ಪುರುಷಾರ್ಥ- ಶಂಕರನಾರಾಯಣರ ಸಾಮಾಜಿಕ ಕಾದಂಬರಿ

KannadaprabhaNewsNetwork |  
Published : May 09, 2026, 01:15 AM IST
30 | Kannada Prabha

ಸಾರಾಂಶ

ಮೈಸೂರು ತಾಲೂಕು ದೊಡ್ಡಮಾರಗೌಡನಹಳ್ಳಿಯ ಶಂಕರನಾರಾಯಣ ಅವರು ‘ಪುರುಷಾರ್ಥ’ ಸಾಮಾಜಿಕ ಕಾದಂಬರಿ ಹೊರತಂದಿದ್ದಾರೆ. ಡಿಎಂಜಿ ಹಳ್ಳಿ ಮೈಸೂರಿಗೆ ಸಮೀಪದಲ್ಲಿದೆ ಹಾಗೂ ಶಂಕರನಾರಾಯಣ ಅವರು ಮಹಾರಾಜ ಕಾಲೇಜಿನ ಹಿರಿಯ ವಿದ್ಯಾರ್ಥಿ. ಹೀಗಾಗಿ ಈ ಕಾದಂಬರಿಯ ವಸ್ತು ಮೈಸೂರು ನಗರ ಪರಿಸರಕ್ಕೆ ಹೊಂದಿಕೊಂಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ತಾಲೂಕು ದೊಡ್ಡಮಾರಗೌಡನಹಳ್ಳಿಯ ಶಂಕರನಾರಾಯಣ ಅವರು ‘ಪುರುಷಾರ್ಥ’ ಸಾಮಾಜಿಕ ಕಾದಂಬರಿ ಹೊರತಂದಿದ್ದಾರೆ.

ಡಿಎಂಜಿ ಹಳ್ಳಿ ಮೈಸೂರಿಗೆ ಸಮೀಪದಲ್ಲಿದೆ ಹಾಗೂ ಶಂಕರನಾರಾಯಣ ಅವರು ಮಹಾರಾಜ ಕಾಲೇಜಿನ ಹಿರಿಯ ವಿದ್ಯಾರ್ಥಿ. ಹೀಗಾಗಿ ಈ ಕಾದಂಬರಿಯ ವಸ್ತು ಮೈಸೂರು ನಗರ ಪರಿಸರಕ್ಕೆ ಹೊಂದಿಕೊಂಡಿದೆ. ಜೊತೆಗೆ ಮಹಾರಾಜ ಕಾಲೇಜು ಅಂಗಳದಿಂದಲೇ ಆರಂಭವಾಗುತ್ತದೆ. ಮಹಾರಾಜ ಕಾಲೇಜಿನ ಶಂಕರ ಮಹಾರಾಣಿ ಕಾಲೇಜಿನ ಸುಪ್ರಭಾ ಎಂಬವರನ್ನು ಪ್ರೀತಿಸಿ, ಪೋಷಕರು ಒಪ್ಪಿಗೆ ಪಡೆದು ಮದುವೆಯಾಗುವುದೇ ಈ ಕಾದಂಬರಿಯ ಕೇಂದ್ರ ವಸ್ತು.

ಶಂಕರನ ಚಿಕ್ಕಪ್ಪ ಶ್ಯಾಮರಾಯರ ಕರುಣಾಜನಕ ಕಥೆಯೂ ನಡುವೆ ಬರುತ್ತದೆ. ಅವರಿಗೆ ಜನ್ಮನೀಡಿದ ತಾಯಿ ಭಾಗ್ಯಮ್ಮ, ಅಣ್ಣ ಸುಬ್ಬರಾಯಪ್ಪ ಅವರ ಸಂಬಂಧ ಕಾಲಗರ್ಭದಲ್ಲಿ ಮರೆಯಾಗಿತ್ತು. ಕೆಂಪಾಚಾರಿ ಎಂಬವನ ಮೂಲಕ ಅದು ಬಹಿರಂಗವಾಗುತ್ತದೆ. ಶಾಮರಾಯರು ತಮ್ಮ ಅಣ್ಣನ ಮಗ ಶಂಕರನಿಗೆ ಸುಪ್ರಭಾಳ ಜೊತೆ ವಿವಾಹ ನೆರವೇರಿಸಿ, ಸಮಸ್ತ ಆಸ್ತಿಯನ್ನು ಧಾರೆ ಎರೆದು ಅವರ ಅಭ್ಯುದಯಕ್ಕೆ ಕಾರಣಕರ್ತರಾಗುತ್ತಾರೆ.

ಸುಪ್ರಭಾಳ ತಂದೆ ರಾಮನಾಥಯ್ಯ, ತಾಯಿ ಸುಶೀಲಮ್ಮ, ಅಣ್ಣ ಶ್ರೀಕಾಂತ, ಅತ್ತಿಗೆ ಶಾಂತಾ, ಈ ದಂಪತಿಯ ಪುತ್ರ ರಘು ಸೇರಿದಂತೆ ಹತ್ತು ಹಲವು ಪಾತ್ರಗಳ ಮೂಲಕ ಕಾದಂಬರಿ ಬೆಳೆಯುತ್ತಾ ಹೋಗುತ್ತದೆ. ಶಂಕರ ಮುಂದೆ ಎಂಎ, ಪಿಎಚ್‌ಡಿ ಮಾಡಿ ಉಪನ್ಯಾಸಕನಾಗುತ್ತಾನೆ .ಜೊತೆಗೆ ಕೃಷಿಯಲ್ಲಿಯೂ ತೊಡಗಿಸಿಕೊಳ್ಳುತ್ತಾನೆ. ಸುಪ್ರಭಾ ಎಂಬಿಬಿಎಸ್‌, ಎಂಡಿ ವೈದ್ಯೆಯಾಗುತ್ತಾಳೆ. ಶ್ಯಾಮಸುಂದರ್‌ ಎಂಬ ಆಸ್ಪತ್ರೆಯನ್ನು ತೆರೆದು, ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಡೀ ಕಾದಂಬರಿಯನ್ನು ಶಂಕರನಾರಾಯಣ ಅವರು ಚಿತ್ರಿಸಿರುವ ರೀತಿಯ ಅನನ್ಯವಾಗಿದೆ. ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಎಪ್ಪತ್ತರ ದಶಕದ ಮೈಸೂರು ಹೇಗಿತ್ತು? ಎಂಬುದರ ನೋಟ ಕೂಡ ಸಿಗುತ್ತದೆ. ಇದೊಂದು ರೀತಿಯಲ್ಲಿ ಆತ್ಮಕಥೆಯ ರೂಪದಲ್ಲಿ ಸಾಗುತ್ತದೆ.

ಶಂಕರನಾರಾಯಣರು ವಿದ್ಯಾರ್ಥಿಯಾಗಿದ್ದಾಗ ಅಂದರೆ 1974-75 ರಲ್ಲಿ ಬರೆಯಲು ಆರಂಭಿಸಿದ ಈ ಕಾದಂಬರಿ, ಕೋವಿಡ್‌ ಸಂದರ್ಭದಲ್ಲಿ ಪೂರ್ಣಗೊಂಡು, ಸರಿಸುಮಾರು ನಾಲ್ಕು ದಶಕಗಳ ನಂತರ ಪ್ರಕಟವಾಗಿರುವುದು ವಿಶೇಷ.

ಶ್ರೀಶಾರದಾ ಪ್ರಕಾಶನ ಈ ಕಾದಂಬರಿಯನ್ನು ಪ್ರಕಟಿಸಿದ್ದು, ಡಾ.ಕೆ.ಅನಂತರಾಮು ಮುನ್ನುಡಿ, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಬೆನ್ನುಡಿ ಬರೆದಿದ್ದಾರೆ. ಆಸಕ್ತರು ಮೊ. 96329 63175 ಸಂಪರ್ಕಿಸಬಹುದು.

PREV

Recommended Stories

ಸಲ್ಫರಿನೋ ಯುದ್ಧದಿಂದಾಗಿ ಹುಟ್ಟಿದ ರೆಡ್‌ಕ್ರಾಸ್‌!
ದಣಿವರಿಯದ ಅವಿಶ್ರಾಂತ ಚೇತನ ಯಡಿಯೂರಪ್ಪ