ಬೆಂಗಳೂರು : ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗೆ ಎರಡು ಪ್ಯಾಕೇಜ್‌ಗಳಲ್ಲಿ 17 ಸಾವಿರ ಕೋಟಿ ವೆಚ್ಚದ ಮೂರು ಪಥದ ಅವಳಿ ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ಅಂತಾರಾಷ್ಟ್ರೀಯ ಟೆಂಡರ್ ಆಹ್ವಾನಿಸಲಾಗಿದೆ.
ನಗರದ ಸಂಚಾರ ದಟ್ಟಣೆ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುರಂಗ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದೀಗ ನಗರದ ಮಹತ್ವಕಾಂಕ್ಷಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಸ್ಥಾಪಿಸಿಕೊಂಡ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ(ಬಿ-ಸ್ಮೈಲ್) ಮೂಲಕ ಅಂತಾರಾಷ್ಟ್ರೀಯ ಟೆಂಡರ್ ಆಹ್ವಾನಿಸಿದೆ.
ಹೆಬ್ಬಾಳದಿಂದ ಸಿಲ್ಕ್‌ಬೋರ್ಡ್‌ವರೆಗೆ ಒಟ್ಟು 16.74 ಕಿ.ಮೀ ಉದ್ದದ ಸುರಂಗ ರಸ್ತೆ ನಿರ್ಮಾಣಕ್ಕೆ ಎರಡು ಪ್ಯಾಕೇಜ್ ರೂಪಿಸಲಾಗಿದೆ. ಹೆಬ್ಬಾಳದ ಎಸ್ಟಿಮ್ ಮಾಲ್‌ನಿಂದ ಶೇಷಾದ್ರಿ ರಸ್ತೆಯ ರೇಸ್ ಕೋರ್ಸ್ ಜಂಕ್ಷನ್ ವರೆಗೆ 8.74 ಕಿ.ಮೀ ಸುರಂಗ ರಸ್ತೆ ನಿರ್ಮಾಣಕ್ಕೆ 8,770 ಕೋಟಿ ರು. ವೆಚ್ಚದ ಒಂದು ಪ್ಯಾಕೇಜ್, ಶೇಷಾದ್ರಿ ರಸ್ತೆಯ ರೇಸ್‌ಕೋರ್ಸ್ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ವರೆಗೆ 7.99 ಕಿ.ಮೀ ಉದ್ದ ಸುರಂಗ ರಸ್ತೆ ನಿರ್ಮಾಣಕ್ಕೆ 8.928 ಕೋಟಿ ರು. ವೆಚ್ಚದಲ್ಲಿ ಮತ್ತೊಂದು ಪ್ಯಾಕೇಜ್ ರೂಪಿಸಲಾಗಿದೆ.
ಅಭಿವೃದ್ಧಿ, ಕಾರ್ಯಾಚರಣೆ ಹಾಗೂ ವರ್ಗಾವಣೆ (ಬಿಒಒಟಿ) ಆಧಾರದಲ್ಲಿ ಟೆಂಡರ್ ಆಹ್ವಾನಿಸಲಾಗಿದ್ದು, ಮೂರು ಪಥದ ಅವಳಿ ಸುರಂಗ ರಸ್ತೆ, ಎರಡು ಪಥದ ನಿರ್ಗಮನ ಹಾಗೂ ಪ್ರವೇಶ ದ್ವಾರ ನಿರ್ಮಾಣ ಮಾಡುವುದು. ಕಾಮಗಾರಿಗೆ 50 ತಿಂಗಳು ಸೇರಿದಂತೆ ಒಟ್ಟು 34 ವರ್ಷ ಗುತ್ತಿಗೆ ನೀಡುವುದಾಗಿ ಟೆಂಡರ್ ನಲ್ಲಿ ತಿಳಿಸಲಾಗಿದೆ.
ಎರಡೂ ಪ್ಯಾಕೇಜ್‌ಗೂ ಸುಮಾರು 44 ಕೋಟಿ ರು. ಇಎಂಡಿ ಮೊತ್ತ ನಿಗದಿ ಪಡಿಸಲಾಗಿದೆ. ಸುರಂಗ ರಸ್ತೆ ಟೆಂಡರ್ ಬಿಡ್ ಸಂಬಂಧಿಸಿದಂತೆ ಆಗಸ್ಟ್ 1 ರವರೆಗೆ ವಿಚಾರಣೆಗೆ ಅವಕಾಶ ನೀಡಲಾಗಿದೆ. ಆಗಸ್ಟ್ 4 ರಂದು 12 ಗಂಟೆಗೆ ಬಿ-ಸ್ಮೈಲ್ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಅಧ್ಯಕ್ಷತೆಯಲ್ಲಿ ಪೂರ್ವ ಬಿಡ್ ಸಭೆ ಆಯೋಜಿಸಲಾಗಿದೆ.
ಟೆಂಡರ್ ಕುರಿತು ಆಕ್ಷೇಪಣೆ ಸಲ್ಲಿಕೆಗೆ ಆಗಸ್ಟ್ 7 ಕೊನೆ ದಿನವಾಗಿದೆ. ಟೆಂಡರ್ ಬಿಡ್ ಸಲ್ಲಿಸಲು ಸೆಪ್ಟಂಬರ್ 2 ಕೊನೆ ದಿನವಾಗಿದೆ. ಸೆಪ್ಟಂಬರ್ 4ಕ್ಕೆ ತಾಂತ್ರಿಕ ಅರ್ಹತೆ ಪರಿಶೀಲನೆ. ನಂತರ ಅರ್ಹ ಗುತ್ತಿಗೆದಾರರ ಘೋಷಣೆ ಮಾಡುವುದಾಗಿ ತಿಳಿಸಲಾಗಿದೆ.