ಕನ್ನಡಪ್ರಭ ವಾರ್ತೆ ಬೆಂಗಳೂರು
ಮಂಗಳವಾರ ನಗರದ ಬಿಜೆಪಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರ ಸಭೆ ನಡೆಸಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮಹಾನಗರದ ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಬಜೆಟ್‍ನಲ್ಲಿ ಹೆಚ್ಚು ಅನುದಾನ ನೀಡುವಂತೆ ಒತ್ತಾಯಿಸಿ ಮನವಿ ನೀಡುತ್ತೇವೆ ಎಂದು ಹೇಳಿದರು.ಬೆಂಗಳೂರಿನ ಜ್ವಲಂತ ಸಮಸ್ಯೆಗಳ ಕುರಿತು ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲಿದ್ದು, ಅದರ ಬಗ್ಗೆಯೂ ಚರ್ಚೆ ಆಗಿದೆ. ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆ ಆಗಬೇಕು. ಗ್ರೇಟರ್ ಬೆಂಗಳೂರು ಪ್ರಸ್ತಾಪ ಕೈಬಿಡಬೇಕು. ಟನೆಲ್ ರಸ್ತೆ ಯೋಜನೆ ಕೈಬಿಟ್ಟು ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಸರ್ಕಾರ ಚಿಂತಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು ನಗರದ ರಸ್ತೆ ಗುಂಡಿಗಳನ್ನು ಮುಚ್ಚಲೂ ಈ ಸರ್ಕಾರಕ್ಕೆ ಆಗುತ್ತಿಲ್ಲ. ಆದರೆ, ಟನೆಲ್ ರಸ್ತೆ ಕುರಿತು ಮಾತನಾಡುತ್ತಿದ್ದಾರೆ. ಟನೆಲ್ ರಸ್ತೆ ಯೋಜನೆ ಕೈಬಿಟ್ಟು ಮೆಟ್ರೋ ಬೋಗಿಗಳನ್ನು ಹೆಚ್ಚಿಸಬೇಕು. ಟ್ರಾಫಿಕ್ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಬದಲಿ ಮಾರ್ಗೋಪಾಯಗಳನ್ನು ಚರ್ಚಿಸಬೇಕು. ಅವೈಜ್ಞಾನಿಕ ಟನೆಲ್ ರಸ್ತೆ ಯೋಜನೆ ಕೈಬಿಡುವಂತೆ ಒತ್ತಾಯಿಸುವ ಕುರಿತು ಸಮಗ್ರ ಚರ್ಚೆ ಆಗಿದೆ ಎಂದು ತಿಳಿಸಿದರು.
ಮೆಟ್ರೋ ದರ ಏರಿಕೆ ಕೇಂದ್ರ ಮಾಡಿಲ್ಲ:
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಭೆಗೆ ಗೈರು ಹಾಜರು ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಶೋಕ್ ಅವರು ಈ ಸಭೆಗೆ ಆದಷ್ಟು ಬರುವುದಾಗಿ ಹೇಳಿದ್ದರು. ಅವರು ಬಜೆಟ್ ಕುರಿತ ಪೂರ್ವಭಾವಿ ಸಭೆ ಕರೆದಿದ್ದಾರೆ. ನಾವು ಕೂಡ ಆ ಸಭೆಗೆ ತೆರಳುತ್ತೇವೆ ಎಂದು ಉತ್ತರಿಸಿದರು.