ಯುವಜನತೆಯ ಸದ್ಬಳಕೆ ದೇಶ ಅಭಿವೃದ್ಧಿಗೆ ರಹದಾರಿ

Published : Jul 15, 2025, 12:20 PM IST
International Youth Day:

ಸಾರಾಂಶ

‘ನನ್ನ ವೃತ್ತಿ ನನ್ನ ಆಯ್ಕೆ’ ಎಂಬ ಕಾರ್ಯಕ್ರಮವು 5ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಬಗ್ಗೆ ಸ್ಪಷ್ಟತೆ ನೀಡುತ್ತಿದೆ. ಈ ಮೂಲಕ ಮಕ್ಕಳು ತನ್ನ ಇಚ್ಛೆಯ ಉದ್ದೇಶಗಳನ್ನು ಇನ್ನಷ್ಟು ಸಬಲವಾಗಿ ರೂಪಿಸಿಕೊಳ್ಳಲು ಸಹಾಯವಾಗುತ್ತಿದೆ.

-ಲಕ್ಷ್ಮಣ್ ಟಿ, ಸಂಯೋಜಕರು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ

ಇಂದು ವಿಶ್ವ ಯುವ ಕೌಶಲ್ಯ ದಿನ (ಸೀಲ್‌ ಮಾಡಿ)

ಒಂದು ದೇಶದ ಶಕ್ತಿಯೇ ಯುವಜನತೆ, ದೇಶವು ಅಭಿವೃದ್ಧಿಯಾಗಬೇಕಾದರೆ ಯುವಜನತೆಯ ಪಾತ್ರವು ಅಗಾಧವಾಗಿದೆ. ಉದ್ಯೋಗದಲ್ಲಿ ತೊಡಗಿಕೊಳ್ಳುವ ಯುವಕ-ಯುವತಿಯರು ವಿವಿಧ ರೀತಿಯ ಕೌಶಲ್ಯವನ್ನು ಹೊಂದಿರುವುದು ಅತ್ಯಗತ್ಯ. ಆದರೆ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕೌಶಲ್ಯದ ಕೊರತೆಯಿಂದಾಗಿ ನಿರುದ್ಯೋಗಿಗಳ ಸಂಖ್ಯೆಯು ಹೆಚ್ಚುತ್ತಿದೆ. ಹೀಗಾಗಿ ಯುವಕರನ್ನು ಕೌಶಲ್ಯಭರಿತವಾದ ತರಬೇತಿಯೊಂದಿಗೆ ಸಜ್ಜುಗೊಳಿಸಬೇಕಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜುಲೈ 15ರಂದು ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲಾಗುತ್ತಿದೆ. ನಿರುದ್ಯೋಗ ಸವಾಲುಗಳನ್ನು ಕಡಿಮೆ ಮಾಡಿ ಉದ್ಯೋಗ ಕೌಶಲ್ಯವನ್ನು ಉತ್ತೇಜಿಸಲು ವಿಶ್ವದಾದ್ಯಂತ ಯುವಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ದಿನವು ಮಹತ್ವದ್ದಾಗಿದೆ. ಇದು ಕೇವಲ ಒಂದು ದಿನದ ಆಚರಣೆಯಾಗದೇ, ಯುವಜನತೆಗೆ ಸೃಜನಶೀಲತೆ, ಉದ್ಯಮಶೀಲತೆ ಮತ್ತು ಉದ್ಯೋಗದತ್ತ ಹೊರಳಲು ಪ್ರತಿಜ್ಞೆ ವಹಿಸುವ ಮಹತ್ವದ ಘಟ್ಟ, ಪ್ರಪಂಚದಾದ್ಯಂತದ ಯುವಕರು ಇಂದು ಅವರ ಪೋಷಕರು ಎದುರಿಸಿದ ಸವಾಲುಗಳಿಗಿಂತ ಭಿನ್ನವಾದ ಕೌಶಲ್ಯ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದಂತೆ ಗಂಭೀರ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆಧುನಿಕ ಉದ್ಯೋಗಗಳಿಗೆ ಯುವಕರನ್ನು ಸಿದ್ಧಪಡಿಸುವುದು ಬಹಳ ಕ್ಲಿಷ್ಟಕರವಾದ ವಿಷಯ. ಆದರೆ ಅದು ಇಂದಿನ ಅಗತ್ಯವೂ ಆಗಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಹಲವು ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಆ ಮೂಲಕ ದೇಶದಲ್ಲೇ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ.

ಜರ್ಮನಿ ಜೊತೆಗೆ ತರಬೇತಿ

ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಇಲಾಖೆ ಹಲವಾರು ಹೊಸ ಯೋಜನೆಗಳು, ತರಬೇತಿ ಕೇಂದ್ರಗಳು ಮತ್ತು ಉದ್ಯೋಗ ಸಂಪರ್ಕ ಕಾರ್ಯಕ್ರಮಗಳ ಮೂಲಕ ಯುವಕರಿಗೆ ಜೀವನ ರೂಪಿಸುವ ಶಕ್ತಿಯನ್ನು ನೀಡುತ್ತಿದೆ, ‘ಯುವನಿಧಿ ಪ್ಲಸ್’ ಯೋಜನೆಯಡಿ ಸಾವಿರಾರು ಯುವಕರಿಗೆ ಕೈಗಾರಿಕಾ ತರಬೇತಿ ನೀಡಲಾಗುತ್ತಿದ್ದು, ಈ ತರಬೇತಿ ಹೊಸ ತಂತ್ರಜ್ಞಾನಗಳಲ್ಲಿ (AL, Robotics, Future Skills) ನಡೆಯುತ್ತಿರುವುದು ಗಮನಾರ್ಹ.

‘ಕಲಿಕೆ ಜತೆ ಕೌಶಲ್ಯ’ ಯೋಜನೆಯಡಿ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜತೆಗೆ ಕೈಗಾರಿಕಾ ಕೌಶಲ್ಯ ನೀಡಲಾಗುತ್ತಿದೆ. ಈಗಾಗಲೇ 28,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಉನ್ನತ ಶಿಕ್ಷಣದ ಜತೆಗೆ ಉದ್ಯೋಗಪಾತ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಇದು ಹೊಸ ಪ್ರವೃತ್ತಿಯಾಗಿದೆ. ‘ನನ್ನ ವೃತ್ತಿ ನನ್ನ ಆಯ್ಕೆ’ ಎಂಬ ಕಾರ್ಯಕ್ರಮವು ೫ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಬಗ್ಗೆ ಸ್ಪಷ್ಟತೆ ನೀಡುತ್ತಿದೆ. ಈ ಮೂಲಕ ಮಕ್ಕಳು ತನ್ನ ಇಚ್ಛೆಯ ಉದ್ದೇಶಗಳನ್ನು ಇನ್ನಷ್ಟು ಸಬಲವಾಗಿ ರೂಪಿಸಿಕೊಳ್ಳಲು ಸಹಾಯವಾಗುತ್ತಿದೆ. ರಾಜ್ಯಾದ್ಯಂತ ನಡೆದ ಉದ್ಯೋಗ ಮೇಳಗಳ ಮುಖಾಂತರ 27,000ಕ್ಕೂ ಹೆಚ್ಚು ಉದ್ಯೋಗಕಾಂಕ್ಷಿಗಳಿಗೆ ಉದ್ಯೋಗದ ಅವಕಾಶ ದೊರೆತಿದೆ. ಇವು ಕೇವಲ ಉದ್ಯೋಗಕ್ಕಾಗಿ ವೇದಿಕೆಯಾಗದೇ, ಸ್ಥಳೀಯ ಕೈಗಾರಿಕೆಗಳ ಬೇಡಿಕೆಗೂ ಸೇತುಬಂಧವಾಗಿ ನಿಂತಿವೆ. ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಆಧಾರಿತ ‘ಅಕ್ಕ ಕೆಫೆ’ ಯೋಜನೆ, ಸ್ಥಳೀಯ ಆಹಾರ ಪದಾರ್ಥಗಳೊಂದಿಗೆ ಮಹಿಳೆಯರ ಉದ್ಯಮಶೀಲತೆಯನ್ನು ಉತ್ತೇಜಿಸುತ್ತಿದೆ. ಈ ಯೋಜನೆಯಡಿ 150 ಮಹಿಳೆಯರಿಗೆ ನೇರ ಉದ್ಯೋಗ ಸೃಷ್ಟಿಯಾಗಿದೆ. ಇದು ಕೇವಲ ಆಹಾರದ ತಾಣವಾಗದೆ, ಮಹಿಳೆಯರ ಶಕ್ತಿಯ ಹೊಸ ಮುಖವಾಡವಾಗಿದೆ.

ಕರ್ನಾಟಕ ಜೆರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್‌ಸ್ಟಿಟೂಟ್ಸ್ ಮೂಲಕ ಅಲ್ಪಾವಧಿ ಹಾಗೂ ದೀರ್ಘಾವಧಿಯ ತರಬೇತಿ ಕಾರ್ಯಕ್ರಮಗಳನ್ನೂ ನೀಡಲಾಗುತ್ತಿವೆ. 50,000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, 16,000ಕ್ಕೂ ಹೆಚ್ಚು ಮಂದಿ ಉದ್ಯೋಗದಲ್ಲಿದ್ದಾರೆ. ಇದು ಭಾರತೀಯ-ಜರ್ಮನ್ ಸಹಭಾಗಿತ್ವದ ಯಶಸ್ವೀ ಮಾದರಿಗೆ ಉದಾಹರಣೆ.

ಆರ್ಟಿಫಿಶಿಯಲ್ ಇಂಟಲಿಜೆನ್ಸ್, ರೊಬೊಟಿಕ್ಸ್ ಮುಂತಾದ ಹೊಸ ಡಿಪ್ಲೋಮಾ ಕೋರ್ಸ್‌ಗಳನ್ನೊಳಗೊಂಡು ನೂತನ ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ತರಬೇತಿಗಳ ಮೂಲಕ ಯುವಕರಿಗೆ ಉದ್ಯೋಗದ ಜತೆಗೆ ಜಾಗತಿಕ ಬೇಡಿಕೆಗಳು ಜ್ಞಾನ ಒದಗಿಸಲಾಗುತ್ತಿದೆ.

ಕರ್ನಾಟಕಕ್ಕೆ ಪದಕಗಳ ಸುರಿಮಳೆ

2024ರಲ್ಲಿ ಮಾಡಿದ ಇಂಡಿಯಾ ಸ್ಕಿಲ್ ಸ್ಪರ್ಧೆಯಲ್ಲಿ ಕರ್ನಾಟಕವು ಪದಕಗಳನ್ನು ಗೆಲ್ಲುವ ಮೂಲಕ ರಾಷ್ಟ್ರದ ಅಗ್ರಗಣ್ಯ ರಾಜ್ಯವಾಗಿ ಹೊರಹೊಮ್ಮಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ 4 ಮೆಡಲಿಯನ್ ಆಫ್ ಎಕ್ಸಲೆನ್ಸ್‌ಗಳನ್ನು ರಾಜ್ಯದ ಯುವಕರಿಗೇ ನೀಡಲಾಗಿದೆ. ಈ ಕೌಶಲ್ಯ ಸ್ಪರ್ಧೆಗಳು ಯುವಕರಲ್ಲಿ ತಂತ್ರಜ್ಞಾನದ ಜ್ಞಾನ, ನಿಯೋಜನಾ ನೈಪುಣ್ಯತೆ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕತೆ ಒದಗಿಸುತ್ತವೆ. ಅಂತಾರಾಷ್ಟ್ರೀಯ ವಲಸೆ ಕೇಂದ್ರ-ಕರ್ನಾಟಕ ಯೋಜನೆಯಡಿ ಸುಮಾರು 1000ಕ್ಕೂ ಅಧಿಕ ಯುವಕರಿಗೆ ವಿದೇಶದಲ್ಲಿ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಪ್ರಿ ಆಂಡ್ ಡಿಪಾರ್ಚರ್ ಓರಿಯೆಂಟೆಂಡ್ ಟ್ರೈನಿಂಗ್ ಎಂಬ ಸುರಕ್ಷಿತ ಪ್ರಕ್ರಿಯೆಯ ಮೂಲಕ ವಿದೇಶಿಯ ಕಾರ್ಮಿಕ ಅವಧಾನ ಮತ್ತು ಜಾಗೃತಿಯನ್ನು ಸಹ ಕಲಿಸುತ್ತಿದೆ.

2024ರ ಡಿಸೆಂಬರ್‌ನಲ್ಲಿ ಬೆಂಗಳೂರು ಜಿಟಿಟಿಸಿಯಲ್ಲಿ ಸ್ಥಾಪಿತವಾದ ಡಿಜಿಟಲ್ ಲರ್ನಿಂಗ್‌ ಸ್ಟುಡಿಯೋ, ತರಬೇತಿಯ ಅನುಭವವನ್ನು ಇನ್ನಷ್ಟು ಆಧುನಿಕಗೊಳಿಸುವತ್ತ ರಾಜ್ಯ ಸರಕಾರ ಮುಂದಾಗಿದೆ. ಇವು ತರಬೇತಿದಾರರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಂತರ್ಜಾಲ ಆಧಾರಿತ ತರಬೇತಿಯನ್ನು ಸುಲಭಗೊಳಿಸುತ್ತವೆ. ಯುವಕರಿಗೆ ಆರ್ಥಿಕ ನೆರವು ನೀಡುವ ‘ಯುವನಿಧಿ ಯೋಜನೆ’ ಅಡಿಯಲ್ಲಿ 2.4 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ₹470 ಕೋಟಿಗಳನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ. ಇದು ನಿರುದ್ಯೋಗದ ಸಂಕಷ್ಟವನ್ನು ತಾತ್ಕಾಲಿಕವಾಗಿ ನಿವಾರಿಸಲು ಸಕಾರಾತ್ಮಕ ಕ್ರಮವಾಗಿದೆ. ‘ಸಿಡಾಕ್‌’ನಿಂದ 18,000 ಯುವಕರಿಗೆ ಉದ್ಯಮಶೀಲತಾಭಿವೃದ್ಧಿ ತರಬೇತಿ ನೀಡಲಾಗಿದ್ದು, 2000ಕ್ಕೂ ಹೆಚ್ಚು ಹೊಸ ಉದ್ಯಮಗಳು ಉದಯವಾಗಿದೆ. ಇದು ಉದ್ಯೋಗ ಪಡೆಯುವ ಕಲಿಕೆಯಷ್ಟೇ, ಉದ್ಯೋಗ ಸೃಷ್ಟಿಸುವ ಕಲಿಕೆಯನ್ನೂ ತೋರಿಸುತ್ತದೆ.

ವಿಶ್ವ ಕೌಶಲ್ಯ ದಿನದ ಪಾಠ ಬಹುಪಾಲು ರಾಷ್ಟ್ರಗಳಿಗೆ ಯುವಶಕ್ತಿಯ ಹಕ್ಕು ಮತ್ತು ಹೊಣೆಗಾರಿಕೆ ಬಗ್ಗೆ ನೆನಪಿಸುತ್ತಿದೆ. ಆದರೆ ಕರ್ನಾಟಕ ಈ ದಿನವನ್ನು ಕೇವಲ ಆಚರಣೆಯಾಗಿ ತೆಗೆದುಕೊಳ್ಳದೇ, ಎಲ್ಲ ವಿಭಾಗಗಳೊಳಗಿನ ಸಜೀವ ಯೋಜನೆಗಳ ಮೂಲಕ ಕೌಶಲ್ಯವಂತ ಕರ್ನಾಟಕದ ಭವಿಷ್ಯವನ್ನು ನಿರ್ಮಿಸುತ್ತಿದೆ. ಇದು ನಮ್ಮ ನಾಡಿನ ನವೋದ್ಯಮದ ನಕ್ಷೆ. ಯುವಕರಿಗೆ ಕೌಶಲ್ಯ ನೀಡುವುದು ಕೇವಲ ತರಬೇತಿಯಾಗಿರಬಾರದು; ಅದು ಅವರ ಜೀವನಕ್ಕೆ ಉಜ್ವಲ ದಿಕ್ಕು ನೀಡಬೇಕು. ಕರ್ನಾಟಕ ಈಗಲೇ ಆ ದಿಕ್ಕಿನಲ್ಲಿ ನಡಿಗೆಯಿಟ್ಟಿದೆ.

ಹೊಸತನದ ಸಾಧನೆ

ಕೌಶಲ್ಯ ಎಂಬುದು ಪ್ರತೀ ಹೆಜ್ಜೆಯಲ್ಲೂ ಹೊಸತನ ಸಾಧಿಸುವುದು, ಚಲನಶೀಲವಾದುದು. ನಿರಂತರ ಪರಿಷ್ಕರಣೆಯಾಗುವಂತಹದ್ದು, ಇಂದಿನ ಕೆಲಸಗಳನ್ನು ನಿನ್ನೆಯ ವಿಧಾನಗಳ ಮೂಲಕ ಮಾಡಿ ನಾಳೆ ವ್ಯವಹಾರ ಮಾಡಲಾಗದು ಎಂಬುದು ಉದ್ಯಮ ಜಗತ್ತಿನ ಮಾರ್ಗದರ್ಶಿ ಸೂತ್ರ, ನಿರಂತರ ಕಲಿಕೆ, ಅನ್ವೇಷಣೆ ಹಾಗೂ ಅಳವಡಿಕೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸಿನ ಕೀಲಿಕೈ. ಯುವ ಜನರಲ್ಲಿ ಕೌಶಲವರ್ಧನೆ ಮಾಡುವ ಮೂಲಕ ಜನಸಂಖ್ಯೆಯನ್ನು ಮಾನವ ಸಂಪತ್ತಾಗಿ ಪರಿವರ್ತಿಸಿ ಅಭಿವೃದ್ಧಿಯನ್ನು ಹೊಂದಲು ಸಾಧ್ಯ ಜ್ಞಾನಕ್ಷೇತ್ರದಲ್ಲಿ ಪ್ರಪಂಚ ಇಂದು ಅಪಾರ ಬದಲಾವಣೆಗಳಿಗೆ ಒಳಗಾಗುತ್ತಿದೆ. ಕಲ್ಪನೆಗೂ ಎಟುಕದ ರೀತಿಯ ವೈಜ್ಞಾನಿಕ ಹಾಗೂ ತಾಂತ್ರಿಕ ಮುನ್ನಡೆಗಳ ಕಾಲದಲ್ಲಿ ಸಮಕಾಲೀನ ಕೌಶಲ್ಯವರ್ಧನೆ ಒಟ್ಟು ಬೆಳವಣಿಗೆಯ ಅಡಿಪಾಯವಾಗಿದೆ.

ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತಿಸುವ ಯೋಚನೆ ಹಾಗೂ ಯೋಜನೆಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಅರ್ಥಶಾಸ್ತ್ರ ನಮಗೆ ತಿಳಿಸುತ್ತದೆ. ಭಾರತ ಈಗ ಜನಸಂಖ್ಯಾ ಹೆಚ್ಚಳದೊಂದಿಗೆ ಬಹು ಮುಖ್ಯ ಅವಕಾಶ ಮತ್ತು ಸವಾಲನ್ನು ತನ್ನದಾಗಿಸಿಕೊಂಡಿದೆ. ಕೆಲಸ ಮಾಡುವ ಪ್ರಾಯ ಹಾಗೂ ಸಾಮರ್ಥ್ಯ ಇರುವ ವಿಫುಲ ಯುವಜನತೆಯ ಸದ್ಬಳಕೆ ನಮ್ಮ ದೇಶದ ಅಭಿವೃದ್ಧಿಗಿರುವ ರಹದಾರಿ.

PREV
Read more Articles on

Latest Stories

ಭಾರತೀಯ ಚಿತ್ರರಂಗದ ಸಾಕ್ಷಾತ್‌ ಮಹಾಲಕ್ಷ್ಮೀ ಬಿ ಸರೋಜಾದೇವಿ - ಜಯಮಾಲಾ
ಸರೋಜಾದೇವಿ ಬಗ್ಗೆ ಆಸಕ್ತಿಕರ ವಿಚಾರಗಳು : ಮಗುವನ್ನು ಕೊಟ್ಟು ಬಿಡಿ ಎಂದಿದ್ದರಂತೆ !
ದಕ್ಷಿಣ ಭಾರತದ ಮೊದಲ ಮಹಿಳಾ ಸೂಪರ್‌ಸ್ಟಾರ್‌ ಬಿ. ಸರೋಜಾದೇವಿ