮ್‌ಗಳಲ್ಲಿ ಕಿಡಲ್ಟ್‌ ಟಾಯ್ಸ್‌ ಅಂತ ಒಂದು ಸೆಕ್ಷನ್ನೇ ಇದೆ.

ನಮ್ಮ ಬೆಂಗಳೂರು, ಬಾಂಬೆ, ಡೆಲ್ಲಿ ಮೊದಲಾದ ಕಡೆ ಕಿಡಲ್ಟ್‌ ಟಾಯ್‌ ರೆಸ್ಟೊರೆಂಟ್‌ಗಳೂ ಶುರುವಾಗಿವೆ. ಇಲ್ಲಿ ಊಟದ ಜೊತೆ ಆಟಿಕೆಗಳನ್ನೂ ಇಟ್ಟಿರುತ್ತಾರೆ. ಕಾರ್ಡ್ಸ್‌, ಬಿಲ್ಡಿಂಗ್‌ ಬ್ಲಾಕ್ಸ್‌, 90ರ ದಶಕದಲ್ಲಿ ಸಿಗುತ್ತಿದ್ದ ಸಿಹಿ ತಿನಿಸುಗಳು, ಕ್ರೇಜಿ ತಿಂಡಿಗಳೆಲ್ಲ ಇಲ್ಲಿನ ಪ್ರಧಾನ ಆಕರ್ಷಣೆಗಳು. ಇಲ್ಲಿಗೆ ಮಿಲೇನಿಯಲ್ಸ್‌ ಹಾಗೂ ಜೆನ್‌ ಜೀಗಳ ಹಿಂಡೇ ದಾಳಿ ಇಡುತ್ತದೆ.

ಟಾಯ್‌ ಸ್ಟೋರೀಸ್‌

‘ಬಾಲ್ಯದಲ್ಲಾದರೆ ಆಟ ಆಡೋಕೆ ಬಯಲಿತ್ತು, ಗೆಳೆಯರಿದ್ದರು. ದೊಡ್ಡೋರಾದ ಮೇಲೆ ಆಟ ಆಡೋಣ ಅಂದರೆ ಬೇರೆಯೇ ಅರ್ಥ ಕಲ್ಪಿಸಿ ನಗ್ತಾರೆ... ಈ ಕಿಡಲ್ಟ್‌ ಟಾಯ್‌ಗಳ ಪರಿಚಯ ಆಗೋತನಕ ನಾನು ಹೀಗೇ ಯೋಚಿಸುತ್ತಿದ್ದೆ. ಆದರೂ ಬಾಲ್ಯವನ್ನು ಆಟವನ್ನು ಮಿಸ್‌ ಮಾಡಿಕೊಳ್ತಿದ್ದೆ. ಈಗ ನನ್ನ ಭಾನುವಾರವನ್ನು ನನ್ನಿಷ್ಟದ ಲಬೂಬು ಬೊಂಬೆಗಳ ಜೊತೆಗೆ ಕಳೀತೀನಿ. ಅವುಗಳ ತುಂಟ ಕಣ್ಣು, ಅಗಲ ಕಿವಿ ನನಗಿಷ್ಟ. ಆ ಮುದ್ದು ದೆವ್ವಗಳ ಜೊತೆ ಆಟ, ಮಾತು, ಕತೆ ಹೇಳೋದು ಹೀಗೆ ಸಮಯ ಕಳೀತೀನಿ’ ಅನ್ನೋದು ಲಾಸ್ಯ ಎಂಬ ಐಟಿ ಹುಡುಗಿ ಮಾತು. ಈಕೆ ಸಂಬಳದ ಬಹುಭಾಗ ಈ ಲಬೂಬು ಬೊಂಬೆಗಳ ಖರೀದಿಗೆ ಹೋಗುತ್ತದಂತೆ.

ಚಿನ್ಮಯಿ ಎಂಬ ಎಐ ಇಂಜಿನಿಯರ್‌ ಬಾಲ್ಯ ಕಹಿಯಾಗಿತ್ತು. ದೊಡ್ಡವಳಾದ ಮೇಲೂ ಆ ನೋವು ಒಂದಿಲ್ಲೊಂದು ರೀತಿ ಕಾಡುತ್ತಿತ್ತು. ಇನ್‌ಸ್ಟಾಗ್ರಾಂನಲ್ಲಿ ಕಿಡಲ್ಟ್‌ ಟಾಯ್‌ ಬಗ್ಗೆ ನೋಡಿದಾಗ ಇದೇನೋ ಬೇರೆ ಥರ ಇದೆಯಲ್ಲ ಅಂದುಕೊಳ್ತಾಳೆ. ಯಾವುದಕ್ಕೂ ಇರಲಿ ಅಂತ ಒಂದು ಸಾಫ್ಟ್‌ ಟಾಯ್‌ ಖರೀದಿಸುತ್ತಾಳೆ. ನಿಧಾನಕ್ಕೆ ಅವಳ ಖಾಲಿ ಕಬೋರ್ಡ್‌ಗಳಲ್ಲೆಲ್ಲ ಈ ಮೃದುವಾದ ಬೊಂಬೆಗಳು ತುಂಬಿಕೊಳ್ಳುತ್ತ ಹೋಗುತ್ತವೆ. ಬಾಲ್ಯದಲ್ಲಿ ಆಡಬೇಕೆಂದು ಬಯಸಿದ್ದನ್ನೆಲ್ಲ ಈಗ ಪೂರೈಸಿಕೊಳ್ಳುತ್ತಿದ್ದಾಳೆ. ಒಂಟಿಯಾಗಿದ್ದಾಗ ಆವರಿಸುವ ವಿಷಣ್ಣತೆಯನ್ನು ಈ ಬೊಂಬೆಗಳು ನಿವಾರಿಸಿವೆ. ಜೊತೆಗೆ ಕೆಟ್ಟ ಬಾಲ್ಯದ ನೋವು ನಿಧಾನಕ್ಕೆ ಮರೆಗೆ ಸರಿದು, ದೊಡ್ಡೋಳಾದ ಮೇಲೂ ಮಗುತನವನ್ನೂ ಸಂಭ್ರಮಿಸೋದು ಸಾಧ್ಯವಾಗಿದೆ.

ನ್ಯೂರೋ ಸರ್ಜನ್‌ ಆಗಿ ಕೆಲಸ ಮಾಡುವ ಅಸೀಮ್‌ ಬಳಿ ಫಂಕೋ ಟಾಯ್‌ಗಳ ದೊಡ್ಡ ಸಂಗ್ರಹವೇ ಇದೆ. ‘ಫಂಕೋ ಟಾಯ್‌ ನನ್ನ ಮನೆಗೆ ಬಂದಮೇಲೆ ಅದು ನನ್ನ ಮನೆಯ ಸದಸ್ಯನೇ ಆಗಿಬಿಡುತ್ತದೆ’ ಅನ್ನುವ ಈ ಜೆನ್‌ ಜೀ ಯುವಕ ತನ್ನ ಆಸ್ಪತ್ರೆಯಲ್ಲೂ ಆಟಿಕೆಗಳ ಸಣ್ಣ ಸಂಗ್ರಹ ಇಟ್ಟಿದ್ದಾರಂತೆ. ‘ಏನೇನೋ ಆರೋಗ್ಯ ಸಮಸ್ಯೆ ಹೊತ್ತು ವಿಷಾದವೇ ಮೂರ್ತಿವೆತ್ತಂತೆ ಪೇಶೆಂಟ್‌ಗಳಿರುತ್ತಾರೆ. ಈ ಬೊಂಬೆಗಳನ್ನು ನೋಡಿ ಅವರ ಮುಖ ಅರಳಿದ್ದನ್ನು ಕಂಡಿದ್ದೇನೆ. ದೊಡ್ಡ ಬಂಡೆ ತಲೆ ಮೇಲೆ ಹೊತ್ತಂತೆ ಬರುವ ವಯಸ್ಸಾದವರೂ ಈ ಬೊಂಬೆಗಳ ಬಗ್ಗೆ ವಿಚಾರಿಸುವುದೂ ಇದೆ. ವಯಸ್ಸಾದವರ ಬಗ್ಗೆ ನಮಗೆ ಉಡಾಫೆ, ಅವರು ಎಲ್ಲದಕ್ಕೂ ಗೊಣಗುತ್ತಾರೆ ಎಂಬ ಮನೋಭಾವ. ಅಂಥವರ ಕೈಗೆ ಇಂಥಾ ಆಟಿಕೆ ಕೊಟ್ಟು ನೋಡಿ. ಅವರ ಮುಖದ ಬದಲಾವಣೆ ಗಮನಿಸಿ’ ಎನ್ನುತ್ತಾರೆ ಡಾ ಅಸೀಮ್‌.

ಇಷ್ಟೆಲ್ಲ ಹೇಳಿದ ಮೇಲೆ ಕಿಡಲ್ಟ್‌ ಹವ್ಯಾಸದ ಮೂಲಕ ಜನ ವಾಸ್ತವದಿಂದ ಪಲಾಯನ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಬರಬಹುದು. ಸೂಕ್ಷ್ಮವಾಗಿ ನೋಡಿದರೆ ಇದು ಇಂದಿನ ಬದುಕಿನಿಂದ ಹಿಂದಿನ ಬದುಕಿಗೆ ಓಡಿಹೋಗೋದಲ್ಲ, ಬದಲಿಗೆ ಯಾಂತ್ರಿಕ ಒಣ ಬದುಕಿಗೆ ಬಾಲ್ಯದ ಆರ್ದ್ರತೆಯನ್ನು ಎಳೆದು ತರುವುದು. ಜೆನ್‌ ಜೀ ಅಥವಾ ಅದರ ಹಿಂದಿನ ಮಿಲೇನಿಯಲ್ಸ್‌ ಮಾತ್ರವಲ್ಲ, ಅದಕ್ಕೂ ಹಿಂದಿನವರೂ ಈ ಟ್ರೆಂಡ್‌ ಅನ್ನು ಇಷ್ಟಪಡುತ್ತಿದ್ದಾರೆ.

PREV
Read more Articles on

Recommended Stories

ದಸರಾ ರಜೆಗೆ ಕೆಲವು ಉಪಯುಕ್ತ ಸಲಹೆಗಳು
ಭಾರತದ ಜೆನ್‌ ಝೀಗಳಿಗೊಂದು ಎಚ್ಚರಿಕೆಯ ಕರೆ