;Resize=(412,232))
ಚೆನ್ನೈ/ತಿರುವನಂತಪುರಂ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಪ್ರಭಾವದಿಂದ ದಕ್ಷಿಣ ಭಾರತದ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ಸರ್ಕಾರಿ ಬಸ್ ಚಾಲಕರೊಬ್ಬರು ಬಲಿಯಾಗಿದ್ದಾರೆ.
ಇನ್ನೊಂದೆಡೆ, ಕೇರಳದಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.
ನೀಲಗಿರಿ ಜಿಲ್ಲೆಯ ಬರ್ಲಿಯಾರ್ ಸಮೀಪ ಶನಿವಾರ ಮುಂಜಾನೆ ಭಾರಿ ಮಳೆಯಿಂದಾಗಿ ಮಣ್ಣಿನ ಕುಸಿತ ಸಂಭವಿಸಿದ್ದು, ಮರಗಳು ಉರುಳಿಬಿದ್ದು ಸರ್ಕಾರಿ ಬಸ್‌ಗೆ ಅಪ್ಪಳಿಸಿವೆ. ಈ ದುರಂತದಲ್ಲಿ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಕಂಡಕ್ಟರ್ ತೀವ್ರವಾಗಿ ಗಾಯಗೊಂಡಿದ್ದಾರೆ. ದುರಂತಕ್ಕೂ ಮುನ್ನವೇ ಬಸ್‌ನಲ್ಲಿದ್ದ ಮೂವರು ಪ್ರಯಾಣಿಕರು ಕುರುಂಪಾಡಿಯಲ್ಲೇ ಇಳಿದಿದ್ದರಿಂದ ದೊಡ್ಡ ಪ್ರಮಾಣದ ಜೀವಹಾನಿ ತಪ್ಪಿದೆ.
ಸಾಲು ಸಾಲು ಭೂಕುಸಿತಗಳಿಂದಾಗಿ ಊಟಿ-ಮೆಟ್ಟುಪಾಳ್ಯಂ ಮತ್ತು ಊಟಿ-ಕೂನೂರು ಹೆದ್ದಾರಿಗಳಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಬರ್ಲಿಯಾರ್‌ನಲ್ಲಿ 25 ಸೆಂ.ಮೀ. ಹಾಗೂ ಎಡಪಲ್ಲಿಯಲ್ಲಿ 20 ಸೆಂ.ಮೀ. ಭಾರಿ ಮಳೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಊಟಿ, ಕೂನೂರು, ಕೊತಗಿರಿ ಸೇರಿದಂತೆ 6 ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ದಿಂಡಿಗಲ್ ಜಿಲ್ಲೆಯ ಪುಲಿಯಂಪಟ್ಟಿಯಲ್ಲಿರುವ ಶ್ರೀಲಂಕಾ ತಮಿಳು ನಿರಾಶ್ರಿತರ ಶಿಬಿರದ 100ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ.
ಕೇರಳದ 5 ಜಿಲ್ಲೆಗಳಿಗೆ ರೆಡ್ ಅಲರ್ಟ್:
ಕೇರಳದಲ್ಲೂ ಮಳೆಯ ಆರ್ಭಟ ಮುಂದುವರಿದಿದ್ದು, ವಯನಾಡ್ ಸೇರಿ 5 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ವಯನಾಡಲ್ಲಿ ಮಳೆ ಆದರೆ ಕರ್ನಾಟಕದ ಕಬಿನಿಗೆ ನೀರು ಹರಿದುಬರುವ ನಿರೀಕ್ಷೆ ಇದೆ.
ಹಠಾತ್ ಪ್ರವಾಹದ ಸಾಧ್ಯತೆಯಿರುವುದರಿಂದ ಗುಡ್ಡಗಾಡು ಪ್ರದೇಶಗಳಲ್ಲಿ ರಾತ್ರಿ ಪ್ರಯಾಣವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಹಾಗೂ ನದಿ, ಜಲಪಾತಗಳ ಬಳಿ ತೆರಳದಂತೆ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.