ಹೃದಯದ ಆರೋಗ್ಯ ಕಾಪಾಡಲು ಕೆಲವು ಸಲಹೆಗಳು

KannadaprabhaNewsNetwork |  
Published : Oct 01, 2025, 01:00 AM IST
ಹಾರ್ಟ್ | Kannada Prabha

ಸಾರಾಂಶ

ಹೃದಯದ ಆರೋಗ್ಯ ಕಾಪಾಡುವ ಕುರಿತು ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ನ ಸ್ಥಾಪಕರು ಮತ್ತು ಅಧ್ಯಕ್ಷರಾದ ಡಾ. ಪ್ರತಾಪ್ ಸಿ. ರೆಡ್ಡಿ ಅವರು ಬರೆದಿರುವ ವಿಶೇಷ ಲೇಖನ ಇಲ್ಲಿದೆ.

- ಡಾ. ಪ್ರತಾಪ್ ಸಿ. ರೆಡ್ಡಿ, ಸ್ಥಾಪಕರು ಮತ್ತು ಅಧ್ಯಕ್ಷರು, ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ಹೃದಯ ಸಂಬಂಧಿ ಆರೋಗ್ಯವನ್ನು ವೈಯಕ್ತಿಕ ಆರೋಗ್ಯ ಸಮಸ್ಯೆಯಾಗಿ ಪರಿಗಣಿಸಬೇಕೆ ಅಥವಾ ರಾಷ್ಟ್ರೀಯ ಆರ್ಥಿಕ ಆದ್ಯತೆಯಾಗಿ ಪರಿಗಣಿಸಬೇಕೆ ಎಂಬುದು ಈಗ ಮಹತ್ವದ ಪ್ರಶ್ನೆಯಾಗಿದೆ. ಯಾಕೆಂದರೆ ಪ್ರಸ್ತುತ ಹೃದಯದ ಕಾಯಿಲೆಯು ಬಹಳಷ್ಟು ಯುವಜನರನ್ನು ಸಾವಿನ ಅಂಚಿಗೆ ದೂಡುತ್ತಿರುವುದರಿಂದ ಈ ಕುರಿತು ಹೆಚ್ಚಿನ ಗಮನ ಹರಿಸಬೇಕಾಗಿದೆ.ಹೃದಯರಕ್ತನಾಳದ ಕಾಯಿಲೆಯು ದೇಶದಲ್ಲಿ ಸಂಭವಿಸುವ ಹೃದಯ ಸಂಬಂಧಿ ಸಾವುಗಳಿಗೆ ಪ್ರಮುಖ ಕಾರಣವಾಗಿದೆ. ರಾಷ್ಟ್ರೀಯವಾಗಿ ಎಲ್ಲಾ ರೀತಿಯ ಸಾವುಗಳನ್ನು ನೋಡುವುದಾದರೆ ಸರಿ-ಸುಮಾರು ಶೇಕಡ 28ರಷ್ಟು ಮರಣಗಳಿಗೆ ಹೃದಯರಕ್ತನಾಳದ ಸಮಸ್ಯೆ ಕಾರಣವಾಗಿದೆ.ನನ್ನ ಸಹೋದ್ಯೋಗಿ, ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅಪೋಲೋ ಹಾಸ್ಪಿಟಲ್ ನಲ್ಲಿ ಇಂಟರ್ವೆನ್ಶನಲ್ ಕಾರ್ಡಿಯಾಲಜಿಯ ಹಿರಿಯ ಸಲಹೆಗಾರರಾಗಿರುವ ಡಾ. ಬಿ.ಸಿ. ಶ್ರೀನಿವಾಸ್ ಅವರು ಇದನ್ನು ತುಂಬ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ. ಅವರ ಪ್ರಕಾರ, ಹೃದಯ ಕಾಯಿಲೆಯ ಸಮಸ್ಯೆ ಈಗ ಮಹತ್ವದ್ದಾಗಿ. 30 ರಿಂದ 69 ವಯಸ್ಸಿನ ಗುಂಪಿನಲ್ಲಿ ಸಂಭವಿಸುವ ಸಾವಿನ ಪ್ರಕರಣಗಳಲ್ಲಿ ಶೇಕಡ 38ರಷ್ಟು ಸಾವುಗಳಿಗೆ ಹೃದಯ ಕಾಯಿಲೆಯೇ ಪ್ರಮುಖ ಕಾರಣವಾಗಿದೆ. ಪಾಶ್ಚಿಮಾತ್ಯ ದೇಶಗಳಿಗಿಂತ ನಮ್ಮಲ್ಲೇ ಈ ರೀತಿಯ ಮರಣ ಪ್ರಮಾಣ ಹೆಚ್ಚಾಗಿದೆ. ಇದು ಕೇವಲ ಆರೋಗ್ಯದ ಅಂಕಿಅಂಶವಾಗಿರದೆ, ಅದೊಂದು ಆರ್ಥಿಕ ಎಚ್ಚರಿಕೆ ಗಂಟೆಯೂ ಆಗಿದೆ. ವ್ಯಕ್ತಿಯೊಬ್ಬನ 30 ರಿಂದ 50 ವರ್ಷಗಳ ನಡುವಣ ಅವಧಿಯು ಅತ್ಯುತ್ತಮ ಉತ್ಪಾದಕ ವರ್ಷಗಳಾಗಿವೆ. ಈ ಸಮಯದಲ್ಲಿ ಜನರು ಕುಟುಂಬಗಳನ್ನು ಬೆಳೆಸುತ್ತಾರೆ, ಕಂಪನಿಗಳನ್ನು ಕಟ್ಟಿ ಬೆಳೆಸುತ್ತಾರೆ ಮತ್ತು ಆರ್ಥಿಕತೆಯನ್ನು ಬಲಪಡಿಸುತ್ತಾರೆ. ಈ ವಯಸ್ಸಿನ ಗುಂಪಿಗೆ ಹೃದ್ರೋಗ ಬಂದಾಗ, ಅದು ವೈಯಕ್ತಿಕ ಬದುಕಿನ ಮೇಲಷ್ಟೇ ಪರಿಣಾಮ ಬೀರುವುದಿಲ್ಲ. ಜೊತೆಗೆ ಅದು ನಮ್ಮ ಆರ್ಥಿಕ ಬೆಳವಣಿಗೆಯನ್ನೇ ನಾಶಪಡಿಸುತ್ತದೆ.

ಬನ್ನೇರುಘಟ್ಟ ರಸ್ತೆಯ ಅಪೋಲೋ ಹಾಸ್ಪಿಟಲ್ ನ ಹೃದ್ರೋಗ ವಿಭಾಗದ ಹಿರಿಯ ಸಲಹೆಗಾರ ಮತ್ತು ಮುಖ್ಯಸ್ಥ ಡಾ. ಬಿ ರಮೇಶ್ ಅವರ ಅಭಿಪ್ರಾಯದಲ್ಲಿ, ಚಿಕಿತ್ಸೆ ನೀಡದ ಅಥವಾ ತಡವಾಗಿ ಪತ್ತೆಹಚ್ಚಿದ ಮತ್ತು ಚಿಕಿತ್ಸೆ ನೀಡಲಾದ ಹೃದ್ರೋಗವು ಕೆಲಸಕ್ಕೆ ಗೈರುಹಾಜರಿ ಮತ್ತು ವಿಮೆ ವೆಚ್ಚಗಳ ಮೂಲಕ ಆರ್ಥಿಕ ಪ್ರಗತಿಗೆ ಅಡಚಣೆ ಒಡ್ಡುತ್ತದೆ. ಅಂದಾಜುಗಳ ಪ್ರಕಾರ, 2012 ಮತ್ತು 2030ರ ನಡುವಣ ಅವಧಿಯಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಭಾರತದ ಆರ್ಥಿಕತೆಗೆ 4.58 ಲಕ್ಷ ಕೋಟಿ ಡಾಲರ್ ವೆಚ್ಚ ಹೊರಿಸಲಿವೆ. ಇದರಲ್ಲಿ ಹೃದಯರಕ್ತನಾಳದ ಕಾಯಿಲೆಯಿಂದ ಉಂಟಾಗುವ ನಷ್ಟದ ಹೊರೆಯು 2.17 ಲಕ್ಷ ಕೋಟಿ ಡಾಲರ್ ಗಳಷ್ಟು ಆಗಲಿದೆ. ಈ ಕಾರಣಕ್ಕೆ, ತಡೆಗಟ್ಟುವಿಕೆ ಮತ್ತು ಆರಂಭಿಕ ಹಂತದ ಆರೈಕೆಗೆ ಹೂಡಿಕೆ ಮಾಡುವುದು ಅಗತ್ಯವಾಗಿ ಅಳವಡಿಸಿಕೊಳ್ಳಬೇಕಾದ ವಿಷಯವಾಗಿದೆ.

ಈ ಕಾರಣಕ್ಕಾಗಿಯ ನಾನು ಹೃದಯದ ಆರೈಕೆಯನ್ನು ರಾಷ್ಟ್ರ ನಿರ್ಮಾಣದ ಕಾರ್ಯಸೂಚಿಯನ್ನಾಗಿ ಪಾಲಿಸಬೇಕು ಎಂದು ಬಲವಾಗಿ ಪ್ರತಿಪಾದಿಸುತ್ತೇನೆ. ಹೃದಯ ಸಂಬಂಧಿ ಕಾಯಿಲೆ ತಡೆಗಟ್ಟುವಿಕೆಯು ಹೇಳಿಕೆಗಳ ಬದಲಿಗೆ ಕಾರ್ಯರೂಪಕ್ಕೆ ಇಳಿಯಬೇಕಾಗಿದೆ. ಅಧಿಕ ರಕ್ತದೊತ್ತಡ ನಿಯಂತ್ರಣ, ಹೃದ್ರೋಗ ತಡೆಗಟ್ಟುವ ಸಮಗ್ರ ಸ್ವರೂಪದ ಕಾರ್ಯತಂತ್ರ ಅಳವಡಿಕೆ, ಮಧುಮೇಹ ಆರೈಕೆ, ತಂಬಾಕು ಬಳಕೆಗೆ ನಿರ್ಬಂಧ ಮತ್ತು ದೈಹಿಕ ಚಟುವಟಿಕೆಯು ಕಡ್ಡಾಯವಾಗಿ ಪಾಲಿಸಬೇಕಾದ ಸಂಗತಿಗಳಾಗಿವೆ.

ದೇಶದಲ್ಲಿ ಸರ್ಕಾರದ ಯೋಜನೆ ಅಥವಾ ವಿಮೆಯ ನೆರವಿನ ಬದಲು ಕುಟುಂಬಗಳೇ ವೈದ್ಯಕೀಯ ವೆಚ್ಚ ಭರಿಸುವುದು ಹೆಚ್ಚುತ್ತಿದೆ. ಹಾಗಾಗಿ ನಾವು ಸಕಾಲದಲ್ಲಿ ಕ್ರಮ ಕೈಗೊಳ್ಳದಿದ್ದರೆ, ಕುಟುಂಬಗಳನ್ನು ಸಾಲಕ್ಕೆ ತಳ್ಳುತ್ತಲೇ ಇರುತ್ತೇವೆ. ಹಲವು ವರ್ಷಗಳ ಮಹತ್ವದ ಬದುಕನ್ನು ಕಳೆದುಕೊಳ್ಳುತ್ತೇವೆ. ವೈಯಕ್ತಿಕ ಆರೋಗ್ಯ ವಿಮೆಯ ಮೇಲಿನ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ತೆಗೆದುಹಾಕುವ ಮೂಲಕ ಕೇಂದ್ರ ಸರ್ಕಾರವು ಈಗಾಗಲೇ ಈ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆ ಇರಿಸಿದೆ. ವಿಮೆ ಕಂಪನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಡಿಮೆ ವೆಚ್ಚದಲ್ಲಿ ಆರೋಗ್ಯ ವಿಮೆ ಪಡೆದುಕೊಳ್ಳಲು ಜನರನ್ನು ಪ್ರೋತ್ಸಾಹಿಸಬಹುದು.

ಉದ್ಯೋಗನಿರತ ವಯಸ್ಕರು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಪಡಬೇಕು. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ರಕ್ತದೊತ್ತಡ ಮತ್ತು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಪರೀಕ್ಷಿಸುವುದನ್ನು ಸಾಮಾನ್ಯಗೊಳಿಸಬೇಕು. ಅಪಾಯಕಾರಿ ಮಟ್ಟ ಹೊಂದಿರುವವರಿಗೆ ಎಚ್ಬಿಎ1ಸಿ ಪರೀಕ್ಷೆ ಮಾಡಬೇಕು.

ನಾವು ಚಿಕಿತ್ಸೆ-ವಿಳಂಬಕ್ಕೆ ಸಂಬಂಧಿಸಿದ ಸಮಯದ ಅಂತರವನ್ನು ಸಹ ನಿವಾರಿಸಬೇಕು. ಅನೇಕರು ಹೃದಯಾಘಾತದ ಗೋಲ್ಡನ್ ಹವರ್ ನಂತರ ಅಥವಾ ಅನಿಯಂತ್ರಿತ ಅಧಿಕ ರಕ್ತದೊತ್ತಡದಿಂದ ಹಲವು ವರ್ಷ ಬದುಕಿದ ನಂತರ ತುಂಬಾ ತಡವಾಗಿ ಹೃದಯದ ಆರೈಕೆಗೆ ಗಮನ ನೀಡುತ್ತಾರೆ.

ಅಂತಿಮವಾಗಿ, ನಮಗೆ ಜೀವನಶೈಲಿ ಬದಲಾವಣೆಯ ಅಗತ್ಯವಿದೆ. ಹೃದಯ ಸಂಬಂಧಿ ಆರೋಗ್ಯವು ರೋಗಲಕ್ಷಣಗಳನ್ನು ಹೊಂದಿರುವ ಜನರಿಗೆ ಮಾತ್ರವಲ್ಲ, ಜಡ ಜೀವನಶೈಲಿ, ಒತ್ತಡದ ಕೆಲಸ ಅಥವಾ ಹೃದಯ ಕಾಯಿಲೆಯ ಕೌಟುಂಬಿಕ ಇತಿಹಾಸ ಹೊಂದಿರುವ ಪ್ರತಿಯೊಬ್ಬರಿಗೂ ಸಂಬಂಧಿಸಿದೆ. ಮಹಿಳೆಯರಲ್ಲಿ ಋತುಬಂಧದ ನಂತರ ಇದರ ಅಪಾಯ ಹೆಚ್ಚಾಗುತ್ತದೆ.

ನಾವು ಹೃದಯಾಘಾತ ತಡೆಗಟ್ಟುವಿಕೆಗೆ ಆದ್ಯತೆ ನೀಡಿದರೆ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣವನ್ನು ಬಿಗಿಗೊಳಿಸಬೇಕು. ತುರ್ತಾಗಿ ವೈದ್ಯಕೀಯ ನೆರವು ದೊರೆಯುವ ಸಮಯವನ್ನು ಸುಧಾರಿಸಿದರೆ, ಅಕಾಲಿಕ ಹೃದಯ ಸಂಬಂಧಿ ಸಾವುಗಳನ್ನು ನಾವು ಗಮನಾರ್ಹವಾಗಿ ಕಡಿತಗೊಳಿಸಬಹುದು.

PREV

Recommended Stories

ಬ್ಯಾಂಕ್‌ ಎಫ್‌ಡಿಯಲ್ಲಿ ಗರಿಷ್ಠ ಎಷ್ಟು ಹಣ ಇಡಬಹುದು ! ಸಂಪೂರ್ಣ ವಿವರ
ಪಾಕನ್ನು ನಾವು ಬಗ್ಗು ಬಡಿಯಬೇಕೆನ್ನೋದು ವಿಧಿ ಲಿಖಿತ!