ಮೈಸೂರಿನ ಆರು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

KannadaprabhaNewsNetwork | Published : Nov 1, 2023 1:01 AM

ಸಾರಾಂಶ

ಮೈಸೂರಿನ ಆರು ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ
ಕನ್ನಡಪ್ರಭ ವಾರ್ತೆ ಮೈಸೂರು ಮೈಸೂರಿನ ಆರು ಮಂದಿ ಈ ಬಾರಿ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗಂಗಾಧರಸ್ವಾಮಿ- ರಂಗಭೂಮಿ, ಪಿ. ಗೌರಯ್ಯ- ಕರಕುಶಲ, ಮಹದೇವು- ಜಾನಪದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ- ಸಂಕೀರ್ಣ, ಜವರಪ್ಪ- ಪತ್ರಿಕಾ ವಿತರಕ ಬಿ.ಎನ್‌. ಶ್ರೀರಾಂ- ಪುಸ್ತಕ ಪ್ರಕಾಶನ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಸಿ. ನಾಗಣ್ಣ ಅವರಿಗೆ ಸಾಹಿತ್ಯಕ್ಷೇತ್ರದಿಂದ ಚಾಮರಾಜನಗರ ಕೋಟಾದಲ್ಲಿ ಪ್ರಶಸ್ತಿ ನೀಡಲಾಗಿದೆ. ಇದಲ್ಲದೇ ಮೈಸೂರು ಕೋಟಾದಲ್ಲಿ ಮಿಮಿಕ್ರಿ ದಯಾನಂದ- ಸಂಕೀರ್ಣ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಇದಲ್ಲದೇ ಈ ಹಿಂದೆ ರಂಗಾಯಣ ನಿರ್ದೇಶಕರಾಗಿದ್ದ ಎ.ಜಿ. ಚಿದಂಬರರಾವ್‌ ಜಂಬೆ- ರಂಗಭೂಮಿ ಅವರಿಗೆ ಶಿವಮೊಗ್ಗ ಜಿಲ್ಲೆಯ ಕೋಟಾದಲ್ಲಿ ಪ್ರಶಸ್ತಿ ನೀಡಲಾಗಿದೆ. ---------- ಪುರಸ್ಕೃತರ ಪರಿಚಯ -- ಮೊದಲ ಬಾರಿಗೆ ಪತ್ರಿಕಾ ವಿತರಕನಿಗೆ ಪ್ರಶಸ್ತಿ ಫೋಟೋ 31 ಎಂವೈಎಸ್‌ 38 ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರೊಬ್ಬರಿಗೆ ಪ್ರಶಸ್ತಿ ನೀಡಲಾಗಿದೆ. ಕಳೆದ 56 ವರ್ಷಗಳಿಂದ ವಿತರಕರಾಗಿರುವ ಮೈಸೂರಿನ ಮೇದರಕೇರಿ ಮೂರನೇ ಕ್ರಾಸ್‌ ನಿವಾಸಿಯಾದ ವಿತರಕ ಜವರಪ್ಪ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. 1952 ರಲ್ಲಿ ಜನಿಸಿದ ಅವರು ಎಸ್‌ಎಸ್‌ಎಲ್‌ಸಿವರೆಗೆ ಓದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆ ಗೊತ್ತು. ಪುಸ್ತಕ ಓದುವ ಹವ್ಯಾಸ ಇದೆ. ಪತ್ನಿ, ಮೂವರು ಮಕ್ಕಳಿದ್ದಾರೆ. ಅವರು 15 ವರ್ಷದವನಿರುವಾಗ ಪತ್ರಿಕಾ ವಿತರಣೆ ಆರಂಭಿಸಿದರು. ಇದರಿಂದಲೇ ಅವರು ಬದುಕು ಕಟ್ಟಿಕೊಂಡಿದ್ದಾರೆ. ಇವತ್ತಿಗೂ ಕೂಡ ಸೈಕಲ್‌ನಲ್ಲಿಯೇ ತೆರಳಿ ಮನೆ ಮನೆಗೆ ಪತ್ರಿಕೆಗಳನ್ನು ವಿತರಿಸುವ ಕಾಯಕ ಮಾಡುತ್ತಾರೆ. ನನಗಂತೂ ತುಂಬಾ ಖುಷಿಯಾಗಿದೆ. ಈಗ 70 ವರ್ಷ ದಾಟಿದ್ದೇನೆ. ಇನ್ನೂ ಕೆಲಸ ಮಾಡುವ ಉತ್ಸಾಹ ಬಂದಿದೆ. ಬಹಳಷ್ಟು ಜನ ಅಭಿನಂದಿಸಿದ್ದು ಕಂಡು ಸಂತೋಷವಾಗಿದೆ ಎಂದು ಜವರಪ್ಪ ಹೇಳಿದರು. --- ಕರಕುಶಲ ಕಲೆಯ ಪಿ. ಗೌರಯ್ಯ ಫೋಟೋ 31 ಎಂವೈಎಸ್‌ 41 -- ಕರಕುಶಲ ಕಲೆಯಲ್ಲಿ ಈ ಬಾರಿ ಪಿ. ಗೌರಯ್ಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. 1950 ರಲ್ಲಿ ಜನಿಸಿದ ಇವರು ಮೈಸೂರಿನ ಶ್ರೀ ಚಾಮರಾಜೇಂದ್ರ ತಾಂತ್ರಿಕ ಶಾಲೆಯಲ್ಲಿ ರೋಸ್‌ವುಡ್‌ ಇನ್‌ಲೇನಲ್ಲಿ ಡಿಪ್ಲೋಮಾ ಮಾಡಿದ್ದಾರೆ. ಮೀರ್‌ ಶೌಕತ್‌ ಅಲಿ ಅವರ ಬಳಿ ಶಿಷ್ಯ ವೃತ್ತಿ. ನಂತರ ಇನ್ಲೆಗೆ ಆಧುನಿಕ ಸ್ವರ್ಶ ನೀಡುವ ಘಟಕ ಆರಂಭಿಸಿದರು. ನೂರಾರು ಕಲಾಕಾರರಿಗೆ ತರಬೇತಿ ನೀಡಿದರು. 1972 ರಲ್ಲಿ ಇನ್ಲೆಯಲ್ಲಿ ಟೆಕ್ನಿಕಲ್‌, ಡಿಸೈನ್‌ ಮತ್ತು ಕಮರ್ಷಿಯಲ್‌ ವಿಧಾನದಿಂದ ಕಲಾಕೃತಿಗಳನ್ನು ತಯಾರಿಸಿದರು. ಬಣ್ಣಬಣ್ಣದ ಮರದ ಶೋಧನೆ, ಬಣ್ಣದ ಮರದ ಹಾಳೆಗಳಿಂದ ಕಲೆ, ಕಲಾಕೃತಿ ನಿರ್ಮಿಸಿದರು. ಇವರಿಗೆ ಕೆಎಸ್‌ಎಚ್‌ಡಿಸಿ ಉತ್ತೇಜನ ನೀಡಿತು. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಆಡಳಿತ ಮಂಡಳಿ ನಿರ್ದೇಶಕ, ರಾಜ್ಯ ಹ್ಯಾಂಡಿಕ್ರಾಫ್ಟ್‌ ಉತ್ಪಾದಕರ ಸಂಘದ ಸಂಸ್ಥಾಪಕ ಅಧ್ಯಕ್ಷ, ಪ್ರಸ್ತುತ ಗೌರವಾಧ್ಯಕ್ಷರಾಗಿ ಇನ್ಲೆ ಕಲೆ ಉಳಿಸಲು ಸತತ ಯತ್ನ ನಡೆಸುತ್ತಿದ್ದಾರೆ. --- ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಫೋಟೋ 31 ಎಂವೈಎಸ್‌ 42 --- ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಕಬ್ಬಿನಾಲೆಯವರು. ನಿವೃತ್ತ ಬ್ಯಾಂಕ್‌ ಅಧಿಕಾರಿ. ಸಾಹಿತ್ಯ ರಚನೆ ಹಾಗೂ ಅಷ್ಟಾವಧಾನ ಕಾರ್ಯಕ್ರಮ ನಿರತರು. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರು --- ಪಿ. ಗಂಗಾಧರಸ್ವಾಮಿ 31 ಎಂವೈಎಸ್‌ 40 ಪಿ. ಗಂಗಾಧರಸ್ವಾಮಿ ಅವರು ಮೈಸೂರು ರಂಗಾಯಣದಲ್ಲಿ ಕರ್ತವ್ಯ ನಿರ್ವಹಿಸಿದವರು. ಪುಸ್ತಕ ಪ್ರಕಾಶನದ ಬಿ.ಎನ್‌. ಶ್ರೀರಾಮ 31 ಎಂವೈಎಸ್‌ 37 ಫೋಟೋ -- ಬಿ.ಎನ್‌. ಶ್ರೀರಾಮ ಅವರು ಪುಸ್ತಕ ಪ್ರಕಾಶನವನ್ನು ಮುನ್ನಡೆಸಿದವರು. ಸಮಾಜವಾದಿ ಹಿನ್ನಲೆಯಿಂದ ಬಂದ ಲಂಕೇಶ್‌, ದೇವನೂರ ಮಹಾದೇವ, ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಪ್ರೊ.ಕೆ. ರಾಮದಾಸ್‌ ಅವರ ಸಮಕಾಲೀನರು. ಕುವೆಂಪು ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಹಲವಾರು ಕೃತಿಗಳನ್ನು ಪ್ರಕಟಿಸಿದವರು. ---- ಕನ್ನಡ, ಇಂಗ್ಲಿಷ್‌ ಎರಡರಲ್ಲೂ ಪ್ರಬುದ್ಧ ಲೇಖಕ ಪ್ರೊ.ಸಿ. ನಾಗಣ್ಣ ಫೋಟೋ 31 ಎಂವೈಎಸ್‌ 39 --- ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ನಿರ್ದೇಶಕ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದ ಪ್ರೊ.ನಾಗಣ್ಣ ಅವರು ಕನ್ನಡ ಹಾಗೂ ಇಂಗ್ಲಿಷ್ ಎರಡಲ್ಲೂ ಸಮರ್ಥವಾಗಿ ಬರೆಯಬಲ್ಲ ಪ್ರಬುದ್ಧ ಲೇಖಕ. ಕಾದಂಬರಿ, ಕವಿತೆ, ವಿಮರ್ಶೆ, ತೌಲನಿಕ ಅಧ್ಯಯನ, ಇತಿಹಾಸ ಕ್ಷೇತ್ರದಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಮೂವತ್ತೈದು ವರ್ಷಗಳ ಬೋಧನಾನುಭವ ಇದೆ. ಮೈಸೂರು ವಿಶ್ವವಿದ್ಯಾನಿಲಯ ಘಟಿಕೋತ್ಸವದಲ್ಲಿ ಕಾರ್ಯಕ್ರಮಗಳ ನಿರೂಪಣೆಗೆ ನಾಗಣ್ಣ ಅವರು ಇರಲೇ ಬೇಕು. ಘಟಿಕೋತ್ಸವ ಭಾಷಣಗಳು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಆಗಬೇಕಾದರೂ ನಾಗಣ್ಣ ಅವರು ಇರಲೇಬೇಕು. ಪ್ರೊ.ಕೆ.ಎಸ್. ರಂಗಪ್ಪ ಅವರು ಕುಲಪತಿಯಾಗಿದ್ದಾಗ ನಡೆದ ಮೈಸೂರು ವಿವಿಯ ಶತಮಾನೋತ್ಸವ ಸಮಾರಂಭದಲ್ಲಿ ಅಂದಿನ ರಾಷ್ಟ್ಪಪತಿ ಪ್ರಣವ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ ಮೊದಲಾದ ಗಣ್ಯಮಾನ್ಯರು, ಹಲವು ನೊಬೆಲ್ ಪ್ರಶಸ್ತಿ ಪುರಸ್ಕೃತರು ಪಾಲ್ಗೊಂಡಿದ್ದರು. ಆ ಎಲ್ಲಾ ಕಾರ್ಯಕ್ರಮಗಳನ್ನು ಸಮರ್ಥವಾಗಿ ನಿರೂಪಿಸಿದ್ದು ನಾಗಣ್ಣವರು. ಇದಲ್ಲದೇ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಆಕಾಶವಾಣಿ ಮತ್ತು ದೂರದರ್ಶನಕ್ಕೆ ವೀಕ್ಷಕ ವಿವರಣಕಾರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಮೆರಿಕಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲೂ ಕೂಡ ಪಾಲ್ಗೊಂಡಿದ್ದಾರೆ. ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತಿತರ ಪ್ರಶಸ್ತಿಗಳಿಗೆ ಭಾಜನರು. ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿಯವರು.

Share this article