- ಸಹನಾ ವಿಜಯಕುಮಾರ್
ಕಳೆದ ಒಂದು ಒಂದೂವರೆ ವರ್ಷಗಳಿಂದ ಅವರ ಹಠ, ಮಾನಸಿಕ ತುಮುಲಗಳನ್ನೆಲ್ಲ ಹತ್ತಿರದಿಂದ ನೋಡಿದ್ದೀನಿ. ಯಾಕೆ ಇಷ್ಟು ಹಠ ಮಾಡುತ್ತಿದ್ದಾರೆ ಅಂತ ಗೊತ್ತಾಗುತ್ತಿರಲಿಲ್ಲ. ಅವರ ಭಿತ್ತಿ ಓದಿದ್ದೀವಿ. ಅವರು ಕಷ್ಟಪಟ್ಟು ಮೇಲೆ ಬಂದವರು ಎಲ್ಲರಿಗೂ ದಾರಿದೀಪವಾಗುವಂಥಾ ಕಾದಂಬರಿಗಳನ್ನು ಬರೆದವರು, ಭಾರತೀಯ ತತ್ವಶಾಸ್ತ್ರ, ನಮ್ಮ ಮೌಲ್ಯಗಳ ಬಲವಾದ ಪ್ರತಿಪಾದಕರು. ಬರೆದದ್ದಲ್ಲ, ಹಾಗೇ ಬದುಕಿದವರೂ ಕೂಡ.
ಕಳೆದ ಕೆಲವು ದಿನಗಳಿಂದ ಹೊಸ ಟ್ರಸ್ಟ್ ಮಾಡಬೇಕು, ನಾನು ಗಳಿಸಿರೋದನ್ನು ಬಡಮಕ್ಕಳಿಗೆ ಹಂಚಬೇಕು ಅಂತ ಬಹಳ ಒತ್ತಡ ಹೇರುತ್ತಿದ್ದರು. ಯಾಕೆ ಒಂದೇ ಸವನೆ ಈ ರೀತಿ ಒತ್ತಡ ಹಾಕುತ್ತಿದ್ದಾರೆ ಅಂತ ಇವತ್ತು ಈ ಕ್ಷಣದಲ್ಲಿ ನಿಂತಾಗ ಅರಿವಾಗುತ್ತದೆ.
ಅವರ ಹಠ ಪೂರೈಸಲು ನಾವೆಲ್ಲ ತಕ್ಕಮಟ್ಟಿಗೆ ನೆರವಾದೆವು. ಒಂದು ಟ್ರಸ್ಟ್ ಅನ್ನು ಆರಂಭಿಸಿದೆವು. ಅದರ ಉದ್ಘಾಟನೆ ಆಗಿತ್ತು. ಕೆಲವು ದಿನಗಳ ಹಿಂದೆ ಅವರ ಹುಟ್ಟುಹಬ್ಬವನ್ನೂ ಆಚರಿಸಿದ್ದೆವು. ಅವರಿಗೆ ಸಮಾಧಾನವಾಗಿತ್ತು. ನಿನ್ನೆ (ಮಂಗಳವಾರ) ರಾತ್ರಿ ನನ್ನ ಬಳಿ ಮಾತಾಡಿದ್ರು. ನಾನು ವಿದೇಶದಲ್ಲಿದ್ದೆ. ಏನೋ ಬರೆಯುತ್ತಿದ್ದೆ. ‘ನಿನ್ನ ಬರವಣಿಗೆ ಮುಗಿಸಿ ಬಾ. ಎಲ್ಲಿಗೆ ಬಂತು, ಹೇಗೆ ನಡೀತಾ ಇದೆ’ ಅಂತೆಲ್ಲ ವಿಚಾರಿಸಿದರು. ಇವತ್ತು (ಬುಧವಾರ) ಬೆಳಗ್ಗೆ ಈ ಸುದ್ದಿ ಬಂತು. ‘ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ’ ಅನ್ನುವುದು ಅವರ ಮೂಲಮಂತ್ರವಾಗಿತ್ತು. ಈಗ ಹಾಗೇ ಆಗಿದೆ. ನಾವು ಕಳೆದುಕೊಂಡಿದ್ದೇವೆ ನಿಜ, ಆದರೆ ಅವರು ತಮಗೆ ಬೇಕಾದ ರೀತಿಯಲ್ಲಿ ಬದುಕಿ, ತಮಗೆ ಬೇಕಾದ ಹಾಗೆ ಮರಣವನ್ನು ಕಂಡರು ಅನ್ನುವುದು ಸಮಾಧಾನ ಕೊಡುವ ಸಂಗತಿ. ನಮ್ಮೆಲ್ಲರಿಗೂ ಇದನ್ನು ತಡೆದುಕೊಳ್ಳೋದಕ್ಕೆ ಆಗಬೇಕು. ಅವರ ದಾರಿಯಲ್ಲಿ ನಾವು ನಡೆಯಬೇಕು. ಈ ನಷ್ಟದ ಹೊರತಾಗಿಯೂ ಅವರು ಏನನ್ನು ಉಳಿಸಿ ಹೋಗಿದ್ದಾರೆ ಅನ್ನೋದನ್ನು ನಾವು ಕಂಡುಕೊಳ್ಳಬೇಕು. ಕಂಡುಕೊಳ್ಳುವ ಭರವಸೆ ನನಗಿದೆ.
ನಾನು ಕಾಲೇಜು ದಿನಗಳಿಂದ ಅವರ ಕೃತಿಗಳನ್ನು ಓದಿಕೊಂಡು ಬಂದವಳು. ಉದ್ಯೋಗಿಯಾಗಿದ್ದಾಗ ಸಂಚಲನ ಮೂಡಿಸಿದ್ದು ಅವರ ‘ಆವರಣ’ ಕೃತಿ. ಇದು ಭಾರತದ ಆಗಿನ ಯುವಜನರಿಗೆ ತಮ್ಮ ಸಾಂಸ್ಕೃತಿಕ ಪ್ರಜ್ಞೆ, ಪರಂಪರೆ, ಸಾಂಸ್ಕೃತಿಕತೆ ಬಗ್ಗೆ ನಿಸ್ಸಂಕೋಚವಾಗಿ ಮಾತನಾಡುವ ಧೈರ್ಯವನ್ನು ಕೊಟ್ಟ ಪುಸ್ತಕ. ಹಾಗೆ ಧೈರ್ಯ ಪಡೆದ ಎಷ್ಟೋ ಜನರಲ್ಲಿ ನಾನೂ ಒಬ್ಬಳು. ಇತಿಹಾಸದಲ್ಲಿ ಗಂಭೀರವಾದ ಆಸಕ್ತಿ ಹೊಂದಿದ್ದ ನನಗೆ ಅವರ ‘ಸಾರ್ಥ’, ‘ಆವರಣ’ಗಳನ್ನು ಓದಿದ ಆದ ಅರಿವೇ ಭಿನ್ನ. ನಮ್ಮ ಸಂಸ್ಕೃತಿಯ ಬಗೆಗಿನ ಪ್ರಜ್ಞೆಯನ್ನು ಜಾಗೃತಗೊಳಿಸುವ ದೊಡ್ಡ ಅಲೆಯನ್ನೇ ‘ಆವರಣ’ ಸೃಷ್ಟಿಸಿತು. ಆ ಅಲೆಯಲ್ಲಿ ಕೊಚ್ಚಿಕೊಂಡು ಹೋದವಳಲ್ಲಿ ನಾನೂ ಒಬ್ಬಳು.
ದಶಕದ ಕೆಳಗೆ ಅನಿರೀಕ್ಷಿತವಾಗಿ ‘ಕನ್ನಡಪ್ರಭ’ದಲ್ಲಿ ಲೇಖನಗಳನ್ನು ಬರೆಯುವ ಅವಕಾಶ ಒದಗಿಬಂತು. ಆಮೇಲೆ ನನ್ನ ಅಂಕಣವೂ ಶುರುವಾಯಿತು. ಇದರಲ್ಲಿ ‘ಎಸ್ ಎಲ್ ಭೈರಪ್ಪನವರ ಕಾದಂಬರಿಗಳಲ್ಲಿ ಬರುವ ಸ್ತ್ರೀ ಪಾತ್ರಗಳು’ ಎಂಬ ಬಗ್ಗೆ ಒಂದು ಲೇಖನ ಬರೆದಿದ್ದೆ. ಕಾರ್ಕಳ ಸಾಹಿತ್ಯ ಸಂಘದ ಅಂದಿನ ಅಧ್ಯಕ್ಷರಾಗಿದ್ದ ಪ್ರೊ. ಎಂ ರಾಮಚಂದ್ರ ಅವರು ನಾನು ಬರೆದ ಲೇಖನವನ್ನು ಓದಿದ್ದರು. ಒಮ್ಮೆ ಫೋನ್ ಮಾಡಿ, ‘ಬಹಳ ಚೆನ್ನಾಗಿ ಲೇಖನ ಬರೆದಿದ್ದೀರಿ. ಕಾರ್ಕಳದಲ್ಲಿ ನಾವು ಭೈರಪ್ಪ ಅವರಿಗೆ ಅಭಿನಂದನೆ ಇಟ್ಟುಕೊಂಡಿದ್ದೇವೆ. ಅಲ್ಲಿ ನೀವು ಅವರ ಬಗ್ಗೆ ಮಾತನಾಡಬೇಕು’ ಎಂದರು. ನಾನು ಸಾರಾಸಗಟಾಗಿ ನಿರಾಕರಿಸಿದೆ. ‘ನನಗೆ ಆ ಅರ್ಹತೆ ಇಲ್ಲ. ನಾನು ಸಾಮಾನ್ಯ ಓದುಗಳು ಮಾತ್ರ. ಅವರ ಎದುರಿಗೆ ಅವರ ಕಾದಂಬರಿಯನ್ನು ವಿಶ್ಲೇಷಿಸುವ ಶಕ್ತಿ ನನಗೆ ಇಲ್ಲವೇ ಇಲ್ಲ. ತಪ್ಪು ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಿ’ ಎಂದಿದ್ದೆ.
ಎಂ ರಾಮಚಂದ್ರ ಅವರು, ‘ನಿಮ್ಮ ಬರಹಗಳಲ್ಲಿನ ಒಳನೋಟಗಳು ಚೆನ್ನಾಗಿವೆ. ಯೂನಿರ್ಸಿಟಿಯಲ್ಲಿ ಓದಿಕೊಂಡು ಒಂದೇ ಗರಡಿಯಲ್ಲಿ ಪಳಗಿದವರನ್ನು ಅವರು ಇಷ್ಟ ಪಡೋದಿಲ್ಲ. ನಿಮ್ಮ ಥರ ಉದ್ಯೋಗದಲ್ಲಿದ್ದು ಬೇರೆ ಬೇರೆ ದೇಶಗಳನ್ನು ಕಂಡವರು ತರುವ ಒಳನೋಟಗಳು ಬಹಳ ಪ್ರಿಯವಾಗುತ್ತೆ’ ಎಂದರು.
ಇಲ್ಲ ಎನ್ನಲಾಗದೇ ಹೆದರಿಕೊಂಡೇ ಹೋದೆ. ನನಗೆ ತೋಚಿದ್ದು ಮಾತಾಡಿದೆ. ವೇದಿಕೆಯಲ್ಲೇ ಭೈರಪ್ಪ ಅವರು ನನ್ನ ಮಾತುಗಳ ಬಗ್ಗೆ ಮೆಚ್ಚುಗೆಯಿಂದ ಮಾತನಾಡಿದರು. ಅದಕ್ಕೂ ಮೊದಲೇ ಅವರು ನನ್ನ ಅಂಕಣ ಬರಹಗಳನ್ನು ಓದುತ್ತಿದ್ದರು. ಅಂದು ನನ್ನ ಬರವಣಿಗೆಯ ಬಗೆಗೂ ಬೆನ್ನು ತಟ್ಟುವಂತೆ ಮಾತನಾಡಿದರು.
ಇದೆಲ್ಲ ಆದ ಬಳಿಕ ನಾನೊಮ್ಮೆ ಅವರ ಮನೆಗೆ ಹೋಗಿದ್ದೆ. ‘ಅಂಕಣಗಳನ್ನು ಬರೆಯುತ್ತಿದ್ದೇನೆ. ಕಾದಂಬರಿ ಪ್ರಕಾರದಲ್ಲಿ ನಾನು ಕೈಯಾಡಿಸಬಹುದೇ?’ ಅಂತ ಕೇಳಿದ್ದೆ. ‘ಅಧ್ಯಯನ ಬೇಕಮ್ಮಾ ತುಂಬಾ. ಎಲ್ಲರಿಗೂ ಅನಿಸೋದು ಕೂತ ತಕ್ಷಣ ಕಲ್ಪನೆಯಲ್ಲಿ ಬರೋದೆ ಕಥೆ, ಕಾದಂಬರಿ ಅನಿಸುತ್ತೆ. ನಿಮಗೆ ತಕ್ಕಮಟ್ಟಿನ ಜೀವನಾನುಭವ ಇದೆ. ಆದರೆ ಅಧ್ಯಯನ ಬೇಕಲ್ವಾ..’ ಎನ್ನುತ್ತಾ ಒಂದಿಷ್ಟು ಕೃತಿಗಳ ಪಟ್ಟಿಕೊಟ್ಟಿದ್ದರು. ಎಂ ಹಿರಿಯಣ್ಣನವರಿಂದ ಬರ್ಟ್ರಾಂಡ್ ರಸ್ಸೆಲ್, ಹೆಗೆಲ್‌ವರೆಗೂ ಪುಸ್ತಕಗಳಿದ್ದವು. ಭಾರತೀಯ ತತ್ವಶಾಸ್ತ್ರ, ಪಾಶ್ಚಿಮಾತ್ಯ ತತ್ವಶಾಸ್ತ್ರ, ಇವುಗಳ ಮೂಲ ನಾಡಿ ಯಾವುದು ಇತ್ಯಾದಿಗಳ ಬಗೆಗೆಲ್ಲ ಮಾತನಾಡಿದರು. ಆ ಹೊತ್ತಿಗೆ ನನ್ನ ಮನಸ್ಸಲ್ಲಿದ್ದ ಕಥೆಯ ಬಗ್ಗೆ ಹೇಳಿ "ಇದನ್ನು ಕಾದಂಬರಿ ಮಾಡಬಹುದಾ?’ ಅಂತ ಕೇಳಿದೆ. ‘ಅದಕ್ಕೇನಂತೆ, ಬರೆಯಿರಿ ನೋಡೋಣ’ ಅಂದರು. ‘ಮನಸ್ಸಿಗೆ ಸಮಾಧಾನ ಆಗದಿದ್ದರೆ ನೀವು ಹೇಗೆ ನಿಮ್ಮ ಬರಹಗಳನ್ನು ಹರಿದು ಹಾಕುತ್ತೀರೋ, ನನ್ನದನ್ನೂ ಹಾಗೇ ಮಾಡಬೇಕು ಸರ್ ’ ಎಂದಿದ್ದೆ. ಆಯ್ತು ಅಂದರು. ಆ ಬಳಿಕ ನನ್ನ ‘ಕ್ಷಮೆ’ ಕೃತಿಯ ಕರಡು ಪ್ರತಿ ಕಳಿಸಿದೆ. ಹದಿನೈದೇ ದಿನಗಳಲ್ಲಿ ಪುಟ ಸಂಖ್ಯೆಯ ಸಮೇತ ಅಭಿಪ್ರಾಯ ಕಳಿಸಿದ್ದರು. ಹಲವು ಸೂಕ್ಷ್ಮ ವಿವರಗಳನ್ನು, ತಿದ್ದುಪಡಿಗಳನ್ನು ಸೂಚಿಸಿದರು. ಅದನ್ನು ತಿದ್ದಲು ಶುರು ಮಾಡಿದೆ. ಇದಕ್ಕಿಂತ ಮರುಬರವಣಿಗೆಯೇ ಸೂಕ್ತ ಎನಿಸಿತು. ಹೊಸತಾಗಿ ಬರೆದೆ. ಅದನ್ನು ಕಂಡು ಅವರಿಗೆ ಬಹಳ ಸಂತೋಷವಾಯಿತು. ‘ಸಾಮಾನ್ಯವಾಗಿ ನನ್ನ ಬಳಿ ಬೆನ್ನುಡಿ, ಮುನ್ನುಡಿ, ಅವಾರ್ಡಿಗೆ ರೆಕಮಂಡ್ ಅಂತ ಜನ ಬರುತ್ತಾರೆ. ನಿನ್ನಂತೆ ತಪ್ಪನ್ನು ತಿದ್ದಿ ಬರೆಯುವುದು ಅಪರೂಪ. ನನಗೆ ಈ ನಿನ್ನ ಪ್ರಾಮಾಣಿಕತೆ, ಶ್ರದ್ಧೆ ಇಷ್ಟ ಆಯ್ತು’ ಅಂದರು. ನಂತರ ನಿರಂತರವಾಗಿ ನನ್ನ ಸಾಹಿತ್ಯಿಕ ಕೆಲಸಗಳನ್ನು ಪೋಷಿಸುತ್ತ ಬಂದರು.
ಅವರು ‘ಭಿತ್ತಿ’ಯಲ್ಲಿ ಬರೆದಿಲ್ಲದ ಬದುಕು, ಕಾಳಿದಾಸ, ಕಾವ್ಯ, ತತ್ವಶಾಸ್ತ್ರ ಹೀಗೆ..ನಾವು ಮಾತನಾಡದಿರುವ ವಿಷಯಗಳೇ ಇಲ್ಲವೇನೋ. ಮುಂದೆ ನಾನು ಸಾಹಿತ್ಯಿಕ ಕೆಲಸಕ್ಕಾಗಿ ಉದ್ಯೋಗ ತೊರೆದೆ. ಗಂಭೀರವಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡೆ. ನನಗೆ ಬಹಳ ಸಮಾಧಾನ ಕೊಟ್ಟ ‘ಮಾಗಧ’ ಕೃತಿಯನ್ನು ಭೈರಪ್ಪ ಅವರಿಗೆ ಅರ್ಪಣೆ ಮಾಡಿದೆ.
ಅವರಿಗೆ ಅದು ಸಂತೋಷ ತಂದಿತ್ತು.
ಭೈರಪ್ಪ ಅವರ ‘ಆಚಾರ್ಯ ಋಣ’ ನನ್ನ ಮೇಲಿದೆ. ಕೊನೆಯ ದಿನಗಳಲ್ಲಿ ಟ್ರಸ್ಟ್ ಮಾಡುವ ಅವರ ಕನಸಿಗೆ ಕೈಜೋಡಿಸಿದ ಸಮಾಧಾನ ಇದೆ. ಹಾಗೆಂದು ಅವರ ಋಣವನ್ನು ತೀರಿಸಲಾಗದು.