ಆಸ್ತಿ ಮಾಲೀಕರೆ ಗಮನಿಸಿ, ದುಪ್ಪಟ್ಟು ದಂಡ ತಪ್ಪಿಸಿ : ಆಸ್ತಿ ತೆರಿಗೆ ಬಾಕಿಗೆ ಏ.1ರಿಂದ ಶೇ.100 ದಂಡ

KannadaprabhaNewsNetwork | Updated : Mar 14 2025, 07:33 AM IST

ಸಾರಾಂಶ

ರಾಜಧಾನಿಯಲ್ಲಿರುವ ಆಸ್ತಿ ಮಾಲೀಕರೇ ನೀವೇನಾದರೂ ನಿಮ್ಮ ಆಸ್ತಿಯ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದೀರಾ, ಹಾಗಾದರೆ, ಮಾ.31ರೊಳಗೆ ಪಾವತಿಸಿ. ಇಲ್ಲವಾದರೇ ಏ.1 ರಿಂದ ಬಾಕಿ ಇರುವ ಆಸ್ತಿ ತೆರಿಗೆ ಮೊತ್ತಕ್ಕೆ ಸರಿಸಮನಾದ ಮೊತ್ತವನ್ನು ದಂಡ ರೂಪದಲ್ಲಿ ಪಾವತಿಸಬೇಕಾಗಲಿದೆ.

ವಿಶ್ವನಾಥ ಮಲೇಬೆನ್ನೂರು 

 ಬೆಂಗಳೂರು : ರಾಜಧಾನಿಯಲ್ಲಿರುವ ಆಸ್ತಿ ಮಾಲೀಕರೇ ನೀವೇನಾದರೂ ನಿಮ್ಮ ಆಸ್ತಿಯ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದ್ದೀರಾ, ಹಾಗಾದರೆ, ಮಾ.31ರೊಳಗೆ ಪಾವತಿಸಿ. ಇಲ್ಲವಾದರೇ ಏ.1 ರಿಂದ ಬಾಕಿ ಇರುವ ಆಸ್ತಿ ತೆರಿಗೆ ಮೊತ್ತಕ್ಕೆ ಸರಿಸಮನಾದ ಮೊತ್ತವನ್ನು ದಂಡ ರೂಪದಲ್ಲಿ ಪಾವತಿಸಬೇಕಾಗಲಿದೆ.

ಹೌದು, ರಾಜ್ಯ ಸರ್ಕಾರವು ಕಳೆದ ವರ್ಷ ಬಿಬಿಎಂಪಿಯ ಕಾಯ್ದೆಗೆ ತಿದ್ದುಪಡಿ ಮಾಡಿ ಆಸ್ತಿ ತೆರಿಗೆ ಮೇಲಿನ ದಂಡ ಪ್ರಮಾಣವನ್ನು ಎರಡರಿಂದ ಒಂದು ಪಟ್ಟಿಗೆ ಇಳಿಕೆ ಮಾಡಿತ್ತು. ಜತೆಗೆ, ಒಂದು ವರ್ಷ ಕಾಲ ದಂಡ ಪ್ರಮಾಣವನ್ನು ₹100ಕ್ಕೆ ನಿಗದಿ ಪಡಿಸಿ ವಿನಾಯಿತಿ ನೀಡಿತ್ತು. ಇದೀಗ ಮಾ.31ಕ್ಕೆ ವಿನಾಯಿತಿ ಅವಧಿ ಮುಕ್ತಾಯಗೊಳ್ಳುತ್ತಿದೆ. ಹೀಗಾಗಿ, ಏಪ್ರಿಲ್‌ 1 ರಿಂದ ₹100ಕ್ಕೆ 100 ದಂಡ ವಿಧಿಸುವ ಹಾಗೂ ವಾರ್ಷಿಕ ಬಾಕಿ ಮೊತ್ತಕ್ಕೆ ಶೇ.9 ರಿಂದ 15 ರಷ್ಟು ದಂಡ ವಿಧಿಸುವ ನಿಯಮ ಜಾರಿಗೆ ಬರುತ್ತಿದೆ.

ಉದಾಹರಣೆಗೆ:

2022-23ನೇ ಸಾಲಿನ ಹಾಗೂ ಅದಕ್ಕಿಂತ ಹಿಂದಿನ ವರ್ಷದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಮಾಲೀಕರು ₹1 ಸಾವಿರ ಆಸ್ತಿ ತೆರಿಗೆ ಬಾಕಿ ಇದ್ದರೆ, ₹1 ಸಾವಿರ ದಂಡದೊಂದಿಗೆ ಒಟ್ಟು ₹2 ಸಾವಿರ ಜತೆಗೆ ವಾರ್ಷಿಕ ಶೇ.9ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕಾಗಲಿದೆ. ಇನ್ನು 2023-24ನೇ ಸಾಲಿನ ಆಸ್ತಿ ತೆರಿಗೆ ದಂಡ ಇರುವುದಿಲ್ಲ. ಆದರೆ, ಶೇ.15ರಷ್ಟು ಬಡ್ಡಿ ಪಾವತಿ ಮಾಡಬೇಕಾಗಲಿದೆ. ಇನ್ನು 2024-25ನೇ ಸಾಲಿನ ಆಸ್ತಿ ತೆರಿಗೆಗೆ 2024ರ ಏಪ್ರಿಲ್‌ನಿಂದ ಈವರೆಗೆ ಶೇ.15ರಷ್ಟು ಬಡ್ಡಿ ಸಮೇತ ಪಾವತಿ ಮಾಡಬೇಕಾಗಲಿದೆ.

ಎಲ್ಲರಿಗೂ ಒಂದೇ ದಂಡ ಪದ್ಧತಿ : ಬಿಬಿಎಂಪಿ ವ್ಯಾಪ್ತಿಯಲ್ಲಿ ತಪ್ಪು ಆಸ್ತಿ ಘೋಷಣೆ ಮಾಡಿಕೊಂಡವರಿಗೆ, ಆಸ್ತಿ ತೆರಿಗೆ ವ್ಯಾಪ್ತಿಗೆ ಬಾರದೇ ಇರುವ ಆಸ್ತಿಗಳಿಗೆ ಹಾಗೂ ಅನಿವಾರ್ಯ ಕಾರಣದಿಂದ ತಡವಾಗಿ ಆಸ್ತಿ ತೆರಿಗೆ ಪಾವತಿ ಮಾಡುವ ಆಸ್ತಿ ಮಾಲೀಕರಿಗೆ ಸೇರಿದಂತೆ ಎಲ್ಲರಿಗೂ ಒಂದೇ ಮಾದರಿಯಲ್ಲಿ ದಂಡ ವಿಧಿಸುವ ಪದ್ಧತಿ ಜಾರಿಯಾಗಲಿದೆ.

ಕಾಯ್ದೆ ತಿದ್ದುಪಡಿಗೂ ಮುನ್ನಾ, ತಡವಾಗಿ ಆಸ್ತಿ ತೆರಿಗೆ ಪಾವತಿದಾರರಿಗೆ ಆಸ್ತಿ ತೆರಿಗೆ ಮೊತ್ತದೊಂದಿಗೆ ₹100 ದಂಡ ಮಾತ್ರ ವಿಧಿಸಲಾಗುತ್ತಿತ್ತು. ತಪ್ಪು ಆಸ್ತಿ ಘೋಷಣೆ ಮಾಡಿಕೊಂಡು ತೆರಿಗೆ ವಂಚನೆ ಪ್ರಕರಣದಲ್ಲಿ ಮಾತ್ರ ಆಸ್ತಿ ತೆರಿಗೆ ಮೊತ್ತದ ಎರಡು ಪಟ್ಟು ದಂಡ ವಿಧಿಸಲಾಗುತ್ತಿತ್ತು. ಇದೀಗ ಎಲ್ಲರಿಗೂ ಒಂದು ಮಾದರಿ ದಂಡ ವಿಧಿಸಲಾಗುತ್ತಿದೆ.

₹390 ಕೋಟಿ ಬಾಕಿ:

ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 1,82,467 ಆಸ್ತಿ ಮಾಲೀಕರು ಸುಮಾರು ₹390 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಮಹದೇವಪುರ, ಪೂರ್ವ ಹಾಗೂ ದಕ್ಷಿಣ ವಲಯದಲ್ಲಿ ಅತಿ ಹೆಚ್ಚಿನ ಪ್ರಮಾಣ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿದ್ದಾರೆ.

ತೆರಿಗೆ ಸುಸ್ಥಿದಾರರಿಗೆ ಇದೇ ಕೊನೆ ಅವಕಾಶ:

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಂದ ವಸೂಲಿಗೆ ಕಟ್ಟಡ ಸೀಜ್‌ ಮಾಡುವುದು ಹಾಗೂ ಆಸ್ತಿ ಹರಾಜು ಹಾಕುವ ಕೆಲಸ ಮಾಡಲಾಗುತ್ತಿದೆ. ಮಾ.31ಕ್ಕೆ ಸುಸ್ಥಿದಾರರಿಗೆ ನೀಡಲಾಗಿದ್ದ ದಂಡ ವಿನಾಯಿತಿ ಸಹ ಮುಕ್ತಾಯಗೊಳ್ಳುತ್ತಿದೆ. ಇದರಿಂದ ಏಪ್ರಿಲ್‌ ನಿಂದ ಸುಸ್ತಿದಾರರು ಆಸ್ತಿ ತೆರಿಗೆ ಪಾವತಿಗೆ 100ಕ್ಕೆ 100 ರಷ್ಟು ದಂಡ ವಿಧಿಸುವ ಕಾರ್ಯ ಪ್ರಾರಂಭಗೊಳ್ಳಲಿದೆ. ಹೀಗಾಗಿ, ಬಾಕಿ ಉಳಿಸಿಕೊಂಡವರು, ಮಾ.31ರ ಒಳಗೆ ಬಾಕಿ ಉಳಿಸಿಕೊಂಡ ಮೊತ್ತ ಪಾವತಿ ಮಾಡಿ ಲಾಭ ಪಡೆದುಕೊಳ್ಳುವುದು ಉತ್ತಮ. ಈ ಕುರಿತು ಜಾಗೃತಿ ಸಹ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

Share this article